ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಹೊತ್ತಿನಲ್ಲಿ ಒಂದು ಲಹರಿ
ನಮ್ಮದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋಲಂಪಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯ (ನಾನು ಓದುವಾಗ ಅದು ಕೋಲಾರ ಜಿಲ್ಲೆಯಲ್ಲೇ ಇತ್ತು..) ಗುಡಿಬಂಡೆ ತಾಲೂಕಿನ ಒಂದು ಪ್ರಮುಖ ಹಳ್ಳಿ. ಪ್ರಮುಖ ಹಳ್ಳಿ, ಏಕೆಂದರೆ.. ಸುತ್ತಮುತ್ತಲಿನ ಏಳೆಂಟು ಹಳ್ಳಿಗಳ ಪೈಕಿ ಮಿಡ್ಲ್ ಸ್ಕೂಲ್ ಎಂಬುದು ಇದ್ದದ್ದೂ ನಮ್ಮ ಊರಿನಲ್ಲೇ. ನಮ್ಮ ಶಾಲೆಯಲ್ಲಿ ಭರ್ಜರಿ ಪಾಠ ಆಗುತ್ತೆ ಎಂಬ ಕಾರಣಕ್ಕೆ ಜಂಗಾಲಹಳ್ಳಿ ಮತ್ತೂ ಆಚೆಗಿದ್ದ ಚಿಕ್ಕಬಳ್ಳಾಪುರ ತಾಲೂಕಿಗೆ ಸೇರಿದ್ದ ಏನಿಲ್ಲವೆಂದರೂ ನಮ್ಮೂರಿಗೆ ಐದು ಮೈಲು ದೂರವಿದ್ದ ಹಿರೇನಾಗವೇಲಿಯಿಂದ ಮಧು, ನರೇಂದ್ರ, ಮತ್ತೆ ಅವನ ಅಣ್ಣ ಸೇರಿ ಇನ್ನಿಬ್ಬರು ನಮ್ಮ ಶಾಲೆಗೆ ನಡೆದೇ ಬರುತ್ತಿದ್ದರು. ಮುಖ್ಯವಾಗಿ ಬಿ.ಬಸವರಾಜಯ್ಯ ಮಾಸ್ತರ ನಾಮಬಲ ಶಾಲೆಯಲ್ಲಿ ವಿದ್ಯಾರ್ಥಿಗಳ ಜಾತ್ರೆಗೆ ಕಾರಣವೂ ಆಗಿತ್ತು.
ಇಂಥ ನಮ್ಮ ಶಾಲೆಯಲ್ಲಿ, ನಾನು ಪ್ರೈಮರಿ ತರಗತಿ, ಅಂದರೆ- ಒಂದರಿಂದ ನಾಲ್ಕರವರೆಗೆ ಓದುವಾಗ ಮೊದಲ ಎರಡು ವರ್ಷ ಕೆ.ವಿ.ರಾಮರಾವ್ ಎಂಬ ಮೇಷ್ಟ್ರು ಪಾಠಕ್ಕೆ ಬರುತ್ತಿದ್ದರು. ಅವರು ನಮ್ಮದೇ ತಾಲೂಕಿನ ’ದಪ್ಪರ್ತಿ’ ಗ್ರಾಮದವರು. ಬೆಳಗ್ಗೆ ಸ್ಕೂಲ್ ಬೆಲ್ ಹೊಡೆಯುವುದಕ್ಕೆ ಐದು ನಿಮಿಷ ಹೆಚ್ಚೂ-ಕಮ್ಮಿ ಸೈಕಲ್ ಮೇಲೆ ಬಂದು ಚಕ್ಕನೇ ಇಳಿಯುತ್ತಿದ್ದರು. ಬಿಳಿ ಪಂಚೆ-ಪೈಜಾಮ ಅವರ ಕಾಸ್ಟ್ಯೂಮ್. ಥೇಟ್ ಹಳ್ಳಿಮೇಷ್ಟ್ರಂತೆಯೇ ಇದ್ದರು ಅವರು. ಇನ್ನು ಇವರು ಕ್ಲಾಸಿನಲ್ಲಿ ಪಾಠ ಮಾಡಿದ್ದಕ್ಕಿಂತ ಕುಂಡಿ ಎತ್ತಿ ಊಸು ಬಿಟ್ಟಿದ್ದೇ ಹೆಚ್ಚು. ಹೀಗೆ ಹೇಳುವುದು ಅಥವಾ ಬರೆಯುವುದು ತಪ್ಪಲ್ಲ ಅಥವಾ ಆಶ್ಲೀಲವೂ ಅಲ್ಲ. ಅವರ ಊಸಿನ ಸದ್ದು ಇವತ್ತು ನಗೆ ತರಿಸುತ್ತಲೇ ಇರುತ್ತದೆ. ಆದರೆ, ಕನ್ನಡ ಪಾಠದಲ್ಲಿ ಅವರು ಭಾರೀ ಖಡಕ್ಕು.
