ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೆಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಯೋಜನೆಗಳ ಮೂಲಕ ಹರಿಸುವ ತ್ಯಾಜ್ಯ ನೀರಿನ ಶುದ್ಧೀಕರಣ
ಚಿಕ್ಕಬಳ್ಳಾಪುರದ ಜಿ.ಎಸ್.ಪರಮಶಿವಯ್ಯ ಸ್ಮಾರಕ ನೀರಾವರಿ ಗ್ರಂಥಾಲಯ-ಮಾಹಿತಿ ಕೇಂದ್ರಕ್ಕೆ ಸಚಿವರ ಭೇಟಿ
ಸಚಿವರಿಗೆ ಶಾಶ್ವತ ನೀರಾವರಿ ಹೋರಾಟಗಾರರ ಮನವಿ
ಚಿಕ್ಕಬಳ್ಳಾಪುರ: ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೆಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರಿನ ತ್ಯಾಜ್ಯ ನೀರನ್ನು 3ನೇ ಹಂತದಲ್ಲೂ ಶುದ್ಧೀಕರಣ ಆಗಲೇಬೇಕು. ಈ ಬಗ್ಗೆ ರಾಜಿ ಪ್ರಶ್ನೆ ಇಲ್ಲ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಸಿ.ಪಿ.ಯೋಗೇಶ್ವರ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಈಗಾಗಲೇ ಈ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಶುದ್ಧೀಕರಣ ಮಾಡಲಾಗುತ್ತಿದೆ. ಪರಿಸರ, ಜನ ಮತ್ತು ಜಾನುವಾರುಗಳ ಹಿತದೃಷ್ಟಿಯಿಂದ ಅದು ಸಾಲದು. ಹೀಗಾಗಿ 3ನೇ ಹಂತದ ಶುದ್ಧೀಕರಣ ಆಗಲೇಬೇಕೆಂದು ಸಂಬಂಧಪಟ್ಟ ಎಲ್ಲ ಇಲಾಖೆಗಳ ಉನ್ನತ ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದೇನೆ ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಬಯಲುಸೀಮೆಯ ನೀರಾವರಿ ವಿಷಯ-ಮಾಹಿತಿಗಳ ಸಂಗ್ರಹಗಾರವೂ ಆಗಿರುವ ʼಜಿ.ಎಸ್.ಪರಮಶಿವಯ್ಯ ಸ್ಮಾರಕ ನೀರಾವರಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರʼಕ್ಕೆ ಭೇಟಿ ನೀಡಿದ ವೇಳೆ ಸಚಿವರು ಅಲ್ಲಿ ನೆರೆದಿದ್ದ ನೀರಾವರಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದರು.
ಮುಂದುವರಿದು ಸಚಿವರು ಹೇಳಿದ್ದು ಇಷ್ಟು…
ಮೂರನೇ ಹಂತದ ಶುದ್ಧೀಕರಣದ ವಿಷಯದಲ್ಲಿ ರಾಜಿ ಪ್ರಶ್ನೆ ಇಲ್ಲ. ಅದು ಆಗಲೇಬೇಕು, ಎಷ್ಟು ಹಣ ಖರ್ಚಾದರೂ ಸರಿ. ಇದು ಸ್ಪಷ್ಟ ನಿಲುವು.
ತ್ಯಾಜ್ಯ 3ನೇ ಹಂತದ ಶುದ್ಧೀಕರಣ ಮಾಡಲು ಸ್ವಲ್ಪ ಖರ್ಚು ಬರುತ್ತದೆ ಎಂಬುದೇನೋ ನಿಜ. ಆದರೆ, ಹಣಕ್ಕಿಂತ ಜನ, ಜಾನುವಾರು ಹಾಗೂ ಪರಿಸರ ಮುಖ್ಯ. ಈ ಎಲ್ಲವನ್ನೂ ನಾವು ಆರೋಗ್ಯವಾಗಿ ಉಳಿಸಿಕೊಳ್ಳಲೇಬೇಕಾಗಿದೆ. ಹೆಚ್ಚೆಂದರೆ ಇನ್ನು 1,000 ಕೋಟಿ ಖರ್ಚು ಬರಬಹುದು. ಇಲ್ಲಿ ಹಣಕ್ಕಿಂತ ಜನ ಹೆಚ್ಚು ಮುಖ್ಯ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಇನ್ನೂ ನೀರಿನ ಶುದ್ಧೀಕರಣದಲ್ಲಿ ಹಳೆಯ ತಂತ್ರಜ್ಞಾನವನ್ನೇ ಬಳಕೆ ಮಾಡುತ್ತಿದೆ. ಆ ಸಂಸ್ಥೆ ಯಾವ ಸ್ಥಿತಿಯಲ್ಲಿದೆ ಎಂದರೆ, 2000ನೇ ಇಸವಿಯಲ್ಲಿ 1950ನೇ ವರ್ಷದ ತಂತ್ರಜ್ಞಾನ ಬಳಕೆ ಮಾಡುತ್ತಿದೆ. ಈಗ ನಾವು 2020-21ರಲ್ಲಿದ್ದೇವೆ. ಆ ಸಂಸ್ಥೆ ಇನ್ನೂ 2000ನೇ ವರ್ಷದ ತಂತ್ರಜ್ಞಾನವನ್ನೇ ಇಟ್ಟುಕೊಂಡಿದೆ. ಯಾವುದೇ ಸಂದರ್ಭದಲ್ಲಿ ನೋಡಿದರೂ ಜಲಮಂಡಳಿ ತಂತ್ರಜ್ಞಾನದ ವಿಷಯದಲ್ಲಿ 25 ವರ್ಷ ಹಿಂದೆಯೇ ಉಳಿದಿದೆ. ಕೆಲಸಕ್ಕೆ ಬಾರದ ಕೆಟ್ಟು ನಿಂತಿರುವ ಯಂತ್ರಗಳೇ ಸಾಕಷ್ಟಿವೆ.
