ವೀರಗಲ್ಲುಗಳನ್ನು ರಕ್ಷಿಸೋಣ, ಮುಂದಿನ ತಲೆಮಾರಿಗೂ ಇತಿಹಾಸ ಉಳಿಸೋಣ
by DG Pavan Kalyan Bagepalli
ಬಾಗೇಪಲ್ಲಿ: ಯಾವುದೇ ಪ್ರದೇಶ ಅಥವಾ ಸಾಮ್ರಾಜ್ಯದ ಇತಿಹಾಸವನ್ನು ಆಯಾ ಭಾಗದಲ್ಲಿ ಕಂಡುಬರುವ ವೀರಗಲ್ಲುಗಳು ಬಹಳ ನಿಖರವಾಗಿ ಹೇಳುತ್ತವೆ ಎಂದು ಇತಿಹಾಸಕಾರರು ನಂಬುತ್ತಾರೆ.
ಶತ್ರುಗಳ ದಾಳಿ ಸಂದರ್ಭದಲ್ಲಿ ಸಂಪತ್ತು, ಗೋವುಗಳು ಹಾಗೂ ಸ್ತ್ರೀಯರನ್ನು ರಕ್ಷಿಸಲು ಯುದ್ಧದಲ್ಲಿ ಹೋರಾಟ ನಡೆಸಿ ವೀರಮರಣವನ್ನಪ್ಪುವವರ ನೆನಪಿಗಾಗಿ ಸಾಮಾನ್ಯವಾಗಿ ವೀರಗಲ್ಲುಗಳನ್ನು ಸ್ಥಾಪಿಸುವುದಿದೆ. ಹೀಗೆ ಸ್ಥಾಪನೆಯಾದ ವೀರಗಲ್ಲುಗಳು ಆಯಾ ಕಾಲದ ಇತಿಹಾಸ ಮತ್ತು ವರ್ತಮಾನ ಕಾಲದ ಕೊಂಡಿಗಳಾಗಿ ಕಂಡುಬರುತ್ತವೆ. ಆದರೆ, ಅಂಥ ವೀರಗಲ್ಲುಗಳನ್ನು ಅತ್ಯಂತ ಅನಾದರದಿಂದ ನೋಡಿ ಹಾಳು ಮಾಡುವ ಪರಿಪಾಠ ಹೆಚ್ಚಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳಲ್ಲಿ ಹೇರಳವಾಗಿರುವ, ಹೆಜ್ಜೆ ಹೆಜ್ಜೆಗೂ ಕಾಣುವ ವೀರಗಲ್ಲುಗಳು ಅಳಿದುಹೋದ ಗುಮ್ಮನಾಯಕನಪಾಳ್ಯ, ದೇವಿಕುಂಟೆ ಕೋಟೆ ಸೇರಿ ಇನ್ನೂ ಅನೇಕ ಪಾಳೆಯಪಟ್ಟುಗಳ ಇತಿಹಾಸವನ್ನು ಮೌನವಾಗಿ ಹೇಳುತ್ತಲೇ ಇವೆ. ಆದರೆ, ಅವುಗಳ ಐತಿಹಾಸಿಕ ಮಹತ್ವ ಅರಿಯದೇ ಜನರು ಅವುಗಳನ್ನು ಹಾಳು ಮಾಡುತ್ತಿದ್ದಾರೆ. ಅಲ್ಲದೆ, ಪ್ರಾಚ್ಯುವಸ್ತು ಇಲಾಖೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಈ ಕಡೆ ಗಮನ ಹರಿಸುತ್ತಿಲ್ಲ. ತಾಲೂಕು ಆಡಳಿತಕ್ಕೂ ಈ ಐತಿಹಾಸಿಕ ಸಂಪತ್ತಿನ ಬಗ್ಗೆ ಇರುವ ತಾತ್ಸಾರವನ್ನು ಹೇಳುವಂತೆಯೇ ಇಲ್ಲ.
