ಬೆಂಗಳೂರು: ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ಸ್ವೀಕಾರ ಮಾಡಲಿರುವ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಂದು ವರ್ಷ ಹತ್ತು ತಿಂಗಳು ಆಡಳಿತ ನಡೆಸಲಿದ್ದು, ಹೊಸ ಮುಖ್ಯಮಂತ್ರಿ ಎದುರು ಸವಾಲುಗಳ ಬೆಟ್ಟವೇ ಇದೆ.
ಬಲಿಷ್ಠ ನಾಯಕ ಯಡಿಯೂರಪ್ಪ ಅವರ ಕಾಲದಲ್ಲಿಯೇ ನಿರಂತರವಾಗಿ ಭಿನ್ನಮತ, ಬಿಕ್ಕಟ್ಟು ಎದರಿಸಿದ್ದ ಪಕ್ಷಕ್ಕೆ, ಬೊಮ್ಮಾಯಿ ಆವರ ಕಾಲದಲ್ಲಿ ಏನಾಗುತ್ತೋ ಎನ್ನುವ ಪ್ರಶ್ನೆ ಇದೆ. ಹಾಗಾದರೆ, ಬೊಮ್ಮಾಯಿ ಅವರ ಮುಂದಿರುವ ಸವಾಲುಗಳೇನು? ವಿವರ ಇಲ್ಲಿದೆ.
1. ಹೈಕಮಾಂಡ್ ಕಣ್ಣು ಕೆಂಪಾಗದಂತೆ ಆಡಳಿತ ನಡೆಸಬೇಕು. ಅವರು ಹೇಳಿದ್ದಕ್ಕೆಲ್ಲ ಓಕೆ ಎನ್ನಬೇಕು. ಯಾವುದೇ ಕಾರಣಕ್ಕೂ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಕಣ್ಣಳತೆ ಮೀರಿ ಏನೂ ಮಾಡುವಂತಿಲ್ಲ.
2. ಹೇಳಿಕೇಳಿ ಬಸವರಾಜ ಬೊಮ್ಮಾಯಿ ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬ್ಲೂಬಾಯ್. ಹೊಸ ಮುಖ್ಯಮಂತ್ರಿ ಮೇಲೆ ಬಿಎಸ್‌ವೈ ಮತ್ತವರ ಕುಟುಂಬದ ಒತ್ತಡವೂ ಬೀಳಲಿದೆ ಎನ್ನುವುದು ಸಹಜವಾಗಿಯೇ ಎಲ್ಲರ ಅನುಮಾನ. ಎಲ್ಲರೂ ಹೇಳುವಂತೆ ಬೊಮ್ಮಾಯಿ ಅವರು ಯಡಿಯೂರಪ್ಪರ ಮಾತು ಮೀರಲ್ಲ. ಒಂದೆಡೆ ಹೈಕಮಾಂಡ್, ಇನ್ನೊಂದೆಡೆ ಯಡಿಯೂರಪ್ಪ ಅವರನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು ಸುಲಭವಲ್ಲ.
3. ಯಡಿಯೂರಪ್ಪ ಕಾಲದಲ್ಲಿ ಅವರ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಎಂದು ರೆಬೆಲ್ ನಾಯಕರು ಆರೋಪ ಮಾಡಿದ್ದರು. ಆದೇ ರೀತಿ ಬೊಮ್ಮಾಯಿ ಸಿಎಂ ಆದರೆ, ಯಡಿಯೂರಪ್ಪ ಸೂಪರ್ ಸಿಎಂ ಆಗಲಿದ್ದಾರೆ. ಹೀಗಾಗಿ ಅವರ ಕುಟುಂಬದ ಹಿಡಿತ ಸರಕಾರ ಮೇಲೆ ಇರುತ್ತದೆ ಎನ್ನುವುದು ಮತ್ತೊಂದು ಆತಂಕ. ಇದನ್ನು ಹೊಸ ಸಿಎಂ ಹೇಗೆ ನಿಭಾಯಿಸುತ್ತಾರೆಂದು ಕಾದು ನೋಡಬೇಕಿದೆ.
4. ಸಿಕೆನ್ಯೂಸ್ ನೌ ಜತೆ ಮಾತನಾಡಿದ ಬಿಜೆಪಿ ಮುಖಂಡರೊಬ್ಬರು ಹೇಳಿದಂತೆ, ಈ ಹಿಂದೆ ಧರ್ಮಸಿಂಗ್ ಅವರು ಎದುರಿಸಿದ ಒತ್ತಡದ ರೀತಿಯಲ್ಲೇ ಬೊಮ್ಮಾಯಿ ಕೂಡ ಆಡಳಿತ ಒತ್ತಡ ಎದುರಿಸುವುದು ಗ್ಯಾರಂಟಿ. ಪದೇಪದೆ ಬಾಲೂಬ್ರೂಯಿ ಅತಿಥಿ ಗೃಹಕ್ಕೆ ಬಂದು ಠಿಕಾಣಿ ಹೂಡುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಳಿಗೆ ಧರ್ಮಸಿಂಗ್ ಫೈಲುಗಳನ್ನು ಹಿಡಿದು ಓಡುತ್ತಿದ್ದರು ಎಂದು ಅನೇಕರು ಆಡಿಕೊಳ್ಳುತ್ತಿದ್ದುದನ್ನು ಜನ ಮರೆತಿಲ್ಲ.
