ಶಾಲೆಗಳ ಬಗ್ಗೆ ಮಾಹಿತಿ ಕೇಳಿದ ಆನ್‌ಲೈನ್ ಖದೀಮರು; ಪೊಲೀಸರಿಗೆ ದೂರು ಸಲ್ಲಿಸುವೆ ಎಂದ ಸುರೇಶ್
by GS Bharath Gudibande
ಬೆಂಗಳೂರು: ಪ್ರಾಥಮಿಕ ಮತ್ತಯ ಪ್ರೌಢಶಿಕ್ಷಣ ಖಾತೆಯ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಅನೇಕರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಹಾಗೂ ರಾಜ್ಯದ ವಿವಿಧ ಶಾಲೆಗಳ ಬಗ್ಗೆ ಮಾಹಿತಿ ಕೇಳಿ ಮೋಸ ಮಾಡಲು ಆನ್‌ಲೈನ್ ಕಿರಾತಕರು ಪ್ರಯತ್ನಿಸಿದ್ದಾರೆ.
“ನನ್ನ ಹೆಸರಿನಲ್ಲಿ ಯಾರೋ ನಕಲಿ ಖಾತೆ ಸೃಷ್ಟಿಸಿ ಎಲ್ಲಿರಿಗೂ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ಅದಕ್ಕೆ ಯಾರೂ ಪ್ರತಿಕ್ರಿಯೆ ನೀಡಬೇಡಿ” ಎಂದು ಸ್ವತಃ ಮಾಜಿ ಸಚಿವರೇ ತಮ್ಮ ಫೇಸ್‌ಬುಕ್ ಅಕೌಂಟ್ʼನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರ ಉಪಟಳ ಹೆಚ್ಚಾಗಿದ್ದು, ಇನ್ನೊಂದು ಕಡೆ ಬ್ಯಾಂಕ್ ಸಿಬ್ಬಂದಿ ಅಂತ ಹೇಳಿ ವಂಚಿಸಲು ಕೇಡಿ ಗ್ಯಾಂಗ್‌ಗಳು ಪ್ರಯತ್ನ ಮಾಡುತ್ತಲೇ ಇವೆ.
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರನ್ನೇ ಗುರಿಯಾಗಿಸಿಕೊಂಡು ಸೈಬರ್ ದಾಳಿ, ನಕಲಿ ಫೇಸ್‌ಬುಕ್ ಅಂಕೌಟ್, ನಕಲಿ ವಾಟ್ಸಾಪ್ ಈ ರೀತಿ ಹಣ ಯಾಚನೆ ಮಾಡುವ ಮೂಲಕ ಅವರ ಘನತೆ, ಗೌರವಕ್ಕೆ ಧಕ್ಕೆ ತಂದು ವಂಚಿಸುವ ಪ್ರಕರಣಗಳು ಕಂಡು ಬರುತ್ತಿವೆ.
ಅಧಿಕಾರಿಗಳೂ ಟಾರ್ಗೆಟ್
ಸೈಬರ್ ಖದೀಮರು ಸಮಾಜದಲ್ಲಿ ಯಾರು ಉನ್ನತ ಸ್ಥಾನದಲ್ಲಿದ್ದಾರೋ ಅಂತಹವರ ನಕಲಿ ಅಕೌಂಟ್‌ಗಳ ಖಾತೆ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರ ಬಳಿ ಹಣ ಯಾಚನೆ ಮಾಡಿ, ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ ಕಿಡಿಗೇಡಿಗಳು, ಅವರ ಹೆಸರಿನಲ್ಲಿ ಮೆಸೆಂಜರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಗೊತ್ತಿದ್ದವರಿಗೆ ಹಣ ಬೇಡಿಕೆಯ ಸಂದೇಶ ಕಳಿದ್ದರು. ಈ ಬಗ್ಗೆ ಕೂಡಲೇ ಎಚ್ಚೆತ್ತಿದ್ದ ಜಿಲ್ಲಾಧಿಕಾರಿಗಳು, ದೂರು ದಾಖಲಿಸಿ ಕ್ರಮ ಕೈಗೊಂಡಿದ್ದರು.