ಕರ್ನಾಟಕದ ಇತಿಹಾಸದಲ್ಲಿ ವೀರಗಲ್ಲುಗಳ ಪರಂಪರೆ ಆರನೇ ಶತಮಾನದಲ್ಲಿ ನೊಳಂಬರು ಮತ್ತು ಗಂಗರ ಕಾಲದಲ್ಲಿ ಪ್ರಾರಂಭವಾಗುತ್ತದೆ. ರಾಜ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ, ಯುದ್ದದಲ್ಲಿ ವೀರೋಚಿತ ಹೋರಾಟ ನಡೆಸಿ ಮಡಿದ ಹಾಗೂ ಗ್ರಾಮಗಳ ರಕ್ಷಣೆಗಾಗಿ ಕಾಡು ಪ್ರಾಣಿಗಳೊಂದಿಗೆ ಸೆಣಸಾಡಿದ, ಮಹಿಳೆಯರ ಮಾನ ಪ್ರಾಣ ಕಾಪಾಡಿದವರ ನೆನಪಿಗಾಗಿ ವೀರಗಲ್ಲುಗಳನ್ನು ಇರಿಸಲಾಗುತ್ತಿತ್ತು. ಹೀಗೆ ವೀರಗಲ್ಲುಗಳನ್ನು ಸ್ಥಾಪಿಸುವುದು ರಾಜ ಪರಂಪರೆಯಾಗಿತ್ತು. ವೀರರಿಗೆ ಕೊಡುವ ಗೌರವ ಆಗಿತ್ತು. ಕೋಲಾರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ ಗಂಗರಸರ ಕಾಲಕ್ಕೆ ಸೇರಿದ ವೀರಗಲ್ಲುಗಳು ಮುಖ್ಯವಾಗಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬಹಳಷ್ಟು ಕಡೆ ಕಾಣಸಿಗುತ್ತವೆ.
ಅದೇ ರೀತಿ ಬಾಗೇಪಲ್ಲಿ ತಾಲೂಕಿನಲ್ಲೂ ಇಂಥ ವೀರಗಲ್ಲುಗಳು ಹೇರಳವಾಗಿ ಪತ್ತೆಯಾಗಿವೆ. ದೇವಿಕುಂಟೆ ಕೋಟೆ, ಗೂಳೂರು ನೀಡುಮಾಮಿಡಿ ಪೀಠ, ಗುಮ್ಮನಾಯಕನಪಾಳ್ಯ ಕೋಟೆ, ಶಿವಪುರ ಮುಂತಾದ ಕಡೆ ಸ್ಥಾಪಿಸಲ್ಪಟ್ಟಿರುವ ಹಲವು ವೀರಗಲ್ಲುಗಳು ಇವತ್ತಿಗೂ ಇವೆ, ಆವೊತ್ತಿನ ಇತಿಹಾಸವನ್ನು ನಮಗೆ ನೆನಪಿಸುತ್ತಲೇ ಇವೆ.
ಇನ್ನು, ದೇವಿಕುಂಟೆ ಪಾಳೆಯಗಾರರಾದ ವಿಜಯನಗರ ಸಾಮ್ರಾಜ್ಯದ ಸಾಮಂತರು. ಇವರು ಮೂರು ವೀರಗಲ್ಲುಗಳನ್ನು ಸ್ಥಾಪಿಸಿದ್ದರು. ಇವುಗಳನ್ನು ಮೊದಲು ಬಿ.ಎಲ್.ರೈಸ್ ಅವರು ಪತ್ತೆಹಚ್ಚಿ ಪ್ರಕಟಿಸಿದ್ದರು. ದೇವಿಕುಂಟೆ ಗ್ರಾಮದಲ್ಲಿ ದೊರೆತಿರುವ ಪುರಾತನ ಮೂರು ವೀರಗಲ್ಲುಗಳು ಗತಕಾಲದ ವೈಭವವನ್ನು ಸಾರಿ ಹೇಳುತ್ತಿವೆ.
