ಒಬ್ಬನ ಮುಖ ಚಹರೆ ಪಕ್ಕಾ ಕ್ಲಿಯರ್; ಸತೀಶ್ ರೆಡ್ಡಿ ಮನೆಗೆ ಬಿಜೆಪಿ ನಾಯಕರ ದಂಡು
ಬೆಂಗಳೂರು: ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆಗೆ ನುಗ್ಗಿ ಎರಡು ಐಶಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆಗೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು, ಬೆಂಕಿ ಇಟ್ಟ ಮೈವರಲ್ಲಿ ಒಬ್ಬನ ಚಹರೆ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಬಗ್ಗೆ ಕಂದಾಯ ಸಚಿವ ಅಶೋಕ್ ಹೇಳಿದ್ದಾರಾದರೂ ಪೊಲೀಸರು ಯಾವ ಗುಟ್ಟನ್ನೂ ಬಿಟ್ಟುಕೊಡದೇ ತನಿಖೆ ಆರಂಭಿಸಿದ್ದರು. ತನಿಖೆ ಫಲ ನೀಡುವ ಕ್ಷಣ ಹತ್ತಿರವಾಗಿದ್ದು, ದುಷ್ಕರ್ಮಿಗಳು ಬಲೆಗೆ ಬೀಳುವುದು ಸನ್ನಿಹಿತವಾಗಿದೆ ಎಂದು ಗೊತ್ತಾಗಿದೆ.
ಆರೋಪಿಗಳು ನಗರ ಬಿಟ್ಟಿಲ್ಲ. ಅದೇ ಏರಿಯಾದ ಸುರಕ್ಷಿತ ಪ್ರದೇಶದಲ್ಲಿ ಅಡಗಿ ಕೂತಿಸುರವ ಸಾಧ್ಯತೆ ಇದ್ದು, ಪೊಲೀಸರು ವ್ಯಾಪಕವಾಗಿ ಶೋಧ ಮಾಡುತ್ತಿದ್ದಾರೆ. ಗಡುವಿನಂತೆ ಇಂದು ರಾತ್ರಿ ಹತ್ತು ಗಂಟೆ ಹೊತ್ತಿಗೆ ದುಷ್ಕರ್ಮಿಗಳು ಖಾಕಿ ಬಲೆಗೆ ಬೀಳುವ ನಿರೀಕ್ಷೆ ಇದೆ ಎನ್ನಲಾಗಿದೆ.
ಬೆಚ್ಚಿಬಿದ್ದ ಬೆಜೆಪಿ ನಾಯಕರು
ಕೆಲ ದಿನಗಳ ಹಿಂದೆ ದುಷ್ಕರ್ಮಿಗಳು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದ ಘಟನೆ ಜನರ ನೆನಪಿನಿಂದ ಮಾಸುವ ಮುನ್ನವೇ ಸತೀಶ್ ರೆಡ್ಡಿ ಅವರ ಮನೆ ಮೇಲೆ ನಡೆದಿರುವ ದಾಳಿ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಬಿಜೆಪಿ ನಾಯರಂತೂ ಬೆಚ್ಚಿಬಿದ್ದಿದ್ದಾರೆ. ದೊಡ್ಡ ಅನಾಹುತವೊಂದು ಎರಡು ಕಾರುಗಳ ಭಸ್ಮದೊಂದಿಗೆ ಮುಗಿಯಿತಾ ಅಥವಾ ದುಷ್ಕರ್ಮಿಗಳು ಈ ಮೂಲಕ ಬೇರೆಯದ್ದೇ ಸಂದೇಶ ನೀಡಿದ್ದಾರಾ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು; “ಘಟನೆಯ ಬಗ್ಗೆ ಹೆಚ್ಚು ವಿವರ ಹೇಳಲಾಗದು. ಆದರೆ, ಆಳವಾಗಿ ತನಿಖೆ ನಡೆಸಲಾಗುತ್ತದೆ. ತಡವಾಗಿ ವಿವರ ನೀಡಲಾಗುವುದು” ಎಂದಷ್ಟೇ ಹೇಳಿದರು. ಅವರು ಬೆಳಗಿನಜಾವವೇ ಸತೀಶ್ ರೆಡ್ಡಿ ಮನೆಗೆ ಭೇಟಿ ನೀಡಿದ್ದರು.