ನಮ್ಮದೋ ತೆಲುಗುಸೀಮೆ. ಎದೆ ಬಗೆದರೂ ’ಅ ಆ ಇ ಈ’ ಕನ್ನಡಕ್ಷರಗಳು ಕಾಣುತ್ತಿರಲಿಲ್ಲ.. ಕೊಡಕಲ್ಲಾರ! (… ಮಕ್ಕಳಿರಾ!) ಅಂತ ಎಷ್ಟೇ ಉಗಿದರೂ ನನಗಾಗಲಿ, ನನ್ನ ಜತೆಗಿದ್ದ ಯಾವನಿಗೇ ಆಗಲಿ ಅಕ್ಷರಮಾಲೆ ಒಲಿಯಲೇ ಇಲ್ಲ. ಹೀಗಿರಬೇಕಾದರೆ, ಗುಡಿಬಂಡೆಯಿಂದ ಹೊಸ ಮೇಷ್ಟರೊಬ್ಬರು ನಮ್ಮ ಶಾಲೆಗೆ ಬಂದರು. ಅವರ ಹೆಸರು ಫಕ್ರುದ್ದೀನ್ ಅಂತ. ಬಹಳ ಒಳ್ಳೆಯ ಮೇಷ್ಟ್ರು ಮಾತ್ರವಲ್ಲ, ಆ ಕಾಲಕ್ಕೆ ನೀಟ್ ಡ್ರೆಸ್ ಮಾಡಿಕೊಂಡು, ಅಂಗಿ ಮೇಲೊಂದು ವೇಸ್ಟ್ ಕೋಟ್ ಹಾಕಿ ಲೂನಾ ಗಾಡಿಯ ಮೇಲೆ ಠೀಕು-ಠಾಕಾಗಿ ಬರುತ್ತಿದ್ದರು. ಅವರು ಧರಿಸುತ್ತಿದ್ದ ಅಗಲವಾದ ಕೂಲಿಂಗ್ ಗ್ಲಾಸ್ ನಮ್ಮೆಲ್ಲರಿಗೂ ದೊಡ್ಡ ಅಚ್ಚರಿ. ಪಂಚೆ-ಪೈಜಾಮಾ ಧರಿಸಿ ಸೈಕಲ್ ಮೇಲೆ ಬುರತ್ತಿದ್ದ ರಾಮರಾವ್ ಮೇಷ್ಟ್ರು ಮತ್ತೂ ಲೂನಾ ಮೇಲೆ ಸ್ಟೈಲಿಷ್ ಆಗಿ ಬರುತ್ತಿದ್ದ ಫಕ್ರುದ್ದೀನ್ ಸಾಹೇಬರು ದಕ್ಷಿಣ-ಉತ್ತರದಂತೆ ಕಾಣುತ್ತಿದ್ದರು. ಅದುವರೆಗೂ ಸೈಕಲ್ ಮೇಲೆ ಬಂದು ಇಳಿಯುತ್ತಿದ್ದ ರಾಮರಾಯರು ನಮಗೊಂದು