ಮೈಸೂರು: ಮೇಕೆದಾಟು ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಛಾರ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈಗಾಗಲೇ ಸಮಗ್ರ ಯೋಜನಾ ವರದಿ (DPR) ತಯಾರಿಸಿ ಕೇಂದ್ರಿಯ ಜಲ ಆಯೋಗಕ್ಕೆ (CWC)ಗೆ ಸಲ್ಲಿಸಿದ್ದೇವೆ. ಅವರು ಒಪ್ಪಿಗೆ ಸಿಕ್ಕ ನಂತರ ಕಾಮಗಾರಿ ಆರಂಭ ಮಾಡುತ್ತೇವೆ ಎಂದರು.
ಮೈಸೂರಿನಲ್ಲಿಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೇಕೆದಾಟು ಸಂಬಂಧಪಟ್ಟು ನಾನು ಮತ್ತೊಮ್ಮೆ ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಜಲಶಕ್ತಿ ಖಾತೆ ಸಚಿವಾರದ ಗಜೇಂದ್ರ ಶೆಖಾವತ್ ಅವರನ್ನು ಭೇಟಿಯಾಗಿ ಈ ಬಗ್ಗೆ ವಿವರವಾಗಿ ಚರ್ಚೆ ನಡೆಸಲಿದ್ದೇನೆ. ನೀರಿನ ಹಂಚಿಕೆಯ ಬಗ್ಗೆ ಸುಪ್ರೋ ಕೋರ್ಟ್ ನೀಡಿರುವ ಆದೇಶಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದೇನೆ ಎಂದರು.
ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಅಲ್ಲದೆ, ನಮ್ಮ ರಾಜ್ಯದ ವಕೀಲರ ತಂಡದ ಜತೆ ನಾನೂ ಮತ್ತು ನಮ್ಮ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಸೇರಿ ಮಾತುಕತೆ ನಡೆಸಲಿದ್ದೇವೆ. ಕಾವೇರಿ ಕೊಳ್ಳದಲ್ಲಿ ನಮ್ಮ ಹಕ್ಕಿನ ನೀರನ್ನು ಹೇಗೆ ಬಳಸಿಕೊಳ್ಳಬೇಕು, ಅದಕ್ಕೆ ಅಗತ್ಯವಾದ ಯಾವೆಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.
ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ತಮಿಳುನಾಡು ರಾಜಕೀಯ ಮಾಡಿಕೊಂಡೇ ಬರುತ್ತಿದೆ. ಕಾವೇರಿ ಹೆಸರು ಹೇಳಿಕೊಂಡೇ ಕೆಲ ಪಕ್ಷಗಳು ಅಧಿಕಾರವನ್ನೂ ಹಿಡಿದ್ದವು ಎನ್ನುವುದು ಎಲ್ಲರಿಗೂ ಗೊತ್ತು. ಮೇಕೆದಾಟು ವಿಚಾರದಲ್ಲೂ ಇದೇ ಆಗುತ್ತಿರುವುದು ದುರದೃಷ್ಟಕರ. ಇದೆಲ್ಲಕ್ಕೂ ಸರಕಾರ ಸೊಪ್ಪು ಹಾಕುವುದಿಲ್ಲ ಎಂದು ಅವರು ಹೇಳಿದರು.