5. ಹಿಂದೆ ಯಡಿಯೂರಪ್ಪ ಕ್ಯಾಬಿನೆಟ್‌ನಲ್ಲಿ ವಿ.ಎಸ್.ಆಚಾರ್ಯ ಗೃಹಮಂತ್ರಿ ಆಗಿದ್ದರು. ಆದರೆ ಅವರು ಅವರು ಹೆಸರಿಗಷ್ಟೇ ಹೋಮ್ ಮಿನಿಸ್ಟರ್ ಆಗಿದ್ದರಲ್ಲದೆ, ಎಲ್ಲವೂ ಸಿಎಂ ಕುಟುಂಬದಿಂದಲೇ ನಿರ್ವಹಿಸಲ್ಪಡುತ್ತಿತ್ತು ಎಂಬುದು ಬಹಿರಂಗ ಗುಟ್ಟು. ಅದೇ ರೀತಿ ಬಸವರಾಜ ಬೊಮ್ಮಾಯಿ ಅವರು ಹೋಮ್ ಮಿನಿಸ್ಟರ್ ಆಗಿದ್ದಾಗಲೂ ಇದೇ ಪರಿಸ್ಥಿತಿ ಮುಂದುವರಿದಿತ್ತು ಎನ್ನುವುದು ರಾಜ್ಯವೇ ಆಡಿಕೊಂಡ ಮಾತು. ಯತ್ನಾಳ್, ಯೋಗೇಶ್ವರ, ಎಚ್.ವಿಶ್ವನಾಥ್ ಮುಂತಾದವರು ಬಹಿರಂಗ ಟೀಕೆ ಮಾಡಿದ್ದರು, ಯತ್ನಾಳ್ ಅವರಂತೂ ಬೊಮ್ಮಾಯಿ ಯಡಿಯೂರಪ್ಪನವರ ಮಾನಸ ಪುತ್ರ ಎಂದು ಹೇಳಿದ್ದರು. ಈ ಟೀಕೆಗಳಿಂದ ಹೊಸ ಸಿಎಂ ಹೊರ ಬರುತ್ತಾರೆಯೇ?
6. ಯಡಿಯೂರಪ್ಪ ಆಪ್ತ ಕ್ಯಾಂಪ್‌ನಲ್ಲಿ ಇರುವ ಶಾಸಕರನ್ನು ತೃಪ್ತಿಪಡಿಸುವುದು ಸುಲಭವಲ್ಲ. ಅದೇ ರೀತಿ, ವಿರೋಧಿ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡಿದ್ದ ಶಾಸಕರನ್ನು ಜತೆಯಲ್ಲಿ ಕರೆದುಕೊಂಡು ಹೋಗುವುದು ಕಷ್ಟ. ಅದನ್ನು ಬೊಮ್ಮಾಯಿ ಅವರು ಹೇಗೆ ನಿರ್ವಹಿಸುತ್ತಾರೆಂಂಬುದೇ ದೊಡ್ಡ ಪ್ರಶ್ನೆ.
7. ಎಲ್ಲಕ್ಕಿಂತ ಮುಖ್ಯವಾಗಿ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಹದಿನೇಳು ವಲಸಿಗರನ್ನು ಸಂಭಾಳಿಸಿಕೊಂಡು ಹೋಗುವುದು ಸುಲಭವಲ್ಲ. ಯಡಿಯೂರಪ್ಪ ಸಂಪುಟದಲ್ಲೇ ಖಾತೆ ಕ್ಯಾತೆ ಸೇರಿ ಅನೇಕ ವಿಚಾರಗಳಲ್ಲಿ ಇವರು ಎಡವಟ್ಟು ಮಾಡಿಕೊಂಡಿದ್ದರು. ಹೊಸ ಸಿಎಂ ಅವರಿಗೂ ಇವರು ತಲೆನೋವೇ.
8. ಪಕ್ಷವನ್ನು, ಸರಕಾರವನ್ನು ನಿಭಾಯಿಸುವುದರ ಜತೆಗೆ ಪ್ರತಿಪಕ್ಷಗಳನ್ನೂ ಬೊಮ್ಮಾಯಿ ಎದುರಿಸಬೇಕು. ಮುಖ್ಯವಾಗಿ ಸದನದಲ್ಲಿ ಹಾಗೂ ಸದನದ ಹೊರಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ನೂತನ ಸಿಎಂ ಎದುರಿಸಬೇಕು.
9. ರಾಜಕೀಯ ಹೊರತುಪಡಿಸಿ ಕೋವಿಡ್ ಸೋಂಕು ಹೊಸ ಸಿಎಂ ಅವರಿಗೆ ಬಹುದೊಡ್ಡ ಸವಾಲು. ಮೂರನೇ ಅಲೆಯೂ ಎದುರಿನಲ್ಲೇ ಇರುವುದು ಅವರ ಸಾಮರ್ಥ್ಯಕ್ಕೆ ಬೃಹತ್ ಸವಾಲು.
10. ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಪ್ರವಾಹವು ನೂತನ ಸಿಎಂ ಪಾಲಿಗೆ ಕಠಿಣ ಸವಾಲು. ಬೊಮ್ಮಾಯಿ ಮೂಲತಃ ಉತ್ತರ ಕರ್ನಾಟಕದವರೇ ಆಗಿರುವುದರಿಂದ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಒತ್ತಡವೂ ಅವರ ಮುಂದಿದೆ.