ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಿಲ್ಲ; ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ: ಗುಡಿಬಂಡೆಯಲ್ಲಿ ಯಶಸ್ವಿಯಾದ ಕಂದಾಯ ಇಲಾಖೆ ಜನಸ್ನೇಹಿ ನಡೆ
by GS Bharath Gudibande
ಗುಡಿಬಂಡೆ: ಜಿಲ್ಲಾಧಿಕಾರಿ ಮತ್ತು ಶಾಸಕರ ಸೂಚನೆಯಂತೆ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರ ಮೆನೆ ಬಾಗಿಲಿಗೇ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗುಡಿಬಂಡೆ ತಾಲೂಕಿನಲ್ಲಿ ಅಭೂತಪೂರ್ವವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಂದ ಚಾಲನೆ ಸಿಕ್ಕಿದೆ.
ಗುಡಿಬಂಡೆ ತಾಲೂಕಿನ ಕಸಬಾ ಹೋಬಳಿಯ ಉಲ್ಲೋಡು ಕಂದಾಯ ವೃತ್ತದ ಪ್ರತಿ ಹಳ್ಳಿಯ ಮನೆ ಮನೆಗೆ ತೆರಳಿ ಸಾಮಾಜಿಕ ಭದ್ರತಾ ಯೋಜನೆಯ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಸಾಮಾಜಿಕ ಭದ್ರತಾ ಯೋಜನೆ
ಸರಕಾರ ಹಿರಿಯರು, ವಿಕಲಚೇನರಿಗೆ ಹಾಗೂ ವಿಧವಾ ವೇತನ ಹೀಗೆ ಹತ್ತು ಹಲವು ಕಾರ್ಯಗಳಿಂದ ಸಮಾಜದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಿ ಜೀವನ ರೂಪಿಸಲು ಪ್ರಯತ್ನಿಸುತ್ತಿದೆ. ಹಾಗಾಗಿ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಎಲ್ಲಾ ಸೌಲಭ್ಯಗಳನ್ನು ಸ್ಥಳದಲ್ಲೆ ಮಾಡಿಕೊಡುತ್ತಿದ್ದಾರೆ.
ಪ್ರತಿ ಮನೆಗೆ ಕಂದಾಯ ಇಲಾಖೆಯ ಅಧಿಕಾರಿಗಳು
ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಯಾರು ಪಿಂಚಣಿ ಮಾಡಿಕೊಂಡಿಲ್ಲ ಅಥವಾ ಪಿಂಚಣಿ ಬರದೆ ಸ್ಥಗಿತವಾಗಿರುವುದು, ಆಧಾರ್, ಫೌತಿವಾರು ಖಾತೆ.. ಹೀಗೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಕುಟುಬಗಳಿಗೆ ಆಸರೆಯಾಗಿ ಸ್ಥಳದಲ್ಲೆ ಪರಿಷ್ಕರಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿ, ಕರ್ತವ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆಂದು ಈ ಭಾಗದ ಜನರು ಹೇಳುತ್ತಿದ್ದಾರೆ. ಉಲ್ಲೋಡು ಕಂದಾಯ ಅಧಿಕಾರಿ ವಿ.ಲಕ್ಷ್ಮೀನಾರಾಯಣ ಕೋವಿಡ್-19 ಆರಂಭದಿಂದ ಒಬ್ಬ ʼಯೋಧʼನಂತೆ ಪ್ರತಿ ಮನೆಗೂ ತೆರಳಿ ವ್ಯಾಕ್ಸಿನೇಷನ್ ಮಾಡಿಸಿ ಕೊರೋನಾ ಮುಕ್ತ ಪಂಚಾಯಿತಿ ಮಾಡುವಲ್ಲಿ ಶ್ರಮಿಸಿದ್ದರು. ಈಗ ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಆಸರೆಯಾಗುತ್ತಿದ್ದಾರೆ.
ಯಾರು ಏನಂತಾರೆ?
ನಾನು ಕಂದಾಯ ಇಲಾಖೆಯ ಸಿಬ್ಬಂದಿಯಾಗಿ ಸರಕಾರದ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸಿ, ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ, ಫಲಾನುಭವಿಗಳಿಗೆ ಸ್ಥಳದಲ್ಲಿ ಕೆಲಸ ಮಾಡಿಕೊಡುತ್ತಿದ್ದೇನೆ. ನನ್ನ ಮೇಲಾಧಿಕಾರಿಗಳ ಆದೇಶದಂತೆ ನಾನು ಕ್ರಿಯಾಶೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ವಿ.ಲಕ್ಷ್ಮಿನಾರಾಯಣ ಗ್ರಾಮ ಲೆಕ್ಕಾಧಿಕಾರಿ, ಉಲ್ಲೋಡು ಕಂದಾಯ ವೃತ್ತ
ಕಂದಾಯ ಅಧಿಕಾರಿ ವಿ.ಲಕ್ಷ್ಮಿನಾರಾಯಣ ಅವರು ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಸಿಗಬೇಕಾದ ಸೌಲಭ್ಯಗಳು ಮನೆಗೇ ತಲುಪಿಸುವ ಕಾರ್ಯ ಮಾಡುತ್ತಿರುವುದು ತುಂಬಾ ಸಂತಸದ ವಿಷಯ. ಎಲ್ಲಾ ಸರಕಾರಿ ಅಧಿಕಾರಿಗಳು ಹೀಗೆ ಕಾರ್ಯ ನಿರ್ವಹಿಸಿದರೆ ಜನರ ಸಮಸ್ಯೆಗಳು ಬೇಗ ನಿವಾರಣೆ ಆಗುತ್ತವೆ.
ಬೈರಾರೆಡ್ಡಿ ಅಧ್ಯಕ್ಷ, ಉಲ್ಲೋಡು ಗ್ರಾಮ ಪಂಚಾಯಿತಿ
ಅಧಿಕಾರಿಗಳು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿರುವವರನ್ನು ಗುರುತಿಸಿ ಪಿಂಚಣಿ, ಫೌತಿವಾರು ಖಾತೆ ಮಾಡಿಸಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಸರಕಾರದ ಕೆಲಸಗಳು ಜನಸಾಮಾನ್ಯರಿಗೆ ತಲುಪಿಸಿ ಸಾಮಾಜಿಕ ಭದ್ರತೆಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಸತೀಶ್ ಅಲಗದರೇನಹಳ್ಳಿ ನಿವಾಸಿ