ಅಕ್ಕಮ್ಮ ಬೆಟ್ಟದಲ್ಲಿನ ಮೊದಲ ವೀರಗಲ್ಲು
ಈ ವೀರಗಲ್ಲುವಿನಲ್ಲಿ ಮೂವರು ಸೈನಿಕರು ಒಳಗೊಂಡಿರುವ ಕೆತ್ತನೆ ಕಾಣಬಹುದು. ಮೊದಲ ವೀರಗಲ್ಲುವಿನಲ್ಲಿ ಮೂವರು ಸೈನಿಕರ ಚಿತ್ರಣವಿದೆ. ಎಡಭಾಗದಲ್ಲಿ ಸೊಂಟಕ್ಕೆ ಕತ್ತಿಯನ್ನು ಇಟ್ಟುಕೊಂಡಿರುವುದಲ್ಲದೆ, ನಡುವೆ ಕತ್ತಿಯನ್ನು ಎತ್ತಿಕೊಂಡಿದ್ದಾರೆ ವೀರರು. ಬಲಭಾಗದ ಸೊಂಟದಲ್ಲಿ ಕತ್ತಿಯನ್ನು ನೋಡಬಹುದು. ಕನ್ನಿರಪ್ಪ ಗುಡಿ ಬಳಿ ದೊರೆತಿರುವ ವೀರಗಲ್ಲುವಿನಲ್ಲಿ ಗಂಡ-ಹೆಂಡತಿ ಕೈಯಲ್ಲಿ ಖಡ್ಗವನ್ನೂ ಕಾಣಬಹುದು. ಹಾಗೆಯೇ ದೇವಿಕುಂಟೆಯ ಬಳಿ ಆಂಧ್ರ ಪ್ರದೇಶಕ್ಕೆ ಹೋಗುವ ದಾರಿಯಲ್ಲಿ ಕಟಮೆ ಗುಡ್ಡದ ಬಳಿ ಮೂವರು ಮಹಿಳೆಯರು ಇರುವ ವೀರಗಲ್ಲು ಇದೆ. ಇದರಲ್ಲಿ ಮಹಿಳೆಯರು ಕೈಯಲ್ಲಿ ಕೊಡಲಿಯನ್ನು ಮೇಲಕ್ಕೆತ್ತಿರುವ ಚಿತ್ರಣವಿದೆ.
ಇಷ್ಟಲ್ಲದೆ, ಈ ವೀರಗಲ್ಲುವಿನಲ್ಲಿ ವಿವಿಧ ರೀತಿಯ ಚಿತ್ರಣಗಳೂ ಇವೆ. ನಾಯಿ, ಹಂದಿ, ಹಾವುಗಳು ಕೂಡ ವೀರಗಲ್ಲುಗಳಾಗಿವೆ. ಒಂದು ವೇಳೆ ಯಾವುದೇ ಕಲ್ಲಿನ ಮೇಲೆ ಅದು ಶಾಸನ, ಅದಲ್ಲದೆ ಬೇರೆ ಚಿತ್ರಗಳಿದ್ದರೆ ಅದು ವೀರಗಲ್ಲು ಎಂದು ಇತಿಹಾಸಕಾರರು ಪ್ರತ್ಯೇಕಿಸಿದ್ದಾರೆ. ವೀರಗಲ್ಲುಗಳು ಶಾಸನ ಅಥವಾ ಶಿಲ್ಪಗಳ ರೂಪದಲ್ಲಿ ಕಂಡು ಬರುತ್ತವೆ.
