ಕೋಟಿ ಕೋಟಿ ಟೋಲ್ ಸುಲಿಗೆ ಮಾಡಿದರೂ ಪ್ರಯಾಣಿಕರು, ಚಾಲಕರಿಗಿಲ್ಲ ಕನಿಷ್ಠ ಮೂಲಸೌಕರ್ಯ
by GS Bharath Gudibande
ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿಯ ದೇವನಹಳ್ಳಿ ಟೋಲ್ ಬಳಿ ಸ್ವಚ್ಛ ಭಾರತ್ ಅಭಿಯಾನದಡಿ ನಿರ್ಮಾಣ ಮಾಡಲಾಗಿರುವ ಶೌಚಾಲಯ ವ್ಯವಸ್ಥೆ ಸಮರ್ಪಕ ನಿರ್ವಹಣೆ ಇಲ್ಲದೆ ಪ್ರಯಾಣಿಕರು, ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಹೌದು. ಬೆಂಗಳೂರು ಮತ್ತು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ದೇವನಹಳ್ಳಿ ಟೋಲ್ʼನಲ್ಲಿ ವಾಹನಗಳಿಂದ ಸುಂಕ ವಸೂಲಿ ಮಾಡುತ್ತಿದ್ದಾರಾದರೂ, ಅಲ್ಲಿ ಸರಕಾರದ ನಿಯಮಾವಳಿಗಳ ಪ್ರಕಾರ ವಾಹನ ಚಾಲಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಮುಖ್ಯವಾಗಿ ಸ್ವಚ್ಛಭಾರತ್ ಅಭಿಯಾನದ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದರೂ ಅದರ ಸಮರ್ಪಕ ನಿರ್ವಹಣೆ ಇಲ್ಲದೆ ಪ್ರಯಾಣಿಕರ ಉಪಯೋಗಕ್ಕೆ ಬಾರದಾಗಿದೆ. ಈ ಬಗ್ಗೆ ಟೋಲ್‌ನ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತಾಳಿದ್ದಾರೆ.
ಸ್ವಚ್ಛ ಭಾರತ್ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಿವೆ. ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಟೋಲ್ ಸಂಗ್ರಹ ಕೇಂದ್ರಗಳೂ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಶೌಚಾಲಯಗಳು ಇರಲೇಬೇಕು ಹಾಗೂ ಅವುಗಳ ನಿರ್ವಹಣೆ ಉತ್ತಮವಾಗಿರಬೇಕು ಎಂಬ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. ಆದರೆ ದೇವನಹಳ್ಳಿ ವಿಮಾನದ ಬಳಿ ಇರುವ ಟೋಲ್‌ನಲ್ಲಿ ಇವುಗಳ ಸೊಲ್ಲೆ ಇಲ್ಲ. ಬದಲಿಗೆ ಸೂಕ್ತ ಶೌಚಾಲಯ ಇಲ್ಲದೆ ಚಾಲಕರು, ಪ್ರಯಾಣಿಕರು ನೇಚರ್ ಕಾಲ್ ಬಂದರೆ ಟೋಲ್ ಸನಿಹದ ಬಯಲನ್ನೇ ಆಶ್ರಯಿಸಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿಲ್ಲಿ ದೇವನಹಳ್ಳಿ ಟೋಲ್ ಮೂಲಕ ಬೆಂಗಳೂರು, ಹೈದರಾಬಾದ್ ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಟೋಲ್ʼನಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಚಲಿಸುತ್ತವೆ. ಎಲ್ಲಾ ವಾಹನಗಳಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಆದರೆ, ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪ್ರಯಾಣಿಕರಿಗೆ ಶೌಚಾಲಯ ಸೇರಿ ಯಾವುದೇ ಮೂಲಸೌಕರ್ಯ ಕಲ್ಪಸುವಲ್ಲಿ ಆ ಟೋಲ್ ವಿಫಲವಾಗಿದೆ.
ಪ್ರತಿದಿನ ಸಾವಿರಾರು ಚಾಹನಗಳು, ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಾರೆ. ಅಲ್ಲದೆ ಏರ್ಪೋರ್ಟ್ ಸಮೀಪದಲ್ಲಿರುವ ಈ ಟೋಲ್ʼನ ಶೌಚಾಲಯದಲ್ಲಿ ನೀರಿಲ್ಲ, ಸ್ವಚ್ಚತೆ ಇಲ್ಲ, ಸರಿಯಾದ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಂದ ಸಂಗ್ರಹವಾದ ಹಣ ಏನಾಗುತ್ತಿದೆ ಎಂಬ ಆಕ್ರೋಶ ಚಾಲಕರು, ಜನರಿಂದ ವ್ಯಕ್ತವಾಗಿದೆ.
