ಸರಳ ಆಚರಣೆ; ಕೋರೊನಾ ಯೋಧರಿಗೆ ಕಾಣಿಕೆ ಬದಲು ಕನ್ನಡ ಪುಸ್ತಕ
by Ra Na Gopala Reddy Bagepalli
ಬಾಗೇಪಲ್ಲಿ: ಬ್ರಿಟೀಷರ ದಾಸ್ಯದಿಂದ ನಮ್ಮನ್ನು ಮುಕ್ತ ಮಾಡಿದ ಸ್ವಾತಂತ್ರ್ಯ ಸೇನಾನಿಗಳು ಅವಿರತ ಹೋರಾಟ ಮಾಡಿ ತಮ್ಮ ಇಡೀ ಬದುಕನ್ನೇ ದೇಶಕ್ಕಾಗಿ ಸಮರ್ಪಿಸಿದ್ದಾರೆ ಎಂದು ಬಾಗೇಪಲ್ಲಿ ತಾಲೂಕು ರೇಷ್ಮೆ ಇಲಾಖೆ ನಿರ್ದೇಶಕ ಚಿನ್ನ ಕೈವಾರಮಯ್ಯ ಹೇಳಿದರು.
ಬಾಗೇಪಲ್ಲಿ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರ ವಿಚಾರಗಳನ್ನು ಇಂದಿನ ಯುವಪೀಳಿಗೆ ಗಂಭೀರವಾಗಿ ಪರಿಗಣಿಸಿ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶದ ಋಣವನ್ನು ತೀರಿಸಬೇಕು ಎಂದು ಅವರು ಕರೆ ನೀಡಿದರು.
ಸ್ವಾತಂತ್ರ್ಯಕ್ಕಾಗಿ ನಡೆದ ಅನೇಕ ಹೋರಾಟಗಳು ನಮಗೆ ಅದರ್ಶಪ್ರಾಯವಾಗಿವೆ. ಆ ಇತಿಹಾಸವನ್ನು ಯುವಜನರು ಅರಿಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಇದಕ್ಕೆ ಮೊದಲು ಅಮೃತ ಮಹೋತ್ಸವದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ತಹಸೀಲ್ದಾರ್ ಡಿ.ಎ.ದಿವಾಕರ್; ನಮ್ಮ ದೇಶ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಪ್ರತಿವರ್ಷ ಸಾಕಷ್ಟು ಸಡಗರ, ಸಂಭ್ರಮದಿಂದ ಆಚರಿಸುವ ಸ್ವಾತಂತ್ರ್ಯ ದಿನವನ್ನು ಈ ವರ್ಷ ಕೊರೋನಾ ಮಹಾಮಾರಿ ಕಾರಣಕ್ಕೆ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಆಚರಣೆ ಸರಳವಾದರೂ ಸಾಕಷ್ಟು ಹೋರಾಟದ ನಂತರ ಬ್ರಿಟೀಷರಿಂದ ಸಿಕ್ಕ ಸ್ವಾತಂತ್ರ್ಯದ ಮೌಲ್ಯ ದೇಶದ ಪ್ರತಿ ಪ್ರಜೆಗೂ ತಿಳಿದಿದೆ. ದೇಶಕ್ಕಾಗಿ ಮಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ನಾವೆಲ್ಲಾ ಹೆಮ್ಮೆ, ಗೌರವದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸೋಣ ಎಂದು ಅವರು ಹೇಳಿದರು.
ಸರಕಾರಿ ಕಾರ್ಯಕ್ರಮಗಳಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೂವಿನ ಹಾರ, ಹೂಗುಚ್ಛ, ಶಾಲು ಇನ್ನಿತರೆ ಕಾಣಿಕೆಗಳನ್ನು ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಕೋವಿಡ್-19 ಮೊದಲ ಮತ್ತು ಎರಡನೇ ಅಲೆಯ ಕಾಲದಲ್ಲಿ ಅವಿರತವಾಗಿ ಸೇವೆ ಸಲ್ಲಿಸಿ ಕೊರೋನ ವಾರಿಯರ್ಸ್ʼಗೆ ಆತ್ಮೀಯವಾಗಿ ಕನ್ನಡ ಪುಸ್ತಕವನ್ನು ನೀಡಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಓ ಮಂಜುನಾಥ ಸ್ವಾಮಿ, ಕೃಷಿ ಇಲಾಖೆ ನಿರ್ದೇಶಕ ಕೆ.ಸಿ.ಮಂಜುನಾಥ, ಬಿಇಓ ಎಸ್.ಸಿದ್ದಪ್ಪ, ಆರಕ್ಷಕ ವೃತ ನಿರೀಕ್ಷಿಕ ಡಿ.ಆರ್.ನಾಗರಾಜು, ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್, ತಾಲೂಕು ಆರೋಗ್ಯ ಅಧಿಕಾರಿ ಸಿ.ಎನ್.ಸತ್ಯನಾರಾಯಣ ರೆಡ್ಡಿ, ದೈಹಿಕ ಶಿಕ್ಷಣ ಪರಿವೀಕ್ಷಕ ಜಯರಾಮ್, ಇಸಿಓ ಆರ್.ಹನುಮಂತ ರೆಡ್ಡಿ, ಕೆ.ಬಿ.ಆಂಜನೇಯ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ.ವೆಂಕಟರವಣ, ಪ್ರಧಾನ ಕಾರ್ಯದರ್ಶಿ ಸಿ.ವೆಂಕಟರಾಯಪ್ಪ ಇನ್ನೂ ಮುಂತಾದವರು ಹಾಜರಿದ್ದರು.