ಇಂದಿಗೆ (ಅಗಸ್ಟ್ 5) ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ವಿಧಿ ರದ್ದಾಗಿ ಅಲ್ಲಿನ ಜನರು ಇತರೆ ರಾಜ್ಯಗಳ ಜನರಂತೆ, ಸಾಮಾನ್ಯ ಭಾರತೀಯ ನಾಗರಿಕರಾಗಿ ಎರಡು ವರ್ಷವಾಯಿತು.
73 ವರ್ಷಗಳ ಹಿಂದಿನ ಸಮಸ್ಯೆಯಾಗಿ ಉಳಿದಿದ್ದ, ಪಾಕಿಸ್ತಾನ ಪ್ರೇರಿತ ಉಗ್ರ ಚಟುವಟಿಕೆಯಿಂದಾಗಿ ಅಸಂಖ್ಯಾತ ಯೋಧರು, ನಾಗರಿಕರು, ಕಾಶ್ಮೀರಿ ಪಂಡಿತರು ಪ್ರಾಣವನ್ನೇ ತ್ಯಾಗ ಮಾಡಿದ್ದರು. ಇಂಥ ಕಾಶ್ಮೀರ ಕಣಿವೆಯ ಸಮಸ್ಯೆಗೆ ಪರಿಹಾರ ಇಲ್ಲವೇ ಎಂಬ ಸಂದರ್ಭದಲ್ಲಿ 2019 ಅಗಸ್ಟ್ 5ರಂದು ಕೇಂದ್ರ ಸರಕಾರದ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಅನುಚ್ಛೇದ 370 ಮತ್ತು 35ಎ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು ಹಿಂಪಡೆಯುವ ರಾಷ್ಟ್ರಪತಿಗಳ ಆದೇಶವನ್ನು ಪ್ರಕಟಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಇರುವ ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ʼಜಮ್ಮು ಮತ್ತು ಕಾಶ್ಮೀರ ಮರು ರಚನಾ ಕಾಯ್ದೆʼಯನ್ನೂ ಜಾರಿಗೊಳಿಸಲಾಯಿತು.
ಅಲ್ಲಿಗೆ ಭಾರತದ ಇತರೆ ರಾಜ್ಯಗಳಷ್ಟೇ ಹಕ್ಕುಗಳು ಜಮ್ಮು-ಕಾಶ್ಮೀರದವರಿಗೂ ಇರುವಂಥ ವ್ಯವಸ್ಥೆ ಜಾರಿಗೆ ಬಂತು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಕೇಂದ್ರ ಸರಕಾರ ಸೇನಾಪಡೆಯನ್ನು ನಿಯೋಜಿಸಿತ್ತು. ಅಲ್ಲಿನ ರಾಜಕೀಯ ಪಕ್ಷಗಳ ಮುಖಂಡರನ್ನು, ಪ್ರತ್ಯೇಕತಾವಾದಿಗಳನ್ನು ಗೃಹಬಂಧನದಲ್ಲಿರಿಸಲಾಯಿತು.
ಉಗ್ರರು ಪರಿಸ್ಥಿತಿಯ ದುರ್ಲಾಭ ಪಡೆಯಬಾರದು ಎಂಬ ಉದ್ದೇಶದಿಂದ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಯಿತು. ಕಣಿವೆಯಲ್ಲಿ ಬಿಗಿ ಬಂದೋಬಸ್ತ್ ಮಾಡಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಿತು. ಅಲ್ಲದೇ ಅಲ್ಲಿನ ಜನರಲ್ಲಿ ಇದ್ದ ಭಯ ಆತಂಕಗಳನ್ನು ಹೋಗಲಾಡಿಸಲು ಭದ್ರತಾ ಸಲಹೆಗಾರದ ಆಜಿತ್ ದೋವೆಲ್ ಅವರು ಕಾಶ್ಮೀರಕ್ಕೆ ತೆರಳಿ ಜನರೊಂದಿಗೆ ಸಮುದಾಯಗಳೊಂದಿಗೆ ಮಾತುಕತೆ ನಡೆಸಿ ಸಹಜ ಸ್ಥಿತಿಯತ್ತ ಬರುವಂತೆ ಮಾಡಿದ್ದರು.
