ರಾಜ್ಯ ಸರಕಾರದ ಹೊಸ ನೀತಿ; ಬಡಜನರ ಫಜೀತಿ
by GS Bharath Gudibande
ಗುಡಿಬಂಡೆ: ಕೊರೋನಾ ಕಷ್ಟಕಾಲದಲ್ಲಿ ಸಾರ್ವಜನಿಕರು ಜೀವನ ಸಾಗಿವುದೇ ದುರ್ಬರವಾಗಿರುವ ಪರಿಸ್ಥಿತಿ ಇದ್ದರೆ, ಇಂಥ ಕಠಿಣ ಸಂದರ್ಭದಲ್ಲಿ ತಾಲೂಕಿನ 188ಕ್ಕೂ ಹೆಚ್ಚು ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಕಳೆದ ಒಂದು ವರ್ಷದಿಂದ ಕೋವಿಡ್-19 ಸೋಂಕಿನಿಂದ ಎಲ್ಲರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರಿ ನ್ಯಾಯ ಬೆಲೆ ಅಂಗಡಿಗಳಿಂದ ನೀಡುವ ಅಕ್ಕಿ ಸೇರಿದಂತೆ ಇತರೆ ಆಹಾರ ಪದಾರ್ಥಗಳಿಂದ ಜೀವ ಸಾಗಿಸುತ್ತಿದ್ದರು, ಇಂತಹ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ʼಗಳನ್ನು ರದ್ದು ಮಾಡಿ 188ಕ್ಕೂ ಹೆಚ್ಚು ಕುಟುಬಂಗಳನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ.
ಅಲ್ಲದೆ, ಬೆಲೆ ಏರಿಕೆಯಿಂದ ತತ್ತರಿಸಿರುವ ಈ ನೂರು ಕುಟುಂಬಗಳ ಅನ್ನ ಕಿತ್ತುಕೊಂಡು ಗಾಯದ ಮೇಲೆ ಬರೆ ಎಳೆಯಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಲು ಸರಕಾರ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ, ಆ ನಿಮಯಗಳ ಪ್ರಕಾರ ಯಾರು GST ಪಾವತಿ, ಸರಕಾರಿ ನೌಕರರು, ಮೂರು ಹೆಕ್ಟೇರ್ ಜಮೀನಿಗಿಂತ ಹೆಚ್ಚು ಭೂಮಿ ಹೊಂದಿದ್ದರೆ ಅಂಥವರ ರೇಷನ್ ಕಾರ್ಡ್ ರದ್ದುಮಾಡಿ ಅವರನ್ನು APL ಕಾರ್ಡ್‌ಗ ಸೇರಿಸಲಾಗುತ್ತಿದೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಕೆಲ ದಿನಗಳಿಂದ ರಾಜ್ಯಾದ್ಯಂತ ಜಮೀನು ಸೇರಿ ಸರಕಾರ ಮತ್ತು ಸರಕಾರೇತರ ಕೆಲಸ ಮಾಡುವವರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದವರಿಗೆ ಬಿಗ್ ಶಾಕ್ ಕೊಟ್ಟಿದೆ, ಸರಕಾರ ಅಕ್ರಮ ಕಾರ್ಡ್‌ಗಳ ರದ್ದತಿಗೆ ನಿಯಮ ರೂಪಿಸಿ ತಾಲೂಕಿನ ನೂರಾರು ಜನರ ಬಿಪಿಎಲ್ ಕಾರ್ಡ್ʼಗಳನ್ನು ರದ್ದುಗೊಳಿಸಿ ಎಪಿಎಲ್ ಕಾರ್ಡ್ ಪಟ್ಟಿಗೆ ಸೇರಿಸಿದೆ. ಇದರಿಂದ ಅರ್ಹ ಫಲಾನುಭವಿಗಳು ತೊಂದರೆ ಅನುಭವಿಸುತಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿಬೇಕಾಗಿ ಮನವಿ ಮಾಡುತ್ತಿದ್ದಾರೆ.
