ಗುಡಿಬಂಡೆ ತಾಲೂಕಿನಲ್ಲಿ ಶೂನ್ಯಕ್ಕೆ ಹೋಗಿದ್ದ ಸೋಂಕು ಮತ್ತೆ ಅಬ್ಬರಿಸುವ ಭೀತಿ
by GS Bharath Gudibande
ಗುಡಿಬಂಡೆ: ಮೊದಲ ಮತ್ತು ಎರಡನೇ ಅಲೆ ಮುಗಿದಿದೆ. ಜನರಿಗೆ ಸರಕಾರ ರಿಲ್ಯಾಕ್ಸೇಷನ್ ಕೊಟ್ಟಿದೆ ಅನ್ನುವಷ್ಟರಲ್ಲಿ 3ನೇ ಅಲೆಯ ಭೀತಿ ಶುರುವಾಗಿದ್ದರೂ ಸಾರ್ವಜನಿಕರು ಮಾಸ್ಕ್ ಮತ್ತು ಸಮಾಜಿಕ ಅಂತರ ಪಾಲಿಸದೇ ಅಸಡ್ಡೆ ತೋರುತ್ತಿದ್ದಾರೆ.
ಕೊರೋನಾ ಲಾಕ್ ಡೌನ್ ಸಡಲಿಕೆ ಮಾಡುತ್ತಿದ್ದಂತೆ ಜನರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದೆ ಉದಾಸೀನ, ನಿರ್ಲಕ್ಷ್ಯ ತೋರುತ್ತಿದ್ದು, ಮತ್ತೊಮ್ಮೆ ತಾಲೂಕಿನಲ್ಲಿ ಸೂಂಕಿನ ಹೆಚ್ಚಳವಾಗುತ್ತಾ ಎನ್ನುವ ಆತಂಕ ಉಂಟಾಗಿದೆ.
ಪ್ರವಾಸಿಗರಿಂದ ಸೋಂಕಿನ ಭೀತಿ
ಶನಿವಾರ, ಭಾನುವಾರ ಬಂದರೆ ಬೆಂಗಳೂರು ಸೇರಿದಂತೆ ಇತರೆ ದೂರದ ಊರುಗಳಿಂದ ಪಟ್ಟಣದ ಬೆಟ್ಟ, ಕೆರೆ ಹೀಗೆ ಪ್ರವಾಸಿ ತಾಣಗಳನ್ನು ನೋಡಲು ಸಾವಿರಾರು ಜನ ಬರುತ್ತಿರುವುದು, ಸಾರ್ವಜನಿಕರ ಆಂತಕಕ್ಕೆ ಕಾರಣವಾಗಿದೆ, ಅವರಿಂದ ತಾಲೂಕಿಗೆ ಕಾದಿದೆಯಾ ಆಪತ್ತು ಎಂಬ ಭೀತಿ ಉಂಟಾಗಿದೆ. ಈ ಕುರಿತು ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕಾಗಿದೆ.
ವೀಕೆಂಡ್ ಬಂದರೆ ಪ್ರವಾಸಿಗರು ಭಾರೀ ಪ್ರಮಾಣದಲ್ಲಿ ಗುಡಿಬಂಡೆಗೆ ಬರುತ್ತಿದ್ದಾರೆ. ಪ್ರವಾಸಿಗರು ಬರುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ, ಅವರಲ್ಲಿ ಬಹುತೇಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮೂರನೇ ಅಲೆ ಭೀತಿಯೂ ಇರುವುದರಿಂದ ಪಟ್ಟಣದ ಜನ ಹೆಚ್ಚು ಆತಂಕ್ಕೆ ಗುರಿಯಾಗಿದ್ದಾರೆ. ಪ್ರವಾಸಿಗರು ಮಾಸ್ಕ್ ಧರಿಸುತ್ತಿಲ್ಲ. ಅಲ್ಲದೆ, ಕೆಲವರು ಅಲ್ಲಲ್ಲಿಯೇ ಮಾಸ್ಕ್‌ಗಳನ್ನು, ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡಿ ಹೋಗುತ್ತಿದ್ದಾರೆ. ಹೀಗಾಗಿ ಸ್ಥಳೀಯ ಆಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.
ಒಂದು ಅಂದಾಜಿನಂತೆ; ವೀಕೆಂಡ್‌ನಲ್ಲಿ ಅಂದಾಜು 200 ಕಾರು, ನೂರಾರು ಬೈಕ್‌ಗಳಲ್ಲಿ ಸುಮಾರು ಎರಡರಿಂದ ಮೂರು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಗುಡಿಬಂಡೆಗೆ ಭೇಟಿ ನೀಡುತ್ತಿದ್ದಾರೆ.
