ಮೈಸೂರು: “ಅಣ್ಣ… ಖಾತೆ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲದ್ದು ನಿನಗೆ ಗೊತ್ತಿದೆಯಾ?”
ಖಾತೆ ಹಂಚಿಕೆ ಖ್ಯಾತೆ ಬಗ್ಗೆ ಇಲ್ಲಿನ ವರದಿಗಾರನೊಬ್ಬ ಪದೇಪದೆ ಪ್ರಶ್ನೆ ಮಾಡಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟ ಟಾಂಗ್ ಇದು.
ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟ ಬೊಮ್ಮಾಯಿ, “ಒಂದ್ನಿಮಿಷ ಅಣ್ಣಾ, ಒಂದ್ನಿಮಿಷ.. ನನಗೆ ಗೊತ್ತಿಲ್ಲದ್ದು ನಿನಗೆ ಗೊತ್ತಿದೆಯಾ? ಎಂದರು. ಮೀಡಿಯಾವನ್ನು ಬಹಳ ಚಾಕಚಕ್ಯತೆಯಿಂದ ಹ್ಯಾಂಡಲ್ ಮಾಡುವ ಬೊಮ್ಮಾಯಿ ಅವರ ಮಾತಿಗೆ ಅಕ್ಕಪಕ್ಕದಲ್ಲಿದ್ದ ಸಚಿವರೂ ನಕ್ಕರು.
ಮುಂದುವರಿದು ಈ ಬಗ್ಗೆ ಸಿಎಂ ಅವರು ಹೇಳಿದ್ದಿಷ್ಟು;
ಆನಂದ ಸಿಂಗ್ ಅವರು ನಿನ್ನೆ ಭೇಟಿಯಾಗಿದ್ದರು. ಅವರ ಜತೆ ಮಾತುಕತೆ ನಡೆಸಿದದ್ದೇನೆ. ಅವರಿಗೆ ಹಲವಾರು ವಿಚಾರಗಳನ್ನು ಹೇಳಿದ್ದೇನೆ. ಅವರು ಸಮಾಧಾನ ಆಗಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಮತ್ತೆ ಕರೆದು ಮಾತನಾಡುತ್ತೇನೆ. ಯಾವುದೇ ರೀತಿಯ ಗೊಂದಲ ಇಲ್ಲ.
ಇನ್ನು ರಾಮದಾಸ್ ಅವರ ಬಗ್ಗೆ ಹೇಳುವುದಾದರೆ, ಅವರು ನನ್ನ ಆತ್ಮೀಯ ಸ್ನೇಹಿತರು. ಸಂಪುಟ ರಚನೆ ಪ್ರಕ್ರಿಯೆ ನಡೆದಿದ್ದಾಗಲೂ ನಾನು ಅವರ ಸಂಪರ್ಕದಲ್ಲಿದ್ದೆ. ಅವರ ಜತೆ ಮಾತನಾಡುತ್ತೇನೆ. ಅವರಿಗೂ ಹಲಾವರು ವಿಷಯಗಳು ಗೊತ್ತಿವೆ. ಯಾವ ರೀತಿ ಈ ಸರಕಾರ ಬಂದಿದೆ, ಹೇಗೆಲ್ಲ ಸಂಪುಟ ರಚನೆ ಆಗಿದೆ ಎನ್ನುವ ಮಾಹಿತಿ ಅವರಿಗೂ ಇದೆ. ವಿಶೇಷವಾದ ಸಂದರ್ಭದಲ್ಲಿ ಸರಕಾರ ಬಂದಿದೆ. ಅವರು ಹಿರಿಯ ರಾಜಕಾರಣಿ, ಹಳಬರು, ಪಕ್ಷದಲ್ಲಿ ನನಗಿಂತ ಮೊದಲಿನಿಂದ ಇದ್ದು ಕೆಲಸ ಮಾಡಿದ್ದಾರೆ. ಅವರ ನಾನೇ ಖುದ್ದು ಮಾತನಾಡುತ್ತೇನೆ.