ಟೋಲ್ ಶೌಚಾಲಯ ಎಷ್ಟು ಕೊಳಕಾಗಿದೆ ಎಂದರೆ, ಹತ್ತಿರಕ್ಕೆ ಹೋದರೆ ದುರ್ನಾತ ಬಡಿಯುತ್ತದೆ, ಅದರ ಚಿತ್ರಗಳನ್ನು ಪ್ರಕಟಿಸಲಾಗದಷ್ಟು ಗಲೀಜಿನಿಂದ ಕೂಡಿದೆ ಶೌಚಾಲಯ. ಈ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಶೌಚಾಲಯ ಶುಚಿಯಾಗಿಲ್ಲದ ಕಾರಣಕ್ಕೆ ಹಾದು ಹೋಗುವ ಜನ ಅದರ ಪಕ್ಕದ ಮೇಲು ಸೇತುವೆ ಬಳಿ ಮಲಮೂತ್ರಗಳನ್ನು ವಿಸರ್ಜಿಸುವ ದೃಶ್ಯಗಳು ಸಾಮಾನ್ಯವಾಗಿವೆ. ದೇಶದ ಪ್ರಮುಖ ನಗರ, ಭಾರತದ ಸಿಲಿಕಾನ್ ವ್ಯಾಲಿ, ಜಗತ್ತಿನ ಇಪ್ಪತ್ತು ಟಾಪ್ ನಗರಗಳಲ್ಲಿ ಒಂದಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಈ ಶೌಚಾಲಯದ ಸ್ಥಿತಿ ನಮ್ಮ ಆಡಳಿತ ವ್ಯವಸ್ಥೆ ತಲೆತಗ್ಗಿಸುವಂತೆ ಇದೆ.
ಅಲ್ಲದೆ, ದೇಶದ ಎಲ್ಲ ಟೋಲ್‌ಗಳಲ್ಲಿಯೂ ಪ್ರಯಾಣಿಕರು, ಚಾಲಕರ ವಿಶ್ರಾಂತಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವುದು ಕಡ್ಡಾಯ ಎಂದು ಕೇಂದ್ರದ ಸಾರಿಗೆ ಇಲಾಖೆ ಕಠಿಣ ನಿಯಮಗಳನ್ನೇ ರೂಪಿಸಿದೆ. ಮುಖ್ಯವಾಗಿ ಕುಡಿಯುವ ನೀರು, ಶೌಚಾಲಯದಂಥ ಸೌಲಭ್ಯಗಳನ್ನು ಒದಗಿಸಲೇಬೇಕು ಎಂದು ತಾಕೀತು ಮಾಡಲಾಗಿದೆ.
ಟೋಲ್ ಬಳಿ ಪ್ರಯಾಣಿಕರಿಗಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದೆ, ಶೌಚಾಲಯ ನಿರ್ವಹಣೆ ಮಾಡುವವರು ಪ್ರತಿದಿನ ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಪ್ರಯಾಣಿಕರು ಸ್ವಚ್ಚತೆ ಕಾಪಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಬಗ್ಗೆ ನಮ್ಮ ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ.
ಮುರಳಿ ಟೋಲ್ ಇನ್ ಚಾರ್ಜ್ ದೇವನಹಳ್ಳಿ ಟೋಲ್
ರಾಷ್ಟೀಯ ಹೆದ್ದಾರಿ ಮೂಲಕ ಪ್ರಯಾಣ ಮಾಡುವ ಲಕ್ಷಾಂತರ ಜನರಿಗೆ ವಿಶ್ರಾಂತಿ ಪಡೆಯಲು ಹಾಗೂ ಅವಶ್ಯಕವಾಗಿ ಶೌಚಾಲಯ ಉಪಯೋಗಿಸಲು ಸರಿಯಾದ ನಿರ್ವಹಣೆ ಇಲ್ಲ. ಕೋಟಿ ಕೋಟಿ ಹಣ ಸಂಗ್ರಹಿಸಿದರೂ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ.
ಜಿ.ಎನ್.ನವೀನ್ ರಾಜ್ ಕನ್ನಡಿಗ ಜಿಲ್ಲಾ ಯುವ ಘಟಕದ ಅಧ್ಯಕ್ಷ, ಜಯಕರ್ನಾಟಕ, ಚಿಕ್ಕಬಳ್ಳಾಪುರ