ಮೈಸೂರು: ಜಿಲ್ಲೆಯ ನಂಜನಗೂಡು ಮಕ್ಕಳ ಮಾರಾಟ ಜಾಲ ಪ್ರಕರಣ ಸಂಬಂಧ ಮಹಿಳೆಯರಿಬ್ಬರನ್ನು ಬಂದಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚೇತನ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್ಪಿ ಅವರು, ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ಒಂದು ಮಗು ಮಾರಾಟದ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಹಲವು ಮಕ್ಕಳ ಮಾರಾಟದ ಸುಳಿವು ಲಭಿಸಿತ್ತು. ಪ್ರಕರಣದಲ್ಲಿ ಆರೋಪಿಗಳ ಜಾಲದ ಪತ್ತೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಅವರ ಸೂಚನೆಯಂತೆ ಅಪರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ನಂಜನಗೂಡು ಉಪವಿಭಾಗ ಡಿಎಸ್ಪಿ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ನಂಜನಗೂಡು ವೃತ್ತ ಸಿ.ಪಿ.ಐ ಲಕ್ಷ್ಮೀಕಾಂತ್ ಕೆ ತಳವಾರ್, ನಂಜನಗೂಡು ಪಟ್ಟಣ ಪಿ.ಎಸ್.ಐ ವಿಜಯ್‍ರಾಜ್, ಪಿಎಸ್‍ಐ ಚೆಲುವಯ್ಯ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡದವರು ಈ ಪ್ರಕರಣ ಸಂಬಂಧ ನಂಜನಗೂಡು ಪಟ್ಟಣದ ಆರ್.ಪಿ. ರಸ್ತೆ 3ನೇ ಕ್ರಾಸ್ ವಾಸಿ ಗೃಹಿಣಿ ಶ್ರೀಮತಿ (60) ಹಾಗೂ ಶ್ರೀಲಕ್ಷ್ಮಿ (31) ಅವರುಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಚೇತನ್ ತಿಳಿಸಿದರು.
ವಿಚಾರಣೆ ಸಮಯದಲ್ಲಿ ಇವರುಗಳು ಜ್ಯೋತಿ ಎಂಬುವವರ ಗಂಡು ಮಗುವನ್ನು ಹೊಳೇನರಸೀಪುರ ತಾಲೂಕು ಉದ್ದೂರು ಹೊಸಳ್ಳಿಯ ಯಶೋದಮ್ಮ ಅವರಿಗೆ ಹಣಕ್ಕಾಗಿ ಮಾರಾಟ ಮಾಡಿದ್ದು ತಿಳಿದು ಬಂದಿದೆ. ನಂತರ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಆರೋಪಿಗಳು ಮಂಜುಳಾ ಅವರಿಗೆ ಜನಿಸಿದ ಹೆಣ್ಣು ಮಗುವನ್ನು ಕೊಳ್ಳೇಗಾಲ ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಚೈತ್ರಾ ಅವರಿಗೆ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಮಕ್ಕಳನ್ನು ಮೈಸೂರಿನ ಬಾಪೂಜಿ ಮಕ್ಕಳ ಆರೈಕೆ ಕೇಂದ್ರದಲ್ಲಿರಿಸಲಾಗಿದೆ.
ಆರೋಪಿತರು ಮಕ್ಕಳಿಲ್ಲದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಡತನದಲ್ಲಿರುವ ಗರ್ಭಿಣಿಯವರನ್ನು ಪರಿಚಯ ಮಾಡಿಕೊಂಡು ಪೂರ್ವ ನಿಯೋಜಿತವಾಗಿ ಮಕ್ಕಳಿಲ್ಲದವರಿಗೆ ಮಗುವನ್ನು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಎಸ್.ಎಲ್.ಇ.ಎಸ್ ಆಸ್ಪತ್ರೆಯಲ್ಲಿ ಗರ್ಭಿಣಿಯ ಹೆಸರಿಗೆ ಬದಲಾಗಿ ಮಕ್ಕಳನ್ನು ಪಡೆಯುವವರ ಹೆಸರಿಗೆ ಆಸ್ಪತ್ರೆಯ ದಾಖಲೆಗಳನ್ನು ಸೃಷ್ಟಿಸಿರುವುದು ಸಹ ತನಿಖೆಯಲ್ಲಿ ಕಂಡು ಬಂದಿದೆ ಎಂದು ಎಸ್ಪಿ ಅವರು ತಿಳಿಸಿದರು.
ಈ ಪ್ರಕರಣವನ್ನು ಭೇದಿಸುವಲ್ಲಿ ಭಾಗಿಯಾಗಿದ್ದ ನಂಜನಗೂಡು ವೃತ್ತ ಸಿ.ಪಿ.ಐ ಲಕ್ಷ್ಮೀಕಾಂತ್ ಕೆ. ತಳವಾರ್, ನಂಜನಗೂಡು ಪಟ್ಟಣ ಪಿ.ಎಸ್.ಐ ವಿಜಯ್‍ರಾಜ್, ಪಿಎಸ್‍ಐ ಚೆಲುವರಾಜು, ಎ.ಎಸ್.ಐ ಅಫೀಜುಲ್ಲಾ ಷರೀಫ್, ಅಜ್ಜಯ್ಯ , ಸುಶೀಲ್ ಕುಮಾರ್, ಸುನಿತಾ, ನಳಿನಾಕ್ಷಿ ಅವರುಗಳ ಕಾರ್ಯವನ್ನು ಎಸ್ಪಿ ಚೇತನ್ ಅವರು ಶ್ಲಾಘಿಸಿದರು.