80 ಕೆಜಿ ತಿಮಿಂಗಿಲ ವಾಂತಿ ಬೆಲೆ 80 ಕೋಟಿ ರೂ.ಗಳಿಗೂ ಹೆಚ್ಚು; ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್
ಬೆಂಗಳೂರು: ತೇಲುವ ಚಿನ್ನ ಎಂದೇ ಹೆಸರಾಗಿರುವ ತಿಮಿಂಗಿಲದ ವಾಂತಿಯ ಗಟ್ಟಿಗೆ ಭಾರೀ ಬೇಡಿಕೆ ಇದ್ದು, ಈ ಡಿಮಾಂಡನ್ನೇ ಲಾಭ ಮಾಡಿಕೊಳ್ಳಲು ಹೊಂಚು ಹಾಕುತ್ತಿರುವ ಕೆಲವರು ಇದನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ.
ನಿಷೇಧಿತ ತಿಮಿಂಗಿಲದ ವಾಂತಿಯ ಗಟ್ಟಿ ಅಥವಾ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ಖತರ್ನಾಕ್ ಜಾಲವೊಂದನ್ನು ಬೇಧಿಸಿರುವ ನಗರದ ಸಿಸಿಬಿ ಪೊಲೀಸರು, ಸುಮಾರು 80 ಕೋಟಿ ರೂ.ಗಳಿಗೂ ಹೆಚ್ಚು ಬೆಲೆ ಬಾಳುವ 80 ಕೆಜಿಯಷ್ಟು ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ, ಕೃತ್ಯದಲ್ಲಿ ತೊಡಗಿದ್ದ ಐವರನ್ನು ಬಂಧಿಸಿ 80 ಕೆಜಿಯಷ್ಟು ಅಂಬರ್ ಗ್ರೀಸ್, ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಎರಡು ತಾಮ್ರದ ರೆಡ್ ಮರ್ಕ್ಯೂರಿ ಬಾಟಲ್‌ಗಳು, 1818ರಲ್ಲಿ ತಯಾರಾಗಿದ್ದು ಎನ್ನಲಾದ ಈಸ್ಟ್ ಇಂಡಿಯಾ ಕಂಪನಿಯ ಸ್ಟೀಮ್ ಫ್ಯಾನ್ ಅನ್ನು ವಶಪಡಿಸಿಕೊಂಡು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಉಪ ಪೊಲೀಸ್ ಆಯಕ್ತ ಕೆ.ಪಿ.ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಎನ್.ಹನುಮಂತರಾಯ, ಇನಸ್ಪೆಕ್ಟರ್ ಶಿವಪ್ರಸಾದ್, ಸಿಬ್ಬಂದಿಯಾದ ಅನಂತಕೃಷ್ಣ, ನಾಗರಾಜ್, ಶ್ರೀನಿವಾಸ್, ವಿನೋದ್ ಭಾಗಿಯಾಗಿದ್ದರು.
ಏನಿದು ಅಂಬರ್ ಗ್ರೀಸ್?
ಅಂಬರ್ ಗ್ರೀಸ್ ಪದಾರ್ಥಕ್ಕೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದು ಸುಗಂಧ ದ್ರವ್ಯ, ಲೈಂಗಿಕ ಶಕ್ತಿ ವೃದ್ಧಿಸುವ ಪದಾರ್ಥಗಳ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಕಲ್ಲಿನಾಕಾರದಲ್ಲಿರುವ ಹೊಳೆಯುವ ಈ ಪದಾರ್ಥವೂ ಒಂದು ಕೆಜಿ ಒಂದು ಕೊಟೀ ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತದೆ.
ಕೆಲ ದಿನಗಳ ಹೊಂದೆ ಮುರುಡೇಶ್ವರ ಕಡಲ ಕಿನಾರೆಯಲ್ಲಿ ಮೀನುಗಾರನೊಬ್ಬನಿಗೆ ಅಂಬರ್ ಸ್ರೀಸ್ ಸಿಕ್ಕಿತ್ತು. ನಂತರ ಅದನ್ನು ಹೊನ್ನಾವರದ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು. ಅದನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿದ್ದ ತಜ್ಞರು ಅಂಬರ್ ಗ್ರೀಸ್ ಎಂದು ಗುರುತಿಸಿದ್ದರು. ಸಾಮಾನ್ಯವಾಗಿ ಇದನ್ನು ಇಂಗ್ಲೀಷ್‌ನಲ್ಲಿ ಅಂಬರ್ ಗ್ರೀಸ್ (ವೈಜ್ಞಾನಿಕ ಹೆಸರೂ ಹೌದು) ಎಂದು, ಕನ್ನಡದಲ್ಲಿ ತಿಮಿಂಗಿಲ ವಾಂತಿ ಎಂದು ಕರೆಯಲಾಗುತ್ತದೆ. ತಿಮಿಂಗಿಲವು ತಾನು ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ಹೊರಬರುವ ದ್ರವಮಿಶ್ರಿತ ಘನ ವಸ್ತುವಿಗೆ ಅಂಬರ್ ಗ್ರೀಸ್ ಇಲ್ಲವೇ ತಿಮಿಂಗಿಲ ವಾಂತಿ ಎಂದು ಕರೆಯಲಾಗುತ್ತದೆ.
ಅಂಬರ್ ಗ್ರೀಸ್‌ಗಾಗಿ ತಿಮಿಂಗಿಲಗಳನ್ನು ಕೊಲ್ಲಲಾಗುತ್ತಿರುವ ಕಾರಣಕ್ಕೆ ಅನೇಕ ದೇಶಗಳಲ್ಲಿ ಈ ಪದಾರ್ಥವನ್ನು ಕೊಳ್ಳುವುದು, ಮಾರಾಟ ಮಾಡುವದನ್ನು ನಿಷೇಧ ಮಾಡಲಾಗಿದೆ. ಅದರಲ್ಲೂ ವೀರ್ಯ ತಿಮಿಂಗಿಲಗಳನ್ನು ಭಾರೀ ಪ್ರಮಾಣದಲ್ಲಿ ಕೊಲ್ಲಲಾಗುತ್ತಿತ್ತು. ಅವುಗಳ ತೈಲ, ಬೆನ್ನುಮೂಳೆ ಹಾಗೂ ಅಂಬರ್ ಗ್ರೀಸ್‌ಗಾಗಿ ಸಾವಿರಾರು ತಿಮಿಂಗಿಲಗಳ ಹತ್ಯೆ ಮಾಡಲಾಗಿದೆ. ಈ ಕಾರಣಕ್ಕೆ ಜಗತ್ತಿನ ಅನೇಕ ದೇಶಗಳಲ್ಲಿ ತಿಮಿಂಗಿಲಗಳನ್ನು ಕೊಲ್ಲುವುದು ಹಾಗೂ ಅಂಬರ್ ಗ್ರೀಸ್ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.