ಕಾಮಿಡಿ ಫೀಸ್ ಆಗಿದ್ದರೆ, ಅವರ ನಂತರ ಬಂದ ಲೂನಾ ಮೇಷ್ಟ್ರು ಜೇಮ್ಸ್ ಬಾಂಡ್ ಥರಾ ಕಾಣುತ್ತಿದ್ದರು. ಆಗ ನನಗೆ ಜೇಮ್ಸ್ ಬಾಂಡ್ ಯಾರೆಂದೂ ಗೊತ್ತಿರಲಿಲ್ಲ. ಬಿಟ್ಟರೆ, ಇನ್ನು ನಮ್ಮ ಹೆಡ್’ಮಾಸ್ಟರ್ ಸುಬ್ಬರಾಯಪ್ಪ ಅವರು ಪಕ್ಕದ ಪಾವಜೇನಹಳ್ಳಿಯಿಂದ ಬರುತ್ತಿದ್ದರು. ಅವರು ಕೂಡ ಸೈಕಲ್ ಮೇಲೆಯೇ ಬರುತ್ತಿದ್ದರು. ಸದಾ ಗಂಭೀರವಾಗಿರುತ್ತಿದ್ದ ಅವರು ನಮಗೆ ಐದರಿಂದ ಕನ್ನಡಕ್ಕೆ ಬಂದು ಏಳನೇ ಕ್ಲಾಸ್’ವರೆಗೂ ಪಾಠ ಮಾಡಿದ್ದರು. ಮೆದುಮಾತಿನ ಅವರ ಕನ್ನಡ ಪಾಠ ಇವತ್ತಿಗೂ ಸೊಗಸು ಎನಿಸುತ್ತದೆ. ಕನ್ನಡವೆಂದರೆ ಅವರಿಗಿದ್ದ ಪ್ರೀತಿ ಅಷ್ಟಿಷ್ಟಲ್ಲ.
ಇನ್ನು ನಮಗೆಲ್ಲರಿಗೂ ಇಷ್ಟದ ಗುರುವಾಗಿದ್ದವರು ಬಸವರಾಜಯ್ಯ. ನಮ್ಮ ಶಾಲೆಯಲ್ಲಿ ಅವರು ಅಲ್’ರೌಂಡರ್ . ಗಣಿತವಿರಲಿ, ಸಮಾಜವಿರಲಿ ಅಥವಾ ಇಂಗ್ಲೀಷ್ ಆಗಲಿ ನಿರರ್ಗಳವಾಗಿ ಪಾಠ ಹೇಳುತ್ತಿದ್ದರು. ನಾನಂತೂ ಅವರಿಗೆ ಮನೆ ಶಿಷ್ಯನೇ ಆಗಿಬಿಟ್ಟಿದ್ದೆ. ಹಾಗೆ ಅನ್ನುವುದಕ್ಕಿಂತ ಅವರ ಮಾನಸಪುತ್ರನೇ ಆಗಿದ್ದೆ.