ಅರೆ ಸಂಸ್ಕರಿತ ನೀರಿನಿಂದ ಆಗಿರುವ ಅನಾಹುತವನ್ನು ನಾನು ಬಿಡಿಸಿ ಹೇಳಲಾರೆ. ನಮ್ಮ ಭಾಗದ ಭೈರಮಂಗಲ ಮತ್ತಿತರೆ ಕಡೆ ಬಹಳ ಅಧ್ವಾನವಾಗಿವೆ. ಒಂದು ಎಳನೀರನ್ನೂ ಕುಡಿಯೋ ಹಾಗಿಲ್ಲ. ಅದರಲ್ಲಿಯೂ ವಿಷಕಾರಿ ಲವಣಾಂಶಗಳು ಸೇರಿಬಿಟ್ಟಿವೆ. ಹಸು ಹಾಲಿನದ್ದು ಇದೇ ಸ್ಥಿತಿ. ಹೀಗಾಗಿ ಇಂಥ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಣ ಮಾಡಲೇಬೇಕು.
ಎತ್ತಿನಹೊಳೆ; ಭೂಸ್ವಾಧೀನವೇ ಸ್ಥಗಿತವಾಗಿದೆ!!
ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರೊದಗಿಸುವ ಎತ್ತಿನಹೊಳೆ ಯೋಜನೆ ಆದಷ್ಟು ಬೇಗ ಕಾರ್ಯಗತವಾಗಬೇಕು ಎಂಬುದು ನನ್ನ ಇಚ್ಛೆ. ಆದರೆ, ಯೋಜನೆ ವಿಳಂಬವಾಗಿ ಸಾಗುತ್ತಿದೆ. ಸ್ವಾಧೀನ ಮಾಡಿಕೊಳ್ಳುವ ಭೂಮಿಗೆ ನಾಲ್ಕು ಪಟ್ಟು ಹೆಚ್ಚು ಪರಿಹಾರದ ಹಣ ನೀಡಬೇಕು ಎಂದು ನ್ಯಾಯಾಲಯ ಅದೇಶ ನೀಡಿದ ಮೇಲೆ ಅಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನೇ ನಿಲ್ಲಿಸಲಾಗಿದೆ.
ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಕಾರ್ಯಗತ ಮಾಡದಿದ್ದರೆ ಯೋಜನೆಯ ವೆಚ್ಚವೂ ಹೆಚ್ಚಾಗುತ್ತದೆ. ಭೂ ಸ್ವಾಧೀನ, ಲೋಹ ಮತ್ತಿತರೆ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಈ ಭಾಗದಲ್ಲಿ ಭೂಮಿ ಬಂಗಾರದಂತಿದೆ. ನೀರು ಸಿಕ್ಕರೆ ರೈತರು ಅದ್ಭುತಗಳನ್ನೇ ಸೃಷ್ಟಿಸುತ್ತಾರೆ. ಯಾವುದೇ ನೀರಾವರಿ ಯೋಜನೆ ಕೈಗೊಂಡರೂ ಬಯಲುಸೀಮೆ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡಬೇಕು.
ಸಿ.ಪಿ.ಯೋಗೇಶ್ವರ, ಸಚಿವರು
ಈ ಮೂರೂ ಜಿಲ್ಲೆಗಳಿಗೆ ಕಾವೇರಿ ನೀರನ್ನೂ ಕೊಡಬಹುದು. ಎತ್ತಿನಹೊಳೆ ನೀರು ತರಬಹುದಾದರೆ, ಕಾವೇರಿ ನೀರು ಕೊಡಲು ಸಾಧ್ಯವಿಲ್ಲವೇ? ಹಾಗೆಯೇ ತುಂಗಭದ್ರಾದಿಂದಲೂ ನೀರು ಪಡೆಯಬಹುದು. ಈ ಬಗ್ಗೆ ವೆಚ್ಚದ ಬಗ್ಗೆ ಲೆಕ್ಕ ಹಾಕಲೇಬಾರದು. ಮೊದಲು ಜನರನ್ನು, ಜಾನುವಾರುಗಳನ್ನು, ಪರಿಸರವನ್ನು ಉಳಿಸಿಕೊಳ್ಳಬೇಕು. ಒಮ್ಮೆ ನೀರು ಹರಿದ ಮೇಲೆ ಖರ್ಚಾದ ಹಣಕ್ಕಿಂತ ಸಾವಿರಾರು ಪಟ್ಟು ಹೆಚ್ಚು ಆದಾಯವೂ ಬರುತ್ತದೆ. ಈ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ನಾನೂ ಜತೆಯಲ್ಲಿರುತ್ತೇನೆ. ಸರಕಾರದ ಮಟ್ಟದಲ್ಲಿ ನನ್ನ ಕೈಲಾದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಸಚಿವರಿಗೆ ಮನವಿ ನೀಡಿದ ರೈತರು
ಹೆಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಯೋಜನೆಗಳ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಬೇಕೆನ್ನುವ ಬಗ್ಗೆ ಇದೇ ವೇಳೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ನೀರಾವರಿ ಹೋರಾಟಗಾರರು ಸಚಿವ ಯೋಗೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡಬೇಕು ಹಾಗೂ ನೀರಿನ ಗುಣಮಟ್ಟದ ಮೇಲೆ ನಿರಂತರವಾಗಿ ಕಣ್ಗಾವಲು ಇಡಬೇಕು ಎಂದು ಒತ್ತಾಯ ಮಾಡಿದ ಹೋರಾಟಗಾರರು; ಬೆಂಗಳೂರು ನಗರದ ಕೈಗಾರಿಕೆಗಳು, ವಾಣಿಜ್ಯ ಕಟ್ಟಡಗಳು ಕಡ್ಡಾಯವಾಗಿ ʼಶೂನ್ಯ ವಿಸರ್ಜನೆ ನೀತಿʼ (zero discharge policy)ಯನ್ನು ಪಾಲಿಸುವಂತೆ ಮಾಡಬೇಕು. ಈ ನೀತಿಯನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ನೀರಿನ ಗುಣಮಟ್ಟದ ಮೇಲೆ ನಿರಂತರವಾಗಿ ಮೇಲುಸ್ತುವಾರಿ ವಹಿಸಬೇಕು ಎಂದು ಮನವಿ ಪತ್ರದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಚಿವ ಯೋಗೇಶ್ವರ ಅವರು ನೀರಾವರಿ ಹೋರಾಟಗಾರರು, ರೈತ ಮುಖಂಡರು, ರೈತರ ಜತೆ ಸಂವಾದ ನಡೆಸಿದರು. ಜತೆಗೆ, ಪಕ್ಕದಲ್ಲೇ ಇದ್ದ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿದರು. ಸಮೃದ್ಧಿಯಾಗಿ ಬೆಳೆದಿದ್ದ ದ್ರಾಕ್ಷಿ ಬೆಳೆಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಶಾಶ್ವತ ನೀರಾವರಿ ಹೋರಾಟಗಾರರಾದ ಮಳ್ಳೂರು ಹರೀಶ್, ಜಿಜಿ ಹಳ್ಳಿ ನಾರಾಯಣಸ್ವಾಮಿ, ಎಂ.ಆರ್.ಲಕ್ಷ್ಮೀನಾರಾಯಣ, ಆನೂರು ದೇವರಾಜ್, ನಾಗದೇನಹಳ್ಳಿ ನಾರಾಯಣಸ್ವಾಮಿ, ಮುನಿ ಕೆಂಪಣ್ಣ, ಹೆಣ್ಣೂರು ಬಸವರಾಜ್, ಸುಷ್ಮಾ ಶ್ರೀನಿವಾಸ್, ಪ್ರಭಾ ನಾರಾಯಣಗೌಡ, ಜೀವಿಕಾ ರತ್ನಮ್ಮ, ಉಷಾ ಆಂಜನೇಯ ರೆಡ್ಡಿ, ವಿಜಯಭಾವ ರೆಡ್ಡಿ, ಶ್ರೀರಾಮ ಗೌಡ, ಬಾಲು, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.