ದುಷ್ಕರ್ಮಿಗಳಿಗೆ ಕೇವಲ ಕಾರುಗಳಿಗೆ ಬೆಂಕಿ ಇಟ್ಟು ಶಾಸಕರಿಗೆ ವಾರ್ನಿಂಗ್ ಮಾಡುವುದೇ ಆಗಿತ್ತಾ ಅಥವಾ ಅವರ ಮನೆಗೇ ಬೆಂಕಿ ಹಚ್ಚುವ ದುರುದ್ದೇಶವಿತ್ತಾ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶಾಸಕರ ಮನೆಗೆ ಭೇಟಿ ಪರಿಶೀಲನೆ ನಡೆಸಿದರಲ್ಲದೆ ಸತೀಶ್ ರೆಡ್ಡಿ ಅವರಿಗೆ ಧೈರ್ಯ ಹೇಳಿದ್ದಾರೆ. ಬಳಿಕ ತಮ್ಮ ಕಚೇರಿಗೆ ವಾಪಸ್ ಬಂದ ಗೃಹ ಸಚಿವರು, ಇಡೀ ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ದುಷ್ಕರ್ಮಿಗಳನ್ನು ಆದಷ್ಟು ಬೇಗ ಹಿಡಯುತ್ತಿವೆ. ಈಗಾಗಲೇ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ಬಿರುಸಿನಿಂದ ಸಾಗುತ್ತಿವೆ. ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸತೀಶ್ ರೆಡ್ಡಿ ಅವರಿಗೆ ಮತ್ತು ಅವರ ಮನೆಗೆ ಸೂಕ್ತ ರಕ್ಷಣೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಅರಗ ಜ್ಞಾನೇಂದ್ರ.
ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ
ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪೊಲೀಸರು ಈಗಾಗಲೇ ಶೋಧ ನಡೆಸುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗುತ್ತಿದ್ದು, ಮೂರು ವಿಶೇಷ ತಂಡ ರಚಿಸಲಾಗಿದೆ ಎಂದ ಗೃಹ ಸಚಿವರು, ಸುದ್ದಗುಂಟೆಪಾಳ್ಯ, ಬೊಮ್ಮನಹಳ್ಳಿ, ತಿಲಕ್ ನಗರ ಠಾಣೆಯ ಮೂವರು ಇನಸ್ಪೆಕ್ಟರ್ʼಗಳ ನೇತೃತ್ವದಲ್ಲಿ ಆರೋಪಿಗಳ ಸೆರೆಗೆ ಕಾರ್ಯಾಚರಣೆ ಚುರುಕುಗೊಂಡಿದೆ.
ಇದಕ್ಕೂ ಮುನ್ನ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೂಡ ಬೆಳಗಿನ ಜಾವವೇ ಶಾಸಕರ ಮನೆಗೆ ಭೇಟಿ ನೀಡಿ, ತನಿಖಾ ತಂಡಕ್ಕೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಜತೆಗೆ, ಸತೀಶ್ ರೆಡ್ಡಿ ಅವರಿಗೆ ಯಾರಾದರೂ ಆಗದವರು ಈ ಕೃತ್ಯ ಮಾಡಿದ್ದಾರಾ? ಅಥವಾ ಯಾವುದಾದರೂ ವಿವಾದ ಇದೆಯಾ? ಇನ್ನಿತರೆ ಅಂಶಗಳನ್ನಿಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದರಲ್ಲೂ ಬೇಗೂರು ಕೆರೆಯಲ್ಲಿ ಶಿವನ ಮೂರ್ತಿ ಸ್ಥಾಪನೆ ಮಾಡುವ ವಿವಾದ ಕಾರಣವಾ ಎನ್ನುವ ಅಂಶವೂ ಇದೆ. ಕಳೆದ ಐದು ವರ್ಷಗಳಿಂದ ವಿವಾದ ನ್ಯಾಯಾಲಯದಲ್ಲಿದೆ.
ಇದಲ್ಲದೆ; ಮನೆ ಮುಂದೆ, ಹಾದಿ ಬೀದಿಯಲ್ಲಿ ನಿಲ್ಲಿಸಿರುವ ಕಾರುಗಳ ಗಾಜುಗಳನ್ನು ಒಡೆಯುವುದು, ಬಿಡಿ ಭಾಗಗಳನ್ನು ಒಡೆಯುವ ಕೃತ್ಯಗಳನ್ನು ನಡೆಸುತ್ತಿದ್ದ ದುಷ್ಕರ್ಮಿಗಳು ಈಗ ವಾಹನಗಳಿಗೇ ಬೆಂಕಿಯನ್ನೇ ಇಟ್ಟು ನಗರದ ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದಾರೆ. ಶಾಸಕ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಲಾಗಿದ್ದ ಎರಡು ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದು, ಎರಡೂ ಕಾರುಗಳು ಸುಟ್ಟು ಕರಲಾಗಿವೆ.