ಹೀಗಿರಬೇಕಾದರೆ, ಶಾಲೆಯಲ್ಲಿ ಅಗಸ್ಟ್ 15, ಜನವರಿ 26 ಈ ಎರಡೂ ದಿನಗಳನ್ನು ಬಹಳ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿತ್ತು. ಪ್ರತಿ ಶುಕ್ರವಾರ ಸರಸ್ವತಿ ಪೂಜೆ ತಪ್ಪುತ್ತಿರಲಿಲ್ಲ. ಇಂಥ ಶುಕ್ರವಾರ ಬಂದರೆ ಎಲ್ಲ ಮೇಷ್ಟ್ರುಗಳು ತಲಾ ಹತ್ತೋ ಇಪ್ಪತ್ತೋ ರೂಪಾಯಿ ಕೊಟ್ಟರೆ, ವಾರಕ್ಕೊಂದು ಕ್ಲಾಸಿನ ಮಕ್ಕಳು ನಾಲ್ಕಾಣೆ, ಎಂಟಾಣೆ ಹಾಕಿಕೊಂಡು ಪೂಜೆ ಮಾಡಿಸುವ ಪರಿಕ್ರಮವಿತ್ತು. ಅದೊಂದು ಸಂಭ್ರಮ. ತಾಯಿ ಸರಸ್ವತಿ ಫೋಟೋ ಇಟ್ಟು ಭಕ್ತಿ ಗೀತೆಗಳನ್ನು ಹಾಡುವುದು ನಮ್ಮೆಲ್ಲರ ಪರಿಪಾಠವಾಗಿತ್ತು. ನಾವೆಷ್ಟೇ ಕೆಟ್ಟದಾಗಿ ಹಾಡಿದರೂ ನಮ್ಮ ಮೇಷ್ಟ್ರುಗಳು ದಯೆಯಿಂದ ಕೇಳಿಸಿಕೊಂಡು ಕ್ಷಮಿಸುತ್ತಿದ್ದರು ಎಂಬುದು ಬೇರೆ ಮಾತು.
ಇನ್ನು ನಮ್ಮ ಸಂಭ್ರಮದ ಆಕಾಶಕ್ಕೆ ಏಣಿ ಹಾಕುತ್ತಿದ್ದ ಸಂದರ್ಭವೆಂದರೆ ಅಗಸ್ಟ್ 15, ಜನವರಿ 26. ಅಗಸ್ಟ್ 15 ಬರುತ್ತೆ ಎನ್ನುವಾಗಲೇ ವಾರಕ್ಕೆ ಮೊದಲು ನನ್ನನ್ನುಸೇರಿ ನಾಲ್ಕೈದು ಹುಡುಗರನ್ನು ಕರೆದು (7ನೇ ಕ್ಲಾಸಿನಲ್ಲಿ ಇದ್ದವರಿಗೆ ಮಾತ್ರ) ಎ4 ಸೈಜಿನ ಬಿಳಿ ಹಾಳೆಯಲ್ಲಿ ಚಂದಾ ವಸೂಲಿಯ ಮನವಿಯನ್ನು ಸ್ವತಃ ಬಸವರಾಜಯ್ಯ ಅವರೇ ಬರೆದುಕೊಡುತ್ತಿದ್ದರು. ಅವರ ಕನ್ನಡ ಬರಹ ಹೇಗಿತ್ತು ಎಂದರೆ, ಅಕ್ಷರಗಳನ್ನು ಮುತ್ತುಗಳಂತೆ ಪೋಣಿಸುತ್ತಿದ್ದರು. ಆ ಬಿಳಿ ಹಾಳೆಯನ್ನು ಒಂದು ಪರೀಕ್ಷೆ ರಟ್ಟಿಗೆ ಸಿಕ್ಕಿಸಿಕೊಂಡು ಹೊರಟರೆ ನಮಗೆ ಮೊದಲು ಬೋಣಿ ಮಾಡುತ್ತಿದ್ದವರು ನಮ್ಮೂರಿನ ಹಿರೀಕರಾಗಿದ್ದ ಪಿ.ಎಲ್. ರಾಮಕೃಷ್ಣರಾಯರು. ಅವರು ಏನಿಲ್ಲವೆಂದರೂ ರೂಪಾಯಿ 50ರ ಮೇಲೆಯೇ ಬರೆಯುತ್ತಿದ್ದರು. ಅಲ್ಲಿ ಬೋಣಿ ಚೆನ್ನಾಗಿ ಬಿತ್ತು ಎಂದರೆ ಉಳಿದ ಕಡೆ ವಸೂಲಿ ಸುಲಭ ಎಂಬ ನಂಬಿಕೆ ನಮ್ಮದು.
