by GS Bharath Gudibande
ಗುಡಿಬಂಡೆ: ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ವೆಸ್ಟ್ರನ್ ಆಸ್ಟ್ರೇಲಿಯಾದ ಕನ್ನಡಪರ ಸಂಘದ ವತಿಯಿಂದ ನೀಡಲಾದ ಐದು ಆಮ್ಲಜನಕ ಸಾಂದ್ರಕಗಳನ್ನು ಮಂಗಳವಾರ ಆಸ್ಪತ್ರೆಯ ವೈದ್ಯರಿಗೆ ಹಸ್ತಾಂತರ ಮಾಡಲಾಯಿತು.
ಆಸ್ಪತ್ರೆಯಲ್ಲಿ ವೆಸ್ಟ್ರನ್ ಆಸ್ಟ್ರೇಲಿಯಾದ ಕನ್ನಡಪರ ಸಂಘ, ಆರ್ಟ್ ಆಫ್ ಲಿವಿಂಗ್, ಐಎಹೆಚ್‌ವಿ ಸಂಸ್ಥೆ ಮತ್ತು ತಾಲೂಕು ಜಯ ಕರ್ನಾಟಕ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಘದ ನರೇಂದ್ರ ಮತ್ತಿತರರು ನೀಡಿದರು.
ಈ ಸಂದರ್ಭದಲ್ಲಿ ವೈದ್ಯರ ಜತೆಗೂಡಿ ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿ ಮಾತನಾಡಿದ ಗುಡಿಬಂಡೆ ತಹಸೀಲ್ದಾರ್ ತಹಶೀಲ್ದಾರ್ ಸಿಬ್ಗತ್ ವುಲ್ಲಾ, “ಪ್ರಪಂಚದ ಯಾವ ಮೂಲೆಯಲ್ಲೇ ಇದ್ದರೂ, ಹುಟ್ಟೂರಿನ ಮೇಲೆ ಪ್ರೀತಿ ಇರುತ್ತದೆ ಎಂಬುದಕ್ಕೆ ಈ ಆಮ್ಲಜನಕ ಸಾಂದ್ರಕಗಳೆ ಸಾಕ್ಷಿ. ಇವು ಇಲ್ಲಿವರೆಗೂ ಬರಲು ಶ್ರಮಿಸಿದ ಆಸ್ಟ್ರೇಲಿಯಾದ ಕನ್ನಡ ಮತ್ತು ಸಂಘದ ನರೇಂದ್ರ ಅವರಿಗೆ ನಮ್ಮೆಲ್ಲರ ಅಭಿನಂದನೆಗಳು” ಎಂದರು.
ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನಿ ಕನ್ನಡಿಗನಾಗಿರು.. ಎಂಬ ಕವಿವಾಣಿಯಂತೆ ನಮ್ಮ ಕನ್ನಡಿಗರು ಪ್ರಪಂಚದ ವಿವಿಧ ದೇಶಗಳಲ್ಲಿ ಇದ್ದರೂ ನಮ್ಮ ಕನ್ನಡದ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ಇತರೆ ರಾಷ್ಟ್ರಗಳಲ್ಲಿರುವ ಕನ್ನಡಿಗರ ರಕ್ಷಣೆಗೆ ನಿಂತಿರುವುದು ಶ್ಲಾಘನೀಯ. ಇದೇ ರೀತಿ ತಮ್ಮ ಸೇವೆ ಮುಂದುವರೆಯಲಿ ಎಂದು ಅವರು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, 3ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ವೆಸ್ಟ್ರನ್ ಆಸ್ಟ್ರೇಲಿಯಾದಿಂದ ಭಾರತಕ್ಕೆ ಅದರಲ್ಲೂ ಗುಡಿಬಂಡೆ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿರುವುದು ಹೆಮ್ಮೆಯ ವಿಚಾರ. ಆಮ್ಲಜನಕ ಸಾಂದ್ರಕಗಳು ಕೇವಲ ಕೋವಿಡ್ ಸೋಂಕಿತರಿಗೆ ಮಾತ್ರವಲ್ಲದೆ, ಇತರೆ ರೋಗಿಗಳಿಗೂ ಉಪಯೋಗವಾಗಲಿವೆ. ಸಾವಿರಾರು ಕಿ.ಮೀ ದೂರದಿಂದ ಗುಡಿಬಂಡೆಗೆ ಇವುಗಳನ್ನು ಕಳುಹಿಸಲು ಶ್ರಮಿಸಿದವರಿಗೆ ನಮ್ಮ ಧನ್ಯವಾದಗಳು ಎಂದರು.
ನಂತರ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬುಲೆಟ್ ಶ್ರೀನಿವಾಸ್ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಆಮ್ಲಜನಕಕ್ಕೆ ಹಾಹಾಕಾರ ಉಂಟಾಗಿತ್ತು. ಈಗ 3ನೇ ಅಲೆ ಭೀತಿಯ ಎದುರಾಗಿದೆ. ತಾಲೂಕು ಆಸ್ಪತ್ರೆಗೆ ಅಗತ್ಯವಾಗಿ ಬೇಕಿರುವ ಆಮ್ಲಜನಕ ಸಾಂದ್ರಕಗಳನ್ನು ವೆಸ್ಟ್ರನ್ ಆಸ್ಟ್ರೇಲಿಯದಿಂದ ಕಳುಹಿಸಿದ್ದಾರೆ. ಇದನ್ನು ವೈದ್ಯರು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ದ್ವಾರಕನಾಥನಾಯ್ಡು, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕೆ.ಎನ್.ನವೀನ್ ಕುಮಾರ್, ಅರಣ್ಯ ಇಲಾಖೆಯ ಹುಲಿಗೆಪ್ಪ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಯುವ ವಿಭಾಗದ ಅಧ್ಯಕ್ಷ ನವೀನ್ ರಾಜ್ ಕನ್ನಡಿಗ, ಕನ್ನಡಸೇನೆ ಅಧ್ಯಕ್ಷ ಅಂಬರೀಶ್, ತಾಲೂಕು ಬಜರಂಗದಳ ಸಂಚಾಲಕ ಜಿ.ಎ.ಅಮರೇಶ್, ಸ್ಥಳೀಯರಾದ ಗೋಪಿ, ವೆಸ್ಟ್ರನ್ ಆಸ್ಟ್ರೇಲಿಯಾದ ನರೇಂದ್ರ ಮತ್ತವರ ಕುಟುಂಬ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.