by GS Bharath Gudibande
ಚಿಕ್ಕಬಳ್ಳಾಪುರ: ಕೇವಲ ಎರಡು ವರ್ಷ 5 ತಿಂಗಳ ಪುಟ್ಟ ಬಾಲಕಿಯೊಬ್ಬಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2021 ದಾಖಲೆಗೆ ಪಾತ್ರವಾಗಿ ಇಡೀ ಜಿಲ್ಲೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾಳೆ.
ಚಿಕ್ಕಬಳ್ಳಾಪುರ ನಗರದ 7ನೇ ವಾರ್ಡ್‌ನ ಗಂಗನಮಿದ್ದೆ ನಿವಾಸಿಗಳಾದ ಅರುಣ್ ಕುಮಾರ್ ಮತ್ತು ಸುನೀತ ಎಂಬ ಶಿಕ್ಷಕ ದಂಪತಿಯ ದ್ವಿತೀಯ ಪುತ್ರಿಯಾದ ಸ್ಮೃತಿ ಈ ಅದ್ಬುತ ಸಾಧನೆ ಮಾಡಿದ ಪುಟಾಣಿ. ಈ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾಳೆ.
ಪ್ರತಿನಿತ್ಯ ಮಗುವಿನ ಕಲಿಕೆಗೆ ಪ್ರೋತ್ಸಾಹ ನೀಡಿ, ಅತಿ ಚಿಕ್ಕ ವಯಸ್ಸಿನಲ್ಲಿ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿರುವ ಪುಟ್ಟ ಬಾಲಕಿಗೆ ಸ್ವತಃ ಶಿಕ್ಷಕ ದಂಪತಿಯಾದ ಪೋಷಕರು ಪ್ರೋತ್ಸಾಹ ನೀಡಿ ಕಂದನ ಪುಟ್ಟ ಕನಸುಗಳಿಗೆ ನೀರೆರೆದಿದ್ದಾರೆ. ಪರಿಣಾಮವಾಗಿ ಮಗು ಈ ಅಪರೂಪದ ದಾಖಲೆಗೆ ಪಾತ್ರಳಾಗಿದ್ದಾಳೆ.
ದಾಖಲೆಗೆ ಕಾರಣವಾದ ಅಂಶಗಳು
1) 100 ರಿಂದ 1 ರವರಗೆ ವೇಗವಾಗಿ ಹೇಳುವುದು.
2) ಇಂಗ್ಲಿಷ್ ಅಕ್ಷರಗಳನ್ನು ಹಿಂದೆಯಿಂದ; ಅಂದರೆ, Z ನಿಂದ A ವರಗೆ ವೇಗವಾಗಿ ಹೇಳುವುದು.
3) ಹಿಂದಿ ವರ್ಣಮಾಲೆಯನ್ನು ವೇಗವಾಗಿ ಜೋಡಿಸುವುದು.
4) ಗಣಿತದ ವಿವಿಧ ಪರಿಕಲ್ಪನೆಯ ಲೆಕ್ಕಗಳನ್ನು ವೇಗವಾಗಿ ಬಿಡಿಸುವುದು.
5) ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಪದಗಳನ್ನು ನಿರಾಸಾಯಕವಾಗಿ ಓದುವುದು.
6) ವೇಗವಾಗಿ ರಂಗೋಲಿ ಬಿಡಿಸುವುದು.
ಈ ಎಲ್ಲಾ ಅಂಶಗಳನ್ನು ಇಟ್ಟುಕೋಂಡು ಸ್ಮೃತಿಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಆಯ್ಕೆ ಮಾಡಲಾಗಿದೆ. ಕಂದನ ಸಾಧನೆ ಸಹಜವಾಗಿಯೇ ತಂದೆ ತಾಯಿಗೂ ಖುಷಿ ಉಂಟು ಮಾಡಿದೆ. ಮಗಳ ಸಾಧನೆಯಿಂದ ನಮ್ಮ ಗೌರವ ಇನ್ನೂ ಹೆಚ್ಚಾಗಿದೆ ತಂದೆ ತಾಯಿಯಾದ ಅರುಣ್ ಕುಮಾರ್ ಮತ್ತು ಸುನೀತಾ ಹೇಳಿದ್ದಾರೆ.
ಏನಿದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್?
ಬಹುಮುಖ ಪ್ರತಿಭೆ ಹೊಂದಿರುವ ಮಕ್ಕಳನ್ನು ಗುರುತಿಸಿ ಕೌರವಿಸುವ ಕೆಲಸವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಡುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮಾದರಿಯಲ್ಲಿಯೇ ನಮ್ಮ ದೇಶದಲ್ಲಿ 2006ರಿಂದ ಕೆಲಸ ಮಾಡುತ್ತಿದೆ.
ಕೇವಲ ಮಕ್ಕಳ ಪ್ರತಿಭೆಯನ್ನು ಗುರುತಿಸಿ ದಾಖಲೆಗಳನ್ನು ಸ್ಥಾಪಿಸುವುದು ಮಾತ್ರವಲ್ಲದೆ, ಮಾವ ಸಂಬಂಧಗಳನ್ನು ಗಟ್ಟಿಗೊಳಿಸುವ, ಮನಸ್ಸುಗಳನ್ನು ಬೆಸಯುವ ನಿಟ್ಟಿನಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತಿದೆ.
ಈ ವರ್ಷ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ 15ನೇ ಪ್ರಕಟಣೆಯ ವರ್ಷವಾಗಿದ್ದು, ಭಾರತದಲ್ಲಿ ಅಪರೂಪದ ದಾಖಲೆಗಳನ್ನು ಗುರುತಿಸಿ ಪ್ರಕಟಿಸುತ್ತಿರುವ ಏಕೈಕ ಸಂಸ್ಥೆಯಾಗಿದೆ. “ಪ್ರತಿಭೆಗೆ ಯಾವುದೇ ಮಿತಿ ಅಥವಾ ಎಲ್ಲೆ ಇಲ್ಲ ಎಂದು ನಾವು ನಂಬುತ್ತೇವೆ. ಧರ್ಮ, ಜಾತಿ, ಮತ, ಬಣ್ಣ, ವ್ಯಕ್ತಿಯ ಸಾಮರ್ಥ್ಯಗಳನ್ನು ನಿರ್ಧರಿಸುವುದಿಲ್ಲ. ಎಲ್ಲವೂ, ಎಲ್ಲರೂ ಒಂದೇ” ಎಂಬುದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನೀತಿಯಾಗಿದೆ.
ಅತಿ ಚಿಕ್ಕ ವಯಸ್ಸಿಗೆ ಈ ಪುಟ್ಟ ಬಾಲಕಿ ಸ್ಮೃತಿ ಸಾಧನೆ ಇತರರಿಗೆ ಸ್ಪೂರ್ತಿ. ಮಕ್ಕಳಿಗೆ ಏಕಾಗ್ರತೆ, ಗ್ರಹಿಸುವ ಶಕ್ತಿ, ಶಿಸ್ತು ಇತ್ಯಾದಿ ಜನ್ಮತಃ ಬಂದಿರುತ್ತವೆ. ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನ ಮಾಡಬೇಕು.
ಶಿವಕುಮಾರ್ ವರ್ಲಕೊಂಡೆ