ಬೆಂಗಳೂರು, ಆಂಧ್ರಕ್ಕೆ ನಿತ್ಯ ಓಡಾಟ
ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರಕಾರ ನೀಡಿರುವ ಸಡಲಿಕೆಯನ್ನೇ ನೆಪ ಮಾಡಿಕೊಂಡ ಜನರುಪ್ರತಿನಿತ್ಯ ಬೇರೆ ಊರುಗಳಿಗೆ ಓಡಾಟ ಆರಂಭಿಸಿದ್ದಾರೆ. ಅಲ್ಲದೆ, ಗುಡಿಬಂಡೆಗೆ ಆಂಧ್ರದ ಗಡಿ ಹೊಂದಿಕೊಂಡಿರುವ ಕಾರಣಕ್ಕೆ ಪಕ್ಕದಲ್ಲೇ ಇರುವ ಆ ರಾಜ್ಯದ ಊರುಗಳಿಗೆ ಗುಡಿಬಂಡೆ ಜನರು ಭೇಟಿ ನೀಡುವುದು ಸಾಮಾನ್ಯವಾಗಿದೆ. ಮುಖ್ಯವಾಗಿ ವಾಣಿಜ್ಯ ಕೆಲಸ-ಕಾರ್ಯಗಳಿಗಾಗಿ ಹಿಂದೂಪುರಕ್ಕೆ ಹೋಗಿ ಬರುವುದು ಸಾಮಾನ್ಯ.
ಇದಲ್ಲದೆ; ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ಮುಂತಾದ ಕಡೆಗಳಿಗೂ ಜನರ ಸಂಚಾರ ಹೆಚ್ಚಾಗಿದ್ದು, ಅಂಥವರ ಮೇಲೆ ನಿಗಾ ಇಡುವುದು ಸಾಧ್ಯವಾಗುತ್ತಿಲ್ಲ. ಎಷ್ಟೇ ಜಾಗೃತಿ-ಎಚ್ಚರಿಕೆ ಹೇಳಿದರೂ ಜನರು ಅಧಿಕಾರಿಗಳ ಮಾತು ಕೇಳುತ್ತಿಲ್ಲ, ಬದಲಿಗೆ ಹದಿನೆಂಟು ವರ್ಷಕ್ಕೂ ಮೇಲ್ಪಟ್ಟ ಅನೇಕರು ಲಸಿಕೆ ಪಡೆದಿಲ್ಲದಿರುವುದು ಕಂಡು ಬಂದಿದೆ.
ಅಧಿಕಾರಿಗಳ ಶ್ರಮ ವ್ಯರ್ಥವಾಗದಿರಲಿ
ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಪಟ್ಟ ಶ್ರಮದಿಂದ ಈಗ ಸೋಂಕಿನ ಸಂಖ್ಯೆ ಕಡಿಮೆಯಾಗಿ ಇಡೀ ತಾಲೂಕು ಸುರಕ್ಷತವಾಗಿದೆ, ಲಾಕ್‌ಡೌನ್ ಸಡಲಿಕೆಯಿಂದ ಬೆಂಗಳೂರು, ಸೇರಿದಂತೆ ರಾಜ್ಯದ ಹಲವು ಪ್ರದೇಶಗಲ್ಲಿ ಸೋಂಕು ತೀವ್ರವಾಗುತ್ತಿದ್ದು, ಜನರು ಸರಕಾರದ ನಿಯಮಗಳನ್ನು ಪಾಲಿಸಬೇಕಾಗಿದೆ. ಮೇಲಾಗಿ, ಬೆಂಗಳೂರು ಸೇರಿದಂತೆ ಹೊರಗಿನಿಂದ ಬರುವವರ ಮೇಲೆ ಕಣ್ಣಿಡಬೇಕಾಗಿದೆ.
ಇದಲ್ಲದೆ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸಂಚರಿಸುವ ಜನರನ್ನು ರಾಟ್ ಅಥವಾ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸವುದೂ ಸೇರಿ ಗಡಿ ಪ್ರದೇಶಗಳ ಮೇಲೆ ಗಮನ ಕೊಡುವ ಅಗತ್ಯವೂ ಇದೆ.
ಜನರು ಮಾಸ್ಕ್ ಮತ್ತು ದೈಹಿಕ ಅಂತರ ಪಾಲಿಸಿ ಅನಗತ್ಯ ಓಡಾಟ ನಿಲ್ಲಿಸಬೇಕು, ತಾಲೂಕಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಅನಧಿಕೃತವಾಗಿ ಪ್ರವೇಶ ಮಾಡುವವರಿಗೆ ದಂಡ ವಿಧಿಸಲಾಗುತ್ತದೆ. ಯಾರೂ ಕೂಡ ನಿಯಮಗಳನ್ನು ಮೀರಿ ವರ್ತಿಸಬಾರದು.
ಸಿಬ್ಗತ್ ವುಲ್ಲಾ. ಗುಡಿಬಂಡೆ ತಹಶೀಲ್ದಾರ್
ತಾಲೂಕಿನ ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಆಗಮಿಸುವ ಜನರು ಸರಕಾರದ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ ಅರಿವು ಮೂಡಿಸಲಾಗುತ್ತಿದೆ. ಎಲ್ಲರೂ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವುದರಿಂದ 3ನೇ ಅಲೆ ಬಾರದಂತೆ ತಡೆಯಬಹುದು.
ರಾಜಶೇಖರ್, ಮುಖ್ಯಾಧಿಕಾರಿ, ಗುಡಿಬಂಡೆ ಪಟ್ಟಣ ಪಂಚಾಯಿತಿ