ಬೆಂಗಳೂರು: ಸೋಮವಾರ ಬೆಂಗಳೂರಿನಲ್ಲಿ ನಿಧನರಾದ ಹಿರಿಯ ನಟಿ ಜಯಂತಿ ಅವರು ನಟನೆಯ ಜತೆಗೆ ರಾಜಕೀಯದಲ್ಲೂ ಸದ್ದು ಮಾಡಿದ್ದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಜಯಂತಿ ಅವರು 1998ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಫರ್ಧಿಸಿದ್ದರು. ಘಟಾನುಘಟಿಗಳಿಗೆ ಸಡ್ಡು ಹೊಡೆದು ಹೆಗಡೆ ಅವರ ನಾಮಬಲದಿಂದಲೇ ಅಖಾಡಕ್ಕೆ ಇಳಿದಿದ್ದ ಅವರು, ಕಾಂಗ್ರೆಸ್ ಪಕ್ಷದ ಆರ್.ಎಲ್.ಜಾಲಪ್ಪ, ಜನತಾದಳದ ಸಿ.ಭೈರೇಗೌಡರ ವಿರುದ್ಧ ಸೆಣಸಿ 204359 ಮತ ಗಳಿಸಿ ಮೂರನೇ ಸ್ಥಾನ ಪಡೆದಿದ್ದರು. ಅಂದರೆ, ಮತದಾನವಾಗಿದ್ದ ಒಟ್ಟು ಮತಗಳಲ್ಲಿ 25.16% ರಷ್ಟು ಮತಗಳನ್ನು ಪಡೆದಿದ್ದರು. ಆ ಸಂದರ್ಭದ ಜಿದ್ದಾಜಿದ್ದಿ ರಾಜಕಾರಣದಲ್ಲಿ ಜಯಂತಿ ಅವರು ಇಷ್ಟು ದೊಡ್ಡ ಪ್ರಮಾಣದ ಮತಗಳನ್ನು ಪಡೆದ ರಾಜಕೀಯ ದಿಗ್ಗಜರಿಗೆ ಟಕ್ಕರ್ ಕೊಟ್ಟಿದ್ದು ರಾಜ್ಯದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
ಆ ಚುನಾವಣೆಯಲ್ಲಿ ಜಾಲಪ್ಪ ಅವರು 360761 ಮತಗಳನ್ನು, ಭೈರೇಗೌಡರು 233706 ಮತಗಳನ್ನು ಪಡೆದಿದ್ದರು. ಈ ಚುನಾವಣೆಯು ಮಾಜಿ ಪ್ರಧಾನಮಂತ್ರಿ ದೇವೇಗೌಡರು ಹಾಗೂ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ನಡುವಿನ ಜಿದ್ದಿನ ಕಣವಾಗಿತ್ತು. ಗೌಡರು ಪ್ರಧಾನಿಯಾದ ಮೇಲೆ ಹೆಗಡೆ ಅವರನ್ನು ಜನತಾದಳದಿಂದ ಹೊರಹಾಕಲಾಗಿತ್ತು. ಪರಿಣಾಮವಾಗಿ ಹೆಗಡೆ ಅವರು ದಳಕ್ಕೆ ಸಡ್ಡು ಹೊಡೆದು ಲೋಕಶಕ್ತಿ ಕಟ್ಟಿದ್ದರು. ಆ ಪಕ್ಷದ ಅಭ್ಯರ್ಥಿಯಾಗಿ ಜಯಂತಿ ಸ್ಪರ್ಧಿಸದೇ ಇದ್ದಿದ್ದರೆ ಜಾಲಪ್ಪ ಸೋತು ಭೈರೇಗೌಡರು ನಿರಾಯಾಸವಾಗಿ ಗೆದ್ದುಬಿಡುತ್ತಿದ್ದರು.