ವೀರಗಲ್ಲುಗಳ ಮಹತ್ವ ದೊಡ್ಡದು
ಇತಿಹಾಸ ಸಂಸೋಧನೆಯಲ್ಲಿ ವೀರಗಲ್ಲುಗಳ ಪಾತ್ರ ಬಹಳ ದೊಡ್ಡದು. ಶೌರ್ಯ, ಸ್ವಾಮಿನಿಷ್ಠೆ, ಚಾರಿತ್ರ್ಯ ಅಂದಿನ ಮೌಲ್ಯಗಳಾಗಿದ್ದವು. ಹೇಡಿಗಳನ್ನೂ ಸ್ವಾರ್ಥಿಗಳನ್ನು ಕೀಳಾಗಿ ಪರಿಗಣಿಸಲಾಗುತ್ತಿತ್ತು. ಧರ್ಮದ ಮೂಲವಾದ ನೈತಿಕ ಮೌಲ್ಯಗಳು ನಿಯಂತ್ರಕ ಶಕ್ತಿಗಳಾಗಿದ್ದವು. ಪ್ರಾಚೀನ ಕರ್ನಾಟಕದ ಶೌರ್ಯ, ದೈರ್ಯ, ಸಾಹಸಕ್ಕೆ ಹೆಸರಾಗಿತ್ತು ಹಾಗೂ ಆ ಕಾಲದ ಸಾಮಾಜಿಕ ಪರಿಸ್ಥಿತಿ ಹೇಗಿತ್ತು ಎನ್ನುವುದಕ್ಕೆ ವೀರಗಲ್ಲುಗಳು ಕೈಗನ್ನಡಿಗಳಾಗಿವೆ. ಇದೇ ರೀತಿ ಬಾಗೇಪಲ್ಲಿ ತಾಲೂಕಿನಲ್ಲಿ ಲಭ್ಯವಿರುವ ಅನೇಕ ವೀರಗಲ್ಲುಗಳು ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲುತ್ತಿವೆ ಎಂದು ವಿಕಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎನ್ ಶಿವಣ್ಣ ಹೇಳುತ್ತಾರೆ.
ಈ ವೀರಗಲ್ಲುಗಳು ಬಹಳ ಮುಖ್ಯವಾಗಿ ಪ್ರಾಚೀನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸೃತಿಕ ಹಾಗೂ ಸುಮಾರು 1,500 ವರ್ಷಗಳ ಆಡಳಿತದ ಹಿಂದಿನ ಸ್ಥಿತಿಗತಿಗಳನ್ನು ಹೇಳುತ್ತವೆ. ಆಗಿನ ಕಾಲದ ಕಲೆ ಮತ್ತು ವಾಸ್ತುಶಿಲ್ಪ, ಸಂಪ್ರದಾಯ ಆಚರಣೆಗಳನ್ನು ವಿವರಿಸುತ್ತವೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಇಂದಿಗೂ ವೀರಗಲ್ಲುಗಳನ್ನು ಪೂಜಿಸುವ ರೂಢಿ ಇದೆ. ಶಾಸನ ಹಾಗೂ ವೀರಗಲ್ಲುಗಳ ಮಹತ್ವ ತಿಳಿಯದೆ ಕೆಲವರು ಅವುಗಳನ್ನು ಎಲ್ಲೆಂದರಲ್ಲಿ ಕಿತ್ತುಹಾಕಿದ್ದಾರೆ. ಇವುಗಳನ್ನು ತಾಲೂಕು ಅಡಳಿತ ಸಂರಕ್ಷಣೆ ಮಾಡಬೇಕಿದೆ. ಇತಿಹಾಸದ ದಾಖಲೆ, ಕುರುಹುಗಳನ್ನೂ ಸಂರಕ್ಷಣೆ ಮಾಡಿದರೆ ನಮ್ಮ ಪೂರ್ವಜರು, ಹಿರಿಯರನ್ನು ಗೌರವಿಸಿದಂತೆಯೇ ಆಗುತ್ತದೆ ಎನ್ನುತ್ತಾರೆ ಇತಿಹಾಸ ಆಸಕ್ತರೂ ಆಗಿರುವ ಎಮ್.ಎಲ್.ನರಸಿಂಹಮೂರ್ತಿ.
ಜಿಯೋ ಟ್ಯಾಗ್ ತುರ್ತು ಅಗತ್ಯ
ತಾಲೂಕಿನಲ್ಲಿ ದೊರೆತಿರುವ ವೀರಗಲ್ಲುಗಳನ್ನು ಸಂರಕ್ಷಿಸಲು ಜಿಯೋ ಟ್ಯಾಗ್ ಅತ್ಯಂತ ಸುಲಭ ಮತ್ತು ನಿಖರವಾದ ಸಾಧನವಾಗಿದೆ. ಐತಿಹಾಸಿಕ ಸ್ಥಳಗಳು, ಸಣ್ಣಪುಟ್ಟ ಸ್ಮಾರಕ, ಶಾಸನ, ವೀರಗಲ್ಲುಗಳನ್ನು ರಕ್ಷಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು.
