ರಾಮನಗರ: ಆದಿಚುಂಚಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಗ್ರಾಮವನ್ನು ವಿಶ್ವದರ್ಜೆಯ ಪಾರಂಪರಿಕ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಸೋಮವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಬಾನಂದೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಅವರು ಯೋಜನೆಗೆ ಭೂಮಿಪೂಜೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, “ಈ ಯೋಜನೆಯನ್ನು ಕಾರ್ಯಗತ ಮಾಡಲಿರುವ ಖಾಸಗಿ ಸಂಸ್ಥೆಯು 125 ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಿದೆ. ಸರಕಾರ 2019-20ನೇ ಸಾಲಿನ ಮುಂಗಡ ಪತ್ರದಲ್ಲಿ ಈ ಯೋಜನೆಯನ್ನು ಘೋಷಿಸಿ 25 ಕೋಟಿ ರೂ. ಅನುದಾನವನ್ನೂ ನೀಡಿದೆ. ಸರಕಾರವೂ ಸೇರಿ ಎಲ್ಲರ ಸಹಕಾರದೊಂದಿಗೆ ಇಡೀ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು” ಎಂದರು.
ಆಸ್ಪತ್ರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಗೋಶಾಲೆ, ವಸ್ತು ಸಂಗ್ರಹಾಲಯ, ಗ್ರಂಥಾಲಯ ನಿರ್ಮಾಣ ಸೇರಿ ಹತ್ತು ಹಲವು ಯೋಜನೆಯಲ್ಲಿ ಅಡಕವಾಗಿದ್ದು, ಅತ್ಯಂತ ವೇಗವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು ಡಿಸಿಎಂ.
ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಿನಲ್ಲಿ ನಿರ್ಮಾಣವಾಗುತ್ತಿರುವ ಪಾರಂಪರಿಕ ಕೇಂದ್ರ ಉತ್ತಮ ಪ್ರವಾಸಿ ತಾಣವಾಗಬೇಕು. ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜೀವನಚರಿತ್ರೆ ಹಾಗೂ ಅವರು ಮಾಡಿರುವಂತಹ ಸಾಧನೆಯನ್ನು ಪಾರಂಪರಿಕ ಕೇಂದ್ರಕ್ಕೆ ಬರುವ ಪ್ರವಾಸಿಗರು ನೆನಪಿನ ಬುಟ್ಟಿಯಲ್ಲಿ ತುಂಬಿಕೊಂಡು ಹೋಗುವ ರೀತಿ ನಿರ್ಮಾಣ ಮಾಡವ ಸದ್ದುದೇಶ ಇಲಾಖೆಗೆ ಇದೆ ಎಂದರು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಸಮಾಜದ ಬಗ್ಗೆ ಇದ್ದ ವಿಶೇಷ ಕಾಳಜಿ ಸ್ಮರಣೀಯ ಅವರು ಸದಾ ಕಾಲ ಸಮಾಜದ ಕೆಳ ವರ್ಗದ ಜನರ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಅವರು ಆದಿಚುಂಚನಗಿರಿ ಬೆಟ್ಟ ಮಾತ್ರವಲ್ಲ, ಬೆಟ್ಟದ ಸುತ್ತ ಇರುವ ಪ್ರದೇಶವನ್ನು ಸಹ ಅಭಿವೃದ್ಧಿ ಪಡಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೂ ಸಹ ಅವರ ಕೊಡುಗೆ ಅಪಾರ ಸ್ವಾಮೀಜಿ ಅವರು ಸೀಳು ತುಟಿಗಳ ಮಕ್ಕಳ ಉಚಿತ ಚಿಕಿತ್ಸೆಗೆ ಶಿಬಿರ ಆಯೋಜಿಸಿ ಹೊರ ದೇಶಗಳಿಂದ ಚಿಕಿತ್ಸೆ ನೀಡಲು ತಜ್ಞರನ್ನು ಕರೆಸುತ್ತಿದ್ದರು ಎಂದರು ಲಿಂಬಾವಳಿ.
ಆದಿಚುಂಚನಗಿರಿ ಮಠದಿಂದ 5 ಕೋಟಿ ಸಸಿಗಳನ್ನು ನೆಟ್ಟಿ ಬೆಳಸುವ ಕಾರ್ಯಕ್ರಮವನ್ನು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕೈಗೆತ್ತಿಕೊಂಡಿದ್ದರು. ಇಂತಹ ಸದ್ದುದೇಶ ಹೊಂದಿರುವ ಕಾರ್ಯಗಳಿಂದ ಕರ್ನಾಟಕದ ಹಸಿರು ಒದಿಕೆ 13% ಯಿಂದ 23% ಕ್ಕೆ ಹೆಚ್ಚಳವಾಗಿದೆ. ಕರೋನ ಸಂದರ್ಭದಲ್ಲಿ ಆಮ್ಲಜನಕವನ್ನು ಖರೀದಿಸುವ ಪರಿಸ್ಥಿತಿ ಬಂದಿದೆ. ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಇಂತಹ ಸಮಾಜಮುಖಿ ಕಾರ್ಯಗಳು ಇಂದಿಗೆ ಅವಶ್ಯಕವಾಗಿದೆ ಎಂದರು.
ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, “ಈ ಯೋಜನೆ ಗುರುಗಳ ಅನುಗ್ರಹದೊಂದಿಗೆ ನಿರ್ವಿಘ್ನವಾಗಿ ಸಂಪನ್ನವಾಗಲಿ. ಮುಂದಿನ ದಿನಗಳಲ್ಲಿ ಬಾನಂದೂರು ಗ್ರಾಮವು ಮಹಾನ್ ಕ್ಷೇತ್ರವಾಗಿ, ಜ್ಞಾನತಾಣವಾಗಿ ಬೆಳೆಯುತ್ತದೆ” ಎಂದು ನುಡಿದರು.
ಆದಿಚುಂಚನಗಿರಿ ಮಠದ ರಾಮನಗರ ಮಠಾಧಿಪತಿ ಶ್ರೀ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿ, ಮಾಗಡಿ ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಅ. ದೇವೇಗೌಡ, ಸಿ.ಎಂ.ಲಿಂಗಪ್ಪ, ಎಸ್.ರವಿ, ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಾಕ ಇಕ್ರಂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಗಳ ಮಾತಾ ಪಿತೃಗಳ ಗದ್ದುಗೆಗೆ ಪೂಜೆ
ಕಾರ್ಯಕ್ರಮಕ್ಕೂ ಮೊದಲು ಉಪ ಮುಖ್ಯಮಂತ್ರಿಗಳು, ಶ್ರೀಗಳ ಜತೆಯಲ್ಲಿ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರ ಪೂರ್ವಾಶ್ರಮ ಜನ್ಮಧಾತರಾದ ಶ್ರೀಮತಿ ಬೋರಮ್ಮ ಮತ್ತು ಶ್ರಿ ಚಿಕ್ಕಲಿಂಗಪ್ಪ ಅವರ ಗದ್ದುಗೆಗೆ ಪೂಜೆ ನೆರೆವೇರಿಸಿದರು.