ಇಡೀ ಆಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡ ತಾಲಿಬಾನ್ ಉಗ್ರರು ದೇಶದಲ್ಲಿ ಪ್ರಜಾಪ್ರಭುತ್ವ ಜಾರಿ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದು, ಕಟ್ಟಾ ಶೆರಿಯಾ ಕಾನೂನು ಜಾರಿಗೆ ಬರಲಿದೆ ಎಂದಿದ್ದಾರೆ. ಪರಿಣಾಮ ಜಗತ್ತು ರಾಜಕೀಯವಾಗಿ ಇಬ್ಭಾಗವಾಗುವ ಎಲ್ಲ ಸೂಚನೆಗಳೂ ಸಿಕ್ಕಿವೆ.
ಇಪತ್ತು ವರ್ಷಗಳಿಂದ ಕಾಬೂಲ್ ಕಡೆ ಮುಖ ಮಾಡದಂತೆ ತಾಲಿಬಾನಿಗಳನ್ನು ಕಠೋರವಾಗಿ ನಿಗ್ರಹಿಸಿದ್ದ ಅಮೆರಿಕ ಇದ್ದಕ್ಕಿದ್ದ ಹಾಗೆ ವಾಪಸ್ ಹೋಗಲು ಕಾರಣವೇನು? ಎಂಬ ಬಗ್ಗೆ ಸ್ವತಃ ತಾಲಿಬಾನ್ ಕೂಡ ಎಚ್ಚರ ಮತ್ತು ಆತಂಕದಿಂದ ತಲೆಕೆಡಿಸಿಕೊಳ್ಳತ್ತಿದೆ.
ಅತ್ತ ಚೀನಾ ಹಾಗೂ ಇತ್ತ ಇರಾನ್ ಮೇಲೆ ಹಿಡಿತ ಸಾಧಿಸಲು ಆಫ್ಘಾನಿಸ್ತಾನದಲ್ಲಿ ತನ್ನ ಉಪಸ್ಥಿತಿ ಬಹಳ ಮುಖ್ಯ ಎಂದು ಅರಿತಿದ್ದ ಅಮೆರಿಕದ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಅದರಲ್ಲೂ ಅಮೆರಿಕದ ರಾಜಕೀಯ ತಂತ್ರಗಾರಿಯನ್ನೆಲ್ಲ ಅರಿದು ಕುಡಿದಿರುವ ಅಧ್ಯಕ್ಷ ಜೋ ಬೈಡನ್ ಕೈಗೊಂಡ ನಿರ್ಧಾರಕ್ಕೆ ಕಾರಣ ಏನಿರಬಹುದು?
ಎರಡು ದಿನಗಳ ಹಿಂದೆ ವೈಟ್‌ಹೌಸ್‌ನಲ್ಲಿ ಆಫ್ಘಾನಿಸ್ತಾನದ ಬಗ್ಗೆ ಬೈಡನ್ ಆಡಿದ ಮಾತುಗಳು ನಂಬಶಕ್ಯವಾದವೇ ಅಥವಾ ಕಾಬೂಲ್ ವಿಚಾರದಲ್ಲಿ ಹಿಡೆನ್ ಅಜೆಂಡಾ ಏನಾದರೂ ಹೊಂದಿದ್ದಾರೆಯೇ ಎಂಬ ಬಗ್ಗೆ ಅರಬ್ ದೇಶಗಳಿಗೆ ಏಕೆ? ಅಮೆರಿಕದ ರಾಜಕೀಯ ವಿಶ್ಲೇಷಕರಿಗೂ ಅರ್ಥವಾಗಿಲ್ಲ.
