ಹಾಗಾದರೆ ಜಮೀರ್ ಎಲ್ಲಿಗೆ? ಮಾಜಿ ಸಿಎಂ ರಚಿಸಿದ ರಣವ್ಯೂಹ ಹೇಗಿದೆ?
#CkNewsNowExclusive
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಹೊತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಧಾನಿಯ ಚಾಮರಾಜಪೇಟೆ ವಿಧಾಸಭೆ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ವ್ಯವಸ್ಥಿತ ರಣವ್ಯೂಹ ರೆಡಿ ಮಾಡಿಕೊಂಡಿರುವ ಸಿದ್ದರಾಮಯ್ಯ ತಮ್ಮ ರಾಜಕೀಯ ವಿರೋಧಿಗಳ ಅಡ್ಡಿ ಆತಂಕಗಳ ನಡುವೆಯು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಅವರ ರಾಜಕೀಯ ತಂತ್ರಗಾರಿಕೆ ಪ್ರಕಾರ ಸಿದ್ದರಾಮಯ್ಯ ಅವರಿಗಾಗಿ ಪಟ್ಟ ಶಿಷ್ಯ ಜಮೀರ್ ಅಹಮದ್ಖಾನ್, ಚಾಮರಾಜಪೇಟೆ ಕ್ಷೇತ್ರವನ್ನು ಬಿಟ್ಟು ಕೊಡಲಿದ್ದಾರೆ. ಅಲ್ಲಿಂದ ಗುಳೆ ಹೊರಡುವ ಜಮೀರ್ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಶಿವಾಜಿನಗರದಿಂದ ಸ್ಪರ್ಧಿಸಲಿದ್ದಾರೆ.
ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಶಿವಾಜಿನಗರದಲ್ಲಿ ಆಯ್ಕೆಗೊಂಡ ರಿಜ್ವಾನ್ ಹರ್ಷದ್ ತಮ್ಮ ತವರು ಮೈಸೂರಿಗೆ ವಲಸೆ ಹೋಗಲಿದ್ದು, ಅಲ್ಲಿನ ನರಸಿಂಹರಾಜ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಈ ಮೂಲಕ ಒಂದೆ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದುರುಳಿಸುವ ಉಪಾಯ ಹೂಡಿರುವ ಸಿದ್ದರಾಮಯ್ಯ ಅವರು ನರಸಿಂಹರಾಜ ಕ್ಷೇತ್ರದಿಂದ ತಮ್ಮ ರಾಜಕೀಯ ಕಡು ವಿರೋಧಿ ತನ್ವೀರ್ ಸೇಠ್ ಅವರನ್ನು ವಕ್ಕಲೆಬ್ಬಿಸುವ ಹೊಂಚು ಹಾಕಿದ್ದಾರೆ.
ಒಂದಡೆ ಪ್ರಬಲ ರಾಜಕೀಯ ಎದುರಾಳಿಯಾಗಿರುವ ಡಿ.ಕೆ.ಶಿವಕುಮಾರ್ ಉರುಳಿಸುತ್ತಿರುವ ದಾಳಗಳನ್ನು ಎದುರಿಸುತ್ತಲೇ ಮತ್ತೊಂದಡೆ ತಮ್ಮ ರಾಜಕೀಯ ಭವಿಷ್ಯವನ್ನು ಸ್ಥಿರಗೊಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ಅವರಿಗೆ ಸೃಷ್ಠಿಯಾಗಿದೆ.
ಈ ಮಾಸ್ಟರ್ ಪ್ಲ್ಯಾನ್ನ ಸ್ವರೂಪವೇ ಬಾದಾಮಿ ಟು ಚಾಮರಾಜಪೇಟೆ ಮತ್ತು ಆಪರೇಷನ್ ಶಿವಾಜಿನಗರ ಮತ್ತು ನರಸಿಂಹರಾಜ ಕ್ಷೇತ್ರಗಳು.
