ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಧರಣಿ
by Ra Na Gopala Reddy Bagepalli
ಬಾಗೇಪಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ತಾಲೂಕು ಕಚೇರಿಯ ಮುಂದೆ ಧರಣಿ ನಡೆಸಲಾಯಿತು.
ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ನಡೆಯದೆ ಕಚೇರಿಗಳತ್ತ ಜನ ಪ್ರತಿನಿತ್ಯ ಅಲೆದಾಡುತ್ತಿರುವುದನ್ನು ತಪ್ಪಿಸಲು ಸೂಕ್ತ ಕ್ರಮ ವಹಿಸಬೇಕು. ಗ್ರಾಮೀಣ ಪ್ರದೇಶದ ನಕಾಶೆಯಲ್ಲಿರುವ ರಸ್ತೆಗಳು, ರಾಜಕಾಲುವೆಗಳು, ಕೆರೆಗಳು, ಗುಂಡು ತೋಪುಗಳು, ಸರಕಾರಿ ಭೂಮಿಗಳು ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಧರಣಿನಿರತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಹಸಿರು ಸೇನೆ ಸಂಚಾಲಕ ಲಕ್ಷ್ಮಣ ರೆಡ್ಡಿ ಮಾತನಾಡಿ; ಬಾಗೇಪಲ್ಲಿ ತಾಲೂಕಿನಾದ್ಯಂತ ಎಲ್ಲಾ ಸರಕಾರಿ ಕಚೇರಿಗಳಲ್ಲಿ ರೈತರಿಗೆ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ನಡೆಯದೆ ಪ್ರತಿನಿತ್ಯ ಅಲೆದಾಡುತ್ತಿರುತ್ತಾರೆ ಎಂದರು.
ಒಂದೆಡೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಜಾರಿಗೆ ತಂದಿರುವ ಅಗತ್ಯ ವಸ್ತುಗಳ ಸರಕು ಸೇವಾ ಕಾಯ್ದೆ (2020), ಎಪಿಎಂಸಿ ತಿದ್ದುಪಡಿ ಕಾಯ್ದೆ (2020), ಗುತ್ತಿಗೆ ಕೃಷಿ ಕಾಯ್ದೆ (2020) ಹಾಗೂ ವಿದ್ಯುತ್ ಬಿಲ್ (2020) ಕಾಯ್ದೆಗಳನ್ನು ರದ್ದು ಮಾಡದೆ ರೈತರನ್ನು ವಂಚಿಸುತ್ತಿವೆ. ಇನ್ನೊಂದು ಕಡೆ ತಾಲೂಕಿನಾದ್ಯಂತ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ಎಲ್ಲಾ ಕಚೇರಿಗಳಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಹಾಗೂ ತಾಲೂಕಿನಾದ್ಯಂತ ಅಧಿಕಾರಿಗಳು ರಿಯಲ್ ಎಸ್ಟೇಟ್ ಕುಳಗಳ ಜತೆ ಕೈಜೋಡಿಸಿ ಬಡ ರೈತರ ಭೂಮಿಗಳನ್ನು ಅಕ್ರಮ ಖಾತೆಗಳನ್ನು ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಜನ ಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಹಾಗೂ ರೈತರ ಬೆಳೆ ಬೆಳೆದಿರುವ ರೈತರಿಗೆ ಬೆಂಬಲ ಬೆಲೆ ನೀಡದೆ ಹಾಗೂ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕೇವಲ ಒಂದು ವಾರಕ್ಕೆ ಸಾಕಾಗದ ದಿನಸಿ ಕಿಟ್ʼಗಳನ್ನು ವಿತರಣೆ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಬೇಡಿಕೆಯನ್ನು ಪೂರೈಸಿದ ಇದ್ದರೆ ಅನಿರ್ದಿಷ್ಟ ಕಾಲ ಧರಣಿ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ರಾಜ್ಯ ಸಂಚಾಲಕಿ ಉಮಾ, ಜಿಲ್ಲಾದ್ಯಕ್ಷ ಪಿ.ಹೆಚ್.ರಾಮನಾಥ, ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ರಘುನಾಥ ರೆಡ್ಡಿ, ತಾಲೂಕು ಉಪಾಧ್ಯಕ್ಷ ಪಿ.ಈಶ್ವರ ರೆಡ್ಡಿ, ತಾಲೂಕು ಸಂಚಾಲಕಿ ಟಿ.ಆರ್.ಪ್ರಮೀಳಾ, ರಮಣ ನಾರಾಯಣ ಸ್ವಾಮಿ, ಶ್ಯಾಮಲಾ, ಚಾಂದ್ ಬಾಷಾ ಮುಂತಾದವರು ಇದ್ದರು.