ಕೇಂದ್ರ ಸರಕಾರ ಪ್ರಮುಖ ರಾಷ್ಟಗಳಿಗೆ ಕಾಶ್ಮೀರದ ಸ್ಥಿತಿಗತಿಯನ್ನು ಅರಿಯಲು ಆಹ್ವಾನ ನೀಡಿ ಪಾಕಿಸ್ತಾನದ ಮೊಂಡುತನಕ್ಕೆ ತಿರುಗೇಟು ನೀಡಿತು. ಇದೇ ವೇಳೆ ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳಿಂದ ʼಗುಪ್ಕಾರ್ʼ ಎಂಬ ಮೈತ್ರಿಕೂಟ ರಚಿಸಿಕೊಂಡು ಕಾಶ್ಮೀರದ ವಿಶೇಷಾಧಿಕಾರ ಮರುಸ್ಥಾಪನೆಗೆ ಈಗಲೂ ಹೋರಾಡುತ್ತಿವೆ. ಪ್ರಧಾನಿಯವರು ಸರ್ವಪಕ್ಷ ಸಭೆಯನ್ನು ಕರೆದ ಸಂದರ್ಭದಲ್ಲಿ ಗುಪ್ಕಾರ್ ಕೂಟದ ಪಕ್ಷಗಳ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದವು.
ಅಲ್ಲಿನ ರಾಜಕೀಯ ಪಕ್ಷಗಳು ಯಾಕೆ ಮೊದಲು ಕಾಶ್ಮೀರ ಕಣಿವೆಗೆ ನೀಡಿದ್ದ ವಿಶೇಷ ಸ್ಥಾನಮಾನದ ಮರುಸ್ಥಾಪನೆ ಮಾಡುವಂತೆ ಒತ್ತಾಯಿಸುತ್ತಿವೆ? ಅವು ಹಾಗೆ ಹೇಳಲು ಕಾರಣವೆಂದು ತಿಳಿಯಬೇಕಾದರೆ ನಾವು ಸಂವಿಧಾನದ 370ನೇ ವಿಧಿಯ ಬಗ್ಗೆ ಕೊಂಚ ತಿಳಿಯಬೇಕು.
ಏನಿದು 370ನೇ ವಿಧಿ?
ಯಾವುದೇ ಒಂದು ರಾಜ್ಯಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ಥಾನಮಾನ ಕಲ್ಪಿಸಲು ಭಾರತದ ಸಂವಿಧಾನದ 21ನೇ ಪರಿಚ್ಛೇದ ಅನ್ವಯವಾಗುತ್ತದೆ. ಪ್ರಾಂತೀಯ ಸರಕಾರಕ್ಕೆ ಸಾಕಷ್ಟು ಅಧಿಕಾರವನ್ನು ದಯಪಾಲಿಸುವ ವಿಧಿಯೇ 370. ಇದರ ಪ್ರಕಾರ ಒಂದು ಪ್ರಾಂತ್ಯಕ್ಕೆ ತಾತ್ಕಾಲಿಕವಾಗಿ (ಆ ಸಂದರ್ಭಕ್ಕೆ ಅಗತ್ಯವಿದ್ದಂತೆ) ವಿಶೇಷ ಸ್ಥಾನಮಾನವನ್ನು ಕಲ್ಪಿಸಬಹುದು. ಅಂತಹ ಸ್ಥಾನ ಪಡೆದ ರಾಜ್ಯ, ದೇಶದ ಎಲ್ಲ ರಾಜ್ಯಗಳಿಗೂ ಅನ್ವಯವಾಗುವ ಕಾನೂನಿನಿಂದ ಮುಕ್ತ. ಕೆಲ ಕ್ಷೇತ್ರಗಳ ಹೊರತಾಗಿ ಉಳಿದೆಲ್ಲ ವಿಚಾರಗಳನ್ನು ಅಲ್ಲಿನ ವಿಧಾನಸಭೆಗೇ ಬಿಡಬೇಕು.
ಶ್ರೀನಗರದ ಒಂದು ವಿಹಂಗಮ ನೋಟ
ಜಮ್ಮು ಕಾಶ್ಮೀರಕ್ಕೆ ಏಕೆ ನೀಡಲಾಯಿತು?