ನಮ್ಮ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು..
ಇದಾದ ಮೇಲೆ ನಮ್ಮ ಸವಾರಿ ಪಕ್ಕದ ಅಪ್ಪಿರೆಡ್ಡಿ ಹಳ್ಳಿಯ ಮುನಿರೆಡ್ಡಿಯವರ ಮನೆ ಮತ್ತು ನಡುವನಹಳ್ಳಿಯ ಆದಿನಾರಾಯಣ ರೆಡ್ಡಿ ಅವರ ಮನೆಯತ್ತ. ಬೆಳಗ್ಗೆ 8 ಗಂಟೆಗೂ ಮುನ್ನ ಅವರ ಮನೆ ತಲುಪಿದರೆ ಕಾಸು ಪಕ್ಕಾ. ಮುನಿರೆಡ್ಡಿ ಅವರು ಒಮ್ಮೆ 100 ರೂಪಾಯಿ ಕೊಟ್ಟ ನೆನಪು, ಆದಿನಾರಾಯಣ ರೆಡ್ಡಿ ಅವರದ್ದೂ ದೊಡ್ಡ ಕೈ. ಮೊದಲೇ ಪಟ್ಟಿ ಮಾಡಿಕೊಂಡು ಹಣ ಕೊಡುವವರನ್ನು ತಪ್ಪದೇ ಹೋಗಿ ಕೇಳುತ್ತಿದ್ದೆವು. ಈ ಪೈಕಿ ಜಂಗಾಲಹಳ್ಳಿಯ ಗೋಪಿನಾಥರಾಯರೂ ಒಬ್ಬರು. ಇವರು ಇಂಗ್ಲೀಷಿನಲ್ಲಿ ಭಾರೀ ಪಂಡಿತರು. ಆಮೇಲೆ ನನಗೆ ನ್ಯಾಷನಲ್ ಕಾಲೇಜಿನಲ್ಲಿ ಎಲ್’ಆರ್’ಕೆ ಎಂಬ ಲೆಕ್ಚರರ್ ಜ್ಯೂಲಿಯಸ್ ಸೀಜರ್ ಪಾಠ ಮಾಡುತ್ತಿದ್ದರೆ, ನನಗೆ ಷೇಕ್ಸ್’ಪಿಯರನ ಜತೆ ಅದೇ ಗೋಪಿನಾಥರಾಯರು ನೆನಪಾಗುತ್ತಿದ್ದರು. ನಾನು ಸೆಕೆಂಡ್ ಪಿಯುಸಿ ಓದುವಾಗಲೇ ಅವರು ನನಗೆ ಗ್ರಾಮರ್ ಪಾಠ ಹೇಳುತ್ತ ಷೇಕ್ಸ್’ಪಿಯರನ ಬಗ್ಗೆ ಕಥೆಯಂತೆ ಹೇಳುತ್ತಿದ್ದರು. ನನ್ನ ಕರ್ಮಕ್ಕೆ ಅವರಲ್ಲಿ ನಾನು ಬಹಳ ದಿನ ಕಲಿಯಲಾಗಲಿಲ್ಲ. ಇನ್ನು ಅವರು, ಪ್ರತಿಸಲವೂ 25 ರೂಪಾಯಿ ಕೊಟ್ಟೇ ಕೊಡುತ್ತಿದ್ದರು.