ಗೊತ್ತಿಲ್ಲದೆ ಬಿಪಿಎಲ್ ಕಾರ್ಡ್ ರದ್ದು
ಕುಟುಂಬದ ಸದಸ್ಯರಲ್ಲಿ ಯಾರೇ ಒಬ್ಬರು ಆದಾಯ ತೆರೆಗೆ ಪಾವತಿಸುತ್ತಿದ್ದರೂ ಇಡೀ ಕುಟುಂಬದ ಪಡಿತರ ಚೀಟಿ ರದ್ದು ಮಾಡಿ ಅವರನ್ನು ಎಪಿಎಲ್ ಪಟ್ಟಿಗೆ ಸೇರಿಸಿ ಅರ್ಹರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಇಷ್ಟೆಲ್ಲ ಕುಟುಂಬದ ಸದಸ್ಯರ ಗಮನಕ್ಕೆ ತರದೆ ಇಲಾಖೆ ನೇರವಾಗಿ ರದ್ದು ಮಾಡುತ್ತಿದೆ. ರೇಷನ್ ಪಡೆಯಲು ನ್ಯಾಯ ಬೆಲೆ ಅಂಗಡಿಗೆ ಹೋದಾಗ ನಿಮ್ಮ ಕಾರ್ಡ್ ರದ್ದಾಗಿದೆ ಎಂಬ ಮಾಹಿತಿ ತಿಳಿದು ಸಾರ್ವಜನಿಕರು ನಿರಾಶೆರಾಗುತ್ತಿದ್ದಾರೆ.
ಕಾರ್ಡ್ ರದ್ದು ಮಾಡಲು ಕಾರಣ?
ಕುಟುಂಬದ ಸದಸ್ಯರು ತಮ್ಮ ಜೀವನ ರೂಪಿಸಿಕೊಳ್ಳಲು, ಮನೆ ಕಟ್ಟಲು, ವ್ಯಾಪಾರ ಮಾಡಲು, ಆದಾಯ ತೆರಿಗೆ, ಜಿ.ಎಸ್.ಟಿ ಮಾಡಲೇಬೇಕಾಗುತ್ತದೆ. ಇದೇ ನೆಪ ಇಟ್ಟುಕೊಂಡು ಸರಕಾರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಹೊರಟಿದೆ. ಈಗಾಗಲೇ ತಾಲೂಕಿನಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಸರಕಾರದ ನಿಯಮದಂತೆ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಇನ್ನು ಹಲವು ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎಂಬ ಮಾಹಿತಿ ಸಿಕೆನ್ಯೂಸ್ ನೌ ಗೆ ಲಭ್ಯವಾಗಿದೆ.
ಹೊಸ ಕಾರ್ಡ್‌ಗೆ ಅನುಮತಿ ಯಾವಾಗ?
ಈಗಾಗಲೇ ಆದಾಯ ತೆರಿಗೆ ಪಾವತಿ ನೆಪದಲ್ಲಿ ಬಿಪಿಎಲ್ ಕಾರ್ಡುಗಳನ್ನು ಕಳೆದುಕೊಂಡಿರುವ ಕುಟುಂಬಗಳು ಮತ್ತೆ ಆ ಕಾರ್ಡ್ʼಗೆ ಅರ್ಜಿ ಹಾಕಲು ಅವಕಾಶ ಇದೆಯಾ? ಯಾವಾಗ ಸಿಗುತ್ತದೆ? ನಿಯಮಕ್ಕೆ ಯಾವಾಗ ತಿದ್ದುಪಡಿ? ಹೊಸ ಅರ್ಜಿ ಯಾವಾಗ ಕರೆಯಲಾಗುತ್ತದೆ? ಹೀಗೆ ಹತ್ತು ಹಲವು ಪ್ರಶ್ನೆಗಳಿವೆ. ಇವಕ್ಕೆ ಅಧಿಕಾರಿಗಳು ಸೂಕ್ತ ಸಲಹೆಗಳನ್ನು ನೀಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
ಯಾರು ಏನಂತಾರೆ?
