ನಾಳೆ ಸಂಜೆ ಇನ್ನೊಂದು ಸುತ್ತು ಚರ್ಚಿಸಿ ವರಿಷ್ಠರಿಂದ ನೂತನ ಸಚಿವರ ಪಟ್ಟಿ ಬಿಡುಗಡೆ
ನವದೆಹಲಿ/ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ಆರು ದಿನಗಳ ನಂತರ ಅವರ ಸಂಪುಟ ರಚನೆಯ ಕಸರತ್ತು ಕ್ಲೈಮ್ಯಾಕ್ಸ್ʼಗೆ ಬಂದಿದ್ದು, ನಾಳೆ ಸಂಜೆ-ರಾತ್ರಿ ಹೊತ್ತಿಗೆ ಅಂತಿಮ ಪಟ್ಟಿ ಪ್ರಕಟವಾಗಲಿದೆ.
ನವದೆಹಲಿಯಲ್ಲಿ ರಾತ್ರಿ ಬೊಮ್ಮಾಯಿ ಹೇಳಿಕೆ ನೀಡಿದ್ದು, ನಾಳೆ ಸಂಜೆ ನೂತನ ಸಚಿವರ ಪಟ್ಟಿಯನ್ನು ವರಿಷ್ಠರೇ ಬಿಡುಗಡೆ ಮಾಡಲಿದ್ದಾರೆ. ಎಷ್ಟು ಮಂದಿ ಸಚಿವರಾಗಲಿದ್ದಾರೆ. ಡಿಸಿಎಂ ಸೇರಿ ಎಲ್ಲ ವಿಚಾರಗಳ ಬಗ್ಗೆ ನಡ್ಡಾ ಅವರ ಜತೆ ಚರ್ಚಿಸಲಾಗಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಆದರೆ, ಎಷ್ಟು ಸಚಿವರು, ಎಷ್ಟು ಡಿಸಿಎಂಗಳು ಇತ್ಯಾದಿಗಳ ಬಗ್ಗೆ ಒಂದು ಸಣ್ಣ ಸುಳಿವನ್ನೂ ಅವರು ಬಿಟ್ಟುಕೊಡಲಿಲ್ಲ.
ಮುಖ್ಯಮಂತ್ರಿ ನಾಳೆಯೇ ಬೆಂಗಳೂರಿಗೆ ವಾಪಸ್ ಆಗಲಿದ್ದು, ಪ್ರಮಾಣವಚನ ದಿನಾಂಕ ನಾಳೆ ಅಂತಿಮವಾಗಲಿದೆ. ಪ್ರಾದೇಶಿಕವಾರು ಸೇರಿ ಹಲವು ಮಾನದಂಡಗಳನ್ನು ಅನುಸರಿಸಿ ನೂತನ ಸಚಿವರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಬಹುತೇಕ ಗುರುವಾರ ಬೆಳಗ್ಗೆ ಪ್ರಮಾಣ ಸ್ವೀಕಾರ ನಡೆಯಲಿದೆ ಎನ್ನಲಾಗಿದೆ. ಪ್ರಮಾಣ ಸ್ವೀಕಾರ ಸಮಾರಂಭದ ಸಮಯ, ದಿನಾಂಕದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇಂದು ಸಂಜೆ ಕಟೀಲ್ ಅವರ ಜತೆಗೂಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಮುಖ್ಯಮಂತ್ರಿ, ನಂತರ ಮಾಧ್ಯಮಗಳಿಗೆ ಹೇಳಿದ್ದು ಇಷ್ಟು;
ನಡ್ಡಾ ಅವರಿಗೆ ಎರಡು-ಮೂರು ಪಟ್ಟಿ ನೀಡಿದ್ದೇನೆ. ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸುದೀರ್ಘ ಮಾತುಕತೆ ನಡೆದಿದೆ. ಎಲ್ಲ ಆಯಾಮಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ನಡ್ಡಾ ಅವರು ಕೆಲ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅದೇ ರೀತಿ ನಾನೂ ಕೂಡ ಸಂಪುಟ ಒತ್ತಡದ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ. ಒಟ್ಟಾರೆಯಾಗಿ, ಒಳ್ಳೆಯ ವಾತಾವರಣದಲ್ಲಿ ಚರ್ಚೆ ನಡೆದಿದ್ದು, ಒಳ್ಳೆಯ ನಿರ್ಧಾರ ಹೊರಬರುವ ನಿರೀಕ್ಷೆ ಇದೆ. ನಾಳೆ ಸಂಸತ್ ಕಲಾಪ ಮುಗಿದ ನಂತರ ಇನ್ನೊಂದು ಸುತ್ತು ಚರ್ಚಿಸಿ ಅಂತಿಮ ಕ್ಯಾಬಿನೆಟ್ ಪಟ್ಟಿಯನ್ನು ವರಿಷ್ಠರು ಪ್ರಕಟಿಸಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಬೇರೆ ಬೇರೆ ಕಾಂಬಿನೇಷನ್‌ಗಳನ್ನು ವರ್ಕೌಟ್ ಮಾಡಿ ಪಟ್ಟಿಗಳನ್ನು ನಡ್ಡಾ ಅವರಿಗೆ ನೀಡಿದ್ದೇನೆ ಎಂದ ಅವರು, ಮಾಧ್ಯಮದವರು ವಲಸಿಗರ ಕಥೆ ಏನು ಎಂದಾಗ ಕೊಂಚ ಇರಿಸುಮುರಿಸುಗೊಂಡರು.
