by Ra Na Gopala Reddy Bagepalli
ಬಾಗೇಪಲ್ಲಿ: ಗೋಮಾಳ, ಹುಲ್ಲುಗಾವಲು ಜಮೀನುಗಳಲ್ಲಿ ಬಹಳ ವರ್ಷಗಳಿಂದ ಸಾಗುವಳಿ ಮಾಡುತ್ತಾ ಮಂಜೂರಾತಿಗಾಗಿ ಕಾಯುತ್ತಿರುವ ಬಡಜನರ ಬಗ್ಗೆ ಬಾಗೇಪಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ತೋರುತ್ತಿದ್ದು, 9,760 ಅರ್ಜಿಗಳನ್ನು ಇತ್ಯರ್ಥ ಮಾಡದೆ ಬಾಕಿ ಉಳಿಸಿಕೊಂಡಿದೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.
ತಾಲೂಕು ಕಚೇರಿ ಮುಂದೆ ಗುರುವಾರ ಈ ಬಗ್ಗೆ ಪ್ರಜಾಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಂಗಾಮಿಯಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಮಂಜೂರಿಗೆ ಬಗರ್‌ಹುಕುಂ ಮೂಲಕ ಸಕ್ರಮಗೊಳಿಸಲು ತಾಲೂಕಿನಲ್ಲಿ ಶಾಸಕರ ನೇತೃತ್ವದ ಸಮಿತಿಯೇ ರಚನೆಯಾಗಿಲ್ಲ. ಹೀಗಾಗಿ ರೈತರು, ಬಡವರ, ದಲಿತರು ಭೂಮಿಗಾಗಿ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ ಎಂದರು.
ತಾಲೂಕು ಮಟ್ಟದಲ್ಲಿ ದರಕಾಸ್ತು ಸಮಿತಿ ಮೂಲಕ ಮಂಜೂರಾದ ರೈತರಿಗೆ ಸಾಗುವಳಿ ಚೀಟಿ ನೀಡುವುದು ನಿಯಮ. ಆದರೆ ಕರ್ನಾಟಕ ಭೂ ಕಂದಾಯ 1966ರ ನಿಯಮ 108(ಇ)ಅನ್ವಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಬೇಕು. ಈ ಸಮಿತಿಯನ್ನು ರಚನೆ ಮಾಡಿಲ್ಲ ಹಾಗೂ ಬಾಗೇಪಲ್ಲಿ ತಾಲೂಕು ಆಡಳಿತ ಯಂತ್ರಾಂಗ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಅರ್ಜಿಗಳು ವಿಲೇವಾರಿ ಆಗದೇ ಕೊಳೆಯುತ್ತಿವೆ. ತಾಲೂಕು ಆಡಳಿತ ಅಧಿಕಾರಿಗಳು, ಜನ ಪ್ರತಿನಿಧಿಗಳೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅವರು ಗಂಭೀರವಾಗಿ ದೂರಿದರು.
ನಾನು ಶಾಸಕನಾಗಿದ್ದಾಗ ಆದ್ಯತೆಯ ಮೇರೆಗೆ 14,000 ಕುಟುಂಬಗಳಿಗೆ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲಾಗಿತ್ತು. ಅವಿಭಿಜಿತ ಕೋಲಾರ ಜಿಲ್ಲೆಯಲ್ಲಿ ಹಾಗೂ ಚಿಕ್ಕಬಳ್ಳಾಪುರ ಅರಣ್ಯ ಭೂಮಿ ಸಾಗುವಳಿ ಮಾಡಿದವರಿಗೆ ಬೇಸಾಯ ಮಾಡುತ್ತಿದ್ದ ಬಡವರಿಗೆ ಹಕ್ಕುಪತ್ರ ನೀಡಲು ನನ್ನ ಜೀವಮಾನದ ಉದ್ದಕ್ಕೂ ಹೋರಾಟ ನಡೆಸಿದೆ. ಜೈಲಿಗೂ ಹೋಗಿಬಂದೆ. ನಾನು ಎರಡು ಬಾರಿ ಶಾಸಕನಾಗಿದ್ದಾಗ ಮಾತ್ರ ಸಾಗುವಳಿ ಚೀಟಿ ವಿತರಣೆ ಆಗಿತ್ತು. ನಂತರ ಬಂದ ಶಾಸಕರು ಈ ಬಗ್ಗೆ ಗಮನ ಕೊಡಲಿಲ್ಲ.
ಜಿ.ವಿ.ಶ್ರೀರಾಮರೆಡ್ಡಿ
ಅಂದಿನಿಂದ ಇಂದಿನವರೆಗೂ ನೂರಾರು ಬಡವರು, ದಲಿತರು ಬಗರ್ ಹುಕುಂ ಸಾಗುವಳಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ನೂರಾರು ಅರ್ಜಿಗಳು ಮಂಜೂರಾತಿ ಸಿಗದೇ ಬಾಗೇಪಲ್ಲಿ ತಾಲೂಕಿನಲ್ಲಿ ಸುಮಾರು 9760ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥ ಮಾಡದೆ ತಾಲೂಕು ಆಡಳಿತ ಉಪೇಕ್ಷೆ ತಾಳಿದೆ. ಅಲ್ಲದೇ ಬಾಗೇಪಲ್ಲಿ ತಾಲೂಕಿನಾದ್ಯಂತ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಮಾಝಿ ಶಾಸಕರು ಆರೋಪಿಸಿದರು.
ತಹಸೀಲ್ದಾರ್‌ಗಳಿಗೆ ಆರ್‌ಟಿಸಿ ಜವಾಬ್ದಾರಿ ಇದೆ. ಅದನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ. ಯಾರ ಕೈಯಲ್ಲಿ ಅಸ್ತ್ರ ಇದೆಯೋ ಅವರೇ ಅದನ್ನು ಬಳಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚನ್ನರಾಯಪ್ಪ, ಪ್ರಗತಿಪರ ರೈತ ಜಿ.ಎಂ.ರಾಮಕೃಷ್ಣಪ್ಪ, ಎಚ್.ಎನ್.ಚಂದ್ರಶೇಖರೆಡ್ಡಿ, ಆರ್.ಚಂದ್ರಶೇಖರೆಡ್ಡಿ, ಎಲ್.ವೆಂಕಟೇಶ್, ಟಿ.ಎಲ್.ವೆಂಕಟೇಶ್, ನಾರಾಯಣಸ್ವಾಮಿ, ಸಿ.ಕೆ.ನರಸಿಂಹಪ್ಪ, ರಾಮಾಂಜಿನಪ್ಪ ಬಾಷಾಸಾಬ್, ಗೋಪಾಲಕೃಷ್ಣ, ಬೈರಾರೆಡ್ಡಿ, ಪೆದ್ದ ಮುನಿಯಪ್ಪ, ಪ್ರಮೀಳಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.