ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಯಾರಿರಬೇಕು? ಯಾರಿರಬಾರದು? ಎಂಬುದನ್ನು ಸಂಘ ಪರಿವಾರ ನಿರ್ಧರಿಸಲಿದೆ.
ಸಂಘದ ಉನ್ನತ ನಾಯಕರಲ್ಲಿ ಒಬ್ಬರಾದ ಮುಕುಂದ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ಕೇಶವ ಕೃಪದಲ್ಲಿ ನಡೆದ ಸಭೆಯಲ್ಲಿ 30 ನೂತನ ಸಚಿವರ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿ ವರಿಷ್ಠರಿಗೆ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಯಡಿಯೂರಪ್ಪ ಸಂಪುಟದಲ್ಲಿ ಆರೋಪದ ಸುಳಿಗೆ ಸಿಲುಕಿ ಬೇರೆ-ಬೇರೆ ಬಾನಗಡಿ ಮಾಡಿಕೊಂಡಿದ್ದವರೆಲ್ಲರನ್ನೂ ದೂರವಿಡಲಾಗಿದ್ದು, ಸಂಘ ಪರಿವಾರ ಮತ್ತು ಪಕ್ಷದ ಸಂಘಟನೆಗೆ ಒತ್ತು ನೀಡುವವರಿಗೆ ಮಾತ್ರ ಅವಕಾಶ ದೊರೆತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಿರಿಯರು ಮತ್ತು ಯುವಕರಿಗೆ ಸಮನಾದ ಅವಕಾಶವನ್ನು ಮಂತ್ರಿಮಂಡಲದಲ್ಲಿ ಕಲ್ಪಿಸಲಾಗುತ್ತಿದ್ದು, ಜಿಲ್ಲೆ ಮತ್ತು ಜಾತಿಗಳಿಗೂ ಪ್ರಾತಿನಿಧ್ಯ ಕೊಟ್ಟಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಸರಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಸತತವಾಗಿ ಸಚಿವರಾಗಿರುವವರನ್ನು ಬೊಮ್ಮಾಯಿ ಸರಕಾರದಿಂದ ದೂರವಿಟ್ಟು, ಅವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಲು ಸಂಘ ಮನಸ್ಸು ಮಾಡಿದೆ.
ಸಚಿವಾಕಾಂಕ್ಷಿಗಳಲ್ಲಿ ನಡುಕ ಹುಟ್ಟಿಸುವ ಈ ಬೆಳವಣಿಗೆಗೆ ಮುನ್ನವೇ ಜಗದೀಶ್ ಶೆಟ್ಟರ್ ಅವಂಥ ಹಿರಿಯರು ಹೊಸ ಸಂಪುಟದಿಂದ ಸ್ವ ಇಚ್ಛೆಯಿಂದ ದೂರಲು ನಿರ್ಧರಿಸಿದ್ದು, ಶೆಟ್ಟರ್ ದಾರಿಯಲ್ಲೇ ಮತ್ತಷ್ಟು ನಾಯಕರು ಹೆಜ್ಜೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ವಲಸಿಗರಿಗೆ ಇಕ್ಕಟ್ಟು
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲು ಕಾರಣರಾದ ಕಾಂಗ್ರೆಸ್-ಜೆಡಿಎಸ್‌ನಿಂದ ಹೊರಬಂದು ಸಚಿವರಾದವರಲ್ಲಿ ಕೆಲವರಿಗೆ ಹೊಸ ಸಂಪುಟದಲ್ಲಿ ಕೊಕ್ ನೀಡುವುದು ಫೈನಲ್ ಆಗಿದೆ. ಅದರಲ್ಲಿ 7 ವಲಸಿಗರ ಮೇಲೆ ಭ್ರಷ್ಟಾಚಾರ ಆರೋಪಗಳಿದ್ದು. ಅವರಿಗೆ ಬೊಮ್ಮಾಯಿ ಕ್ಯಾಬಿನೆಟ್ಟಿನಲ್ಲಿ ಅವಕಾಶ ಇಲ್ಲ ಎನ್ನುವುದು ಗೊತ್ತಾಗಿದೆ. ಇವರ ಪಟ್ಟಿ ಈಗಾಗಲೇ ವರಿಷ್ಠರ ಕೈ ಸೇರಿದೆ.
ಅಲ್ಲದೆ, ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ ಕಂಡಿರುವ ಮಂತ್ರಿಗಳಿಗೂ ಸಂಪುಟಕ್ಕೆ ಅವಕಾಶವಿಲ್ಲ. ಜತೆಗೆ, ಭೂ ಮಾಫಿಯಾದಲ್ಲಿ ಪಾಲುದಾರರಾಗಿರುವವರಿಗೂ ಈ ಸರಕಾರದಲ್ಲಿ ಅಧಿಕಾರ ಸಿಗುವುದು ಅನುಮಾನ. ಮುಂದಿನ ಚುನಾವಣೆ ಹಾಗೂ ಪಕ್ಷವನ್ನು ತಳಮಟ್ಟದಲ್ಲಿ ಬಲವಾಗಿ ಕಟ್ಟುವ ಉದ್ದೇಶದಿಂದ ಕ್ಲೀನ್ ಇಮೇಜ್ ಉಳ್ಳವರನ್ನೇ ಸಂಪುಟಕ್ಕೆ ಸೇರಿಸಲು ಸಂಘ ಸಲಹೆ ಮಾಡಿದೆ ಎಂದು ತಿಳಿದುಬಂದಿದೆ.