“ನಾನೇ ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ಆ ಹದಿನೇಳು ಶಾಸಕರು ವಲಸಿಗರಲ್ಲ, ಅವರು ನಮ್ಮವರೇ. ಇದನ್ನು ನೆನಪಿಟ್ಟುಕೊಳ್ಳಿ” ಎಂದರು ಸಿಎಂ.
ಮೂರು ಸೂತ್ರ
ಬೆಳಗ್ಗೆ ದಿಲ್ಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ “ಮೂರು ಸೂತ್ರ ಇಟ್ಟುಕೊಂಡಿದ್ದೇವೆ. ಅದರ ಅನ್ವಯವೇ ಸಂಪುಟ ರಚನೆ ನಡೆಯಲಿದೆ. ಎಷ್ಟು ಹಂತದಲ್ಲಿ ಸಂಪುಟ ರಚನೆ ಆಗಬೇಕು? ಎಷ್ಟು ಸಚಿವರು ಇರಬೇಕು? ಜಾತಿ-ಪ್ರಾದೇಶಿಕ ಸಮತೋಲನ ಹೇಗೆ ಎಂಬ ಇತ್ಯಾದಿ ಅಂಶಗಳು ಸೂತ್ರದಲ್ಲಿವೆ” ಎಂದಿದ್ದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಹದಿನೇಳು ವಲಸಿಗರಲ್ಲಿ ಎಷ್ಟು ಜನ ಸಂಪುಟದಲ್ಲಿ ಇರುತ್ತಾರೆ? ಇರಲ್ಲ? ಎಷ್ಟು ಡಿಸಿಎಂಗಳು ಇರಬೇಕು? ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ನಾನು ಏನನ್ನೂ ಹೇಳಲಾಗದು ಎಂದಿದ್ದಾರೆ ಬೊಮ್ಮಾಯಿ.
ಹೈಕಮಾಂಡ್ ಅಂತಿಮ ಪಟ್ಟಿ ಆಖೈರು ಮಾಡಿದ ಮೇಲೆಯೂ ಸಚಿವಾಕಾಂಕ್ಷಿಗಳು ಬಿರುಸಿನ ಲಾಬಿ ಮುಂದುವರಿಸಿದ್ದಾರೆ. ಯಡಿಯೂರಪ್ಪ, ಸಂಘ ಪರಿವಾರ ಮತ್ತು ಹೈಕಮಾಂಡ್ ಪಟ್ಟಿಗಳ ಒತ್ತಡದಲ್ಲಿ ಹೈರಾಣಾಗಿದ್ದ ಬೊಮ್ಮಾಯಿ ಅವರಂತೂ ಸಂಜೆ ರಾತ್ರಿ ವೇಳೆಗೆ ನಿರಾಳವಾಗಿದ್ದ ಬೊಮ್ಮಾಯಿ, ತಮ್ಮ-ನಡ್ಡಾ ಅವರ ನಡುವೆ ನಡೆದ ಮಾತುಕತೆಯ ಬಗ್ಗೆ ಸಕಾರಾತ್ಮಕವಾಗಿದ್ದರು. ಹಾಗಿದ್ದರೆ ಯಡಿಯೂರಪ್ಪ ಅಭಿಪ್ರಾಯಗಳಿಗೆ ಪಟ್ಟಿಯಲ್ಲಿ ಜಾಗ ಸಿಕ್ಕಿದೆಯಾ ಎಂಬ ಚರ್ಚೆಯೂ ಶುರುವಾಗಿದೆ.