ಇನ್ನು ಕೆಲವರು ಕೊಡುವುದಾಗಿ ಹೇಳಿ ಬಿಳಿಹಾಳೆ ಮೇಲೆ ಹೆಸರು ಬರೆದು ಸಹಿ ಕೂಡ ಮಾಡಿರುತ್ತಿದ್ದರು. ಐದಾರು ಸಲ ಅವರ ಮನೆ ಬಾಗಿಲಿಗೆ ಹೋದರೂ ಕಾಸು ಮಾತ್ರ ಕಾಣುತ್ತಿರಲಿಲ್ಲ. ಆಗೆಲ್ಲ ನಮ್ಮದೇ ಶೈಲಿಯಲ್ಲಿ ಶಾಪ ಹಾಕುತ್ತಿದ್ದೆವು. ’ಬಳ್ಳಾಪುರದಲ್ಲಿ (ಅಂದರೆ, ಚಿಕ್ಕಬಳ್ಳಾಪುರ) ಆಯಪ್ಪನ ಜೇಬಿಗೆ ಕಂಡೋರ ಕೈ ಬೀಳಾ’, ’ರಾತ್ರಿಗೆ ಅವರ ಮನೆಗೆ ಕಳ್ಳರು ಬೀಳಾ’, ’ನಡೆಯಬೇಕಾದ್ರೆ ಪಂಚೆ ಕಿತ್ತು ನಿಕ್ಕರ್ ಕಾಣಾ’, .. ಹೀಗೆ ಒಂದಲ್ಲ ಎರಡಲ್ಲ ಹತ್ತಿಪ್ಪತ್ತು ನಾಟಿ ಶೈಲಿಯ ಶಾಪ ಹಾಕಿ ಬರುತ್ತಿದ್ದೆವು. ಏನೇ ಆಗಲಿ, ಈ ವಸೂಲಿ ಕಾರ್ಯಕ್ರಮದಿಂದ ಸಂಗ್ರಹವಾಗುತ್ತಿದ್ದ ಮೊತ್ತದಿಂದ ಕಾರ್ಯಕ್ರಮದ ದಿನ ಭರ್ಜರಿ ಕೊಬರಿ ಮಿಠಾಯಿ, ವಿವಿಧ ಸ್ಪರ್ಧೆಗಳಲ್ಲಿ ಗೆಲ್ಲುವ ಮಕ್ಕಳಿಗೆ ಬಹುಮಾನ, ಧ್ವಜಸ್ತಂಭದ ಸುತ್ತ ಅಲಂಕಾರ ಇತ್ಯಾದಿಗೆ ಖರ್ಚಾಗುತ್ತಿತ್ತು. ಖರ್ಚಿಗೆ ಕಡಿಮೆ ಬಿದ್ದರೆ ಮೇಷ್ಟ್ರುಗಳ ಜೇಬಿಗೆ ಕತ್ತರಿ ಖಚಿತ. ಈ ಪೈಕಿ ಫಕ್ರುದ್ಧೀನ್ ಸಾಹೇಬರು ಬಹಳ ಧಾರಾಳಿ.
ಇನ್ನು ಸ್ವಾತಂತ್ರ್ಯ ಸಂಭ್ರಮ ಅಂತೀರಾ? ನಮ್ಮ ಕೈಗೆ ಮಾಸ್ತರಿಂದ ಬಿಳಿಶೀಟ್ ಬಂದಾಗಿನಿಂದಲೇ ಸಡಗರ, ಸಂಭ್ರಮ ನಮ್ಮನ್ನು ಆವರಿಸಿಕೊಳ್ಳುತ್ತಿತ್ತು. ಹಿಂದಿನ ದಿನವೇ ನಮ್ಮೂರಿನ ನಾರಿಯರು ಮತ್ತು 7ನೇ ಕ್ಲಾಸಿನಲ್ಲಿ ಓದುತ್ತಿದ್ದ ನಮ್ಮ ಜೊತೆಯ ಹೆಣ್ಣುಮಕ್ಕಳು ಶಾಲೆಯ ಅಂಗಳವನ್ನು ತೊಳೆದು, ಸಾರಿಸಿ ಸ್ವಚ್ಛ ಮಾಡುತ್ತಿದ್ದರು. ಅವರು ಹಾಕುತ್ತಿದ್ದ ಬಣ್ಣಬಣ್ಣದ ರಂಗೋಲಿಯ ಸೊಬಗು ಇವತ್ತಿಗೂ ಹಸಿರು. ನಾನು, ನರೇಂದ್ರ, ಮೇಡಿಮಾಕಲ ಹಳ್ಳಿಯ ಮಂಜು, ಮುಕುಂದ, ಜಂಗಾಲಹಳ್ಳಿಯ ನಂದೀಶ, ಮೇಲಿನ ಅಪ್ಪಿರೆಡ್ಡಿ ಪಲ್ಲಿಯ ಗುರಪ್ಪ, ಗಿಡ್ಡಪ್ಪನಹಳ್ಳಿಯ ಪೂಜಪ್ಪ ಇತ್ಯಾದಿ ಎಲ್ಲರೂ ತಳಿರುತೋರಣ ಕಟ್ಟಿದರೆ, ಅದೇ ಮೇಡಿಮಾಕಲ ಹಳ್ಳಿಯ ಸಾವಿತ್ರಿ, ಅಪ್ಪಿರೆಡ್ಡಿಪಲ್ಲಿಯ ಪ್ರಸನ್ನಕುಮಾರಿ, ಜಂಗಾಲಹಳ್ಳಿಯ ಜಯಲಕ್ಷ್ಮೀ ಮುಂತಾದವರು ಅಂಗಳಕ್ಕೆ ಹೂವಿನ ಅಲಂಕಾರ ಮಾಡುತ್ತಿದ್ದರು. ಆವತ್ತಿಗೆ ಅದೆಷ್ಟು ಚೆಂದ ಇತ್ತೆಂದರೆ, ಯುಗಾದಿ, ದೀಪಾವಳಿಗಿಂತ ಅಗಸ್ಟ್ 15, ಜನವರಿ 26ಗಳೇ ನಮಗೆ ಸಂಭ್ರಮದ ಕಣಜಗಳಾಗಿದ್ದವು.
ಕೊನೆಗೆ, ಆವತ್ತಿನ ಬೆಳಗ್ಗೆ ಸೂರ್ಯ ಹುಟ್ಟುವ ಕ್ಷಣದಿಂದ ಸಂಜೆ ಧ್ವಜಸ್ತಂಭದಿಂದ ಬಾವುಟವನ್ನು ಕೆಳಗಿಳಿಸುವ ತನಕ ನಮ್ಮ ಸಡಗರಕ್ಕೆ ಕೊಂಚ ಧಣಿವಾಗುತ್ತಿರಲಿಲ್ಲ. ಬೆಳಗ್ಗೆ ಶಾಲೆಯಿಂದ ಹೊರಟ ಮೆರವಣಿಗೆ ಊರೆಲ್ಲ ಸಾಗುವುದು, ಘೋಷಣೆ-ಜಯಕಾರಗಳನ್ನು ಕೂಗುವುದು ಇತ್ಯಾದಿಗಳು, ಅದಾದ ಮೇಲೆ ಶಾಲೆಯ ಬಳಿ ಗಣ್ಯರ ಭಾಷಣ, ಹಾಡು-ಪಾಡು, ಬಹುಮಾನಗಳ ವಿತರಣೆ, ಬಹುಮಾನವಾಗಿ ಬರುತ್ತಿದ್ದ ಪೆನ್ನೋ, ನೋಟ್ ಪುಸ್ತಕವೋ ಅಥವಾ ಜಾಮೀಟರಿ ಪೆಟ್ಟಿಗೆಯೋ.. ಅದು ಸಿಕ್ಕಕೂಡಲೇ ಬಿಗಿಯಾಗಿ ಎದೆಗವಚಿಕೊಳ್ಳುವುದು, ಭಾಷಣ ಮುಗಿಯುತ್ತಿದ್ದಂತೆ ಪುಟ್ಟಪ್ಪ ಸ್ವಾಮಿಗಳೋ ಅಥವಾ ಲಕ್ಷ್ಮಣರಾಯರ ಪುತ್ರ ನರಸಿಂಹಮೂರ್ತಿ ಸ್ವಾಮಿಗಳು ತರುತ್ತಿದ್ದ ಕೊಬರಿ ಮಿಠಾಯಿಯ ಸವಿರುಚಿಗೆ ಬಾಯಲ್ಲಿ ನೀರು ತುಂಬಿಸಿಕೊಳ್ಳುವುದೂ.. ಇದ್ದೇ ಇತ್ತು.
