ಕೊರೊನಾ 2ನೇ ಅಲೆ ಸಮಯದಲ್ಲಿ ಮೈಸೂರು ರೈಲು ವಸ್ತುಸಂಗ್ರಹಾಲಯಕ್ಕೆ ಸೇರ್ಪಡೆ
ಮೈಸೂರು: ಕೊರೊನಾ 2ನೇ ಅಲೆ ಸಮಯದಲ್ಲಿ ಸಾರ್ವಜನಿಕರಿಗೆ ಮುಚ್ಚಲ್ಪಟ್ಟಿದ್ದ ಎರಡು ತಿಂಗಳುಗಳ ಕಾಲದಲ್ಲಿ, ಮೈಸೂರು ರೈಲು ವಸ್ತುಸಂಗ್ರಹಾಲಯವು ಹಲವಾರು ಹೊಸ ಕಲಾಕೃತಿಗಳು, ವೈಶಿಷ್ಟ್ಯಗಳನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡಿದೆ.
ಇದರಲ್ಲಿ ರೈಲ್ವೆ, ಕಬ್ಬಿಣದ ಕಾರ್ಖಾನೆ, ಕಲ್ಲಿದ್ದಲು ಗಣಿ ಇತ್ಯಾದಿಗಳಲ್ಲಿ ಉಪಯೋಗಿಸುವ ತೂಕದ ಉಪಕರಣಗಳ ಪ್ರತಿಯೊಂದು ವಸ್ತುಗಳ ಪೇಟೆಂಟ್ ಮತ್ತು ತಯಾರಕರಾಗಿದ್ದ ಬರ್ಮಿಂಗ್ಯಾಮ್ʼನ ಬ್ರಿಟಿಷ್ ತಯಾರಕರಾದ ಡಬ್ಲ್ಯೂ & ಟಿ ಅವೆರಿ ಲಿಮಿಟೆಡ್ ರವರು 1907ರಲ್ಲಿ ತಯಾರಿಸಿರುವ, ಒಂದು ಶತಮಾನದಷ್ಟು ಹಳೆಯದಾದ 250 ಕೆಜಿ ಸಾಮರ್ಥ್ಯದ (7 ದಿಬ್ಬಗಳು) ಯಾಂತ್ರಿಕ ತೂಕದ ಯಂತ್ರವೂ ಸೇರಿದೆ.
ರೈಲ್ವೆ ಮೂಲಕ ಸಾಗಿಸಲು ತರಲಾದ ಪಾರ್ಸೆಲ್ʼಗಳು ಮತ್ತು ಸಾಮಾನುಗಳನ್ನು, ಕಳುಹಿಸುವವರ ಸಮ್ಮುಖದಲ್ಲಿಯೇ ತೂಕ ತಪಾಸಣೆ ಮಾಡಿಸುವುದು ಕಡ್ಡಾಯವಾಗಿದ್ದುದರಿಂದ, ವಸ್ತುಗಳನ್ನು ತೂಕಹಾಕಲು ಈ ಕಂಪನಿಯ ವಿಭಿನ್ನ ಸಾಮರ್ಥ್ಯಗಳ -250 ಕೆಜಿಯಿಂದ 1,000 ಕೆ.ಜಿ.ವರೆಗೆ ತೂಕದ ಯಂತ್ರಗಳು ಹೆಚ್ಚಿನ ರೈಲ್ವೆ ನಿಲ್ದಾಣಗಳಲ್ಲಿ ಇರುತ್ತಿದ್ದವು. ಇದನ್ನು ಈಗ ರೈಲು ಸಂಗ್ರಹಾಲಯದ ಆಟಿಕೆ ರೈಲು ನಿಲ್ದಾಣದಲ್ಲಿ ಇರಿಸಲಾಗಿದೆ.
ಇದು ಪ್ರಾಸಂಗಿಕವಾಗಿ ಮೈಸೂರು ರಾಜ್ಯ ರೈಲ್ವೆ (ಎಂಎಸ್‍ಆರ್) ಯ ಸಮಯದಲ್ಲಿ ನಿರ್ಮಿಸಲಾದ ನಿಲ್ದಾಣಗಳ ಪ್ರತಿರೂಪವಾಗಿದೆ.