1947ರ ಆಗಸ್ಟ್ 14-15ರಂದು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಸ್ವತಂತ್ರ್ಯಗೊಂಡವು. ಆ ವೇಳೆ ಕಾಶ್ಮೀರವನ್ನು ಒಂದು ಸ್ವತಂತ್ರ ರಾಜ್ಯವನ್ನಾಗಿ ಘೋಷಿಸಲಾಗಿತ್ತು. ಆ ರಾಜ್ಯದ ಮೇಲೆ ಎರಡೂ ದೇಶಗಳು ದಾಳಿ ಮಾಡಬಾರದೆಂಬ ನಿರ್ಣಯ ಕೈಗೊಳ್ಳಲಾಯಿತು. ಆದರೆ ಪಾಕಿಸ್ತಾನ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕೆಂಬ ಪ್ರಯತ್ನವನ್ನು ಕೈಬಿಡಲಿಲ್ಲ. 1947 ಅಗಸ್ಟ್ 6ರಂದು ಪಾಕ್ ಬೆಂಬಲಿತ ʼಆಜಾದ್ ಕಾಶ್ಮೀರ್ʼ ಎಂಬ ಪಡೆಯು ಪಾಕ್ ಮೇಲೆ ಮುಗಿಬಿತ್ತು. ಆಗ ಕಾಶ್ಮೀರವನ್ನು ಆಳುತ್ತಿದ್ದ ಮಹಾರಾಜ ಹರಿಸಿಂಗ್ ತಮ್ಮ ರಾಜ್ಯವನ್ನು ರಕ್ಷಿಸುವಂತೆ ಭಾರತವನ್ನು ಕೋರಿದರು. ಕಾಶ್ಮೀರವನ್ನು ಭಾರತಕ್ಕೆ ಸಂಪೂರ್ಣವಾಗಿ ಒಪ್ಪಿಸಿದರೆ ನೆರವು ನೀಡುವುದಾಗಿ ಆಗ ಭಾರತ ಸರಕಾರ ಹೇಳಿತ್ತು. ಇದಕ್ಕೆ ಹರಿಸಿಂಗ್ ಸುತರಾಂ ಒಪ್ಪಲಿಲ್ಲ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ಅಂದಿನ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರು ಒಂದು ಒಪ್ಪಂದಕ್ಕೆ ಬಂದರು. “ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನವಾಗಬೇಕು, ಭಾರತದ ಸಂವಿಧಾನದ 370ನೇ ವಿಧಿ ಪ್ರಕಾರ ರಕ್ಷಣೆ, ವಿದೇಶಾಂಗ ಮತ್ತು ಸಂವಹನ ಕ್ಷೇತ್ರಗಳ ಹೊರತಾಗಿ ಇನ್ಯಾವುದೇ ವಿಷಯದಲ್ಲಿ ಭಾರತದ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.” ಎಂದರು. ಆ ಕರಾರಿಗೆ ಸಹಿ ಬಿದ್ದಾಗಿನಿಂದ ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿ ಅನ್ವಯವಾಗಿದೆ.
ಸಂವಿಧಾನದ 238ನೇ ವಿಧಿ ಬೇರೆಲ್ಲಾ ರಾಜ್ಯಗಳಿಗೆ ಅನ್ವಯವಾದರೂ ಜಮ್ಮು-ಕಾಶ್ಮೀರಕ್ಕಲ್ಲ. ಆ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಸಂಸತ್‌ಗಿಲ್ಲ. ಒಂದು ವೇಳೆ ಸಂಸತ್ ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸಲೇಬೇಕೆಂದಿದ್ದರೆ ಅದನ್ನು ರಾಷ್ಟ್ರಪತಿ ಮೂಲಕ ರಾಜ್ಯ ಸರಕಾರಕ್ಕೆ ಮುಟ್ಟಿಸಿ ಆ ರಾಜ್ಯದ ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು. ಜತೆಗೆ ಕೆಲ ಕಾನೂನುಗಳನ್ನು ಅಲ್ಲಿನ ಸರಕಾರದ ಅನುಮತಿ ಪಡೆದು ಸಂಸತ್‌ನಲ್ಲಿ ಮಂಡನೆ ಮಾಡಬಹುದು. ಅಂದರೆ, ಭಾರತದ ಸಂವಿಧಾನವೇ ಒಂದಾದರೆ ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನ. ಅದರ ತಿದ್ದುಪಡಿಯಾಗುವುದೂ ಆ ರಾಜ್ಯದ ವಿಧಾನಸಭೆಯಲ್ಲಿ. ಅಲ್ಲಿ ಕೈಗೊಳ್ಳಲಾಗವ ನಿರ್ಧಾರಗಳನ್ನು ಆ ರಾಜ್ಯ ಸರಕಾರದ ಅನುಮತಿ ಪಡೆದು ರಾಷ್ಟ್ರಪತಿ ಸಹಿ ಹಾಕಬೇಕಾಗುತ್ತದೆ. ಈ ರೀತಿ ಪ್ರತ್ಯೇಕ ಸಂವಿಧಾನ ಹೊಂದಿರುವ ಏಕೈಕ ರಾಜ್ಯ ಜಮ್ಮು-ಕಾಶ್ಮೀರವಾಗಿತ್ತು. 1957ರ ಜನವರಿ 26ರಂದು ಅಲ್ಲಿನ ವಿಧಾನಸಭೆ ಪ್ರತ್ಯೇಕ ಸಂವಿಧಾನವನ್ನು ಅಂಗೀಕರಿಸಿತು.
