ಡೆಪ್ಯೂಟಿ ಮುಖ್ಯಮಂತ್ರಿಗಳು ಅನುಮಾನ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಗೆ ಬಿಜೆಪಿ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದು, ನೂತನ ಸಚಿವರ ಪಟ್ಟಿ ಸಿಎಂ ಕೈ ಸೇರಿದೆ.
ಇಂದು (ಬುಧವಾರ) ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನಡೆಯುವ ಸರಳ ಸಮಾರಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ನೂತನ ಸಚಿವರಿಗೆ ಅಧಿಕಾರ ಗೌಪ್ಯತೆಯ ಪ್ರಮಾನ ಬೋಧಿಸಲಿದ್ದಾರೆ. ಕಾರ್ಯಕ್ರಮಕ್ಕೆ ಶಿಷ್ಟಾಚಾರ ವಿಭಾಗ ಸಿದ್ಧತೆ ಮಾಡಿಕೊಂಡಿದ್ದು. ಸೀಮಿತ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಮುಖ್ಯಮಂತ್ರಿ ಅವರು ಸಂಜೆ ಪ್ರಮಾಣ ಕಾರ್ಯಕ್ರಮ ನಡೆಯಲಿದೆ ಎಂದು ದಿಲ್ಲಿಯಲ್ಲಿ ತಿಳಿಸಿದರು.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿ ಪ್ರಕಾರ 22ರಿಂದ 24 ಸಚಿವರು ಪ್ರಮಾಣ ಸ್ವೀಕರಿಸಲಿದ್ದು, ನಾಳೆ ದಿಲ್ಲಿಯಿಂದ ವಾಪಸ್ ಬೆಂಗಳೂರಿಗೆ ಬರಲಿರುವ ಸ್ವತಃ ಮುಖ್ಯಮಂತ್ರಿ ಅವರೇ ಎಲ್ಲ ಹೊಸ ಸಚಿವರಿಗೆ ಕರೆ ಮಾಡಿ ಪ್ರಮಾಣ ಸ್ವೀಕಾರಕ್ಕೆ ಬರುವಂತೆ ಹೇಳಿದ್ದಾರೆ. ಬಿಜೆಪಿಯ ಇನ್ನೊಂದು ಮೂಲ ತಿಳಿಸಿರುವಂತೆ ಇನ್ನೊಂದೆರಡು ಹೆಸರುಗಳು ಹೆಚ್ಚಬಹುದು ಎನ್ನಲಾಗಿದೆ.
ಹೊಸ ಸಚಿವರ ಪಟ್ಟಿಗಳ ಬಗ್ಗೆ ಸಾಕಷ್ಟು ಚರ್ಚೆ, ಲೆಕ್ಕಾಚಾರ ನಡೆದ ಮೇಲೆ ಹೈಕಮಾಂಡ್ ಫೈನಲ್ ಪಟ್ಟಿಯನ್ನು ನೀಡಿದೆ. ಇಂದು ಮುಖ್ಯಮಂತ್ರಿಯ ಜತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಬೆಂಗಳೂರಿಗೆ ಬರಲಿದ್ದು, ನಂತರ ಪಟ್ಟಿ ಹೊರಬೀಳಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಯಡಿಯೂರಪ್ಪ ಸಂಪುಟದಲ್ಲಿದ್ದ ಯಾರಿಗೆಲ್ಲ ಸಚಿವ ಸ್ಥಾನ ಸಿಗುವದಿಲ್ಲ ಎಂಬ ಮಾಹಿತಿ ಬಿಜೆಪಿ ವಲಯದಲ್ಲಿ ತೀವ್ರ ಕಂಪನಗಳನ್ನೇ ಉಂಟು ಮಾಡಿದೆ. ತಡರಾತ್ರಿ ಹೊತ್ತಿಗೆ ಸಿಕ್ಕಿದ ಮಾಹಿತಿಯಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಹಿರಿಯ ನಾಯಕರಾದ ವಿ.ಸೋಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ, ಆರ್.ಶಂಕರ್, ಪ್ರಭು ಚೌಹಾಣ್ ಅವರಿಗೆ ಅವಕಾಶ ಇಲ್ಲ ಎನ್ನಲಾಗಿದೆ.