ಈ ಘಟನೆ ನಗರದ ಜನರನ್ನು ಬೆಚ್ಚಿಬೀಳಿಸಿದ್ದು, ಹೊರಗೆ ಕಾರು ನಿಲ್ಲಿಸಿ ಮಲಗುವುದು ಹೇಗಪ್ಪಾ ಎಂಬ ಆತಂಕಕ್ಕೆ ಗುರಿಯಾಗಿದ್ದಾರೆ. ಬುಧವಾರ ತಡರಾತ್ರಿ 1.30ರ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಷಯ ಗೊತ್ತಾದ ಕೂಡಲೇ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದು, ನಾಲ್ವರು ದುಷ್ಕರ್ಮಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಶಾಸಕ ಸತೀಶ್ ರೆಡ್ಡಿ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಖಾಕಿಗಳು ವ್ಯಾಪಕ ಶೋಧ ನಡೆಸಿದ್ದಾರೆ.
ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು ಯಾಕೆ? ಹಳೆಯ ದ್ವೇಷವನಾದರೂ ಇದೆಯಾ? ರೆಡ್ಡಿ ಅವರ ವಿರೋಧಿಗಳ ಕೃತ್ಯವಾ? ಇನ್ನಿತರೆ ಆಯಾಮಗಳಲ್ಲಿ ತನಿಖೆ ನಡೆಸಲಾಗತ್ತಿದ್ದು, ಲಭ್ಯವಾದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಸುತ್ತಮುತ್ತಲಿನ ಇಡೀ ದಿನದ ಸಿಸಿ ಕ್ಯಾಮೆರಾ ಫೂಟೇಜುಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.
ಮಧ್ಯರಾತ್ರಿ ನಂತರ ನಡೆದ ಘಟನೆ
ಪಕ್ಕಾ ಪೂರ್ವ ಯೋಜಿತವಾಗಿಯೇ ಸತೀಶ್ ರೆಡ್ಡಿ ಮನೆಗೆ ಬಂದಿರುವ ದುಷ್ಕರ್ಮಿಗಳು ಕೇವಲ ಮೂರೇ ನಿಮಿಷಗಳಲ್ಲಿ ಕಾರುಗಳಿಗೆ ಬೆಂಕಿ ಇಟ್ಟು ಎಸ್ಕೇಪ್ ಆಗಿದ್ದಾರೆ. ಮಧ್ಯರಾತ್ರಿ 1.25 ಗಂಟೆಗೆ ಮನೆ ಬಳಿ ಬಂದಿರುವ ಅವರು, 1.28ಕ್ಕೆಲ್ಲ ಬೆಂಕಿ ಹಚ್ಚಿ ಓಡಿ ಹೋಗಿದ್ದಾರೆ. ಕೆಲ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಬೆಂಕಿಗಾಹುತಿ ಆಗಿವೆ. ಬಿಳಿ ಬಣ್ಣದ ಫಾರ್ಚೂನರ್ ಕಾರಿನ ಮುಂದಿನ ಭಾಗ ಸುಟ್ಟು ಕರಕಲಾಗಿದ್ದು, ಮತ್ತೊಂದು ವಾಹನ ಜೀಪ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಕೃತ್ಯ ನಡೆಸುವ ಮುನ್ನ ದುಷ್ಕರ್ಮಿಗಳು ಸ್ಥಳಕ್ಕೆ ಬಂದು ನೋಡಿರುವ, ಸ್ಕೆಚ್ ಹಾಕಿರುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಇನ್ನೊಂದೆಡೆ ದುಷ್ಕರ್ಮಿಗಳು ಎರಡು ಬೈಕ್ಗಳಲ್ಲಿ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮುಖಕ್ಕೆ ಮಾಸ್ಕ್ ಮತ್ತು ಬಟ್ಟೆ ಸುತ್ತಿಕೊಂಡಿದ್ದರಿಂದ ದುಷ್ಕರ್ಮಿಗಳ ಚಹರೆ ಗೊತ್ತಾಗಿಲ್ಲ. ಮುಂದಿನ ಗೇಟ್ ಬಳಿ ಇದ್ದ ಸೆಕ್ಯೂರಿಟಿಯ ಕಣ್ತಪ್ಪಿಸಿ ಹಿಂದಿನ ಗೇಟ್ ಮೂಲಕ ಮನೆಯ ಕಾಂಪೌಂಡಿನೊಳಕ್ಕೆ ಬಂದಿರುವ ದುಷ್ಕರ್ಮಿಗಳು, ಒಂದಿಷ್ಟೂ ಸದ್ದೇ ಬಾರದಂತೆ ಕೆಲಸ ಮುಗಿಸಿ ಪರಾರಿಯಾಗಿದ್ದಾರೆ.
