ಕ್ವಿಟ್ ಇಂಡಿಯಾ ನೆನಪಲ್ಲಿ ಬಾಗೇಪಲ್ಲಿಯಲ್ಲಿ ಮೊಳಗಿದ ಹೊಸ ಘೋಷಣೆ
by Ra Na Gopala Reddy Bagepalli
ಬಾಗೇಪಲ್ಲಿ: ಬ್ರಿಟೀಷರಂತೆ ದೇಶದ ಕಾರ್ಪೊರೇಟ್ ಕಂಪನಿಗಳು ದೇಶದ ಸಂಪತ್ತು ಲೂಟಿ ಮಾಡುತ್ತಿವೆ. 1942ರಲ್ಲಿ ನಡೆದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿ ಮಾದರಿಯಲ್ಲಿ “ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ” ಎಂಬ ಚಳವಳಿ ಆರಂಭಿಸಬೇಕಿದೆ ಎಂದು ಎಡಪಂಥೀಯ ಪ್ರಗತಿಪರ ಚಿಂತಕ ಡಾ.ಅನಿಲ್ ಕುಮಾರ್ ಅವುಲಪ್ಪ ಹೇಳಿದರು.
ಅವರು ಬಾಗೇಪಲ್ಲಿ ಪಟ್ಟಣದ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ಹಾಗೂ ಸಿಐಟಿಯು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ʼಕ್ವಿಟ್ ಇಂಡಿಯಾ ಚಳವಳಿʼ ನೆನಪಿನಲ್ಲಿ ನಡೆದ ಬೃಹತ್ ಚಳವಳಿಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಜನ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಸರಕಾರದ ಪ್ರತೀ ಹೆಜ್ಜೆಯಲ್ಲಿಯೂ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡುತ್ತಿದೆ. ಜನತೆಯ ಹಿತ ಕಾಪಾಡುವ ಬದಲು ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡುತ್ತಿದೆ. ಆ ಮೂಲಕ ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆದು ಕೊಡುತ್ತಿದೆ. ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರವು ದೇಶದ ಕೃಷಿರಂಗವನ್ನೇ ಬುಡಮೇಲುಗೊಳಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರಾಳ ವಿದ್ಯುತ್ ಮಸೂದೆ ವಾಪಸ್ ಪಡೆಯಿರಿ
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಪಿ.ಮಂಜುನಾಥ ರೆಡ್ಡಿ ಮಾತನಾಡಿ;
ಅಂದಿನಂತೆಯೇ ಇಂದು ಪರಿಸ್ಥಿತಿ ಬಿಗಡಾಯಿಸಿದೆ. ಬ್ರಿಟೀಷರ ಒಡೆದಾಳುವ ನೀತಿಯನ್ನೇ ಇಂದಿನ ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಳಸಂತೆಯಲ್ಲಿ ದಿನಸಿಗಳು ಮಾರಾಟವಾಗುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಕೃಷಿಕರು, ಶ್ರಮಿಕರು ಹಾಗೂ ದಲಿತರು ಬದುಕುವುದು ದುಸ್ತರವಾಗಿದೆ ಎಂದರು.
ರೈತ ವಿರೋಧಿಯಾದ ಕೇಂದ್ರ ಸರಕಾರದ ಕೃಷಿ ಹಾಗೂ ಕೈಗಾರಿಕಾಭಿವೃದ್ಧಿಯ ವಿರೋಧಿ ಮತ್ತು ಸಾರ್ವಜನಿಕ ರಂಗದ ವಿದ್ಯುತ್ ಕಂಪನಿಗಳ ಖಾಸಗೀಕರಣವನ್ನು ಮತ್ತು ರೈತರ ಪಂಪ್ʼಸೆಟ್ ಹಾಗೂ ಭಾಗ್ಯಜ್ಯೋತಿ ಮತ್ತು ಮನೆಗಳ ವಿದ್ಯುತ್‌ಗೆ ಮುಂಗಡ ಹಣ ಪಡೆಯುವ ಮೀಟರ್ ಅಳವಡಿಕೆಯ ಪ್ರಸ್ತಾಪಗಳಿರುವ ಕರಾಳ ವಿದ್ಯುತ್ ಮಸೂದೆಯನ್ನು ವಾಪಸ್ ಪಡೆಯುವಂತೆ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ, ಕರ್ನಾಟಕ ರಾಜ್ಯ ಪ್ರಾಂತ ರೈತಸಂಘದ ತಾಲೂಕು ಅಧ್ಯಕ್ಷ ಶ್ರೀರಾಮಪ್ಪ, ಸಿಐಟಿಯು ಅಧ್ಯಕ್ಷ ಬಿ.ಆಂಜನೇಯ ರೆಡ್ಡಿ, ತಾಲೂಕು ಕಾರ್ಯದರ್ಶಿ ಮುಸ್ತಫಾ, ಜನವಾದಿ ಮಹಿಳಾ ಸಂಘದ ರಾಜ್ಯ ಸಮಿತಿ ಸದಸ್ಯರು ಸೇರಿ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.