ಸಾಮಾಜಿಕ ಜಾಲಾತಾಣಗಳ ದುರುಪಯೋಗ
ಸೈಬರ್ ಖದೀಮರು ಸಾಮಾಜಿಕ ಜಾಲಾತಾಣಗಳನ್ನೇ ಹೆಚ್ಚಾಗಿ ದುರುಪಯೋಗ ಮಾಡಿಕೊಂಡು ಫೇಸ್‌ಬುಕ್, ಮೆಸೆಂಜರ್, ಬ್ಯಾಂಕ್ ಸಿಬ್ಬಂದಿ ಹೆಸರಲ್ಲಿ ಜನರ ಬಳಿ ಹಣ ಕೀಳುತ್ತಿದ್ದಾರೆ, ಅದಕ್ಕೆ ಬ್ರೇಕ್ ಹಾಕುವವರು ಯಾರು? ಎಂಬ ಪ್ರಶ್ನೆಗಳು ಹೆಚ್ಚಾಗಿವೆ.
ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಯಾರಾದರೂ ಅಪರಿಚಿತರು ಹಣ ಕೇಳಿ ವಂಚಿಸಲು ಪ್ರಯತ್ನಿಸಿದರೆ ಕೂಡಲೇ ಪೋಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.
ಇನ್ನೊಂದೆಡೆ ಮಾಜಿ ಸಚಿವ ಸುರೇಶ್ ಕುಮಾರ್ ಅವರ ಫೇಸ್‌ಬುಕ್‌ನ ನಕಲಿ ಖಾತೆ ಸೃಷ್ಟಿ ಬಗ್ಗೆ ಕೆಲ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
“ನಿಮ್ಮಂತ ಸರಳ ವ್ಯಕ್ತಿಯನ್ನು ಬಿಟ್ಟಿಲ್ವಲ್ಲಾ. ಇವರು ಸಾಮಾನ್ಯದವರಲ್ಲ. ತುಂಬಾ ಕೆಟ್ಟ ವ್ಯಕ್ತಿತ್ವದವರು. ಇಂತಹ ಸಮಾಜಘಾತುಕ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ.. ದಯವಿಟ್ಟು ನಿರ್ದಾಕ್ಷಿಣ್ಯವಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ತಕ್ಷಣ ನೀವು ಸೈಬರ್ ಪೊಲೀಸರಿಗೆ ದೂರು ನೀಡಿ” ಎಂದು ಸುರೇಶ್ ಕುಮಾರ್ ಅವರಿಗೆ ಸಲಹೆ ಮಾಡಿದ್ದಾರೆ.
ಸೈಬರ್ ಕ್ರೈಂನವರಿಗೆ ದೂರು ನೀಡಿದರೂ ಪ್ರಯೋಜನವಿಲ್ಲ
ಕೆಲವರು ಹಣವನ್ನು ಕಳೆದುಕೊಂಡ ಸೈಬರ್ ಕ್ರೈಂ ಪೊಲೀಸರರಿಗೆ ದೂರು ನೀಡಿದರೂ ಏನು ಪ್ರಯೋಜನ ಆಗುತ್ತಿಲ್ಲ. ಐಎಎಸ್, ಐಪಿಎಸ್ ಅಧಿಕಾರಿಗಳ ಜಾಲತಾಣ ಖಾತೆಗಳನ್ನೇ ಹ್ಯಾಕ್ ಮಾಡಿದರೂ ಖದೀಮರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಇನ್ನು, ಸಾಮಾನ್ಯರ ಪರಿಸ್ಥಿತಿ ಏನು? ಎಂದು ಕೆಲವರು ಸಾಮಾಜಿಕ ಜಾಲಾತಾಣದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಕಲಿ ಅಕೌಂಟ್ ಕ್ರೀಟ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾರಾದರೂ ಈ ರೀತಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಹಣ ಯಾಚನೆ ಅಥವಾ ಇತರೆ ಮಾಹಿತಿ ಕೇಳಿದಾಗ ಖಚಿತ ಪಡಿಸಿಕೊಳ್ಳಬೇಕು, ಫೇಸ್‌ಬುಕ್ ಬಳಸುವಾಗ ನಿಮ್ಮ ಸ್ನೇಹಿತರಿಗೆ ಬಿಟ್ಟರೆ ಬೇರಿಯವರಿಗೆ ನಿಮ್ಮ ಅಕೌಂಟ್ ಕಾಣದಂತೆ ಸೆಟಿಂಗ್ಸ್ ಲಾಕ್ ಮಾಡಿಕೊಳ್ಳಿ.
ಜಿ.ಕೆ.ಮಿಥುನ್ ಕುಮಾರ್, ಪೊಲೀಸ್ ಅಧೀಕ್ಷಕರು ಚಿಕ್ಕಬಳ್ಳಾಪುರ ಜಿಲ್ಲೆ