ಟೊಮ್ಯಾಟೋ ಬೆಳೆಗಾರರಿಗೆ ಶುಕ್ರದೆಸೆ; ಲಾಕ್‌ಡೌನ್ ನಂತರ ಹೆಚ್ಚಿದ ಬೆಲೆ
by Ra Na Gopala Reddy Bagepalli
ಬಾಗೇಪಲ್ಲಿ: ಪ್ರತಿ ಬಾರಿಯೂ ಬೆಲೆ ಕುಸಿತ ಹಾಗೂ ಕೊರೋನಾದಿಂದ ನಷ್ಟ ಮಾಡಿಕೊಳ್ಳುತ್ತಿದ್ದ ಟೊಮ್ಯಾಟೋ ಬೆಳೆಗಾರರಿಗೆ ಶುಕ್ರದೆಸೆ. ವಾರದ ಹಿಂದೆ ಕೇವಲ 5ರಿಂದ 10 ರೂ.ಗಳಿಗೆ ಮಾರಾಟವಾಗುತ್ತಿದ್ದ ಪ್ರತಿ ಕೆಜಿ ಟೊಮ್ಯಾಟೋ ಈಗ 30 ರೂ.ಗೆ ಮಾರಾಟವಾಗುತ್ತಿದೆ.
ಕೆಲ ತಿಂಗಳ ಹಿಂದಷ್ಟೇ ರೈತರು ಬೆಳೆದ ಬೆಳೆಗೆ ಕಾಸೂ ಗಿಟ್ಟುತ್ತಿಲ್ಲ ಎಂದು ಆರೋಪಿಸಿ ಟೊಮ್ಯಾಟೋವನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದ ರೈತರಿಗೆ ಈಗ 15 ಕೆಜಿ ಬಾಕ್ಸ್ʼಗೆ 250ರಿಂದ 350 ರೂ.ವರೆಗೆ ಟೊಮ್ಯಾಟೋ ಖರೀಧಿ ಆಗುತ್ತಿರುವುದು ಹರ್ಷ ತಂದಿದೆ.
ಕೊರೋನಾ ಸೋಂಕು ತಡೆಯುವುದಕ್ಕಾಗಿ ಹೇರಲಾದ ಲಾಕ್‌ಡೌನ್ ಪರಿಣಾಮ ಸೂಕ್ತ ಮಾರುಕಟ್ಟೆ ಜತೆಗೆ ನ್ಯಾಯಯುತ ಬೆಲೆ ಸಿಗದೇ ಆರ್ಥಿಕವಾಗಿ ತೀವ್ರ ಕಂಗಾಲಾಗಿದ್ದ ರೈತರಿಗೆ ಈಗ ಟೊಮ್ಯಾಟೋ ಕೈ ಹಿಡಿದಿದೆ. ಬರೋಬ್ಬರಿ 15 ಕೆಜಿ ಟೊಮ್ಯಾಟೋ ಬಾಕ್ಸ್ ಈಗ ಬಾಗೇಪಲ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 250ರಿಂದ 350 ರೂ.ಗಳವರೆಗೆ ಮಾರಾಟವಾಗುತ್ತಿದೆ.
ಕೊರೋನಾ ಸಂಕಷ್ಟದಿಂದ ಜಿಲ್ಲೆಯ ರೈತರು ಯಾವುದೇ ಬೆಳೆ ಇಟ್ಟರೂ ಬೆಲೆ ಇಲ್ಲದೇ ಕೈಗೆ ಬಂದ ಬೆಳೆ ಉತ್ತಮ ದರಕ್ಕೆ ಮಾರಾಟವಾಗದೇ ಕೈ ಸುಟ್ಟುಕೊಂಡಿದ್ದರು. ಆದರೆ ಈಗ ಟೊಮ್ಯಾಟೋಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದ್ದು, ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಲೇ ಇದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಬಹುತೇಕ ಲಾಕ್‌ಡೌನ್ ಹೇರಿದ್ದ ನಂತರ ರೈತರ ತರಕಾರಿ ಬೆಳೆಗಳಿಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಲಾಕ್‌ಡೌನ್ ಆರಂಭದಲ್ಲಿ ಸೂಕ್ತ ಬೆಲೆ ಸಿಗದೆ ರೈತರು ತಮ್ಮ ಬೆಳೆಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ವಿಶೇಷವಾಗಿ ಟೊಮ್ಯಾಟೋ ಸಹ ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದು ಬೆಲೆ ದಿಢೀರನೆ ಹೆಚ್ಚಾಗಿದ್ದರಿಂದ ರೈತರಿಗೆ ನೆಮ್ಮದಿ ತಂದಿದೆ.