ಸಂಘ ಪರಿವಾರ ಮತ್ತು ಮುಖ್ಯಮಂತ್ರಿಗಳ ಬಳಿ ಇರುವ ಹಾಗೂ ಯಡಿಯೂರಪ್ಪ ಅವರು ರೆಕಮಂಡ್ ಮಾಡಿರುವ ಆಕಾಂಕ್ಷಿಗಳ ಪಟ್ಟಿಯನ್ನೂ ಅವಲೋಕನ ಮಾಡಿರುವ ಮಾಡಿರುವ ವರಿಷ್ಠರು, ಅಂತಿಮ ಪಟ್ಟಿ ವಿವರವನ್ನು ಬೊಮ್ಮಾಯಿಗೆ ತಿಳಿಸಿದ್ದಾರೆ. ಯಾರೆಲ್ಲ ಸಂಪುಟಕ್ಕೆ ಸೇರುತ್ತಾರೆ? ಯಾರೆಲ್ಲ ಹೊರಗಿರುತ್ತಾರೆ? ಎಂಬುದನ್ನು ವರಿಷ್ಠರು ನಾಳೆ ಸೂರ್ಯಾಸ್ತದ ಹೊತ್ತಿಗೆ ಪ್ರಕಟಿಸಲಿದ್ದಾರೆ.
ಮುಖ್ಯವಾಗಿ ಸಂಘಕ್ಕೆ ನಿಷ್ಠರಲ್ಲದವರಿಗೆ ಚಾನ್ಸ್ ಕೊಡದಿರಲು, ಪಕ್ಷದ ಸಿದ್ಧಾಂತದ ಬಗ್ಗೆ ಬೆನ್ನು ತೋರುವ, ಯಡಿಯೂರಪ್ಪ ಅವರು ಸೂಚಿಸಿರುವವರ ಬಗ್ಗೆ, ಅವರ ಪುತ್ರ ವಿಜಯೇಂದ್ರ ಸಂಪುಟ ಸೇರ್ಪಡೆ ಬಗ್ಗೆ ಬ್ಯಾಟಿಂಗ್ ಮಾಡುತ್ತಿರುವವರ ಬಗ್ಗೆ, ವಲಸಿಗರ ಒತ್ತಡ ಮತ್ತು ಅವರ ಅನಿವಾರ್ಯತೆ, ರಮೇಶ್ ಜಾರಕಿಹೊಳಿ ಪ್ರಕರಣದ ನಂತರ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದವರನ್ನು ಸಂಪುಟಕ್ಕೆ ಸೇರಿಸಬೇಕೆ ಬೇಡವೇ ಎಂಬ ಬಗ್ಗೆ ಸೇರಿದಂತೆ ಇನ್ನು ಕೆಲ ಗಂಭೀರ ವಿಷಯಗಳ ಬಗ್ಗೆ ಸಿಎಂ ಸಮ್ಮುಖದಲ್ಲಿಯೇ ನಡ್ಡಾ ಚರ್ಚೆ ನಡೆಸಿದರು ಎಂಬ ಮಾಹಿತಿ ದಿಲ್ಲಿ ಮೂಲಗಳು ತಿಳಿಸಿವೆ.
ನಡ್ಡಾ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಜತೆ ಬಹುಹೊತ್ತು ಮಾತುಕತೆ ನಡೆಸಿದ್ದಾರೆ ಸಿಎಂ. ಅವರ ನಡುವೆ ಮುಖ್ಯವಾಗಿ ಸಂಪುಟ ವಿಚಾರವೇ ಬಂದಿರಬಹುದು ಎನ್ನಲಾಗಿದೆ. ಹಾಗೆಯೇ, ಶಾಸಕಾಂಗ ಪಕ್ಷದ ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಬೊಮ್ಮಾಯಿ ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ಸಿಎಂ ಜತೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿರುವ ಸುರಪುರದ ಶಾಸಕ ರಾಜೂಗೌಡ, ಸಂಸದರಾದ ಶಿವಕುಮಾರ ಉದಾಸಿ, ಮುನಿಸ್ವಾಮಿ ಕೂಡ ಕಾಣಿಸಿಕೊಂಡರು. ಉದಾಸಿ ಮೂಲಕ ಕೆಲವರು ಸಿಎಂಗೆ ರೆಕಮಂಡ್ ಮಾಡಿಸಿರುವ ಸಾಧ್ಯತೆಯೂ ಇದೆ.