ಭೇಟೆಗೆ ಮುನ್ನ ಸಿಂಹ ಎರಡೆಜ್ಜೆ ಹಿಂದೆ ಇಡುತ್ತದೆ ಎನ್ನುವ ಮಾತಿನಂತೆ ದೇಶದಿಂದ ಹೊರಗೆ ಹೋಗುವ ಆಟವಾಡಿ ಬಿಲಗಳಲ್ಲಿ ಅಡಗಿದ್ದ ಎಲ್ಲ ಉಗ್ರರನ್ನು ಬೀದಿಗೆ ಬರುವಂತೆ ಮಾಡಿತಾ ಅಮೆರಿಕ? ಈ ದೇಶದಲ್ಲಿ ತನ್ನ ಸೇನೆ ಇರುವ ತನಕ ಲೆಕ್ಕಕ್ಕೆ ಸಿಗದ ಉಗ್ರರು, ಜೈಲಲ್ಲಿದ್ದ ಕಿರಾತಕರು, ಬೆಟ್ಟಗುಟ್ಟಗಳಲ್ಲಿ ಅವಿತಿದ್ದ ಭಯೋತ್ಪಾದಕರು, ಪಾಕಿಸ್ತಾನದೊಳಗೆ ಸುರಕ್ಷಿತ ತಾಣಗಳಲ್ಲಿ ಅಡಗಿದ್ದ ದುಷ್ಟರೆಲ್ಲ ಈಗ ಸಂಪೂರ್ಣವಾಗಿ ಹೊರಬಂದಿದ್ದಾರೆ. ಈ ಸಮಯಕ್ಕೆ ಹೊಂಚು ಹಾಕಿತ್ತಾ ಅಮೆರಿಕ?
ಅಲ್ಲದೆ, ಪಾಕಿಸ್ತಾನ 2001ರಿಂದ ಆಡುತ್ತಾ ಬಂದ ಆಟಗಳೆನ್ನೆಲ್ಲವನ್ನೂ ನೋಡಿದ್ದ ಅಮೆರಿಕಕ್ಕೆ ಈಗ ಆ ದೇಶದ ನಿಜದರ್ಶನ ಆಗಿದೆ. ಜತೆಗೆ; ಟರ್ಕಿ, ಇರಾನ್, ಚೀನಾದ ಲೆಕ್ಕಾಚಾರವನ್ನೂ ಓರೆಗೆ ಹಚ್ಚುವ ಕೆಲಸ ಮಾಡುತ್ತಿದೆಯಾ ಅಮೆರಿಕ ಎನ್ನುವ ಅನುಮಾನ ಕಾಡತೊಡಗಿದೆ.
ಅದಲ್ಲದೆ, ಮತ್ತೆ ಜಗತ್ತಿನ ದೊಡ್ಡಣ್ಣ ಆಗುವ ತವಕದಲ್ಲಿರುವ ಅಮೆರಿಕ ಅಷ್ಟು ಸುಲಭವಾಗಿ ಏನನ್ನೂ ಬಿಟ್ಟುಕೊಡುವುದಿಲ್ಲ. ಅಧಿಕಾರಕ್ಕೆ ಬರುವ ಮುನ್ನವೇ ಅಮೆರಿಕದ ಪ್ರತಿಷ್ಠೆಯನ್ನು ಮರುಸ್ಥಾಪಿಸುತ್ತೇನೆ ಎಂದಿದ್ದ ಬೈಡನ್, ಅದಕ್ಕೂ ಹಿಂದೆ ಟ್ರಂಪ್ ಹೇಳಿದ್ದ ʼಐ ವಿಲ್ ಮೇಕ್ ಅಮೆರಿಕ ಗ್ರೇಟ್ ಅಗೈನ್” ಘೋಷಣೆಯನ್ನು ಸಾಕಾರ ಮಾಡುವ ದಾರಿಯ್ಲಲಿದ್ದಾರಾ? ಎನ್ನುವ ಸುಳಿವೂ ಇದೆ.
ಪುನಾ ದಾಳಿ ಮಾಡುತ್ತಾ ಅಮೆರಿಕ?