ಗುಡಿಬಂಡೆ ತಾಲೂಕು ಆರ್ಥಿಕವಾಗಿ ಬಹಳ ಹಿಂದುಳಿದಿದೆ. ಕೆಲವರ ಮಕ್ಕಳು ಬೆಂಗಳೂರಿನಲ್ಲಿ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪೋಷಕರ ಜತೆ ವಾಸ ಮಾಡುತ್ತಿಲ್ಲ. ಮಕ್ಕಳು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮಾಹಿತಿ ಇಲ್ಲದೆ ಪೋಷಕರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದ್ದಾರೆ, ಪಟ್ಟಣದ ರಸ್ತೆ ಅಗಲೀಕರಣದ ವೇಳೆ ಹಲವರು ತಮ್ಮ ಮನೆಗಳನ್ನು ಕಳೆದುಕೊಂಡು ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಅವರ ಕಾರ್ಡುಗಳನ್ನು ರದ್ದುಪಡಿಸಿರುವುದು ದುಃಖದ ಸಂಗತಿ. ಕೆಲವರಿಗೆ ಮಾಹಿತಿ ನೀಡದೆ ಏಕಾಏಕಿ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗಿದೆ. ಕೊರೋನಾ ಕಷ್ಟಕಾಲದಲ್ಲಿ ತುಂಬಾ ತೊಂದರೆಯಾಗುತ್ತಿದೆ. ಸಾಲಕ್ಕಾಗಿ ಆದಾಯ ತೆರಿಗೆ ಪಾವತಿ ಮಾಡಿದ್ದರಿಂದ ಪಡಿತರ ಚೀಟಿಯನ್ನು ರದ್ದು ಮಾಡಿ ಎಪಿಎಲ್ ಮಾಡಿದ್ದಾರೆ. ಇದು ಯಾವ ನ್ಯಾಯ?
ಆಶಾ ಜಯಪ್ಪ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ, ಗುಡಿಬಂಡೆ
ಪಡಿತರ ಚೀಟಿದಾರರಲ್ಲಿ ಯಾರೂ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೋ ಅವರ ಹೆಸರನ್ನು ಕೈಬಿಟ್ಟು ಉಳಿದ ಕುಟುಂಬ ಸದಸ್ಯರಿಗೆ ಅನುಕೂಲ ಮಾಡಿಕೊಡಬೇಕಿತ್ತು ಆದರೆ, ಏಕಾಎಕಿ ಬಿಪಿಎಲ್ ಕಾರ್ಡುಗಳನ್ನು ರದ್ದು ಇಡೀ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ. ಎಷ್ಟೋ ಜನ ಮಕ್ಕಳು ತಮ್ಮ ಪೋಷಕರ ಜತೆಯಲ್ಲಿ ಇಲ್ಲ. ಕೇವಲ ದಾಖಲೆಗಾಗಿ ರೇಷನ್ ಕಾರ್ಡ್ʼನಲ್ಲಿ ಹೆಸರುಗಳನ್ನು ಉಳಿಸಿದ್ದಾರೆ. ಹೀಗೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ರದ್ದು ಮಾಡುವುದು ಸರಿಯಲ್ಲ.
ಬುಲೆಟ್ ಶ್ರೀನಿವಾಸ್ ತಾಲೂಕು ಅಧ್ಯಕ್ಷ, ಜಯಕರ್ನಾಟಕ, ಗುಡಿಬಂಡೆ
ವಿವಿಧ ಕಾರಣಗಳಿಂದ ರದ್ದಾಗಿರುವ ಪಡಿತರ ಚೀಟಿಗಳನ್ನು ಪುನಾ ಪರಿಶೀಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅನಗತ್ಯವಾಗಿ ಯಾರಿಗೂ ತೊಂದರೆ ಆಗಲು ಬಿಡುವುದಿಲ್ಲ. ಎಲ್ಲ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಸಿಗಬೇಕು.
ಎಸ್.ಎನ್. ಸುಬ್ಬಾರೆಡ್ಡಿ ಶಾಸಕರು