ಅರಮನೆ ನಗರಿಯಲ್ಲಿರುವ ಆಫ್ಘಾನ್ ಶಿಕ್ಷಣಾರ್ಥಿಗಳಿಗೆ ಪೋಷಕರದ್ದೇ ಚಿಂತೆ
ಮೈಸೂರು: ಸದ್ಯಕ್ಕೆ ಆಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ತೀರಾ ಹದಗೆಟ್ಟಿದೆ. ನೀವು ಭಾರತ ಬಿಟ್ಟು ಬರಬೇಡಿ ಎಂದು ತಮ್ಮ ಪೋಷಕರು ತಿಳಿಸಿದ್ದಾರೆಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘಾನಿಸ್ತಾನದ ವಿದ್ಯಾರ್ಥಿಗಳು ಹೇಳಿದ್ದಾರೆ.
ಇನ್ನೂ ಸ್ವಲ್ಪ ದಿನ ನೀವೆಲ್ಲರೂ ಭಾರತದಲ್ಲೇ ಇರಿ, ಇಲ್ಲಿಗೆ ಬರಬೇಡಿ ಅಂತ ಹೇಳುತ್ತಿದ್ದಾರೆ. ಆದರೂ ಮುಂದೆ ಏನಾಗಲಿದೆಯೋ ಎಂಬ ಭಯವಿದೆ ನಮಗೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮೈಸೂರು ವಿವಿಯಲ್ಲಿ ಆಫ್ಘಾನಿಸ್ತಾದ 92 ವಿದ್ಯಾರ್ಥಿಗಳು ಓದುತ್ತಿದ್ದು, ಸದ್ಯಕ್ಕೆ ಮೈಸೂರೇ ನಮ್ಮ ಆಶ್ರಯತಾಣ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡ ವಿದ್ಯಾರ್ಥಿಗಳು; ನಿಜಕ್ಕೂ ನಾವೆಲ್ಲರೂ ಆತಂಕದಲ್ಲಿದ್ದೇವೆ. ನಮ್ಮ ಪೋಷಕರು ಸಂಕಷ್ಟದಲ್ಲಿದ್ದಾರೆ. ಆದರೂ ಅವರು ನಮ್ಮ ಯೋಗ ಕ್ಷೇಮಕ್ಕಾಗಿ ಕಾಳಜಿ ತೋರುತ್ತಿದ್ದಾರೆ. ನಮ್ಮ ಪಾಲಿಗೆ ಭಾರತವೇ ಎಲ್ಲ. ಹೀಗಾಗಿ ನಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.
ಇದೇ ವೇಳೆ ತನ್ನ ದೇಶದಲ್ಲಿರುವ ಕುಟುಂಬಸ್ಥರ, ಮಹಿಳೆಯರು ಪರಿಸ್ಥಿತಿ ಮುಂದೇನೋ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, 20 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಮಹಿಳೆಯರು ಕಚೇರಿಗೆ ಹೋಗುತ್ತಿದ್ದರು. ಸರಕಾರದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇಂದು ಮನೆಯ ಮೂಲೆಯಲ್ಲಿ ಕುಳಿತು ತಾಲಿಬಾನಿಗಳು ಏನು ನಿರ್ಧಾರ ಕೈಗೊಳ್ಳುತ್ತಾರೋ ಅಂತ ಭಯದಿಂದ ಕಾಯುವ ಆತಂಕದ ಸ್ಥಿತಿ ಇದೆ. ಸ್ಥಳೀಯರು ಭಯದಿಂದ ಬದುಕುತ್ತಿದ್ದಾರೆ ಎಂದರು.
ನಾವು ನಮ್ಮ ಪೋಷಕರೊಂದಿಗೆ ಮಾತನಾಡಿದ್ದೇವೆ. ಸದ್ಯಕ್ಕೆ ಎಲ್ಲರೂ ಸುರಕ್ಷಿತವಾಗಿದ್ದಾರೆ. ನೀವು ಭಾರತದಲ್ಲೇ ಇರಿ, ಇಲ್ಲಿಗೆ ಬರಬೇಡಿ ಅಂತ ಅವರು ನಮಗೆ ಹೇಳುತ್ತಿದ್ದಾರೆ. ತಾಲಿಬಾನಿಗಳಿಗೆ ಅಧಿಕಾರ ನಡೆಸಿ ಗೊತ್ತಿಲ್ಲ. ಹಿಂದೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದನ್ನು ಯಾರೂ ಮರೆತಿಲ್ಲ. ಜನರಿಗೆ ಜೀವ ಭಯ ಶುರುವಾಗಿದೆ. ರಾಜಧಾನಿ ವಶಕ್ಕೆ ಪಡೆದ ನಂತರ ಇದುವರೆಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಆದರೆ ಮುಂದೆ ಏನಾಗುತ್ತೋ ಅನ್ನುವ ಚಿಂತೆ ಶುರುವಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಅವರು ಇಸ್ಲಾಮಿಕ್ ಆಡಳಿತ ಹೇರಿದ್ದಾರೆ. ವಿದೇಶಿಯರು ಯಾರೂ ಇರಬಾರದು ಎಂದಿದ್ದಾರೆ. ಸದ್ಯ ಭಾರತ ನಮ್ಮಗಳ ವೀಸಾ ವಿಸ್ತರಿಸಬೇಕು. ಪ್ರಪಂಚ ನಮ್ಮತ್ತ ನೋಡಬೇಕು. ಅಲ್ಲಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿ ವಿದ್ಯಾಭ್ಯಾಸ ನೀಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಇದೇ ವೇಳೆ ವಿದ್ಯಾರ್ಥಿಗಳನ್ನು ಕರೆಯಿಸಿ ಸಭೆ ನಡೆಸಿದ ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಭಯಪಡಬೇಡಿ. ನಿಮ್ಮ ಜೊತೆ ನಾವಿದ್ದೇವೆ. ನಾವು ನಿಮ್ಮ ಪೋಷಕರಂತೆ ನಿಮ್ಮನ್ನು ನೋಡಿಕೊಳ್ಳುತ್ತೇವೆ. ಈಗ ಓದಿನ ಕಡೆ ಮಾತ್ರ ನಿಮ್ಮ ಗಮನವಿರಲಿ ಎಂದು ಅಭಯ ನೀಡಿದರು.
ಇದೇ ವೇಳೆ ಬುಧವಾರ ಕೂಡ ಕ್ಯಾಂಪಸ್ಸಿನಲ್ಲಿ ಆಫ್ಘಾನ್ ವಿದ್ಯಾರ್ಥಿಗಳು ಆತಂಕದಿಂದಲೇ ಕಾಣಿಸಿಕೊಂಡರು. ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರು. ನರೇಂದ್ರ ಮೋದಿ ಸರಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.