ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಮನೆ, ನ್ಯಾಷನಲ್ ಟ್ರಾವೆಲ್ಸ್ ಸೇರಿ 6 ಕಡೆ ರೇಡ್; ಬೇಗ್ ನಿವಾಸ, ಅವರ ಮಗಳ ಮನೆಯ ಮೇಲೂ ದಾಳಿ
ಬೆಂಗಳೂರು: ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಐಎಂಎ ಹಗರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಮೇಲೆ ಗುರುವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಏಕಕಾಲಕ್ಕೆ ದಾಳಿ ನಡೆಸಿದೆ. ಸಂಜೆ ಐದು ಗಂಟೆಯಾದರೂ ದಾಳಿ ಮುಗಿದಿರಲಿಲ್ಲ. ಅಂದರೆ ಬರೋಬ್ಬರಿ ಹತ್ತು ಗಂಟೆಗಳೇ ಕಳೆದರೂ ರೇಡ್ ಅಂತ್ಯ ಕಂಡಿಲ್ಲ.
ದಾಳಿ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಜಮೀರ್ ಮತ್ತು ರೋಷನ್ ಬೇಗ್ ಅವರ ಅರಮನೆಗಳಂಥ ಕಟ್ಟಡಗಳನ್ನು ಮಾಧ್ಯಮಗಳಲ್ಲಿ ಕಂಡ ರಾಜ್ಯದ ಜನರು ಹೌಹಾರಿದರು. ಇಂದ್ರಭವನಗಳನ್ನೇ ನಾಚಿಸುವಂತಿರುವ ಆ ಕಟ್ಟಡಗಳನ್ನು ಕಂಡು ಸ್ವತಃ ಇಡಿ ಅಧಿಕಾರಿಗಳೇ ಚಕಿತರಾದರು ಎಂದು ಗೊತ್ತಾಗಿದೆ. ಆದಾಯ, ಅದಕ್ಕೆ ತಕ್ಕ ತೆರಿಗೆಯನ್ನು ಪಾವತಿ ಮಾಡದಿರುವ ಈ ಇಬ್ಬರು ನಾಯಕರ ಕೆಲ ಅನುಮಾನಾಸ್ಪದ ವ್ಯವಹಾರಗಳು ದಾಳಿಗೆ ಕಾರಣವಾಗಿರಬಹುದು ಎಂದು ಗೊತ್ತಾಗಿದೆ.
ಬೆಳಬೆಳಗ್ಗೆಯೇ ಸುಮಾರು 45ಕ್ಕೂ ಹೆಚ್ಚು ಅಧಿಕಾರಿಗಳು ಇಪ್ಪತ್ತೈದಕ್ಕೂ ಹೆಚ್ಚು ಕಾರುಗಳಲ್ಲಿ ಇಬ್ಬರು ನಾಯಕರ ನಿವಾಸಗಳ ಮೇಲೆ ಮುಗಿಬಿದ್ದಿದ್ದಾರೆ. ಜಮೀರ್ ನಿವಾಸ, ಕಚೇರಿ ಸೇರಿ ಆರು ಕಡೆ ದಾಳಿ ನಡೆಸಿದ್ದಾರೆ. ಹಾಗೆಯೇ, ರೋಷನ್ ಬೇಗ್ ಮನೆಯೂ ಸೇರಿ, ಬೆಂಗಳೂರಿನ ಭೂಪಸಂದ್ರದಲ್ಲಿರುವ ಅವರ ಪುತ್ರಿಯ ಮನೆ ಮತ್ತಿತರ ಕಡೆಯೂ ದಾಳಿ ನಡೆಸಲಾಗಿದೆ.
ಜಮೀರ್ ಐಶಾರಾಮಿ ಸಾಮ್ರಾಜ್ಯ
ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಜಮೀರ್, ಕೆಲ ದಿನಗಳ ಹಿಂದೆ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆಯಲ್ಲೂ ಕೆಲವರ ಪರ ಮೂಗು ತೂರಿಸಿದಿದ್ದರು. ಈ ಕಾರಣಕ್ಕಾಗಿ ಸುದ್ದಿಯಲ್ಲಿದ್ದ ಅವರಿಗೆ ಬೆಳಗ್ಗೆಯೇ ಇಡಿ ಅಧಿಕಾರಿಗಳು ದೊಡ್ಡ ಶಾಕ್ ನೀಡಿದ್ದಾರೆ.