ವೀರಗಲ್ಲುಗಳನ್ನು ಎಲ್ಲೆಂದರಲ್ಲಿ ಯಾರೂ ನೆಡುವುದಿಲ್ಲ. ವೀರರನ್ನು ಸಮಾಧಿ ಮಾಡಿರುವ ಅಥವಾ ಆ ವೀರರು ಹೋರಾಟ ನಡೆಸಿದ ಸ್ಥಳದಲ್ಲಿಯೇ ಸ್ಥಾಪಿಸುತ್ತಾರೆ ಎಂಬುದು ಇತಿಹಾಸಕಾರರು ಹೇಳುವ ಮಾತು. ಆದರೆ, ಈಗ ಭೂಮಿಯ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಭೂದಾಹದಿಂದ ತಾಲೂಕಿನ ಅನೇಕ ಕಡೆ ವೀರಗಲ್ಲುಗಳನ್ನು ಕಿತ್ತೆಸೆದಿರುವ ಪ್ರಕರಣಗಳು ನಡೆದಿವೆ. ಜಿಯೋ ಟ್ಯಾಗ್ ಮಾಡುವ ಮೂಲಕ ವೀರಗಲ್ಲುಗಳಿಗೆ ಕ್ರಮಸಂಖ್ಯೆ ನೀಡುವ ಹಾಗೂ ಅವುಗಳ ಉಸ್ತುವಾರಿಯನ್ನು ಪುರಾತತ್ವ ಇಲಾಖೆ ಮತ್ತೂ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ವಹಿಸಬೇಕಿದೆ. ಹಾಗೆಯೇ ಇವುಗಳನ್ನು ಉಳಿಸಲು ಸರಕಾರ ಉದಾರ ನೆರವು ನೀಡಬೇಕಿದೆ.
ಡಿ.ಜಿ ಪವನ್ ಕಲ್ಯಾಣ್
- ಓದಿದ್ದು ಇಂಗ್ಲೀಷ್ ಲಿಟರೇಚರ್. ಆಸಕ್ತಿ ಇತಿಹಾಸ ಮತ್ತು ಪ್ರವೃತ್ತಿ ಇತಿಹಾಸ ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ, ಗುಮ್ಮನಾಯಕನ ಪಾಳ್ಯ ಕೋಟೆಗಳ ಕುರಿತು ಆಳ ಶೋಧ ಮಾಡುತ್ತಿರುವ ಲೇಖಕರು, ರಾಜ್ಯದ ಗಡಿಭಾಗವನ್ನು ಆಳಿದ ವಿವಿಧ ಪಾಳೇಯಗಾರರ ಆಡಳಿತದ ಮೇಲೆ ಬೆಳಕು ಚೆಲುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಕುಲ ಬಂಧುಗಳೇ, ಇತಿಹಾಸದ ಬಗ್ಗೆ ಗೌರವ ಆಸಕ್ತಿ ಇಲ್ಲದ ನಮ್ಮಜನರ ಮಧ್ಯೆ, ಕನ್ನಡದ ಮಣ್ಣಿನಲ್ಲಿ ಅಪರೂಪದ ರೋಮಾಂಚನ ಉಂಟು ಮಾಡುವ ಐತಿಹಾಸಿಕ ಕಂಪು ಸೂಸುವ ಸೌಗಂಧಕಾ ಪುಷ್ಪದಂತೆ ನೀವು ಇರುವಿರಿ ….., ಇದು