ವಾಷಿಂಗ್ಟನ್: ತಾಲಿಬಾನ್ ಯಶಸ್ವಿಯಾಗಿ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಚೀನಾ, ರಷ್ಯಾ ಮತ್ತು ಪಾಕಿಸ್ತಾನದ ಬೆಂಬಲ ಗಿಟ್ಟಿಸಿದರೂ ಅಂತಾರಾಷ್ಟ್ರೀಯ ಸಮುದಾಯದ ತೀವ್ರ ನಿಗಾ ಇರಿಸಿದೆ.
ಅಮೆರಿಕದ ಜೋ ಬೈಡನ್ ಆಡಳಿತವಂತೂ ತಾಲಿಬಾನ್‌ಗಳಿಗೆ ಮಾನ್ಯತೆ ನೀಡುವುದಿರಲಿ, ಅದು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಆರ್ಥಿಕ ಶಾಕ್ ಕೊಟ್ಟಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ತನ್ನ ಉಸ್ತುವಾರಿಯಲ್ಲಿ ಆಡಳಿತ ನಡೆಸಿದ ಸರಕಾರಗಳು ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದ ಭಾರೀ ಮೊತ್ತವನ್ನು ಬೈಡನ್ ಆಡಳಿತ ಮುಟ್ಟುಗೋಲು ಹಾಕಿಕೊಂಡಿದೆ.
ವಿವಿಧ ಉದ್ದೇಶಗಳಿಗೆ ಆಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಕಳೆದ ಏಪ್ರಿಲ್‌ವರೆಗಿನ ಲೆಕ್ಕದಂತೆ ಸುಮಾರು 9.4 ಬಿಲಿಯನ್ ಡಾಲರ್ ಮೊತ್ತದಷ್ಟು ಭಾರೀ ಮೊತ್ತವನ್ನು ಅಮೆರಿಕ ಕೆಲ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಇಟ್ಟಿತ್ತು. ಈ ಮೊತ್ತವು ಆಫ್ಘಾನಿಸ್ತಾನದ ವಾರ್ಷಿಕ ಒಟ್ಟು ಆದಾಯದ ಮೂರನೇ ಒಂದು ಭಾಗದಷ್ಟು ಇರಬಹುದು ಎಂದು ಕಾಬೂಲ್‌ನ ಟೋಲ್ ನ್ಯೂಸ್ ವರದಿ ಮಾಡಿದೆ.
ಈಗ ಅಮೆರಿಕ ಈ ಹಣವನ್ನು ಮುಟ್ಟುಗೋಲು ಹಾಖಿಕೊಂಡ ಪರಿಣಾಮ, ಇದರಲ್ಲಿ ಚಿಕ್ಕಾಸು ಕೂಡ ತಾಲಿಬಾನಿಗಳಿಗೆ ಧಕ್ಕುವುದಿಲ್ಲ. ಈ ಬಗ್ಗೆ ಅಧ್ಯಕ್ಷ ಜೋ ಬೈಡನ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಹಾಗೂ ಹಣಕಾಸು ಕಾರ್ಯದರ್ಶಿ ಜೆನೆಟ್ ಹೆಲ್ಲೆನ್ ಅವರೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇನ್ನು, ಬ್ರಿಟನ್ ಕೂಡ ಇದೇ ದಿಕ್ಕಿನಲ್ಲಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ಬೋರಿಸ್ ಜಾನ್ಸನ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು; ಆಘ್ಫಾನಿಸ್ತಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ತಾಲಿಬಾನ್‌ಗಳನ್ನು ಬೆಂಬಲಿಸುತ್ತಿರುವವರ ಹೆಜ್ಜೆಗಳನ್ನು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದರ ಜತೆಗೆ, ಯುರೋಪಿನ ಇನ್ನೂ ಹಲವು ದೇಶಗಳು ಇದೇ ದಾರಿಯಲ್ಲಿವೆ. ಫ್ರಾನ್ಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಜರ್ಮನಿಯಂತು ಆಪ್ಘಾನಿಸ್ತಾನಕ್ಕೆ ಘೋಷಣೆ ಮಾಡಿದ್ದ ಆರ್ಥಿಕ ನೆರವನ್ನು ನಿಲ್ಲಿಸುವುದಾಗಿ ಹೇಳಿದೆ. ಇದಲ್ಲದೆ, ಆಸ್ಟ್ರೇಲಿಯಾ, ಜಪಾನ್, ದಕ್ಷಿಣ ಕೊರಿಯಾ ಮುಂತಾದ ದೇಶಗಳು ಅಮೆರಿಕ ಹಾದಿಯ್ನನೇ ತುಳಿಯುವ ಸಾಧ್ಯತೆಯೇ ಹೆಚ್ಚು.