ತುರ್ತು ಪರಿಸ್ಥಿತಿಯೂ ಅನ್ವಯಿಸದು
ಸಂವಿಧಾನದ ವಿಧಿ 360ರ ಪ್ರಕಾರ ಕೇಂದ್ರ ಸರಕಾರ ದೇಶಾದ್ಯಂತ ಆರ್ಥಿಕ ತುರ್ತುಸ್ಥಿತಿ ಘೋಷಿಸುವ ವಿಶೇಷ ಅಧಿಕಾರ ಹೊಂದಿರುತ್ತದೆ. ಆದರೆ, ಆರ್ಥಿಕ ತುರ್ತುಸ್ಥಿತಿಯನ್ನು ಈ ರಾಜ್ಯದಲ್ಲಿ ಘೋಷಿಸುವಂತಿಲ್ಲ. ಹೊರ ದೇಶಗಳು ಅತಿಕ್ರಮಣ ನಡೆಸಿದಾಗ ಇಲ್ಲವೇ ಯುದ್ಧದ ಸಮಯದಲ್ಲಿ ಮಾತ್ರ ತುರ್ತುಸ್ಥಿತಿ ಘೋಷಿಸಬಹುದು. ದೇಶದಲ್ಲಿ ಆಂತರಿಕ ಸಮಸ್ಯೆಗಳು ತಲೆದೋರಿದ ಸಮಯದಲ್ಲಿ ಜಮ್ಮು-ಕಾಶ್ಮೀರ ತುರ್ತುಸ್ಥಿತಿಯಂಥ ಸನ್ನಿವೇಶದಿಂದ ಮುಕ್ತವಾಗಿರುತ್ತದೆ. ಹಾಗೊಂದು ವೇಳೆ ಈ ರಾಜ್ಯದಲ್ಲಿ ತುರ್ತುಸ್ಥಿತಿ ಘೋಷಣೆ ಆಗಲೇಬೇಕೆಂದರೆ ಅದಕ್ಕೆ ಅಲ್ಲಿನ ರಾಜ್ಯ ಸರಕಾರದ ಅನುಮತಿ ಬೇಕು. ರಾಷ್ಟ್ರಪತಿಯಾದವರು ಆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಅಲ್ಲಿನ ಸರಕಾರಕ್ಕೆ ಕೋರಿಕೆ ಸಲ್ಲಿಸಬೇಕು.
ಇಷ್ಟೇ ಅಲ್ಲ, ಇನ್ನೂ ಇತ್ತು..
