ಚಿಕ್ಕಬಳ್ಳಾಪುರ: ಕಳೆದ ಏಳು ವರ್ಷಗಳಿಂದ ಸ್ವಾತಂತ್ರ್ಯೋತ್ಸವದ ಭಾಷಣದಿಂದ ಮಾತ್ರವಲ್ಲದೆ ತಾವು ಧರಿಸಿದ ಡ್ರೆಸ್‌ನಿಂದಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಈಗ ಅವರು ಕ್ರಿಯೇಟ್ ಮಾಡಿರುವ ಟ್ರೆಂಡ್ ದಕ್ಷಿಣ ಭಾರತಕ್ಕೂ, ಅದರಲ್ಲೂ ಚಿಕ್ಕಬಳ್ಳಾಪುರಕ್ಕೂ ಎಂಟ್ರಿ ಕೊಟ್ಟಿದೆ!
ಪ್ರಧಾನಿಯಾಗಿ ಸತತ 7ನೇ ವರ್ಷದ ಭಾಷಣ ಮಾಡಿದ ಮೋದಿ ಅವರು, ಇಂದು ಕೂಡ ತೆಳು ನೀಲಿ ಕೋಟ್, ಬಿಳಿ ಕುರ್ತಾ, ಜೋಧಪುರಿ ಪ್ಯಾಂಟು ಧರಿಸಿದ್ದರು. ಎಂದಿನಂತೆ ಶಿರಕ್ಕೆ ಗುಜರಾತಿ ಶೈಲಿಯ ಪಗಡಿ (ಪೇಟಾ) ಧರಿಸಿ ಮಿಂಚಿದ್ದರು. ನಿರೀಕ್ಷೆಯಂತೆ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ಧಿರಿಸು ವೈರಲ್ ಆಗಿತ್ತು.
ಹಾಗೆಯೇ ಚಿಕ್ಕಬಳ್ಳಾಪುರದಲ್ಲೂ ಧ್ವಜಾರೋಹಣ ನೆರೆವೇರಿಸಿದ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಕೂಡ ಈ ಸಲ ಮೋದಿ ಅವರಂತೆಯೇ ಡ್ರೆಸ್ ಧರಿಸಿ ಮಿಂಚಿದರು.
ತಲೆಗೆ ರಾಜಸ್ತಾನಿ ಪಗಡಿ ಧರಿಸಿದ್ದ ಸುಧಾಕರ್ ಅವರು ಬಿಳಿ ಕುರ್ತಾ, ಅದಕ್ಕೆ ಪೂರಕವಾಗಿ ಪೈಜಾಮಾ ತೊಟ್ಟಿದ್ದರು. ಕಳೆದ ಜನವರಿ 26ರಂದು ಚಿನ್ನದ ಪಟ್ಟಿಗಳುಳ್ಳ ಕೇಸರಿ ಬಣ್ಣದ ಕುರ್ತಾ ತೊಟ್ಟಿದ್ದ ಅವರು, ನೀಟ್ ಧಿರಿಸಿನೊಂದಿಗೆ ಮಿಂಚಿದ್ದರು.
ಸಾಮಾನ್ಯವಾಗಿ ಸದಾ ನೀಟಾಗಿ ಡ್ರೆಸ್ ಮಾಡುವ ಡಾ.ಸುಧಾಕರ್ ಅವರು, ವಿಶೇಷ ಸಂದರ್ಭದಗಳಲ್ಲಿ ಇನ್ನಷ್ಟು ಚೆನ್ನಾಗಿ ಉಡುಪು ಧರಿಸುವುದು ಮಾತ್ರವಲ್ಲದೆ, ಅದು ವಿಭಿನ್ನವಾಗಿ ಇರುವಂತೆ ನೋಡಿಕೊಳ್ಳುತ್ತಾರೆ.
ಇತ್ತೀಚೆಗೆ ಅವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದಾಗ ಚಿಕ್ಕಬಳ್ಳಾಪುರದ ಸ್ಟೈಲಿನಲ್ಲಿ ಬಿಳಿ ಅಂಗಿ-ಪಂಚೆ ಧರಿಸಿ ರಾಜಭವನಕ್ಕೆ ಬಂದಿದ್ದರು. ಆಗಲೂ ಅವರು ಎಲ್ಲರ ಗಮನ ಸೆಳೆದಿದ್ದರು.