ಜಾವೆಲಿನ್ ಥ್ರೋನಲ್ಲಿ ಸ್ವರ್ಣ ಪದಕ ಗೆದ್ದ ನೀರಜ್ ಚೋಪ್ರಾ
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಶನಿವಾರದಂದು ಸುವರ್ಣ ಇತಿಹಾಸ ಬರೆಯಿತು.
ಜಾವಲಿನ್ ಪಟು ಹಾಗೂ ನಮ್ಮ ಹೆಮ್ಮೆಯ ಸೇನೆಯಲ್ಲಿ ಸುಬೇದಾರ್ ಆಗಿರುವ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದಿದ್ದು, ಜಾವಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ 85.30 ಮೀಟರ್ ಎಸೆದು ಬಂಗಾರದ ಪದಕ ಗೆದ್ದುಕೊಂಡು ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದರು.
ಭಾರತದ ಮಟ್ಟಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಸ್ವಾತಂತ್ರ್ಯ ಬಂದ ನಂತರ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೀಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದು ಕೊಟ್ಟ ಹಿರಿಮೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.
ಚೋಪ್ರಾ ಗೆಲುವಿನ ಹಾದಿ ರೋಚಕವಾಗಿತ್ತು. ಮೊದಲ ಪ್ರಯತ್ನದಲ್ಲಿ ಅವರು 87.03 ಮೀಟರ್ ದೂರ ಎಸೆದು ಪ್ರಥಮ ಸುತ್ತಿನಲ್ಲೇ ಮೊದಲಿಗರಾಗಿ ಹೊರಹೊಮ್ಮಿದರಲ್ಲದೆ, ಜರ್ಮನಿಯ ಜೂಲಿಯನ್ ವೇಬರ್ ಅವರು 85.30 ಮೀಟರ್ ದೂರ ಎಸೆಯುವ ಮೂಲಕ ದ್ವಿತೀಯ ಸ್ಥಾನಕ್ಕಷ ಬಂದು ನಿಂತರು.
ವಿಶೇಷವೆಂದರೆ, ಪ್ರಥಮ ಸುತ್ತಿನಲ್ಲಿ ಯಾವ ಜಾವಲಿನ್ ಪಟು ಕೂಡ 85 ಮೀಟರ್‌ಗಿಂತ ಹೆಚ್ಚು ದೂರ ಜಾವಲಿನ್ ಎಸೆಯಲು ಸಾಧ್ಯವಾಗಲಿಲ್ಲ. ಅಲ್ಲಿಯೇ ನೀರಜ್ ತಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಂಡಿದ್ದರು.
ಎರಡನೇ ಪ್ರಯತ್ನದಲ್ಲೂ ನೀರಜ್ ಮತ್ತಷ್ಟು ಬಲವಾಗಿ ಜಾವೆಲಿನ್ ಥ್ರೋ ಮಾಡಿದರು. ಈ ಪ್ರಯತ್ನದಲ್ಲಿ ಅವರು 87.58 ಮೀಟರ್ ದೂರ ಜಾವಲಿನ್ ಎಸೆದರು. ಉಳಿದಂತೆ ಈ ಪ್ರಯತ್ನದಲ್ಲಿ ವೇಬರ್ 77.90 ಮೀಟರ್ ದೂರವಷ್ಟೇ ಎಸೆದು ಹಿಂದೆ ಬಿದ್ದರು.
