ಗದ್ದೆಗಿಳಿದು ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ
ಮಂಡ್ಯ: ಕೊರೊನಾದಿಂದ ಕಂಗೆಟ್ಟಿದ್ದ ರೈತರಿಗೆ ಸ್ಥೈರ್ಯ ತುಂಬುವ ಸಲುವಾಗಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ವತಃ ತಾವೇ ಗದ್ದೆಗಿಳಿದು ಭತ್ತ ನಾಟಿ ಮಾಡಿದರಲ್ಲದೆ, ಭತ್ತ ನಾಟಿ ಮಾಡಲು ಬಳಸುವ ಯಂತ್ರವನ್ನೂ ಚಾಲನೆ ಮಾಡಿ ಎಲ್ಲರ ಗಮನ ಸೆಳೆದರು.
ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದ ನಿಮಿತ್ತ ಮಂಡ್ಯಕ್ಕೆ ಭೇಟಿ ನೀಡಿದ ಅವರು, ಜಿಲ್ಲೆಯ ಕೊಮ್ಮೆರಹಳ್ಳಿ ಗ್ರಾಮದಲ್ಲಿ ಸ್ಥಳೀಯ ಮಹಿಳೆಯರ ಜತೆಗೂಡಿ ಗದ್ದೆಗೆ ಇಳಿದೇಬಿಟ್ಟರಲ್ಲದೆ, ಭತ್ತದ ನಾಟಿಯನ್ನೂ ಮಾಡಿ ಸೈ ಎನಿಸಿಕೊಂಡರು. ಕೇಂದ್ರ ಸಚಿವೆ ಎಂಬುದನ್ನು ಮರೆತ ಶೋಭಾ ಹಳ್ಳಿಯ ಮಹಿಳೆಯರಿಗಿಂತ ತುಸು ವೇಗವಾಗಿಯೇ ಭತ್ತ ನಾಟಿ ಮಾಡಿದರು.
ಬಳಿಕ ಮಾತನಾಡಿದ ಅವರು ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದು, ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆ ಯೋಜನೆಗಳನ್ನು ಕೊನೆಯ ರೈತರ ತನಕ ತಲುಪಿಸಲು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ನೇತೃತ್ವದಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಖಾದ್ಯ ತೈಲ, ಎಣ್ಣೆಯಲ್ಲಿ ನಾವು ಸ್ವಾವಲಂಬನೆ ಸಾಧಿಸಬೇಕಿದೆ. ಶೇ.70ರಷ್ಟು ಖಾದ್ಯ ತೈಲ ಬೇರೆ ದೇಶಗಳಿಂದ ಬರುತ್ತಿದೆ. ಟ್ರ್ಯಾಕ್ಟರ್, ಟಿಲ್ಲರ್ ಸಬ್ಸಿಡಿಯಲ್ಲಿ ನೀಡುವುದು, ಬಾಡಿಗೆಯಲ್ಲಿ ಯಂತ್ರೋಪಕರಣ ಒದಗಿಸುವುದು, ಕೃಷಿ ಸಿಂಚಾಯಿ ಯೋಜನೆಗೆ ವಿಶೇಷವಾದ ಅನುಕೂಲತೆ, ರಸಗೊಬ್ಬರಕ್ಕೆ ಸಬ್ಸಿಡಿ, ಖಾದ್ಯ ತೈಲವನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಸ್ವಾವಲಂಬನೆ ಸಾಧಿಸಲಾಗುವುದು.
ಶೋಭಾ ಕರಂದ್ಲಾಜೆ
ರಾಜ್ಯದಲ್ಲಿ ನಾಲ್ಕು ಸಚಿವರು ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಹಳ ಅದ್ಭುತವಾದ ಸ್ವಾಗತವನ್ನು ಮಂಡ್ಯ ಮತ್ತು ಮದ್ದೂರಿನ ಜನರು ನನಗೆ ನೀಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ದೇಶದಾದ್ಯಂತ ಕೇಂದ್ರದ ನೂತನ ಸಚಿವರ ಜನಾಶೀರ್ವಾದ ಯಾತ್ರೆ ಆರಂಭವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಸಮುದಾಯ, ಮಹಿಳೆಯರಿಗೆ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ಆದ್ಯತೆ ಕೊಡಲಾಗಿದೆ ಎಂದ ಅವರು; ಅತ್ಯಂತ ಹಿಂದುಳಿದ ಪ್ರದೇಶದ ರೈತನ ಮಗಳಾದ ತಮಗೆ ಸಚಿವ ಸ್ಥಾನ ನೀಡಿದ್ದಕ್ಕಾಗಿ ಪ್ರಧಾನಿಗಳಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.
ಮಂಡ್ಯದ ಸಕ್ಕರೆ- ಬೆಲ್ಲ ರಫ್ತು ಮಾಡಲು ಉತ್ತೇಜನ ಕೊಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಹಲವಾರು ದೇಶಗಳಲ್ಲಿ ಆಹಾರದ ಕೊರತೆ ಕಾಡಿತ್ತು. ಆದರೆ, ಭಾರತವು ಆಹಾರದ ಸಮಸ್ಯೆ ಎಸುರಿಸಲಿಲ್ಲ. ರೈತರ ಪರಿಶ್ರಮದ ಪರಿಣಾಮವಾಗಿ ಭಾರತದ ಎಲ್ಲರಿಗೂ ಆಹಾರ ಸಮಸ್ಯೆ ಕಾಡಲಿಲ್ಲ. ಎಲ್ಲರಿಗೂ ಆಹಾರ ಲಭಿಸಿದೆ ಎಂದು ವಿಶ್ಲೇಷಿಸಿದರು.
ರೈತರಿಗೆ ಹೆಚ್ಚು ಅನುಕೂಲ ಮಾಡುವ ಸಂಕಲ್ಪ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರದ್ದಾಗಿದೆ. 1,23,000 ಕೋಟಿ ರೂಪಾಯಿಯನ್ನು ಕೃಷಿ ಇಲಾಖೆಗೆ ಈ ಸಾಲಿನ ಬಜೆಟ್ನಲ್ಲಿ ಮೀಸಲಿಡಲಾಗಿದೆ. ಸಂಶೋಧನೆ ಮತ್ತು ಶಿಕ್ಷಣಕ್ಕೆ 8,500 ಕೋಟಿ ರೂಪಾಯಿ ನೀಡಿದ್ದಾರೆ. ಇದು ರೈತರನ್ನು ಸಮರ್ಪಕವಾಗಿ ತಲುಪಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ರೈತರ ಉನ್ನತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು. ಮಹಿಳೆಯರ ಜೊತೆ ಗದ್ದೆ ನಾಟಿ ಮಾಡಿದರು. ಪಡಿತರ ಕೇಂದ್ರಕ್ಕೂ ಭೇಟಿ ನೀಡಿ ಪಡಿತರ ಸಕಾಲದಲ್ಲಿ ಲಭಿಸುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು.
ರಾಜ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣ ಗೌಡ, ಶಾಸಕ ಎಲ್.ನಾಗೇಂದ್ರ, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಜಿಲ್ಲಾ ಅಧ್ಯಕ್ಷ ಕೆ.ಜೆ.ವಿಜಯ ಕುಮಾರ್, ಮುಖಂಡರಾದ ಎ.ಮಂಜು. ಡಾ.ಸಿದ್ದರಾಮಯ್ಯ ಹಾಗೂ ಬಿಜೆಪಿ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.