ಚಾಮರಾಜಪೇಟೆಯಲ್ಲಿ ಕಣಕ್ಕಿಳಿಯುವುದು ತೀರ್ಮಾನಿಸುತ್ತಿದ್ದಂತೆ ಆ ಕ್ಷೇತ್ರದ ಮತದಾರರನ್ನು ಓಲೈಯಿಸಿಕೊಳ್ಳಲು ಸಿದ್ದರಾಮಯ್ಯ ಕಳೆದ ಮೂರು ತಿಂಗಳಲ್ಲಿ ಒಂಭತ್ತು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಈ ಅವಧಿಯಲ್ಲಿ ತಾವು ಸದ್ಯಕ್ಕೆ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಕ್ಕೆ ಒಂದೇ ಬಾರಿ ಹೋಗಿರುವುದು. ಇದು ಗಮನಾರ್ಹ ಸಂಗತಿಯಾಗಿದೆ.
ಅತೀ ಹೆಚ್ಚು ಅಲ್ಪಸಂಖ್ಯಾತರು ಮತ್ತು ಕೊಳಗೇರಿಗಳನ್ನು ಒಳಗೊಂಡಿರುವ ಚಾಮರಾಜಪೇಟೆ ಕ್ಷೇತ್ರ ಕಾಂಗ್ರೆಸ್ಗೆ ಸುರಕ್ಷಿತ ಕ್ಷೇತ್ರ.
ಜಮೀರ್ ಅಹಮದ್ ತಮ್ಮ ಬೆನ್ನಿಗೆ ನಿಂತಿರುವಾಗ ನಿರಾಯಾಸವಾಗಿ ವಿಧಾನಸಭೆ ಪ್ರವೇಶಿಸಬಹುದು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.
ಡಿ.ಕೆ.ಶಿವಕುಮಾರ್
೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ, ಅಧಿಕಾರಕ್ಕೆ ತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೊಂಕಕಟ್ಟಿ ಒಂದಡೆ ನಿಂತಿದ್ದು, ಈ ಬಾರಿ ಮುಖ್ಯಮಂತ್ರಿಯಾಗಬೇಕೆಂಬ ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂಡೆ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಅವರ ಬೆಂಬಲಿಗರು ಪಣತೊಟ್ಟಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಜಮೀರ್ ಅಹಮದ್ಖಾನ್ ಎರಡು ವರ್ಷಗಳಿಗೂ ಮುನ್ನವೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಮಾಡಿದರು. ಅದಾದ ನಂತರ ಅವರ ಬೆಂಬಲಿಗರೂ ಇದನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ.
ವರಿಷ್ಠರ ಎಚ್ಚರಿಕೆಯನ್ನು ಕಡೆಗಣಿಸಿ, ಸಿದ್ದರಾಮಯ್ಯ ಅವರ ಪರ ಸಾರ್ವಜನಿಕವಾಗಿ ಹೇಳಿಕೆ ಕೊಡುತ್ತಿದ್ದಾರೆ. ಇದು ಶಿವಕುಮಾರ್ ಅವರಿಗೆ ಇರಿಸುಮುರಿಸು ತಂದಿದ್ದರೂ, ಏನನ್ನೂ ತೋರ್ಪಡಿಸಿಕೊಳ್ಳುತ್ತಿಲ್ಲ.
ಏನೇ ಆಗಲಿ, ಮೊದಲು ವಿಧಾನಸಭೆ ಪ್ರವೇಶಿಸೋಣ.. ನಂತರ ಮುಂದಿನದ್ದು ಎಂಬ ನಿರ್ಧಾರಕ್ಕೆ ಬಂದಿರುವ ಸಿದ್ದರಾಮಯ್ಯ ಸುಲಭವಾಗಿ ಮತ ಗಳಿಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಪರಾಜಯಗೊಂಡು ಬಾದಾಮಿಯಲ್ಲಿ ಬಹಳ ಕಷ್ಟಪಟ್ಟು ಅತ್ಯಂತ ಕಡಿಮೆ ಅಂತರದಲ್ಲಿ ಆಯ್ಕೆಗೊಂಡು ವಿಧಾನಸಭೆ ಪ್ರವೇಶ ಮಾಡಿದ್ದರು ಸಿದ್ದರಾಮಯ್ಯ. ಅಂತಹ ಪರಿಸ್ಥಿತಿ ಮತ್ತೆ ಬರಬಾರದೆಂದು ಎರಡು ವರ್ಷಗಳ ಮುನ್ನವೇ ಎಚ್ಚರಿಕೆ ವಹಿಸಿದ್ದಾರೆ.