ಅವರ ಒಡೆತನದ ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ರಿಚ್ಮಂಡ್ ಟೌನ್ನಲ್ಲಿರುವ ಐಶಾರಾಮಿ ಮನೆ, ಕಂಟೋನ್ಮೆಂಟ್ ಬಳಿ ಇರುವ ಐಶಾರಾಮಿ ಮನೆ, ಯುಬಿ ಸಿಟಿಯಲ್ಲಿರುವ ಐಶಾರಾಮಿ ಪ್ಲ್ಯಾಟ್ ಸೇರಿ ಒಟ್ಟು ಆರು ಕಡೆ ಬೆಳಗ್ಗೆ 5.45ರ ಸುಮಾರಿಗೆಲ್ಲ ಇಡಿ ಅಧಿಕಾರಿಗಳು ಏಕಕಾಲದಲ್ಲೇ ದಾಳಿ ನಡೆಸಿದ್ದಾರೆ. ದಾಳಿ ನಡೆದಾಗ ಜಮೀರ್ ಮನೆಯಲ್ಲೇ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ದಾಳಿ ಮಾಡಿದ ಎಲ್ಲ ಜಾಗಗಳನ್ನು ಇಂಚಿಂಚೂ ಶೋಧ ಮಾಡಿರುವ ಅಧಿಕಾರಿಗಳು, ಅಪಾರ ಪ್ರಮಾಣದ ದಾಖಲೆ ಪತ್ರಗಳು, ಬ್ಯಾಂಕ್ ಖಾತೆಗಳ ವಿವರಗಳು, ಹಣಕಾಸು ವ್ಯವಹಾರಗಳ ದಾಖಲೆಗಳು, ಭೂ ವ್ಯವಹಾರದ ದಾಖಲೆಗಳು, ಚಿನ್ನಾಭರಣ, ಲಾಕರ್ಗಳು, ಫೊನ್ ಕಾಲ್ಗಳ ವಿವರ ಇತ್ಯಾದಿಗಳನ್ನು ಪರಿಶೀಲನೆ ಮಾಡಿ ಸಾಕಷ್ಟು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆಂದು ಗೊತ್ತಾಗಿದೆ. ಕೆಲ ಬ್ಯಾಗುಗಳಷ್ಟು ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗಿದೆ.
ಮೌಲ್ಯ 90 ಕೋಟಿ! ಮಾರಿದ್ದು 9.38 ಕೋಟಿಗೆ!!
ಬಹುಕೋಟಿ ರೂ.ಗಳ ಐಎಂಎ ಹಗರಣದ ಪ್ರಮುಖ ಆರೋಪಿ ಮನನ್ಸೂರ್ ಖಾನ್ ಜತೆಗಿನ ನಂಟು-ವ್ಯವಹಾರವು ಜಮೀರ್ಗೆ ಮುಳುವಾಗಿರುವ ಸಾಧ್ಯತೆ ಇದೆ. ಇವರಿಬ್ಬರ ನಡುವೆ ನಡೆದಿದೆ ಎನ್ನಲಾದ ಭಾರೀ ವ್ಯವಹಾರಗಳ ವಾಸನೆ ಇಡಿಗೆ ಬಡಿದಿದ್ದು; ಆಸ್ತಿ, ಚಿನ್ನ ಖರೀದಿ, ಹಣ ವಿನಿಮಯ ಹಾಗೂ ಚುನಾವಣೆ ಸಂದರ್ಭಗಳಲ್ಲಿ ಖರ್ಚು-ವೆಚ್ಚ ಇತ್ಯಾದಿಗಳ ಬಗ್ಗೆ ಅಧಿಕಾರಿಗಳು ತಲಾಶ್ ಮಾಡಿದ್ದಾರೆ.
ಮುಖ್ಯವಾಗಿ ರಿಚ್ಮಂಡ್ ಟೌನ್ನಲ್ಲಿರುವ 90 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಭಾರೀ ಐಶಾರಾಮಿ ಭಂಗಲೆಯನ್ನು ಕೇವಲ 9.38 ಕೋಟಿ ರೂ.ಗಳಿಗೆ ಮನ್ಸೂರ್ ಖಾನ್ಗೆ ಮಾರಾಟ ಮಾಡಿ ಭಾರೀ ತೆರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೆಲ ದಿನಗಳ ಹಿಂದೆ ಬಿಜೆಪಿ ನಾಯಕ ಎನ್.ಆರ್.ರಮೇಶ್ ಈ ಬಗ್ಗೆ ದಾಖಲೆಗಳ ಸಮೇತ ಆರೋಪ ಮಾಡಿ ತನಿಖೆಗೆ ಒತ್ತಾಯ ಮಾಡಿದ್ದರು. ಈಗ ಇದೇ ವ್ಯವಹಾರ ಇಡಿ ಇಕ್ಕಳದಲ್ಲಿ ಸಿಲುಕಿಕೊಂಡಿದೆ. ಇದಲ್ಲದೆ, ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಹಾಗೂ ಕೆಲ ದೇಶಗಳಲ್ಲಿ ಜಮೀರ್ ಹೂಡಿಕೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರೋಷನ್ ಬೇಗ್ ಕೂಡ ಟಾರ್ಗೆಟ್
ಜಮೀರ್ ಜತೆಯಲ್ಲೇ ಮಾಜಿ ಸಚಿವ ರೋಷನ್ ಬೇಗ್ ಮೇಲೆ ದಾಳಿ ನಡೆದಿದ್ದಾರೆ. ಐಎಂಎ ವಂಚನೆ ಪ್ರಕರಣ ಸಂಬಂಧ ಬೇಗ್ ಮನೆ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಏಕಕಾಲದಲ್ಲಿ ಒಟ್ಟು 6 ಕಡೆ ದಾಳಿ ನಡೆಸಲಾಗಿದೆ. ಬೆಳಗ್ಗೆ 7 ಗಂಟೆ ಹೊತ್ತಿಗೆ ಶಿವಾಜಿನಗರದ ಕೋಲ್ಸ್ ಪಾರ್ಕ್ ಬಳಿ ಇರುವ ಬೇಗ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಐಎಂಎ ಹಗರಣದಲ್ಲಿ ಅವರು ಆ ಕಂಪನಿಯಿಂದ 400 ಕೋಟಿ ರೂ. ಪಡೆದಿದ್ದರೆಂಬ ಆರೋಪ ಇದೆ. ಈ ಬಗ್ಗೆ ಇಡಿ ಅಧಿಕಾರಿಗಳು ಜಾಲಾಡಿದ್ದಾರೆ ಎನ್ನಲಾಗಿದೆ.
