ಗುಡಿಬಂಡೆಯಲ್ಲಿ ತಾ.ಪಂ-ಪ.ಪಂ ನಡುವೆ ತಿಕ್ಕಾಟ; ಒತ್ತುವರಿಗೆ ತಾ.ಪಂ. ಮಾಜಿ ಸದಸ್ಯರ ವಿರೋಧ
by GS Bharath Gudibande
ಗುಡಿಬಂಡೆ: ತಾಲೂಕು ಪಂಚಾಯಿತಿಗೆ ಸೇರಿದ ಜಾಗದಲ್ಲಿ ಗುಡಿಬಂಡೆ ಪಟ್ಟಣ ಪಂಚಾಯಿತಿ ಅಂಗಡಿ-ಮಳಿಗೆ ನಿರ್ಮಾಣ ಮಾಡಲು ಮುಂದಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಪಟ್ಟಣ ಪಂಚಾಯಿತಿ ಏಕಪಕ್ಷೀಯವಾಗಿ ತಾಲೂಕು ಪಂಚಾಯಿತಿ ಜಾಗದಲ್ಲಿ ಅಂಗಡಿ-ಮಳಿಗೆ ನಿರ್ಮಾಣ ಮಾಡುತ್ತಿರುವುದಕ್ಕೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ಸಿ ಮಂಜುನಾಥ್, ಮುನಿರೆಡ್ಡಿ ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಮುಂದೆ ತಾಲೂಕು ಪಂಚಾಯಿತಿಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ಪಟ್ಟಣ ಪಂಚಾಯಿತಿಯು ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ-ಮಳಿಗೆ ನಿರ್ಮಾಣ ಮಾಡಲು ಮುಂದಾಗಿರುವುದು ಅಕ್ರಮ, ನಿಯಮಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ.
- ಪಿ.ಸಿ ಮಂಜುನಾಥ್
ಈ ವೇಳೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ತಾ.ಪಂ. ಮಾಜಿ ಸದಸ್ಯ ಪಿ.ಸಿ ಮಂಜುನಾಥ್; 2016 ಮತ್ತು 2017ರಲ್ಲಿ ಪಟ್ಟಣ ಪಂಚಾಯಿತಿ ಅನಧಿಕೃತವಾಗಿ ತಾಲೂಕು ಪಂಚಾಯಿತಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು. ಆ ಸಂದರ್ಭದಲ್ಲಿ ಈ ಜಾಗ ತಾಲೂಕು ಪಂಚಾಯಿತಿಗೆ ಸೇರಿದ್ದು, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಅಂದಿನ ಮುಖ್ಯಾಧಿಕಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿಗೆ ನೀಡಿದ್ದೆ. ಆದರೆ ಪುನಾ ಪಟ್ಟಣ ಪಂಚಾಯಿತಿ ಅನಧಿಕೃತವಾಗಿ ಅಂಗಡಿ-ಮಳಿಗೆ ನಿರ್ಮಾಣ ಮಾಡಲು ಮುಂದಾಗಿದೆ. ಈ ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇದೇ ಅಭಿಪ್ರಾಯ ವ್ಯಕ್ತಪಡಿಸಿದ ತಾ.ಪಂ. ಮಾಜಿ ಸದಸ್ಯ ಮುನಿರೆಡ್ಡಿ; ಬ್ರಿಟೀಷರ ಕಾಲದಿಂದ ಈ ಜಾಗ ತಾಲೂಕು ಪಂಚಾಯಿತಿಗೇ ಸೇರಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಜಾಗಕ್ಕೆ ತಂತಿಬೇಲಿ ಹಾಕಿಸಬೇಕು ಎಂದು ಒತ್ತಾಯ ಮಾಡಿದರು.
ಪಟ್ಟಣದ ಸರಕಾರಿ ಸ್ವತ್ತುಗಳ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದ್ದ ಪಟ್ಟಣ ಪಂಚಾಯಿತಿ ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ-ಮಳಿಗೆ ನಿರ್ಮಾಣ ಮಾಡುವ ಹೆಸರಿನಲ್ಲಿ ತಾಲೂಕು ಪಂಚಾಯಿತಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಜೆಸಿಬಿಯಿಂದ ಮಣ್ಣು ತೆಗೆದಿರುವುದು ನಿಯಮಗಳ ಉಲ್ಲಂಘನೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಮಾಜಿ ಸದಸ್ಯರಿಬ್ಬರೂ ತಿಳಿಸಿದ್ದಾರೆ.
ತಾಲೂಕು ಪಂಚಾಯಿತಿ ಜಾಗದ ಮುಂದೆ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನಿರ್ಮಾಣ ಮಾಡಲು ಪಟ್ಟಣ ಪಂಚಾಯಿತಿ ಮುಂದಾಗಿದೆ. ಕಾಮಗಾರಿ ನಿಲ್ಲಿಸುವಂತೆ ಈಗಾಗಲೇ ಮುಖ್ಯಾಧಿಕಾರಿ ಗಮನಕ್ಕೆ ತಂದಿದ್ದೇನೆ.
ರವೀಂದ್ರ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ
Comments 1