ಪ್ರತೀ ಹಳ್ಳಿಗೆ ಶುದ್ಧ ಕುಡಿಯುವ ನೀರಿನ ಘಟಕ; ತಾಯಿ ಮತ್ತು ಮಗುವಿನ ಆಸ್ಪತ್ರೆಗೆ 3 ಎಕರೆ
by GS Bharath Gudibande
ಗುಡಿಬಂಡೆ: ತಾಲೂಕಿನ ಅಭಿವೃದ್ದಿಗೆ, ಹಳ್ಳಿಹಳ್ಳಿಗೆ ಶುದ್ಧ ಕುಡುಯುವ ನೀರು, ರಸ್ತೆಗಳು ಹೀಗೆ ನಾನು ಅಂದುಕೊಂಡ ಕೆಲಸಗಳೆಲ್ಲವೂ ತಕ್ಷಣ ಎಲ್ಲವೂ ಯಶಸ್ವಿಯಾಗಿ ಆಗುತ್ತಿವೆ. ಹಾಗಾಗಿ ನನಗೆ ಗುಡಿಬಂಡೆ ತಾಲೂಕು ಚಿಕ್ಕದಾದರೂ ಅದೃಷ್ಟದ ತಾಲೂಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಬಾಲಕಿಯರ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಲಾಗಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ ಅವರು ಮಾತನಾಡಿದರು.
ಗುಡಿಬಂಡೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಎಂಬ ಅಪವಾದವಿದೆ. ಅದನ್ನು ಕೆಲವೇ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಹಾಗೂ ರಾಜ್ಯಕ್ಕೆ ಮಾದರಿ ತಾಲೂಕಾಗಿ ಮಾಡುವ ಗುರಿ ಹೊಂದಿದ್ದೇನೆ. ಅದಕ್ಕಾಗಿ ತಾಲೂಕಿನ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ನನಗೆ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರತೀ ಹಳ್ಳಿಗೆ ಶುದ್ಧ ಕುಡಿಯುವ ನೀರಿನ ಘಟಕ
ಕುಡಿಯುವ ನೀರು ಅತ್ಯಗತ್ಯವಾದ ಅಂಶ. ಅದರಲ್ಲೂ ಶುದ್ಧ ಕುಡಿಯುವ ನೀರಿಗೆ ಮೊದಲ ಆದ್ಯತೆ. ತಾಲೂಕಿನಲ್ಲಿ 123 ಹಳ್ಳಿಗಳಿದ್ದು ಶೇ.90ರಷ್ಟು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ರಾಜ್ಯದಲ್ಲಿಯೇ ಇದು ದಾಖಲಾರ್ಹ ಸಾಧನೆ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು.
ಹೊಗೆ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಪ್ರತಿ ಮನೆಗೂ ಅಡುಗೆ ಅನಿಲ ಸಂಪರ್ಕ, ಶೌಚಾಲಯ ವ್ಯವಸ್ಥೆ, ಸಿ.ಸಿ ರಸ್ತೆ ಕಾಮಗಾರಿ, ಪಹಣಿ, 3 ಮತ್ತು 9ರ ತಿದ್ದುಪಡಿ, ಸುಮಾರು 250 ಫಲಾನುಭವಿಗಳಿಗೆ 5 ಏಕರೆ ನಿವೇಶನ ಮಂಜೂರು, ಶಿಕ್ಷಕರು ಹಾಗೂ ಕೊರೋನಾ ವಾರಿಯರ್ಸ್ʼಗೆ ವಿಶೇಷ ಸೌಲಭ್ಯಗಳು ಸೇರಿದಂತೆ ಇತ್ತೀಚೆಗೆ ಕೈಗೊಂಡ ಸುಧಾರಣಾ ಕ್ರಮಗಳನ್ನು ಶಾಸಕ ಸುಬ್ಬಾರೆಡ್ಡಿ ಅವರು ಪಟ್ಟಿ ಮಾಡಿದರು.
ತಾಯಿ ಮತ್ತು ಮಗುವಿನ ಆಸ್ಪತ್ರೆಗೆ 3 ಎಕರೆ
ತಾಲೂಕಿನ ಆಸ್ಪತ್ರೆ ಚಿಕ್ಕದಾಗಿದ್ದು, ತಾಯಿ ಮತ್ತು ಮಗುವಿನ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಅದಕ್ಕಾಗಿ 3 ಎಕರೆ ಜಮೀನು ಗುರುತಿಸಿ ಮಂಜೂರಾತಿಗಾಗಿ ಸರಕಾರಕ್ಕೆ ಮನವಿ ಕಳುಹಿಸಲಾಗಿದೆ. ಶೀಘ್ರದಲ್ಲಿ ಅದು ಅನುಮೋದನೆಯಾಗುತ್ತದೆ ಎಂದು ಅವರು ಹೇಳಿದರು.
ನಾನು ಶಾಸಕನಾಗಿ ಆಯ್ಕೆಯಾದ ನಂತರ ಗುಡಿಬಂಡೆ ತಾಲೂಕಿನ ಅಭಿವೃದ್ಧಿಗೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನಾನು ಶಾಸಕ, ನನ್ನದೇ ಮಾತು ನಡೆಯಬೇಕು ಎನ್ನುವ ಉದ್ದೇಶವಿಲ್ಲ ನನಗೆ. ತಾಲೂಕಿನ ಬಡಜನರಿಗೆ ಅನುಕೂಲ ಮಾಡಿ ಕ್ಷೇತ್ರದ ಜನರ ರಕ್ಷಣೆ ಮಾಡುವುದೇ ನನ್ನ ಉದ್ದೇಶ.
ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿಬ್ಗತ್ ವುಲ್ಲಾ, ಸಿಪಿಐ ಲಿಂಗರಾಜು, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ, ಪಪಂ ಮುಖ್ಯಾಧಿಕಾರಿ ರಾಜಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗಾಯತ್ರಿ ನಂಜುಂಡಪ್ಪ, ಪಪಂ ಸದಸ್ಯರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
Nice article and good news covered by Bharath G. S. Keep it up Bharath sir.