ಬೆಂಗಳೂರು: ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವುದನ್ನು ನಿಷೇಧಿಸಿ, ಆದೇಶ ಹೊರಡಿಸಲಾಗಿದೆ.
ಈ ಆದೇಶವನ್ನು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಮಂಗಳವಾರ ಹೊರಡಿಸಿದ್ದಾರೆ.
ಇದಕ್ಕೂ ಮೊದಲು ವಿಧಾನಸೌಧದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ಮುಖ್ಯಮಂತ್ರಿಗಳು, ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದರು. ಇದು ಅನವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ಅವರು ತಿಳಿಸಿದರು.
ಆದೇಶ ಪ್ರಕಟ
ಸಿಎಂ ಈ ಆದೇಶವನ್ನು ಮೌಖಿಕವಾಗಿ ಹೇಳಿದ ತಕ್ಷಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಸರ್ಕಾರಿ ಆದೇಶ ಜಾರಿ ಮಾಡಿದರು. ಇನ್ನು ಮುಂದೆ ಹೂ ಗುಚ್ಚದ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶದಂತೆ ಇನ್ನು ಮುಂದೆ ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಶಾಲು, ಹಣ್ಣಿನ ಬುಟ್ಟಿ, ನೆನಪಿನ ಕಾಣಿಕೆ ಇರುವುದಿಲ್ಲ. ಎಲ್ಲ ಇಲಾಖೆಗಳು ಈ ಆದೇಶವನ್ನು ಚಾಚೂ ತಪ್ಪದೇ ಪಾಳಿಸಬೇಕು ಎಂದು ಸೂಚಿಸಲಾಗಿದೆ.
ವಿಶೇಷವೆಂದತೆ, ಇಂಧನ ಖಾತೆಯ ನೂತನ ಸಚಿವ ಸುನೀಲ್ ಕುಮಾರ್ ಅವರು ಹೂಗುಚ್ಛ ಅಥವಾ ಹಾರಗಳನ್ನು ಹಾಖುವ ಬದಲು ಕನ್ನಡ ಪುಸ್ತಕ ನೀಡಿದ ಎಂದು ಮನವಿ ಮಾಡಿದ್ದರು. ಅದರಂತೆ ಅವರು ಹೋದ ಕಡೆಯೆಲ್ಲೆಲ್ಲ ಕನ್ನಡ ಪುಸ್ತಕಗಳನ್ನು ಸ್ವೀಕಾರ ಮಾಡುತ್ತಿದ್ದಾರೆ. ಆ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವುದಾಗಿ ಅವರು ತಿಳಿಸಿದ್ದರು.