ಈ ಘಟನೆ ನನಗೆ ಆತಂಕ ಉಂಟು ಮಾಡಿದೆ. ಪೊಲೀಸರಿಗೆ ದೂರು ನೀಡಿದ್ದೇನೆ. ಮಧ್ಯರಾತ್ರಿ ನಂತರ 1.23ಕ್ಕೆ ಇಬ್ಬರು ಕಾಂಪೌಂಡ್ ಒಳಕ್ಕೆ ಬರುತ್ತಾರೆ. ಸುತ್ತಮುತ್ತ ನೋಡಿ ಯಾರೂ ಇಲ್ಲದ್ದನ್ನು ಖಾತರಿ ಮಾಡಿಕೊಂಡು ಎರಡೂ ಗಾಡಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾರೆ. ಗಾಡಿಯೊಂದರ ಬ್ಯಾಟರಿ ಬ್ಲಾಸ್ಟ್ ಆಗಿದ್ದರಿಂದ ನಮಗೆ 1.30ಕ್ಕೆ ನಮಗೆ ಎಚ್ಚರವಾಯಿತು. ಬಂದು ನೋಡಿದರೆ ಎರಡೂ ಗಾಡಿಗಳು ಹೊತ್ತಿ ಉರಿಯುತ್ತಿದ್ದವು. ತಕ್ಷಣ ಬೆಂಕಿ ಆರಿಸಿದೆವು.
ಸತೀಶ್ ರೆಡ್ಡಿ, ಶಾಸಕ
ಸತೀಶ್ ರೆಡ್ಡಿಗೆ ಧೈರ್ಯ ತುಂಬಿದ ಸಚಿವರು, ನಾಯಕರು
ಈ ನಡುವೆ ವಿವಿಧ ಸಚಿವರು, ಶಾಸಕರು, ಬಿಜೆಪಿ ನಾಯಕರು ಸತೀಶ್ ರೆಡ್ಡಿ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬೊಮ್ಮಸಂದ್ರದ ವಂಗಸಂದ್ರದಲ್ಲಿರುವ ಸತೀಶ್ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೃತ್ಯದ ಮೂಲವನ್ನು ಹಾಗೂ ಘಟನೆ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ಬಯಲಿಗೆ ಎಳೆಯಲಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದೆ ಎಂದರು.
ಶಾಸಕ ಸತೀಶ್ ರೆಡ್ಡಿ ಅವರ ಮನೆಗೆ ನುಗ್ಗಿ ದುಷ್ಕರ್ಮಿಗಳು ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ಖಂಡನೀಯ. ಇದು ವ್ಯವಸ್ಥಿತವಾಗಿ ಶಾಸಕರನ್ನೇ ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯಾಗಿದೆ. ಬೆಂಕಿಯನ್ನು ಮನೆಗೆ ಹಬ್ಬಿಸುವ ಪೂರ್ವಯೋಜಿತ ಷಡ್ಯಂತ್ರದಂತಿದೆ. ವೈಯಕ್ತಿಕವಾಗಿ ಈ ಘಟನೆ ನನಗೆ ಆಘಾತ ಉಂಟು ಮಾಡಿದೆ. ಕ್ಷೇತ್ರದಲ್ಲಿ ಸತೀಶ್ ರೆಡ್ಡಿ ಅವರು ಕ್ಷೇತ್ರದಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತಾ ಜನಾನುರಾಗಿ ಆಗಿದ್ದಾರೆ. ಅಜಾತಶತ್ರುವೂ ಹೌದು. ಇಂಥ ವ್ಯಕ್ತಿಯ ಮೇಲೆ, ಅದರಲ್ಲೂ ಕುಟುಂಬ ಸದಸ್ಯರು ವಾಸ ಮಾಡುವ ಜಾಗದಲ್ಲಿ ಬೆಂಕಿ ಹಚ್ಚಿರುವುದು ಖಂಡನೀಯ. ಮನುಷ್ಯತ್ವ ಇಲ್ಲದ ಕೃತ್ಯ ಇದಾಗಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.