ಈ ಸಂದರ್ಭದಲ್ಲಿ ನಮ್ಮ ಹಳ್ಳಿಯ ಕೆಲವರು ಶಾಶ್ವತ ಪಟಗಳಾಗಿ ನನ್ನಲ್ಲಿ ತುಂಬಿಹೋಗಿದ್ದಾರೆ. ಇವರಲ್ಲಿ ಪ್ರಮುಖರು ಪುಟ್ಟಪ್ಪಸ್ವಾಮಿಗಳು, ಅವರ ಪಾಲಿಗೆ ನಾನು ಪ್ರೀತಿಯ ಫಟಿಂಗ!! ಹೀಗೆಂದು ನನ್ನ ಕಿವಿಯನ್ನು ಹಿಂಡುತ್ತಿದ್ದ ಅವರು ಅಗಸ್ವ್ 15ರಂದು ನಮ್ಮ ಶಾಲೆಯಲ್ಲಿ ತಪ್ಪದೇ ಇರುತ್ತಿದ್ದರು. ಇನ್ನು, ಪಿ.ಎಲ್. ರಾಮಕೃಷ್ಣರಾವ್. ಅವರೂ ಇವೆಲ್ಲ ಸಂಭ್ರಮಗಳ ಅವಿಭಾಜ್ಯ ಅಂಗವಾಗಿರುತ್ತಿದ್ದರು. ಉಳಿದಂತೆ, ಸುಬ್ಬರೆಡ್ಡಿ, ಪಿ.ವಿ.ನಾರಾಯಣಪ್ಪ ಮುಂತಾದವರೆಲ್ಲ ನಮ್ಮ ಶಾಲೆಯ ಸಡಗರಕ್ಕೆ, ನಮ್ಮ ಆನಂದಕ್ಕೆ ಆಸರೆಯಾಗಿದ್ದವರು.
ಇದೆಲ್ಲವೂ ನನ್ನ ಬಾಲ್ಯದ ಬಹುದೊಡ್ಡ ನೆನಪಿನ ಗಂಟು. ಬಿಚ್ಚಿದಂತೆಲ್ಲ ಮುಗಿಯದ ನೆನಪು, ಕಾಪಿಟ್ಟುಕೊಂಡಿದ್ದೇನೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳ ಹೊತ್ತಿಗೆ ಅಮೃತ ಮಹೋತ್ಸವದ ವೇಳೆ ಹಳ್ಳಿಶಾಲೆಯ ನೆನಪುಗಳೆಲ್ಲ ಇಲ್ಲಿ ಅಕ್ಷರಗಳಾಗಿವೆ.
ಸಹನೆಯಿಂದ ಓದಿದ್ದಕ್ಕೆ ಧನ್ಯವಾದಗಳು. ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು…
ಜೈ ಹಿಂದ್..
ಹಳ್ಳಿಯಿಂದ ದಿಲ್ಲಿಯವರೆಗೆ ನಿಮ್ಮಸಾಧನೆ ಅಧ್ಬುತ ಸರ್…
ಒಬ್ಬ ಹಳ್ಳಿ ಹೈದ ನಮ್ಮಂತಹ ಯುವ ಬರಹಗಾರರಿಗೆ ಸ್ವೂರ್ತಿ…
ಭೂತ ಕಾಲದ ಘಟನೆಗಳನ್ನು ಮೆಲುಕು ಹಾಕಿದ ನಿಮಗೆ ಧನ್ಯವಾದಗಳು ಸರ್.
ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