ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪವರ್ ಪಾಲಿಟಿಕ್ಸ್
by Ra Na Gopala Reddy Bagepalli
ಬಾಗೇಪಲ್ಲಿ: ಪಟ್ಟಣದ ಹೊರವಲಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಮಂಡಿಸಲಾದ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಸೋಲುಂಟಾಗಿದೆ.
ವಿಚಿತ್ರವೆಂದರೆ, ಇಲ್ಲಿ ಅಧ್ಯಕ್ಷರ ವಿರುದ್ಧ ಉಪಾಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅಧ್ಯಕ್ಷ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಇಬ್ಬರೂ ಮಂಡಿಸಿದ್ದ ಗೊತ್ತುವಳಿ ನಿರ್ಣಯಕ್ಕೆ ಸೋಲುಂಟಾಗಿ ಇಬ್ಬರೂ ಆಧಿಕಾರದಲ್ಲಿ ಮುಂದುವರಿದಿದ್ದಾರೆ!!
ಪರಿಣಾಮವಾಗಿ ಹಾಲಿ ಅಧ್ಯಕ್ಷ ಎಸ್. ಸೋಮಶೇಖರ್‌ರೆಡ್ಡಿ, ಉಪಾಧ್ಯಕ್ಷ ಕೆ.ಆರ್.ಆಂಜಿನಪ್ಪ ಅಧಿಕಾರದಲ್ಲಿ ಮುಂದುವರೆದಿದ್ದು, ತಾಲೂಕಿನ ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಭಾರೀ ಚರ್ಚೆಗೆ ಒಳಗಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ 1966ರ ಹಾಗೂ 1968ರ ನಿಯಮ 49 (1) ರಂತೆ ನಿಗಧಿತ ನಮೂನೆ 27ರಲ್ಲಿ ಕಾರಣಗಳನ್ನು ಸೂಚಿಸಿ, ಕೃಷಿ ಉತ್ಪನ್ನ ಸಮಿತಿಯ ಅಧ್ಯಕ್ಷ ಎಸ್. ಸೋಮಶೇಖರ್‌ರೆಡ್ಡಿ ಅವರ ವಿರುದ್ಧ ಕಳೆದ ದಿನಾಂಕ 29/07/2021 ರಂದು ಉಪಾಧ್ಯಕ್ಷ ಕೆ.ಆರ್.ಅಂಜಿನಪ್ಪ ಸಲ್ಲಿಸಿದ್ದ ಅವಿಶ್ವಾಸ ಸೂಚನೆಯ ನೋಟೀಸ್ ಮಂಡನೆಯಂತೆ ಇಂದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ಒಟ್ಟು 13 ಸದಸ್ಯರ ಪೈಕಿ ಐದು ಸದಸ್ಯರಾದ ಟಿ.ನರಸಿಂಹಪ್ಪ, ಜಿ.ಎನ್. ರಾಮಚಂದ್ರಪ್ಪ, ಮಂಗೇನಾಯಕ್, ಪಿ.ರಾಮಚಂದ್ರರೆಡ್ಡಿ ಹಾಗೂ ಬಿ.ನಾರಾಯಣರೆಡ್ಡಿ ಅವರು ಅವಿಶ್ವಾಸದ ಪರ ಮತ ಚಲಾಯಿಸಿದರು. ಆದರೆ ನಮೂನೆ 27ರಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿರುವಂತೆ ಒಟ್ಟು ಐದು ಜನ ಸಮಿತಿಯ ಸದಸ್ಯರು ಮಾತ್ರ ಅಧ್ಯಕ್ಷ ಎಸ್.ಸೋಮಶೇಖರರೆಡ್ಡಿ ಮಂಡಿಸಿದ ಅವಿಶ್ವಾಸ ಸೂಚನೆಯ ಪರವಾಗಿ ಮತ ಚಲಾಯಿಸಿರುವುದರಿಂದ ಸಮಿತಿಯ ಒಟ್ಟು ಸದಸ್ಯರ 2/3 ಸಂಖ್ಯೆ ಸದಸ್ಯರು ಅವಿಶ್ವಾಸ ಗೊತ್ತುವಳಿ ಸೂಚನೆ ಪರವಾಗಿ ಸಮರ್ಥಿಸಿಲ್ಲದ ಕಾರಣ ಸದರಿ ಎಸ್.ಸೋಮಶೇಖರ್ ಅಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಸೂಚನೆ ಅಂಗೀಕಾರವಾಗಿರುವುದಿಲ್ಲ ಎಂದು ತೀರ್ಮಾನಿಸಲಾಯಿತು.
ಇದೇ ರೀತಿಯಲ್ಲಿ ಈ ಹಿಂದೆ ಉಪಾಧ್ಯಕ್ಷ ಕೆ.ಆರ್. ಅಂಜಿನಪ್ಪ ಅವರ ವಿರುದ್ಧ ಕಳೆದ 06/07/2021 ರಂದು ಅಧ್ಯಕ್ಷ ಎಸ್.ಸೋಮಶೇಖರ ರೆಡ್ಡಿ ಮಂಡಿಸಲಾದ ಅವಿಶ್ವಾಸಕ್ಕೆ ವೆಂಕಟರೆಡ್ಡಿ, ವೈ.ಅಶ್ವತ್ಥರೆಡ್ಡಿ, ಇಂದಿರಾ ಹಾಗೂ ನಾರಾಯಣಮ್ಮ ಸೇರಿದಂತೆ ನಾಲ್ಕು ಜನ ಸದಸ್ಯರು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ನಮೂನೆ 27ರಂತೆ 2/3 ಸದಸ್ಯ ಬಲವಿಲ್ಲದೆ ಅವಿಶ್ವಾಸ ಗೊತ್ತುವಳಿ ಬಿದ್ದುಹೋಗಿ ಯಾಥಾಸ್ಥಿತಿಯಾಗಿ ಅಧ್ಯಕ್ಷ ಎಸ್.ಸೋಮಶೇಖರ್ ಹಾಗೂ ಉಪಾಧ್ಯಕ್ಷ ಕೆ.ಆರ್. ಅಂಜಿನಪ್ಪ ಅವರುಗಳೇ ಮಂದುವರಿದಿದ್ದಾರೆ.
ಸಭಾಧ್ಯಕ್ಷರಾಗಿ ಜಂಟಿ ನಿರ್ದೇಶಕರು ಮತ್ತು ಕಾರ್ಯದರ್ಶಿ ಹಣ್ಣು ಹೂವು ತರಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಂಗಳೂರು ಹಾಗು ಹಣ್ಣು ಹೂವು ತರಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಾಗೇಪಲ್ಲಿ ಸಮಿತಿಯ ಕಾರ್ಯದರ್ಶಿ ಸಿ.ರಾಮದಾಸು ಹಾಗೂ ಜಗನ್ನಾಥ ಉಪ ಕಾರ್ಯದರ್ಶಿಯಾಗಿ ಇಂದು ನಡೆದ ಸಭೆಯ ಕಲಾಪಗಳ ಮೇಲುಸ್ತುವಾರಿ ವಹಿಸಿದ್ದರು.