ಬೆಂಗಳೂರು: ಕೋವಿಡ್ 3ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಕೇಂದ್ರದ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಮಾಂಡವೀಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.
ರಾಜ್ಯಕ್ಕೆ 1.5 ಕೋಟಿ ಲಸಿಕೆ ಪೂರೈಸಲು ಕೋರಿಕೆ ಸಲ್ಲಿಸಿದ್ದು, 1 ಕೋಟಿ ಲಸಿಕೆ ಪೂರೈಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ಇದರಿಂದ ರಾಜ್ಯದಲ್ಲಿ ಪ್ರತಿದಿನ 2ರಿಂದ 3 ಲಕ್ಷ ಲಸಿಕೆ ಒದಗಿಸಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಕೋವಿಡ್ 3ನೇ ಅಲೆ ನಿಯಂತ್ರಣ, ಲಸಿಕೆ ಅಭಿಯಾನ ಹಾಗೂ ನೆರೆರಾಜ್ಯವಾದ ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ನಿಂದಾಗಿ ರಾಜ್ಯದ ಸರಹದ್ದು ಪ್ರವೇಶ ನಿಯಂತ್ರಿಸುವ ಕುರಿತು ಮಾರ್ಗಸೂಚಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿರುವುದಾಗಿ ಸಿಎಂ ವಿವರಿಸಿದರು.