ಅಷ್ಟೇ ಅಲ್ಲ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜಯಂತಿ ಅವರು ಬಿರಗಾಳಿಯಂತೆ ಪ್ರಚಾರ ನಡೆಸಿದ್ದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಗೂ ಅಂದಿನ ಕೋಲಾರ ಜಿಲ್ಲೆಗಳಲ್ಲಿ ಹಂಚಿ ಹೋಗಿದ್ದ ಈ ಬೃಹತ್ ಲೋಕಸಭಾ ಕ್ಷೇತ್ರದಲ್ಲಿ ಅವರು ಅಬ್ಬರದ ಪ್ರಚಾರ ನಡೆಸಿದ್ದರು. ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಖ್ಯಾತ ನಟಿಯಾಗಿದ್ದ ಅವರನ್ನು ಸ್ಥಳೀಯ ಜನರು ಬಹಳ ಅಕ್ಕರೆಯಿಂದ ಸ್ವಾಗತಿಸಿದ್ದರು.
ಅವರಿಗಾಗಿ ಸ್ವತಃ ರಾಮಕೃಷ್ಣ ಹೆಗಡೆ, ಜೀವರಾಜ ಆಳ್ವಾ, ಟಿಎನ್ ಸೀತಾರಾಂ ಸೇರಿದಂತೆ ಅನೇಕ ಘಟಾನುಘಟಿ ನಾಯಕರೆಲ್ಲ ಬಂದು ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ಮಾಡಿದ್ದರು. ಹೀಗಾಗಿ ರಾಜಕೀಯವಾಗಿ ಜಯಂತಿ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜತೆ ನಂಟಿತ್ತು. ಆಗಾಗ ಅವರು ತಮ್ಮ ರಾಜಕೀಯ ಬದುಕಿನ ಬಗ್ಗೆ ಮಾತನಾಡುವಾಗಲೆಲ್ಲ ಚಿಕ್ಕಬಳ್ಳಾಪುರದ ಬಗ್ಗೆ ಪ್ರಸ್ತಾವನೆ ಮಾಡುವುದನ್ನು ಮರೆಯುತ್ತಿರಲಿಲ್ಲ.
ಆ ಚುನಾವಣೆಯನ್ನು ಬಹಳ ಹತ್ತಿರದಿಂದ ನೋಡಿದ್ದ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಜಗನ್ನಾಥ್ ಪ್ರಕಾಶ್ ಅವರು ಕೆಲ ಸಂಗತಿಗಳನ್ನು ಸಿಕೆನ್ಯೂಸ್ ನೌ ಗೆ ತಿಳಿಸಿದರು.
“ಜಯಂತಿ ಅವರು ಕನ್ನಡ ಚಿತ್ರರಂಗದಂತೆ ತೆಲುಗು ಚಿತ್ರರಂಗದಲ್ಲೂ ಖ್ಯಾತ ನಟಿಯಾಗಿದ್ದರು. ಎನ್.ಟಿ.ರಾಮಾರಾವ್ ಅವರಂಥ ದಿಗ್ಗಜ ನಟನ ಜತೆಯೂ ನಟಿಸಿದ್ದರು. ಹೀಗಾಗಿ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜಯಂತಿ ಅವರಿಗೆ ಹೆಗಡೆ ಅವರು ಟಿಕೆಟ್ ನೀಡಿದ್ದರು. ಆದರೆ, ಜಯಂತಿ ಅವರು ನಿರಾಶೆ ಮಾಡಲಿಲ್ಲ. ಒಳ್ಳೆಯ ಸ್ಕೋರನ್ನೇ ಮಾಡಿದ್ದರು” ಎಂದು ಅವರು ಹೇಳುತ್ತಾರೆ.
ಇದಾದ ಮೇಲೆ 1999ರ ವಿಧಾನಸಭೆ ಚುನಾವಣೆಯಲ್ಲಿ ಜಯಂತಿ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಲೋಕಶಕ್ತಿ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಏನೇ ಆದರೂ ಚಿತ್ರರಂಗದಲ್ಲಿ ಅನಭಿಷಕ್ತ ರಾಣೆಯಾಗಿ ಮೆರೆದರೂ ಅನೇಕ ಏಳುಬೀಳುಗಳನ್ನು ಕಂಡಿದ್ದ ಜಯಂತಿ ಅವರು ರಾಜಕೀಯದಲ್ಲೂ ಮಿಂಚಿನಂತೆ ಬಂದು ಮರೆಯಾಗಿದ್ದರು. ಈಗ ಅವರು ಶಾಶ್ವತ ಚಿರನಿದ್ರೆಗೆ ಜಾರಿದ್ದಾರೆ.