ಸರಕಾರದ ಮೇಲೆ ಅವಲಂಬನೆ ಬೇಡ; ಹಬ್ಬದ ದಿನಗಳಲ್ಲಿ ಮಾರ್ಗಸೂಚಿ ಪಾಲಿಸಿ
ಬೆಂಗಳೂರು: ಎಲ್ಲದಕ್ಕೂ ಸರಕಾರದ ಮೇಲೆ ಅವಲಂಬಿತರಾಗದೆ, ಈ ಬಾರಿ ಕೊರೊನ ಮೂರನೇ ಅಲೆಯನ್ನು ನಿಯಂತ್ರಿಸುವ ಮಹತ್ವದ ಜವಾಬ್ದಾರಿ ಜನರ ಮೇಲೆ ಇದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು ಹಾಗೂ ಕಾರ್ಯಪಡೆಯ ಸದಸ್ಯರಾದ ಡಾ. ಸಿ.ಎನ್.ಮಂಜುನಾಥ್ ಜನರಿಗೆ ಸಲಹೆ ಮಾಡಿದರು.
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಕರೋನಾ ಕಾರ್ಯಪಡೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕೊರೊನಾ ಮೂರನೇ ಅಲೆ ಈಗಾಗಲೇ ಯಾವಾಗ ಬರುತ್ತದೆ ಎಂದು ಎಲ್ಲರ ಮನಸಲ್ಲಿ ಕಾಡುತ್ತಿದೆ. ಆದರೆ ಇದನ್ನು ನಿರ್ಧರಿಸುವುದು ನಾವಲ್ಲ ಅಥವಾ ತಜ್ಞ ವೈದ್ಯರಲ್ಲ, ಅದು ಜನರ ಮೇಲೆಯೇ ನಿಂತಿದೆ ಎಂದು ಕಿವಿಮಾತು ಹೇಳಿದರು.
ಜನತೆ ಎಷ್ಟು ಮುಂಜಾಗ್ರತೆ ಕ್ರಮಗಳನ್ನು ವಹಿಸಿ ಸರಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಾರೋ ಅಷ್ಟು ನಮಗೆ ಕೊರೊನಾ ದಿಂದ ಸುರಕ್ಷತೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸರಕಾರ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಬ್ಬಹರಿದಿನಗಳಂದು ಜನರು ಗುಂಪುಗೂಡುವುದು ಮತ್ತು ಊರಿಗೆ ತೆರಳುವುದು ಸೂಕ್ತವಲ್ಲ . ಇನ್ನೂ ಕನಿಷ್ಠ ಪಕ್ಷ 6ತಿಂಗಳಾದರೂ ನಾವು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಕೈಗಳನ್ನು ತೊಳೆಯುವುದು ಸ್ಯಾನಿಟೈಸರ್ ಬಳಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸಲಹೆ ಕೊಟ್ಟರು.
ರಾಜ್ಯ ಸರ್ಕಾರ ಕೂಡ ಹೆಚ್ಚಿನ ಒತ್ತುಕೊಟ್ಟು ನಿಯಂತ್ರಣಕ್ಕೆ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದೆ ಆದರೆ ಇದಕ್ಕೆ ಜನರ ಸ್ಪಂದನೆ ಅತ್ಯಗತ್ಯ ಇದಿಲ್ಲದಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಎಚ್ಚರಿಸಿದರು .
ಮನುಷ್ಯತ್ವ ಮಾನವೀಯತೆ ಬೆಳೆಸಿಕೊಳ್ಳುವುದು ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ಮೊದಲನೇ ಕೊರೊನಾ ಸಂದರ್ಭದಲ್ಲಿ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳು ಪೊಲೀಸರು ಪೌರಕಾರ್ಮಿಕರು ಸೇರಿದಂತೆ ಅನೇಕ ಸೇವೆಯನ್ನು ನಾವು ಮರೆಯುವಂತಿಲ್ಲ ಪ್ರಶಂಸೆ ವ್ಯಕ್ತಪಡಿಸಿದರು.
ಕೊರೊನಾ ಪರೀಕ್ಷೆ ಲಸಿಕೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾಕಷ್ಟು ಒಳ್ಳೆಯ ಕೆಲಸವನ್ನೇ ಮಾಡಿದೆ .ಮೂರನೇ ಅಲೆಯ ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಕೂಡ ಎಚ್ಚರಿಕೆಯಿಂದ ಇರಬೇಕು ಮತ್ತು ಮುಂಜಾಗ್ರತಾ ಕ್ರಮ ವಹಿಸಬೇಕು.ಲಸಿಕೆ ತೆಗೆದುಕೊಂಡ ನಂತರವೂ ಕೊವಿಡ್ ಬರಬಹುದು. ಆದರೆ ಅದು ಬಾಧಿಸುವ ಪ್ರಮಾಣ ಮಾತ್ರ ಕಡಿಮೆಯಾಗಲಿದೆ ಯಾರಿಗೂ ಕೂಡ ಅಪನಂಬಿಕೆ ಅಂಜಿಕೆ ಇರಬಾರದು.
ಡಾ. ಸಿ.ಎನ್.ಮಂಜುನಾಥ್
ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಎರಡು ಆಯ್ಕೆ ಮಾಡಿಕೊಳ್ಳುತ್ತೇವೆ.ಒಂದು ನಾವು ಗಳಿಸುವುದು. ವ್ಯಯ ಮಾಡುವುದು ಇದನ್ನು ಬಿಟ್ಟು ನಾವು ಉಸುರಿ ನಿಲ್ಲಿಸಿದಾಗ ಏನನ್ನೂ ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ ಮಾತನಾಡಿ,ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಂಕಷ್ಟದ ಸಂದರ್ಭದಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದೆ.ಅದರಂತೆ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಕೊರೊನಾ ವಾರಿಯರ್ಸ್ʼಗಳ ಅವಿರತ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ರಾಜ್ಯ ಸರಕಾರ ಕೊವಿಡ್ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ .ಸಮಾಜದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯವಿದೆ ಅದೇ ರೀತಿ ಕೊರೋನಾ ವನ್ನು ದೂರ ಮಾಡುವ ಶಕ್ತಿ ಜನಸಾಮಾನ್ಯರಿಗಿದೆ ಎಂದು ಹೇಳಿದರು.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್ ಮಾತನಾಡಿ,ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಕೇವಲ ಒಂದುಧರ್ಮದ ಸ್ವಾಮೀಜಿ ಎಂದು ನಾನು ಹೇಳಲಾರೆ ಅವರ ಎಲ್ಲರ ಮನದಲ್ಲಿ ಮನಸ್ಸಲ್ಲಿ ನೆಲೆಸಿದ್ದಾರೆ ಶ್ರೀಮಠದಿಂದ ಕೊರೊನಾ ಸಂದರ್ಭದಲ್ಲಿ ಮಾನವೀಯತೆಯ ಸೇವಾ ಕಾರ್ಯವನ್ನು ಮಾತಿನಲ್ಲಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.
ವೈದ್ಯರು ತಮ್ಮ ಕಾಯಕವನ್ನು ಪ್ರೀತಿಸಬೇಕು ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯ ಶ್ಲಾಘನೀಯವಾಗಿದ್ದು ಸರ್ಕಾರಕ್ಕೆ ಮಾರ್ಗದರ್ಶನ ಜೊತೆಗೆ ಮಾನವೀಯ ನೆಲೆಯಲ್ಲಿ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಮಹತ್ತರವಾದ ಕಾರ್ಯ ಮಾಡಿದೆ ಎಂದು ಹೇಳಿದರು.