ಈ ನಾಡಿನ ಸೌಭಾಗ್ಯ,… ರಾಷ್ಟ್ರ, ಧರ್ಮ ಜಾಗೃತಿಯ ಆಗುವುದು ನಿಮ್ಮಂತ ವರಿಂ ದಲೆ ಆರಂಭ ವಾಗುವುದು…., ಈ ಪ್ರಾಂತ್ಯ ವಿಜಯನಗರಕ್ಕೆ ಸಂಬಂದಿಸಿದ ಪ್ರಾಂತ್ಯ 12oo ರ ಆಸು ಪಾಸಿನಿಂದ, ,…. ಆದರೆ ಅದಕ್ಕಿಂತಲೂ ಮುಂಚೆ ಇಲ್ಲಿ ಚೋಳ, ಗಂಗ, ಚಾಲುಕ್ಯ,… ಅನೇಕ ರಾಜ ವಂಶಗಳು ವೈಭವ ವಾಗಿ ಮೆರೆದ ಕುರುಹುಗಳು ಸಿಗುತ್ತವೆ,….. ನ ಮ್ಮ ಇತಿಹಾಸ ನಾವೇ ತಿಲಿಕೊಳ್ಳಲು ಸಾಧ್ಯವಾಗದ0 ಥ, ದುಸ್ಥಿತಿಗೆ ನಾವು ಬಂದಿದ್ದೇವೆ,. ಛೇ ನನಗೆ ನಮ್ಮ ದೇಶದ ವ್ಯವಸ್ತೆಯ ಮೇಲೆ ನಾಚಿ ಕೆ , ಆಗುತ್ತಿದೆ,… ಬಂಧುಗಳೇ,bl rice ರವರ ಆದಾರದ ಮೇಲೆ ಕೋಲಾರ ಜಿಲ್ಲೆ, ಬೆಂಗಳರು, ನಗರ, ಗ್ರಾಮಾಂತರ,. ಮೈಸೂರು, ಚಿತ್ರದುರ್ಗ,.. ಇನ್ನೂ ನಿಖರವಾದ ಮಾಹಿತಿ ಸಿಗುತ್ತವೆ,. ಆದರೆ ನಮ್ಮ ದೇಶದ ನೈಜ ಇತಿಹಾಸ ಬೇರೊಬ್ಬ ಯಾವನೋ ಅರ್ಡಂಬರ್ದ ಬರೆದ ಇತಿಹಾಸ ತಿಳಿಯಬೇಕು,.. ನಮಲ್ಲಿ ಇತಿಹಾಸ ಪ್ರಜ್ಞೆ ಇಲ್ಲಾವಾ,……… ವಿಜಯನಗರದ ಬಗ್ಗೆ ಮಾತ್ರ ಗೊತ್ತು, ಅದಕ್ಕೆ ಪೂರ್ವದ ಇತಿಹಾಸ ತಿಳಿಯಬೇಕಾದ ಆವಶ್ಯಕತೆ ಇದೆ,…… ನಮ್ಮ ಪ್ರಾಂತ್ಯದಲ್ಲಿ ಕೆಲವು ಕೆಲಸಕ್ಕೆ ಬಾರದ, ಜೊಳ್ಳು ಹುಳಗಳು ಬೀಡು ಬಿಟ್ಟಿವೆ,… ಅವಕ್ಕೆ ಇವೆಲ್ಲಾ ಬೇಕಾಗಿಲ್ಲ,… ಅವು ಹೋಗುವ ವರೆಗೂ, ಜಾಗೃತಿ ಕಷ್ಟ, ಈ ವಿಷಯಗಳು ಬೆಳಕಿಗೆ ಬರಬೇಕಾದರೆ ನಮ್ಮ ಜನರಿಗೆ ಇತಿಹಾಸದ ಸತ್ಯದ ಅರಿವು ಮೂಡಿಸುವ ಕಾರ್ಯ ಆಗಬೇಕು,…. ತಾವುಗಳು ಇದರ ಇತಿಹಾಸವನ್ನು ಇನ್ನೂ ಜೀವಂತವಾಗಿ ಬಿಂಬಿಸಿ ಉಣ ಬಡಿಸುವ ಸತ್ಕಾರ್ಯ ಮಾಡಬೇಕಾಗಿ ಮನವಿ,….