ಬೇರೆ ರಾಜ್ಯದಿಂದ ಬಂದವರು ಈ ರಾಜ್ಯದಲ್ಲಿ ಆಸ್ತಿ ಖರೀದಿಸುವಂತಿಲ್ಲ. ಆದರೆ, ಈ ರಾಜ್ಯದವರು ಭಾರತದ ಬೇರೆ ರಾಜ್ಯಗಳಲ್ಲಿ ಆಸ್ತಿ ಖರೀದಿಸಬಹುದು. ಸ್ವಾತಂತ್ರ್ಯ ಬಂದಾಗಿನಿಂದ ಶಿಕ್ಷಣದ ಹಕ್ಕನ್ನು ಬಿಟ್ಟರೆ ಇನ್ಯಾವ ಹಕ್ಕೂ ಈ ರಾಜ್ಯದಲ್ಲಿ ಜಾರಿಯಾಗಿಲ್ಲ. ಮತ್ತೊಂದು ವಿಚಾರವೆಂದರೆ ಈ ರಾಜ್ಯದ ನಾಗರಿಕನಾದವನು ತೆರಿಗೆ ಕಟ್ಟಬೇಕಾಗಿಲ್ಲ. ದೇಶದ ಎಲ್ಲಾ ಹೈಕೋರ್ಟುಗಳು ಸಂವಿಧಾನದ ವಿಧಿ 226ರ ಪ್ರಕಾರ ಕಾನೂನು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿವೆ. ಆದರೆ, ಜಮ್ಮು-ಕಾಶ್ಮೀರ ಹೈಕೋರ್ಟ್ ಮಾತ್ರ ಇದರಿಂದ ಮುಕ್ತ. ಯಾವ ಕಾನೂನುಗಳನ್ನೂ ಅಸಾಂವಿಧಾನಿಕ ಎಂದು ಘೋಷಿಸುವ ಹಕ್ಕೇ ಇಲ್ಲಿನ ಕೋರ್ಟ್‌ಗೆ ಇರಲಿಲ್ಲ. ಈ ರಾಜ್ಯದ ಶಾಶ್ವತ ನಾಗರಿಕರು ಮಾತ್ರ ರಾಜ್ಯ ಸರಕಾರದ ಸೇವೆಗಳಿಗೆ ಅರ್ಹರು. ಶಾಶ್ವತ ನಾಗರಿಕರಿಗೆ ಮಾತ್ರ ಆಸ್ತಿ ಖರೀದಿಸುವ ಹಕ್ಕಿತ್ತು. ವಿದ್ಯಾರ್ಥಿ ವೇತನ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಈ ಎಲ್ಲ ವಿಚಾರದಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ನಿರ್ಣಯವೇ ಅಂತಿಮ. ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರಬೇಕೆಂದರೂ, ರಾಷ್ಟ್ರಪತಿ ಅವರು ಜಮ್ಮು-ಕಾಶ್ಮೀರದ ಗವರ್ನರ್ ಅನುಮತಿ ಪಡೆಯಲೇಬೇಕಿತ್ತು.
ಕಾಶ್ಮೀರ ವಿಶ್ವವಿದ್ಯಾಲಯದ ಸುಂದರ ನೋಟ
ವಿಶೇಷ ಸ್ಥಾನಮಾನ ರದ್ದಾದ ನಂತರದ ಸ್ಥಿತಿ
ಕಳೆದ ದಶಕಗಳಿಂದಲೂ ಭಯೋತ್ಪಾದಕ ದಾಳಿಯಿಂದ ನಲುಗುತ್ತಿದ್ದ ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗಳು ಕಡಿಮೆಯಾಗಿವೆ. ಕೇಂದ್ರ ಸರಕಾರವೇ ಸಂಸತ್ತಿನಲ್ಲಿ ನೀಡಿದ ಮಾಹಿತಿಯಂತೆ 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ.52 ಮತ್ತು ಈ ವರ್ಷ ಇದುವರೆಗೆ ಶೇ.32ರಷ್ಟು ಭಯೋತ್ಪಾದನಾ ಚಟುವಟಿಕೆ ಕಡಿಮೆಯಾಗಿದೆ.