ಇನ್ನು, ಹಿಂದಿನ ಸಂಪುಟದಲ್ಲಿ ಡಿಸಿಎಂಗಳ ಪೈಕಿ ಸೀನಿಯರ್ ಆಗಿದ್ದ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಮಾತ್ರ ಸಿಗಲಿದೆ ಎಂದಬ ಸುದ್ದಿ ಹೊರಬಂದಿದೆ. ಇನ್ನು, ಆಲ್‌ಮೋಸ್ಟ್ ಫೈನಲ್ಲೇ ಆಗಿ ಹೋಗಿತ್ತು ಎನ್ನಲಾಗಿದ್ದ ಬಿ.ಶ್ರೀರಾಮುಲು ಅವರು ಅವರು ಉಪ ಮುಖ್ಯಮಂತ್ರಿಯಾಗುತ್ತಾರಾ ಎಂಬ ಬಗ್ಗೆ ಮಧ್ಯರಾತ್ರಿ ಹೊತ್ತಿಗೆ ಅನುಮಾನ ಹುತ್ತ ಸುತ್ತಿಕೊಂಡಿದೆ. ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತರೂ ಹಾಗೂ ಯಡಿಯೂರಪ್ಪ ಅವರ ಕ್ಲೋಸ್ ಸರ್ಕಲ್‌ನಲ್ಲಿ ಗುರುತಿಸಿಕೊಂಡಿದ್ದ ಆರ್.ಅಶೋಕ್ ಅವರಿಗೂ ಕೇವಲ ಮಂತ್ರಿ ಸ್ಥಾನವಷ್ಟೇ ಸಿಗುತ್ತಿದೆ ಎಂಬ ವಾರ್ತೆ ಹರಿದಾಡುತ್ತಿದೆ.
ಎಸ್.ಟಿ.ಸೋಮಶೇಖರ್ ಅವರಿಗೆ ಆತಂಕ
ಇನ್ನು, ಶತಾಯಗತಾಯ ಸಂಪುಟಕ್ಕೆ ಸೇರಲೇಬೇಕೆಂದು ಲಾಬಿ ನಡೆಸುತ್ತಿರುವ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಇನ್ನೊಂದು ಆತಂಕ ಎದುರಾಗಿದೆ. ಭ್ರಷ್ಟಾಚಾರ ಪ್ರಕರಣ ಒಂದಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಪುತ್ರನಿಗೆ ನೊಟೀಸ್ ನೀಡಲು ಆದೇಶ ನೀಡಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೂ ನೀಟೀಸ್ ಜಾರಿ ಮಾಡಲು ನ್ಯಾಯಾಲಯ ಆದೇಶ ನೀಡಿದೆ.
ವಲಸಿಗರಲ್ಲಿ ಸಚಿವ ಸ್ಥಾನ ಪಡೆಯುವ ಹೆಸರುಗಳಲ್ಲಿ ಒಂದಾಗಿದ್ದ ಸೋಮಶೇಖರ್ ಇದೀಗ ಕೊಂಚ ಆತಂಕಕ್ಕೆ ಸಿಲುಕಿದ್ದಾರೆ. ಈ ಆದೇಶ ಹೊರಬೀಳು ಹೊತ್ತಿಗೆ ಸಂಪುಟ ಪಟ್ಟಿ ಮುಖ್ಯಮಂತ್ರಿ ಕೈ ಸೇರಿರಲಿಲ್ಲ. ಈಗ ಅವರ ಬಳಿ ಇರುವ ಪಟ್ಟಿಯಲ್ಲಿ ಸೋಮಶೇಖರ್ ಹೆಸರು ಇದೆಯಾ? ಇಲ್ಲವಾ? ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಒಂದು ವೇಳೆ ಅವರು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದರೂ ಮುಂದೆ ಇದರ ಬಿಸಿ ಇದ್ದೇ ಇರುತ್ತದೆ ಎಂದು ಹೇಳಲಾಗಿದೆ.