ಸಂಪುಟ ಲೆಕ್ಕ ಹೇಗೆ? ಎತ್ತ?
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಹೊಸಬರು, ಹಳಬರು ಹಾಗೂ ವಲಸಿಗರನ್ನು ಒಳಗೊಂಡ ಸಮತೋಲಿತ ಕ್ಯಾಬಿನೆಟ್ ಅಸ್ತಿತ್ವಕ್ಕೆ ಬರಲಿದ್ದು, 17 ವಲಸಿಗರ ಪೈಕಿ 9, ಯಡಿಯೂರಪ್ಪ ಸಂಪುಟದಲ್ಲಿದ್ದವರಲ್ಲಿ 9 ಹಾಗೂ ಹೊಸಬರು ೮ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗಿದೆ. ಮುಖ್ಯವಾಗಿ ಸಂಘದ ಹಿನ್ನೆಲೆಯಿಂದ ಬಂದ ಹಾಗೂ ಬಿಜೆಪಿ ಮೂಲ ನಿವಾಸಿಗಳಿಗೆ ಅಗ್ರ ಆದ್ಯತೆ ನೀಡಬೇಕು ಹಾಗೂ ಹೈಪ್ರೊಫೈಲ್ ಖಾತೆಗಳೂ ಅವರಿಗೇ ಹೋಗಬೇಕು ಎಂದು ವರಿಷ್ಠರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಈ ಸಂಖ್ಯೆಗಳಲ್ಲಿ ಕೊಂಚ ವ್ಯತ್ಯಾಸವೂ ಆಗಬಹುದು.
ವಲಸಿಗರಲ್ಲಿ ಮುಖ್ಯವಾಗಿ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜು, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಆನಂದ್ ಸಿಂಗ್, ಡಾ.ಕೆ.ಸಿ.ನಾರಾಯಣ ಗೌಡ, ಶಿವರಾಮ ಹೆಬ್ಬಾರ್, ಮುನಿರತ್ನ ಸಂಪುಟದೊಳಕ್ಕೆ ಬರಬಹುದು ಎನ್ನಲಾಗುತ್ತಿದ್ದು, ಈ ಪಟ್ಟಿಯಲ್ಲಿರುವ ಶಿವರಾಮ್ ಹೆಬ್ಬಾರ್ ಬಿ.ಸಿ.ಪಾಟೀಲ್ ಅನುಮಾನ ಎಂಬ ಸುದ್ದಿಗಳೂ ಇವೆ. ಜತೆಗೆ; ರಾಣೆಬೆನ್ನೂರಿನ ಶಂಕರ್, ಕೋಲಾರದ ನಾಗೇಶ್, ಶ್ರೀಮಂತ ಪಾಟೀಲ್ ಅವರಿಗೆ ಅವಕಾಶ ಸಿಗಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ಬಿ.ಶ್ರೀರಾಮುಲು, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಜಿ.ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಎಸ್.ಅಂಗಾರ ಅವರ ಸ್ಥಾನ ಉಳಿದು, ಅವಕಾಶ ತಪ್ಪಬಹುದು ಎಂದು ಹೇಳಲಾಗಿದ್ದ ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್.ಸುರೇಶ್ ಕುಮಾರ್ ಅವರೂ ಸಚಿವರಾಗಬಹುದು ಎಂಬ ಮಾಹಿತಿ ಇದೆ.