ಮೂರನೇ ಪ್ರಯತ್ನಕ್ಕೆ ಬರುವಷ್ಟರಲ್ಲಿ ನೀರಜ್ ಕೊಂಚ ಧಣಿದಂತೆ ಕಂಡುಬಂದರೂ ಈ ಪ್ರಯತ್ನದಲ್ಲಿ ಅವರು 76.79 ಮೀಟರ್ ದೂರವಷ್ಟೇ ಎಸೆಯಲು ಶಕ್ತರಾದರು. ಇದು ಹೀಗಿದ್ದರೆ, ಜರ್ಮನಿಯ ಜಾವೆಲಿನ್ ಪಟು ವೆಬರ್‌ರನ್ನು ಹಿಂದಿಕ್ಕಿದ ಜೆಕ್ ರಿಪಬ್ಲಿಕ್‌ನ ವಿಜೆಲ್ವ್ ವೆಸ್ಲೇ 85.44 ಮೀಟರ್ ದೂರ ಎಸೆಯುವ ಮೂಲಕ ಅಚ್ಚರಿಯ ರೀತಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
ನಾಲ್ಕನೇ ಪ್ರಯತ್ನಕ್ಕೆ ಬರುವಷ್ಟರಲ್ಲಿ ಇನ್ನಷ್ಟು ಹಿಂದೆ ಬಿದ್ದಂತೆ ಕಂಡ ನೀರಜ್ ಗೆರೆ ದಾಟಿಬಿಟ್ಟು ಪೌಲ್ ಮಾಡಿಕೊಂಡರಲ್ಲೆ, ಅಂತಿಮ ಸುತ್ತಿನಲ್ಲಿ 80 ಮೀಟರ್ ಮೀರಲು ಅವರಿಗೆ ಆಗಲಿಲ್ಲ.
ಗಮನಾರ್ಹ ಅಂಶವೆಂದರೆ, ಜಾವೆಲಿನ್ ಥ್ರೋ ವಿಭಾಗದಲ್ಲಿ ಜಗತ್ತಿನ ನಂ.1 ಸ್ಥಾನದಲ್ಲಿದ್ದ ಜೊಹಾನಸ್ ವೆಟ್ಟರ್ ಅವರು ಫೈನಲ್ 8ರ ಪಟ್ಟಿಗೇ ಬರಲು ಶಾಧ್ಯವಾಗಲೇ ಇಲ್ಲ.
ವೈಯಕ್ತಿಕ 96.29 ಮೀಟರ್ ದೂರ ಎಸೆದು ದಾಖಲೆ ಮಾಡಿದ್ದ ಅವರು, ನೀರಸ ಪ್ರದರ್ಶನ ತೋರಿದರು.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ವಿಭಾಗದಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಮಹೋನ್ನತ ಸಾಧನೆಯನ್ನು ನೀರಜ್ ಮಾಡಿದ್ದಾರೆ.
ನಮ್ಮ ಸೈನಿಕ, ನಮ್ಮ ಹೆಮ್ಮೆ
ನೀರಜ್ ಚೋಪ್ರಾ ಜನಿಸಿದ್ದು ಡಿಸೆಂಬರ್ 24, 1997ರಂದು. ಹರಿಯಾಣ ಪಾಣಿಪತ್ ನಗರದ ಖಂದ್ರಾ ಎಂಬ ಹಳ್ಳಿ ಇವರ ಜನ್ಮಸ್ಥಳ. ಶಿಕ್ಷಣ ಪಡೆದಿದ್ದು ಚಂಡೀಗಡದ ಡಿಎವಿ ಕಾಲೇಜಿನಲ್ಲಿ. ಬಳಿಕ ಭಾರತೀಯ ಸೇನೆಯ ಕಿರಿಯ ನಿಯೋಜಿತ ಅಧಿಕಾರಿ (ಜೂನಿಯರ್ ಕಮೀಷನ್ಡ್ ಆಫೀಸರ್) ಆಗಿ ಸೇನೆಗೆ ಸೇರಿದ ಅವರು, ಈಗ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು, ನೀರಜ್ ಚೋಪ್ರಾ ಅವರು 2016ರ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ 82.23 ಮೀ. ಜಾವೆಲಿನ್ ಎಸೆದು ಚಿನ್ನದ ಪದಕ ಪಡೆಯುವುದರೊಂದಿಗೆ ಭಾರತದ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿಸಿದ್ದರು. ಜತೆಗೆ; ಪೋಲೆಂಡ್ ದೇಶದಲ್ಲಿ ನಡೆದ 2016ರ ಐಎಎಎಫ್ ಕಿರಿಯರ ವಿಶ್ವ ಕ್ರೀಡಾಕೂಟ ಚಾಂಪಿಯನ್ ಶಿಪ್ʼನಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು. ಅವರು ವಿಶ್ವ ಜೂನಿಯರ್ ದಾಖಲೆಯನ್ನು ಕೂಡ ಮಾಡಿದ್ದರು.