ಜತೆಗೆ; ಕಾಂಗ್ರೆಸ್ ಹಾಗೂ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡು ಯಡಿಯೂರಪ್ಪ ಸರಕಾರದಲ್ಲಿ ಹೊಂದಾಣಿಕೆ ಆಡಳಿತ ನಡೆಸಿದ ಮಾಜಿ ಮಂತ್ರಿ ಮಹೋದಯರಿಗೆ ಅವಕಾಶ ಅನುಮಾನ. ಇದಲ್ಲದೆ; ಬಿಜಿನೆಸ್, ಕೈಗಾರಿಕೆ, ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕಂಪನಿಗಳು ಸೇರಿದಂತೆ ಸ್ವಹಿತಾಸಕ್ತಿ ಉಳ್ಳವರನ್ನು ಆದಷ್ಟೂ ಸಂಪುಟದಿಂದ ದೂರ ಇಡಬೇಕೆಂದು ಸಂಘ ಪರಿವಾರ ಸಲಹೆ ಕೊಟ್ಟಿದೆ ಎನ್ನಲಾಗಿದೆ. ಎರಡು ವರ್ಷ ಸಚಿವರಾಗಿ ಗೂಟದ ಕಾರುಗಳಲ್ಲಿ ಸವಾರಿ ಮಾಡಿದವರು ಪಕ್ಷಕ್ಕೆಷ್ಟು ಕೆಲಸ ಮಾಡಿದ್ದಾರೆ ಎಂಬ ಮೌಲ್ಯಮಾಪನವೂ ನಡೆದಿದ್ದು, ಅದರಲ್ಲಿ ಬಹಳಷ್ಟು ಮಾಜಿ ಸಚಿವರು ಫೇಲಾಗಿದ್ದಾರೆ ಎಂದು ಗೊತ್ತಾಗಿದೆ.
ಗುರುವಾರದ ಸಭೆಯಲ್ಲಿ ಮುಕುಂದ್ ಅಲ್ಲದೆ, ಸಂಘದ ಹಿರಿಯರಾದ ತಿಪ್ಪೇಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಸೇರಿದಂತೆ ಏಳು ಮಂದಿ ಪ್ರಮುಖರು ಇದ್ದರೆಂದು ಖಚಿತ ಮೂಲಗಳು ಸಿಕೆನ್ಯೂಸ್ ನೌ ಗೆ ತಿಳಿಸಿವೆ.
ಈ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಶವಶಿಲ್ಪಕ್ಕೆ ಕರೆಸಿಕೊಂಡು, ಅವರ ಜತೆಯೂ ಈ ಸಂಬಂಧ ಚರ್ಚಿಸಿ ವರಿಷ್ಠರಿಗೆ ಪಟ್ಟಿ ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸಂಘದ ಪಟ್ಟಿಗೆ ವರಿಷ್ಠರು ಒಪ್ಪಿಗೆಯ ಮುದ್ರೆ ಒತ್ತುವ ಸಾಧ್ಯತೆಯೇ ಹೆಚ್ಚು.
ಸಂಘ ಪರಿವಾರದ ನಿರ್ಧಾರ ಗೊತ್ತಾಗುತ್ತಿದ್ದಂತೆ ಹಿಂದಿನ ಸರಕಾರಗಳಲ್ಲಿ ಸತತವಾಗಿ ಮಂತ್ರಿಯಾಗಿದ್ದ ಆರ್. ಅಶೋಕ್, ಸಿ.ಪಿ.ಯೋಗೇಶ್ವರ್ ಸೇರಿ ಕೆಲ ಸಚಿವಾಕಾಂಕ್ಷಿಗಳು ದೀಢಿರನೆ ದಿಲ್ಲಿಗೆ ಹಾರಿದ್ದಾರೆ. ಮತ್ತೊಂದಡೆ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಡಿಸಿಎಂ ಅಥವಾ ಮಂತ್ರಿಗಿರಿ ಕೊಟ್ಟರೆ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಈ ಭೇಟಿ ಸಂದರ್ಭದಲ್ಲೇ ಮಂತ್ರಿಮಂಡಲ ರಚನೆಗೆ ಸಂಬಂಧಿಸಿದಂತೆ ವರಿಷ್ಠರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಇಂದು ನೆರೆ ಪೀಡಿತ ಪ್ರದೇಶಗಳಿಗೆ ತೆರಳುವುದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಈ ಸಂಬಂಧ 30 ನಿಮಿಷ ಕಾಲ ಮುಖಾಮುಖಿ ಚರ್ಚೆ ನಡೆಸಿದರು.