ಮೇಲೆ ತಿಳಿಸಲಾದ ವಲಸಿಗರು ಹಾಗೂ ಹಳಬರ ಜತೆಗೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬದಲಾಗಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ, ಅರವಿಂದ ಬೆಲ್ಲದ್, ಪೂರ್ಣಿಮಾ ಶ್ರೀನಿವಾಸ್, ಪಿ.ರಾಜೀವ್, ಸುನೀಲ್ ಕುಮಾರ್, ರಾಜೂಗೌಡ, ಎಸ್.ಎ.ರಾಮದಾಸ್, ಹರ್ಷ ವರ್ಧನ್, ರೂಪಾಲಿ ನಾಯ್ಕ್ ಹೆಸರುಗಳು ಹೊಸ ಸಚಿವರ ಯಾದಿಯಲ್ಲಿವೆ ಎನ್ನಲಾಗಿದೆ.
ಇದಲ್ಲದೆ, ಈವರೆಗಿನ ಎಲ್ಲ ಬಿಜೆಪಿ ಸರಕಾರಗಳಲ್ಲೂ ಸಚಿವ ಸ್ಥಾನಕ್ಕೆ ಪ್ರಯತ್ನವನ್ನೂ ಮಾಡದ ಹಾಗೂ ಸಚಿವ ಸ್ಥಾನಕ್ಕೆ ಪರಿಗಣನೆಯೂ ಮಾಡದ ಕುಂದಾಪುರ ಶಾಸಕ ಹಾಗೂ ಬಿಜೆಪಿ ಅತ್ಯಂತ ಪ್ರಾಮಾಣಿಕ ನಾಯಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೂ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಶೆಟ್ಟರ ಬಗ್ಗೆ ಹೈಕಮಾಂಡ್ ಹಾಗೂ ಆರ್‌ಎಸ್‌ಎಸ್ ಕೂಡ ಸಮ್ಮತಿಸಿದೆ ಎಂದು ಗೊತ್ತಾಗಿದೆ.
ಹೊನ್ನಾಳಿ ಶಾಸಕ ಹಾಗೂ ಬಿಎಸ್‌ವೈ ಕಟ್ಟಾ ಬೆಂಬಲಿಗ ಎಂ.ಪಿ.ರೇಣುಕಾಚಾರ್ಯ ಅವರ ಹೆಸರೂ ಕೇಳಿಬರುತ್ತಿದ್ದು, ಅವರಿಗೆ ಸಂಘದಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದ ಮಾಹಿತಿ ಇದೆ.
ಸಂಭನೀಯ ಪಟ್ಟಿಗಳ ಜತೆ ಭರ್ಜರಿ ಲಾಬಿ
ಸಚಿವಾಕಾಂಕ್ಷಿಗಳ ಲಾಬಿ ಬಿರುಸಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಿಸಿ ಪಾಟೀಲ್, ರಾಜೂಗೌಡ ಮುಂತಾದವರು ದಿಲ್ಲಿಯಲ್ಲಿ ವಿವಿಧ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸಿದ್ದಾರೆ. ವಲಸಿಗರಂತೂ ಒಂದೆಡೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದು, ಅದರ ಜತೆಗೆ ಬಸವರಾಜ ಬೊಮ್ಮಾಯಿ ಅವರನ್ನು ಎಲ್ಲಿಗೇ ಹೋದರೂ ನೆರಳಿನಂತೆ ಫಾಲೋ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.
ಮುಖ್ಯಮಂತ್ರಿ ಭಾನುವಾರ ಸಂಜೆ ದಿಲ್ಲಿ ಫ್ಲೈಟ್ ಹತ್ತುತ್ತಿದ್ದಂತೆ ಅವರನ್ನು ಹಿಂಬಾಲಿಸಲು ಹೊರಟ ಕೆಲ ಸಚಿವಾಕಾಂಕ್ಷಿಗಳನ್ನು ಸ್ವತಃ ಸಿಎಂ ಅವರೇ ತಡೆದು ಬೆಂಗಳೂರಿನಲ್ಲೇ ಇರಿ ಎಂದು ಸೂಚಿಸಿದ್ದಾರೆ. ಇಲ್ಲದಿದ್ದರೆ, ಕಳೆದ ಐದಾರು ದಿನಗಳಿಂದ ಅವರ ಸುತ್ತಲೇ ಗಿರಕಿ ಹೊಡೆಯುತ್ತಿದ್ದವರು ರಾಜಧಾನಿಯಲ್ಲೂ ಬೊಮ್ಮಾಯಿ ಸುತ್ತ ಪ್ರದಕ್ಷಿಣೆ ಹಾಕುವ ಸಾಧ್ಯತೆ ಇತ್ತು.