49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು; ಪದಕ ಬೇಟೆ ಆರಂಭಿಸಿದ ಭಾರತೀಯರು
ಟೋಕಿಯೋ: ಟೋಕಿಯೊ ಒಲಿಂಪಿಕ್ಸ್ -2020ರಲ್ಲಿ ಭಾರತದ ಪದಕ ಬೇಟೆ ಶುರುವಾಯಿತು. ಜಪಾನ್‌ನ ಟೋಕಿಯೊ ಅಂತಾರಾಷ್ಟ್ರೀಯ ಒಲಿಂಪಿಕ್ ವೇದಿಕೆಯಲ್ಲಿ ನಡೆದ ಮಹಿಳೆಯರ 49 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ಸ್ಫರ್ಧೆಯಲ್ಲಿ ಭಾರತದ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಭಾರತಕ್ಕೆ ಮೊದಲ ಪದಕವಾಗಿ ಬೆಳ್ಳಿ ಒಲಿದೆ.
49 ಕೆ.ಜಿ.ವಿಭಾಗದ ಭಾರ ಎತ್ತುವ ಈ ಸ್ಪರ್ಧೆಯಲ್ಲಿ ನಡೆದ ನಾಲ್ಕು ಸುತ್ತುಗಳಲ್ಲಿ ಮೀರಾಬಾಯಿ ಅವರು ಒಟ್ಟು 202 ಕೆಜಿ (ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 115 ಕೆಜಿ) ಮೇಲೆತ್ತಿದ್ದಾರೆ.
ಚೀನಾದ ಝಿಹೈ ಹು ಒಟ್ಟು 210 ಕೆಜಿ ತೂಕ ಎತ್ತಿ ಚಿನ್ನದ ಪದಕ ಗಳಿಸಿ ಒಲಿಂಪಿಕ್ ವೇಟ್ ಲಿಫ್ಟಿಂಗ್ ಸ್ಫರ್ಧೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇನ್ನು, ಇಂಡೋನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾ ಒಟ್ಟು 194 ಕೆಜಿ ಭಾರ ಎತ್ತಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಮೀರಾಬಾಯಿ ಬೆಳ್ಳಿ ಗೆದ್ದ ಕೂಡಲೇ ಟೋಕಿಯೋದ ಒಲಿಂಪಿಕ್ ಕ್ರೀಡಾಗ್ರಾಮದಲ್ಲಿದ್ದ ಭಾರತೀಯ ಕ್ರೀಡಾಪಟುಗಳಿಗೆ ಇನ್ನಷ್ಟು ಹುರುಪು ಬಂದಿದೆ. ಭಾರತಕ್ಕೆ ಇನ್ನಷ್ಟು ಪದಕಗಳು ಸಿಗುವ ನಿರೀಕ್ಷೆ ಇದೆ.
ವೇಟ್ ಲಿಫ್ಟ್‌ನಲ್ಲಿ ಎರಡನೇ ಪದಕ
ಮೀರಾಬಾಯಿ ಅವರು ಒಲಿಂಪಿಕ್ ವೇಟ್ ಲಿಫ್ಟಿಂಗ್ ಸ್ಫರ್ಧೆಯಲ್ಲಿ ಬೆಳ್ಳಿ ಗೆಲ್ಲುವುದರೊಂದಿಗೆ ಇಡೀ ಭಾರತ ಖುಷಿಯಾಗಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಎರಡನೇ ವೇಯ್ಟ್ ಲಿಫ್ಟರ್ ಮೀರಾ ಆಗಿದ್ದಾರೆ. 2000ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ 69 ಕೆ.ಜಿ. ಭಾಋ ಎತ್ತುವ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶದ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗೆದ್ದಿದ್ದರು.
ಶುಭಾಶಯಗಳ ಸುರಿಮಳೆ
ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಅವರಿಗೆ ಇಡೀ ದೇಶಾದ್ಯಂತ ಶುಭಾಶಯಗಳ ಸುರಿಮಳೆ ಆಗುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮುಂತಾದವರು ಮೀರಾ ಅವರಿಗೆ ಶುಭಾಶಯ ಹೇಳಿದ್ದಾರೆ.
ಮೀರಾ ಅವರಿಗೆ ಹೃದಯಪೂರ್ವಕ ಶುಭಾಶಯಗಳು ಎಂದು ರಾಷ್ಟ್ರಪತಿಗಳು ಹೇಳಿದ್ದರೆ, ಬೆಳ್ಳಿಯೊಂದಿಗೆ ಭಾರತ ಶುಭಾರಂಭ ಮಾಡಿದೆ ಎಂದು ಮೋದಿ ಅವರಿ ಟ್ವೀಟ್ ಮಾಡಿದ್ದಾರೆ.
ಜತೆಗೆ, ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಸೇರಿದಂತೆ ವಿವಿಧ ಸಚಿವರು, ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಸಿ.ಎನ್,ಅಶ್ವತ್ಥನಾರಾಯಣ ಮುಂತಾದವರು ಮೀರಾ ಅವರಿಗೆ ಶುಭ ಕೋರಿದ್ದಾರೆ.