ಇದಾದ ಮೇಲೆ ನಗರದ ಫ್ರೇಜರ್ʼಟೌನ್ʼನಲ್ಲಿರುವ ರೋಷನ್ ಬೇಗ್ ಮನೆಯ ಮೇಲೂ ಇಡಿ ಅಧಿಕಾರಿಗಳು ದಾಳಿ ಇಟ್ಟಿದ್ದಾರೆ. ಈ ಮನೆಯಲ್ಲಿ 8-10 ಅಧಿಕಾರಿಗಳು ದಾಖಲೆಗಳನ್ನು ಪರಿಸೀಲನೆ ಮಾಡುತ್ತಿದ್ದಾರೆಂಬ ಮಾಹಿತಿ ಇದೆ. ಜತೆಗೆ, ವಿದೇಶಗಳಲ್ಲಿ ಅಪಾರ ಪ್ರಮಾಣದ ಹಣ ಹೂಡಿಕೆ ಮಾಡಿದ ಅನುಮಾನವೂ ಇಡಿ ಅಧಿಕಾರಿಗಳಿಗೆ ಇದ್ದು, ಆ ನಿಟ್ಟಿನಲ್ಲೂ ಶೋಧ ಮುಂದುವರಿದಿದೆ ಎನ್ನಲಾಗಿದೆ.
45 ಅಧಿಕಾರಿಗಳು ಮತ್ತು 25ಕ್ಕೂ ಹೆಚ್ಚು ಕಾರು
ಅತ್ಯಂತ ಮಹತ್ವದ್ದಾಗಿರುವ ಈ ದಾಳಿ ನಡೆಸುವ ಮುನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರೀ ಸಿದ್ಧತೆ ನಡೆಸಿದ್ದಾರೆ. ವಾರಕ್ಕೆ ಮೊದಲೇ ಬಂದು ಬೆಂಗಳೂರಿನ ಖಾಸಗಿ ಹೋಟಲ್ ಒಂದರಲ್ಲಿ ಪ್ರವಾಸಿಗರಂತೆ, ಖಾಸಗಿ ಕಂಪನಿ ಉದ್ಯೋಗಿಗಳಂತೆ ಯಾರಿಗೂ ಎಳ್ಳಷ್ಟೂ ಅನುಮಾನ ಬಾರದಂತೆ ಮೊಕ್ಕಾಂ ಹೂಡಿದ್ದ 45 ಅಧಿಕಾರಿಗಳು, ಆ ಮೋದಲೇ ಸಂಗ್ರಹಿಸಿದ್ದ ಮಾಹಿತಿಯಂತೆ ವ್ಯಾಪಕ ವರ್ಕೌಟ್ ಮಾಡಿದ್ದರು.
ಜಮೀರ್, ರೋಷನ್ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿಯ ಮಹೂರ್ತ ಫಿಕ್ಸ್ ಮಾಡಿದ್ದರು. ಬೆಳಗ್ಗೆ ಐದು ಗಂಟೆಗೆ ಹೋಟೆಲ್ ಬಿಟ್ಟು 5.45ಕ್ಕೆಲ್ಲ ಇಬ್ಬರೂ ನಾಯಕರ ಕದ ತಟ್ಟಿದ್ದರು. ಆ ಕ್ಷಣದಲ್ಲಿ ಇಬ್ಬರೂ ನಾಯಕರೂ ಅವರವರ ಮನೆಗಳಲ್ಲೇ ಇದ್ದರು. ಇಡಿ ಟೀಮ್ಗಳನ್ನು ಕಂಡು ಇಬ್ಬರೂ ಶಾಕ್ ಆಗಿದ್ದಾರೆ.