ಹುಲ್ಲುಹಾಸಿನ ಹಾನಿಯನ್ನು ತಡೆಗಟ್ಟಲು ಹಾದಿಗಳಲ್ಲಿ ರೈಲು ಸೇವೆಯಿಂದ ಬಿಡುಗಡೆಯಾದ ಮರದ ಸ್ಲೀಪರ್ಗಳನ್ನು ಒದಗಿಸುವುದರ ಜೊತೆಗೆ, ಪೀಠೋಪಕರಣಗಳ ಬಳಿ ಇರುವ ಜನಪ್ರಿಯ ಸೆಲ್ಫಿ ಪಾಯಿಂಟ್ ಗಳಲ್ಲಿ ಮರದ ಪೀಠಗಳನ್ನು ಇರಿಸಲಾಗಿದೆ.
ಬಾಂಬೆ ಬರೋಡಾ ಮತ್ತು ಸೆಂಟ್ರಲ್ ಇಂಡಿಯಾ ರೈಲ್ವೆ (ಬಿಬಿ ಮತ್ತು ಸಿಐಆರ್) ಸಂಸ್ಥೆಯು ತನ್ನ ಉದ್ಯೋಗಿಯೊಬ್ಬರಿಗೆ 1931 ರಲ್ಲಿ ನೀಡಿರುವ ಸೇವಾ ಪ್ರಮಾಣಪತ್ರದ ಹಸ್ತಪ್ರತಿಯು ಒಳಾಂಗಣ ಗ್ಯಾಲರಿಯ ಗೋಡೆಯನ್ನು ಅಲಂಕರಿಸಿದ್ದು, ಹಿಂದಿನ ಯುಗದ ಗತವೈಭವವನ್ನು ಪುನರುಜ್ಜೀವನಗೊಳಿಸುತ್ತದೆ.
ಟಿಕೆಟ್ ನೀಡುವ ಪ್ರದೇಶದಲ್ಲಿ ಸಂದರ್ಶಕರ ಕ್ರಮಬದ್ಧ ಚಲನೆಗೆ ಕ್ಯೂ ವ್ಯವಸ್ಥೆಯ ಅನುಕೂಲತೆ, ಸ್ವಚ್ಛತಾ ಮತ್ತು ಭದ್ರತಾ ಸೇವೆ, ವಸ್ತುಸಂಗ್ರಹಾಲಯದ ಉಲ್ಲೇಖ ಗ್ರಂಥಾಲಯದಲ್ಲಿ ಹೆಚ್ಚಿನ ಇತಿಹಾಸ ಪುಸ್ತಕಗಳು, ಇತ್ಯಾದಿಗಳು ವಸ್ತುಸಂಗ್ರಹಾಲಯವನ್ನು ಕ್ರಮೇಣ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲು ಪ್ರಾರಂಭಿಸಿರುವ ಹೊಸ ಕ್ರಮಗಳಾಗಿವೆ.
ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಅವರ ಸೂಚನೆ ಮೇರೆಗೆ ಹೊಸ ಕಲಾಕೃತಿಗಳು/ವೈಶಿಷ್ಟ್ಯಗಳನ್ನು ಸೇರಿಸಲಾಗಿದ್ದೂ, ಹಿಂದಿನ ವರ್ಷಗಳಲ್ಲಿ ರೈಲ್ವೆ ವ್ಯವಸ್ಥೆಯು ಹೇಗೆ ವಿಕಸನಗೊಂಡಿದೆ ಎಂಬುದರ ಬಗ್ಗೆ ತಿಳಿಯಲು ಸಂದರ್ಶಕರಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ವಿಭಾಗದ ವಿವಿಧ ಸ್ಥಳಗಳಲ್ಲಿರುವ ಐತಿಹಾಸಿಕ ಮೌಲ್ಯವನ್ನು ಹೊಂದಿರುವ ವಸ್ತುಗಳನ್ನು ಹಿಂಪಡೆಯಬೇಕು ಮತ್ತು ಅವುಗಳನ್ನು ಸಂರಕ್ಷಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.