ಬಾಗೇಪಲ್ಲಿ: ತಾಲೂಕಿನಾದ್ಯಂತ ಎಲ್ಲೆಡೆ ಶನಿವಾರ ಗುರುಪೂರ್ಣಿಮೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಬಾಗೇಪಲ್ಲಿ ಪಟ್ಟಣದ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ವಿಶೇಷ ಪೂಜೆ ನೆರೆವೇರಿಸಲಾಯಿತು. ವಿಶೇಷವಾಗಿ ಶಿರಡಿ ಸಾಯಿಬಾಬಾ ಅವರಿಗೆ ಮುಂಜಾನೆಯಿಂದಲೇ ಗುರುವಿನ ಆರಾಧನೆ ನಡೆಯಿತು. ಭಜನೆ, ಪ್ರಾರ್ಥನೆ, ಸತ್ಯನಾರಾಯಣ ವ್ರತ ಮತ್ತಿತರೆ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ಸಾಯಿಬಾಬಾ ಅವರಿಗೆ ಅಭಿಷೇಕ–ಅಲಂಕಾರಗಳನ್ನು ಮಾಡಿ, ಭಕ್ತರು ಭಕ್ತಿಭಾವ ಮೆರೆದರು.
ಹಿಂದೂ ಪರಂಪರೆಯಲ್ಲಿ ಗುರುಪೂರ್ಣಿಮೆಗೆ ವಿಶೇಷವಾದ ಮಹತ್ತ್ವವಿದೆ. ನಮ್ಮಲ್ಲಿರುವ ಪದ್ಧತಿಗಳು, ಸಂಗೀತ, ಸಾಹಿತ್ಯ ಇವೆಲ್ಲವೂ ಬಂದಿರುವುದು ಗುರುವಿನ ಮೂಲಕವೇ. ಒಂದು ರೀತಿ ನಮ್ಮ ಧರ್ಮ ನಿಂತಿರುವುದೇ ಗುರುತತ್ತ್ವದ ಮೇಲೆ. ಹಾಗಾಗಿ ದೇವಸ್ಥಾನವನ್ನು ಬಹಳ ವಿನೂತನವಾಗಿ ಅಲಂಕರಿಸಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದು ದೇಗುಲದ ಅರ್ಚಕರು ಹೇಳಿದರು.
ಬಾಗೇಪಲ್ಲಿ ತಾಲೂಕಿನ ವಿವಿಧೆಡೆಗಳಿಂದ ಮಂದಿರಕ್ಕೆ ಆಗಮಿಸಿದ ಭಕ್ತರು ಬಾಬಾ ದರ್ಶನ ಪಡೆದು ಧನ್ಯರಾದರು. ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ಅಧ್ಯಕ್ಷ ಬಾಬೂರೆಡ್ಡಿ, ಬಾಗೇಪಲ್ಲಿ ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ ನರಸಿಂಹ ನಾಯ್ಡು, ಪುರಸಭೆ ಅಧ್ಯಕ್ಷೆ ಗುಲ್ನಾಜ್ ಬೇಗಂ, ಉಪಾಧ್ಯಕ್ಷ ಶ್ರೀನಿವಾಸ್, ಶ್ರೀನಿವಾಸ ರೆಡ್ಡಿ, ಕೆ.ಡಿ.ಪಿ.ಸದಸ್ಯ ಅಮರನಾಥ ರೆಡ್ಡಿ, ಗೂಳೂರು ಎಸ್.ಎಸ್.ರಮೇಶ್ ಬಾಬು, ಮಂಜುನಾಥ, ಸಂದೀಪ್ ಇನ್ನೂ ಮುಂತಾದ ಪ್ರಮುಖರು ಬಾಬಾ ಪೂಜೆಯಲ್ಲಿ ಪಾಲ್ಗೊಂಡಿದ್ದರು.