ವಾಣಿಜ್ಯ ವಹಿವಾಟು, ಸಾರ್ವಜನಿಕ ಸಾರಿಗೆ, ಸರಕಾರಿ ಕಚೇರಿ, ಶಿಕ್ಷಣ, ಆರೋಗ್ಯ ಸಂಸ್ಥೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 10 ಸ್ಥಳೀಯರು ಮತ್ತು 34 ವಿದೇಶಿ ಭಯೋತ್ಪಾದಕರು ಸೇರಿದಂತೆ ಜೆಇಎಂ ಸಂಘಟನೆಯ 44 ಸದಸ್ಯರಿದ್ದಾರೆ. ಇಬ್ಬರು ವಿದೇಶಿಯರು ಮತ್ತು ಐವರು ಸ್ಥಳೀಯರು ಸೇರಿದಂತೆ ಏಳು ಜೆಇಎಂ ಭಯೋತ್ಪಾದಕರನ್ನು ಕೊಂದಿದ್ದೇವೆ. ಸಂಘಟನೆಯ ಮೊದಲ ಮತ್ತು ಎರಡನೇ ಶ್ರೇಣಿಯ ಉಗ್ರರನ್ನು ಇತ್ತೀಚೆಗೆ ಹತ್ಯೆ ಮಾಡಿದ್ದೇವೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
2017-2019ರ ಅವಧಿಗೆ ಹೋಲಿಸಿದರೆ ಕಳೆದ ಎರಡು ವರ್ಷಗಳಲ್ಲಿ ನಾಗರಿಕರ ಹತ್ಯೆಗಳು ಕಡಿಮೆಯಾಗಿವೆ ಎಂದು ಅಧಿಕೃತ ಅಂಕಿ ಅಂಶಗಳೇ ಹೇಳುತ್ತವೆ. ಈ ಅವಧಿಯಲ್ಲಿ 135 ನಾಗರಿಕರು ಭಯೋತ್ಪಾದನೆ ಸಂಬಂಧಿತ ವಿಧ್ವಂಸಕ ಕೃತ್ಯಗಳಲ್ಲಿ ಜೀವ ಕಳೆದುಕೊಂಡಿದ್ದರು. ಆದರೆ, 2019ರ ಆಗಸ್ಟ್‌ನಿಂದ 2021ರ ಜುಲೈವರೆಗೆ 72 ಹತ್ಯೆಗಳು ವರದಿಯಾಗಿವೆ. ಹಿಮ ಕರಗಿದ ಹೊರತಾಗಿಯೂ, ಈ ವರ್ಷ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಒಳನುಸುಳುವಿಕೆ ಪ್ರಯತ್ನ ವರದಿಯಾಗಿಲ್ಲ. ಕಳೆದ ವರ್ಷವೂ ಒಳನುಸುಳುವಿಕೆ ಪ್ರಯತ್ನಗಳಲ್ಲಿ ಇಳಿಕೆಯಾಗಿದೆ.
ಸಂವಿಧಾನ ಹಾಗೂ ಕೇಂದ್ರದ ಎಲ್ಲ 890 ಕಾನೂನುಗಳು ಪೂರ್ಣವಾಗಿ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗಿವೆ. ಅಟಲ್ ಪಿಂಚಣಿ ಯೋಜನೆಯಂಥ ವಿಮಾ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಎಷ್ಟೋ ದಶಕಗಳ ಹಿಂದೆ ಜಮ್ಮು-ಕಾಶ್ಮೀರಕ್ಕೆ ಬಂದು ಇಲ್ಲಿಯ ಪ್ರಜೆಗಳಾಗಿದ್ದರೂ ಪೂರ್ಣ ಪೌರತ್ವ ಸಿಗದೆ ಮತದಾನದ ಹಕ್ಕು ಕಳೆದುಕೊಂಡಿದ್ದ ಜನರಿಗೆ ಸಾಂತ್ವನ ತಂದಿರುವುದು ವಾಸ್ತವ್ಯ ಪ್ರಮಾಣಪತ್ರ ಯೋಜನೆ. ಜಮ್ಮು-ಕಾಶ್ಮೀರದಲ್ಲಿ 15 ವರ್ಷಗಳಿಂದ ನೆಲೆಸಿರುವವರಿಗೆ ಅಥವಾ 7 ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿರುವ ಅಥವಾ 10ನೇ ತರಗತಿ ಅಥವಾ ಪಿಯುಸಿ ಪರೀಕ್ಷೆ ಬರೆದಿರುವವರಿಗೆ ಇಲ್ಲಿನ ವಾಸ್ತವ್ಯ ಪ್ರಮಾಣ ಪತ್ರ (ಡೊಮಿಸೈಲ್) ಸಿಗಲಿದೆ.
ಸುಂದರ ದಾಲ್ ಸರೋವರ
ಈಗ ಮಹಿಳೆಯರೂ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಕಾಶ್ಮೀರದ ಹೊರಗಿನ ಪುರುಷನನ್ನು ಮದುವೆಯಾದರೂ ತಮ್ಮ ಭೂಮಿಯನ್ನು ಮಕ್ಕಳಿಗೆ ವರ್ಗಾಯಿಸಬಹುದು.