2017ರ ಏಷ್ಯನ್ ಅಥ್ಲೇಟಿಕ್ ಚಾಂಪಿಯನ್ ಶಿಪ್‌ನಲ್ಲಿ ನೀರಜ್ ಅವರು 85.23 ಮೀ. ಜಾವೆಲಿನ್ ಎಸೆದು ಸ್ವರ್ಣ ಪದಕ ಪಡೆದಿದ್ದರು. 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 86.47 ಮೀ. ಜಾವೆಲಿನ್ ಎಸೆದು ಹೊಸ ದಾಖ ಸ್ಥಾಪಿಸಿದ್ದರು. ಇದರೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದ ಮೊದಲಿಗರಾಗಿ ಜಾವೆಲಿನ್ ಎಸೆತ ವಿಭಾಗದಲ್ಲಿ ಗುರುತಿಸಿಕೊಂಡರು.
2018ರ ಮೇ ತಿಂಗಳಲ್ಲಿ ನಡೆದ ದೋಹ ಡೈಮಂಡ್ ಲೀಗ್ ಪಂದ್ಯದಲ್ಲಿ ಭಾಗವಹಿಸಿ 87.43 ಮೀ. ಜಾವೆಲಿನ್ ಎಸೆಯುವುದರೊಂದಿಗೆ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಪ್ರಸ್ತುತ ಇವರು ಉವ್ ಹೋನ್ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. 2018ರ ಅಗಸ್ಟ್ 27ರಂದು ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ 88.06 ಮೀ. ಜಾವೆಲಿನ್ ಎಸೆತದೊಂದಿಗೆ ಪುರುಷರ ಜಾವೆಲಿನ್ ಎಸೆತ ವಿಭಾಗದಲ್ಲಿ ಸ್ವರ್ಣ ಪದಕ ಗೆಲ್ಲುವುದರೊಂದಿಗೆ ಅವರ ವೈಯಕ್ತಿಕ ಉತ್ತಮ ದಾಖಲೆಯನ್ನೂ ಮಾಡಿದ್ದರು.
ಫಿನ್‌ಲ್ಯಾಂಡ್ ಲ್ಯಾಪಿನ್ಲಾಟಿಯಲ್ಲಿ ನಡೆದ “ಸಾವೋ ಗೇಮ್ಸ್’ನಲ್ಲಿ ನೀರಜ್ ಸ್ವರ್ಣ ಪದಕ ಪಡೆದರು. ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಅತ್ಯುತ್ತಮ ಎಸೆತದಲ್ಲಿ ಮೇಲುಗೈ ಸಾಧಿಸಿ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನ ಗೆದ್ದರು.
ಸ್ವರ್ಣ ಪದಕ
2018ರ ಏಷ್ಯನ್ ಕ್ರೀಡಾಕೂಟ: ಇಂಡೋನೇಷ್ಯಾದ ಜಕಾರ್ತ
2018ರ ಕಾಮನ್ ವೆಲ್ತ್ ಕ್ರೀಡಾಕೂಟ: ಗೋಲ್ಡ್ ಕೋಸ್ಟ್
2017ರ ಏಷ್ಯನ್ ಚಾಂಪಿಯನ್ ಶಿಪ್ಸ್: ಭುವನೇಶ್ವರ
2016ರ ಸೌತ್ ಏಷ್ಯನ್ ಕ್ರೀಡಾಕೂಟ ಗುವಾಹಾಟಿ/ಶಿಲ್ಲಾಂಗ್:
2016ರ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ಸ್ ಬೈಡ್ಗೊಸ್ಜ್
2020 ಒಲಿಂಪಿಕ್ಸ್ ಕ್ರೀಡಾಕೂಟ: ಟೋಕಿಯೋ
- ಮಾಹಿತಿ ಕೃಪೆ: ವಿಕಿಪೀಡಿಯಾ