ಈ 23ರಿಂದ 8ರಿಂದ 11ನೇ ತರಗತಿ ಆಫ್‌ಲೈನ್ ಕ್ಲಾಸ್; ಪ್ರಾಥಮಿಕ-ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಘೋಷಣೆ
ಬೆಂಗಳೂರು: ಈ ತಿಂಗಳ 23ರಿಂದ ಶಾಲೆ-ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭ ಮಾಡಲು ಸರಕಾರ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಅವರು; 8ರಿಂದ 11ನೇ ತರಗತಿಗಳ ಭೌತಿಕ ಪಾಠಗಳನ್ನು ಆರಂಭ ಮಾಡಲು ನಿರ್ಧರಿಸಲಾಗಿದ್ದು, ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರನ್ನು ಕೋರಿದರು.
ರಾಜ್ಯದಲ್ಲಿ ಒಂದನೇ ತರಗತಿಯಿಂದಲೇ ಶಾಲೆ ಆರಂಭಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಅಗಸ್ಟ್ 30 ರಂದು ತಜ್ಞರ ಸಲಹಾ ಸಮಿತಿ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಶೇ.2ರಷ್ಟು ಪಾಸಿಟಿವಿಟಿಗಿಂತ ಕೆಳಗಿರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ಆರಂಭಿಸಲಾಗುವುದು. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡಿಲ್ಲ. ಸೋಂಕು ಪತ್ತೆಯಾದರೆ ಅಂತಹ ಶಾಲೆಗಳನ್ನ ಒಂದು ವಾರ ಕಡ್ಡಾಯವಾಗಿ ಮುಚ್ಚುತ್ತೇವೆ ಎಂದು ಸಚಿವ ನಾಗೇಶ್ ತಿಳಿಸಿದರು.
ಶಾಲೆಗಳ ಆರಂಭಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ನೇರ ತರಗತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಲಾಗುವುದು ಎಂದು ಅವರು ಹೇಳಿದರು.
ಮಾಸ್ಕ್ ಕಡ್ಡಾಯ
ಮಕ್ಕಳು ಮಾಸ್ಕ್ ಧರಿಸಿ ಶಾಲೆಗೆ ಬರುವುದು ಕಡ್ಡಾಯ. ಶಾಲೆಗೆ ಬಂದು ಮನೆಗೆ ಹೋಗುವ ತನಕ ಮಾಸ್ಕ್ ತೆಗೆಯುವಂತಿಲ್ಲ. ಅವರ ಪೋಷಕರೇ ಕರೆದುಕೊಂಡು ಬಂದು ವಾಪಸ್ ಕರೆದುಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳು ಏಕಲಾಲಕ್ಕೆ ನಡೆಯಲಿದ್ದು, ವಿದ್ಯಾರ್ಥಿಗಳು ತಮಗಿಚ್ಛೆ ಬಂದ ಫ್ಲಾಟ್‌ಫಾರಂನಲ್ಲಿ ಕಲಿಯಬಹುದು. ಶಾಲೆಗೆ ಹಾಜರಾಗಲೇ ಬೇಕು ಎಂಬುದು ಕಡ್ಡಾಯ ಅಲ್ಲ ಎಂದರು ಸಚಿವರು.
ಶಾಲೆಯ ಆವರಣದಲ್ಲಿ ಮಕ್ಕಳು ಕಲಿತರೆ ಜ್ಞಾನ ವಿಕಾಸ ಉತ್ತಮವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ. ಅದನ್ನು ಸರಕಾರ ಪುರಸ್ಕರಿಸಿದೆ ಎಂದು ಶಿಕ್ಷಣ ಸಚಿವರು, ಶಾಲೆ-ಕಾಲೇಜುಗಳ ಸ್ವಚ್ಛತೆ, ನಿರ್ವಹಣೆ, ಮೇಲುಸ್ತುವಾರಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳ ಸಹಕಾರ ಪಡೆಯಲಾಗುತ್ತಿದೆ. ಅಲ್ಲದೆ, ಎಲ್ಲ ನಗರಸಭೆ, ಪಟ್ಟಣ ಪಂಚಾಯಿತಿ ಆಡಳಿತಗಳ ನೆರವನ್ನೂ ಪಡೆದುಕೊಳ್ಳಲಾಗುತ್ತಿದೆ ಎಂದು ಸಚಿವ ನಾಗೇಶ್ ವಿವರಿಸಿದರು.
3ನೇ ಅಲೆ ಆತಂಕ: ಶಾಲೆ ಆರಂಭಕ್ಕೆ ವಿರೋಧ
ಕೊರೋನಾ 3ನೇ ಅಲೆ, ಇನ್ನೊಂದೆಡೆ ಹಲವಾರು ಜಿಲ್ಲೆಗಳಲ್ಲಿ ಸೋಂಕು ಉಲ್ಬಣ ಆಘುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳಿನಿಂದಲೇ ಶಾಲೆ ಆರಂಭ ಮಾಡುವುದು ಬೇಡ ಎಂದು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳ ಒಕ್ಕೂಟದ (Private Hospitals and Nursing Homes Association-PHANA) ಅಧ್ಯಕ್ಷ ಡಾ.ಪ್ರಸನ್ನ ಸರಕಾರಕ್ಕೆ ಸಲಹೆ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು; ಸದ್ಯದ ಸ್ಥಿತಿಯಲ್ಲಿ ಶಾಲೆಗಳ ಆರಂಭ ಒಳ್ಳೆಯದಲ್ಲ. 3ನೇ ಅಲೆ ಭೀತಿ ತೀವ್ರವಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ಪರಿಸ್ಥಿತಿ ಗಂಭೀರವಾಗಿದೆ. ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ೩ನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಕೆಲ ಅಧ್ಯಯನಗಳು ಹೇಳಿವೆ ಎಂದು ಅವರು ಗಮನ ಸೆಳೆದಿದ್ದಾರೆ.
ಇನ್ನು, ರಾಜಧಾನಿ ಬೆಂಗಳೂರಿನಲ್ಲಿ ಪರಿಸ್ಥಿತಿ ತೀವ್ರವಾಗಿದೆ. ಕಳೆದ 10 ದಿನಗಳಲ್ಲಿ 500-600 ಜನರಲ್ಲಿ ಸೋಂಕು ಪತ್ತೆಯಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಹೊರತುಪಡಿಸಿ ಕಾಲೇಜುಗಳನ್ನು ಆರಂಭಿಸಬಹುದು ಎಂದು ಪ್ರಸನ್ನ ಹೇಳಿದ್ದಾರೆ.