by GS Bharath gudibande
ಗುಡಿಬಂಡೆ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಶನಿವಾರ ಮಧ್ಯರಾತ್ರಿ ತಾಲೂಕು ಭಜರಂಗ ದಳದ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ತಾಲೂಕು ಕಚೇರಿ ಮುಂದೆ ಭಾರತದ ತ್ರಿವರ್ಣ ಧ್ವಜ ಹಾಗೂ ಪಂಜಿನ ಬೆಳಕಿನಲ್ಲಿ ನೂರಾರು ಕಾರ್ಯಕರ್ತರ ಜಯಘೋಷಗಳನ್ನು ಕೂಗುತ್ತಾ ಹಳೆಯ ಎಸ್.ಬಿ.ಎಂ ವೃತ್ತದವರೆಗೂ ಮೆರವಣಿಗೆ ನಡೆಸಿದರು.
ನೂರಾರು ವರ್ಷಗಳ ಕಾಲ ಆಂಗ್ಲರ ಗುಲಾಮರಾಗಿ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟಗಳನ್ನು ನಡೆಸಿದ ಮಹಾನ್ ನಾಯಕರ ಸ್ಮರಣಾರ್ಥ ಪಂಜಿನ ಮೆರವಣಿಗೆ ಮಾಡುತ್ತಿದ್ದೇವೆ ಎಂದು ಭಜರಂಗದಳದ ತಾಲೂಕು ಸಂಚಾಲಕ ಗರುಡಾಚಾರ್ಲಹಳ್ಳಿ ಜಿ.ಎ.ಅಮರೇಶ್ ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ವರ್ಷಗಳು ಇತರೆ ರಾಷ್ಟ್ರಗಳ ದಾಳಿಕೋರರಿಂದ ಭಾರತೀಯರು ಆಳಲ್ಪಟ್ಟರು. ಇಂದು ಅದೇ ರಾಷ್ಟ್ರಗಳು ಭಾರತದ ಸಹಾಯಕ್ಕಾಗಿ ಕೈ ಚಾಚಿ ನಿಂತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನ ಈಗ ಬದಲಾಗಿದೆ. ಎಲ್ಲಾ ರಂಗಗಳಲ್ಲಿಯೂ ದೇಶವು ಮುಂದುವರಿದಿದ್ದು ಭಾರತವು ಹಿಂದೆಂದಿಗಿಂತ ಬಲಿಷ್ಠ ರಾಷ್ಟ್ರವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯು ಈ ಸ್ವಾತಂತ್ರ್ಯ ದಿನವನ್ನು ಸಂತೋಷದಿಂದ ಆಚರಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಸಪಾ ರಾಜ್ಯ ಸಂಚಾಲಕ ಎನ್.ನಾರಾಯಣಸ್ವಾಮಿ ಮಾತನಾಡಿ, “ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರಿಕ್ಕಾಗಿ ಭಾರತಕ್ಕೆ ಬಂದಿತು. ಕೇವಲ ವ್ಯಾಪಾರ ಮಾಡಲು ಬಂದ ಬ್ರಿಟಿಷರು ಇಲ್ಲಿ ಆಧಿಪತ್ಯ ಸ್ಥಾಪಿಸಿ ಭಾರತವನ್ನು ವಶಪಡಿಸಿಕೊಂಡರು. ಭಾರತೀಯರೆಲ್ಲ ಒಂದಾಗಿ ಹಲವು ಹೋರಾಟಗಳನ್ನು ಮಾಡಿ ಅಗಸ್ಟ್ 14ರ ಮಧ್ಯರಾತ್ರಿ ಸ್ವಾತಂತ್ರ್ಯ ಪಡೆದುಕೊಂಡರು. ಆ ಸ್ಮರಣಾರ್ಥ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ನರಸಿಂಹರೆಡ್ಡಿ, ಕಾರ್ಯದರ್ಶಿ ಗಂಗೇಶ್, ಪ್ರಮುಖ ಶಿವಶಂಕರ್, ಉಪಾಧ್ಯಕ್ಷ ವಕೀಲ ಈಶ್ವರ ರೆಡ್ಡಿ, ಭಜರಂಗದಳ ಸಹ ಸಂಚಾಲಕ ಲಕ್ಷ್ಮೀಪತಿ, ಯುವ ಮುಖಂಡ ತಿಮ್ಮಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ರೆಡ್ಡಿ, ಶ್ರೀನಾಥ್, ಮುತ್ಯಾಲಪ್ಪ, ಜಯ ಕರ್ನಾಟಕ ಸಂಘಟನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ನವೀನ್, ತಾಲೂಕು ಅಧ್ಯಕ್ಷ ಬುಲೆಟ್ ಶ್ರೀನಿವಾಸ್, ಗ್ರಾಮ ವಿಕಾಸ ರವಿಕುಮಾರ, ಜೆಡಿಎಸ್ ಓಬಿಸಿ ಘಟಕದ ಅಧ್ಯಕ್ಷ ಗಾಂಧಿ ಶ್ರೀನಿವಾಸ್, ಭಜರಂಗದಳ ಮುಖಂಡರಾದ ಶ್ರೀನಿವಾಸ್, ಜಿತೇಂದ್ರ, ವೇಲು, ವೆಂಕಟೇಶ್ ಸ್ವಾಮಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.