ಕಾಶ್ಮೀರ ಕಣಿವೆಯಲ್ಲಿ ಕೋವಿಡ್ʼನಿಂದಾಗಿ ವ್ಯಾಪಾರ ವಹಿವಾಟು ಕಡಿಮೆಯಾಗಿದ್ದರೂ ಸಹ ಅಭಿವೃದ್ಧಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಸರಕಾರ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿ, ಸಾಮರ್ಥ್ಯ ವರ್ಧನೆ ಮೂಲಕ ಕಾಶ್ಮೀರಿಗಳ ಅವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ. ಪ್ರಧಾನಿಯವರ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಸುಮಾರು 80 ಸಾವಿರ ಕೋಟಿ ರೂ. ಮೊತ್ತದಲ್ಲಿ ಐಐಟಿ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಐಐಎಂ ಸ್ಥಾಪಿಸುವ ಮೂಲಕ ಈ ಭಾಗದ ಯುವಕರಿಗೆ ಅವಕಾಶಗಳು ದೊರೆಯುತ್ತಿವೆ. ಐದು ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ಸಿಕ್ಕಿದೆ. 40 ವರ್ಷಗಳಿಂದ ನನೆಗುದಿಯಲ್ಲಿದ್ದ ಶಹಪುರ ಕಂಡಿ ಅಣೆಕಟ್ಟೆಯಂತಹ ಯೋಜನೆಗೆ ವೇಗ ನೀಡಿ ವಿದ್ಯುತ್ ಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸಗಳಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಜಾಗತಿಕ ಹೂಡಿಕೆದಾರರ ಶೃಂಗಸಭೆ-2020ಕ್ಕೆ ಭರದ ಸಿದ್ಧತೆಗಳು ನಡೆದಿತ್ತು. ಅಲ್ಲಿಗೆ ಬರುವ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಜಮ್ಮು ಮತ್ತು ಕಾಶ್ಮೀರದ ಆಂತರಿಕ ಸಾಮರ್ಥ್ಯ, ಅಭಿವೃದ್ಧಿ ಮತ್ತು ಉದ್ಯೋಗದ ಆಕಾಂಕ್ಷೆಗಳನ್ನು ಹೆಚ್ಚಿಸಲು ಆಯೋಜಿಸಿತ್ತು. ಅದರೆ ಕೋವೀಡ್ʼನಿಂದ ಶೃಂಗಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತು.
ದಶಕದ ಹಿಂದೆ ಕಾಶ್ಮೀರ ಬಿಟ್ಟು ಹೋಗಿದ್ದಂತಹ ಲಕ್ಷಾಂತರ ಕಾಶ್ಮೀರಿ ಪಂಡಿತರಲ್ಲಿ ಸಮಾರು 841 ಜನರು ತಮ್ಮ ಮೂಲ ನೆಲೆಗೆ ಹಿಂದಿರುಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆಗೆ ಆಯ್ಕೆ ಆಗಿದ್ದಾರೆ. ಭಾರತ ದೇಶದ ಮುಕುಟ ಮಣಿಯಾದ ಕಾಶ್ಮೀರವು ನಿಧಾನವಾಗಿ ಶಾಂತಿ, ಅಭಿವೃದ್ಧಿಯತ್ತ ಮುಖ ಮಾಡುತ್ತಿದೆ,
ಸಂಪೂರ್ಣವಾಗಿ ಬದಲಾವಣೆ ಆಗಬೇಕಾದರೆ ಕೇವಲ ಕೇಂದ್ರ ಸರಕಾರ, ಸ್ಥಳೀಯ ಆಡಳಿತದಿಂದ ಮಾತ್ರ ಸಾಧ್ಯವಿಲ್ಲ. ಅಲ್ಲಿ ನೆಲೆಸಿರುವ ಕಾಶ್ಮೀರಿಗಳಲ್ಲದೇ ಹಿಂದೂ, ಸಿಖ್, ಬೌದ್ಧ ಮುಂತಾದ ಧರ್ಮದ ಜನರಲ್ಲಿನ ಭಯ-ಆತಂಕ ದೂರಗೊಳಿಸಿ ಅವರಲ್ಲಿ ವಿಶ್ವಾಸ ಮೂಡಿಸಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ವಿರೋಧ ಪಕ್ಷಗಳು, ದೇಶದ ಜನರು ಹೇಳಬೇಕಾಗಿದೆ. ಹಾಗೆ ಆದಾಗ ಮಾತ್ರ ಕಾಶ್ಮೀರದ ಅಭಿವೃದ್ಧಿ ಸಾಧ್ಯ.
ಡಾ.ಗುರುಪ್ರಸಾದ ಹವಲ್ದಾರ್
Very good informative article