ಗೊತ್ತಿಲ್ಲ, ಆದರೆ; ತಾನೇ ಮುಗಿಬಿದ್ದು ಉಗ್ರರ ಮೇಲೆ ಉರಿದುಬೀಳುವ ಸನ್ನಿವೇಶವನ್ನು ತಾನಾಗಿಯೇ ಸೃಷ್ಟಿ ಮಾಡಿಕೊಳ್ಳುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಕೆಲ ಯುದ್ಧಗಳನ್ನು ಕಂಡ ಅಮೆರಿಕಕ್ಕೆ ಆಫ್ಘಾನಿಸ್ತಾನದ ಖರ್ಚು-ವೆಚ್ಚ ಸಂಭಾಳಿಸುವುದು ಕಷ್ಟವೇನೂ ಅಲ್ಲ. ಆದರೆ, ಡೊನಾಲ್ಡ್ ಟ್ರಂಪ್ ಮಾಡಿಟ್ಟುಹೋದ ಕೆಲ ಎಡವಟ್ಟುಗಳನ್ನು ಬೈಡನ್ ಸರಿ ಮಾಡಬೇಕಿದೆ. ಈ ಲೆಕ್ಕದಲ್ಲಿ ಅಮೆರಿಕ ಒಂದು ನಾಟಕವಾಡಿದೆ ಎಂದು ಅನುಮಾನಿಸಬಹುದು.
ಏಕೆಂದರೆ, ಬೈಡನ್ ಹೇಳಬಹುದಾದ ಮಾತುಗಳನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅಷ್ಟೇ ನಿಷ್ಠುರವಾಗಿ ಹೇಳಿದ್ದಾರೆ. ಆಫ್ಘಾನಿಸ್ತಾನದ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವವರ ಬಗ್ಗೆ ನಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಚೀನಾ, ಪಾಕಿಸ್ತಾನ, ಟರ್ಕಿ, ರಷ್ಯಾವನ್ನು ಉದ್ದೇಶಿಸಿ ಹೇಳಿದ್ದಾರೆ. ತಾಲಿಬಾನಿಗಳಿಗೆ ಯಾರೂ ಏಕಪಕ್ಷೀಯವಾಗಿ ಮಾನ್ಯತೆ ನೀಡುವಂತಿಲ್ಲ ಎಂದು ಗುಡುಗಿದ್ದಾರೆ.
ಈಗ ಶೆರಿಯತ್ ಲಾ ಜಾರಿ ಮಾಡುವ ಮಾತನ್ನೇಳುತ್ತಿರುವ ಆಫ್ಘಾನಿಸ್ತಾನಕ್ಕೆ ಮಾನ್ಯತೆ ನೀಡುವುದು ಎಂದರೆ ಯಾವುದೇ ದೇಶಕ್ಕಾದರೂ ಗಂಟಲಲ್ಲಿ ಕುದಿಯುವ ತುಪ್ಪವನ್ನು ಹುಯ್ದುಕೊಂಡಂತೆ. ರಷ್ಯಾ, ಚೀನಾಕ್ಕೂ ಈ ವಿಷಯ ಗೊತ್ತಿದೆ. ಪಾಕಿಸ್ತಾನಕ್ಕೂ ಇನ್ನು ಚೆನ್ನಾಗಿ ಅರಿವಿದೆ. ಇರಾನ್ ಮತ್ತು ಟರ್ಕಿ ಹಾರಾಡುತ್ತಿವೆಯಾದರೂ ಪರಿಸ್ಥಿತಿ ನೋಡಿಕೊಂಡು ಲೆಕ್ಕ ಮಾಡಿಕೊಳ್ಳುವ ದೇಶಗಳವು. ಹೀಗಾಗಿ ಯಾರನ್ನು ನಂಬುವುದು ಎಂಬ ಅಡಕತ್ತರಿಯಲ್ಲೂ ತಾಲಿಬಾನ್ ಇದೆ.
ಇನ್ನು; ಆಫ್ಗಾನಿಸ್ತಾನದ ಬಗ್ಗೆ ಅಲಿಪ್ತತೆಯ ಸುಳಿಗೆ ಬಿದ್ದ ಭಾರತವು ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದೆ.
ತಾಲಿಬಾನಿಗಳ ಕರಾಳ ಮುಖ
ಈಗ ತಾಲಿಬಾನಿಗಳ ಅಸಲಿ ಮುಖ ಕಳಚಿಬಿದ್ದಿದ್ದು, ಸಮಾಜದ ಎಲ್ಲರೂ ಸರಕಾರದಲ್ಲಿ ಭಾಗಿಯಾಗುವ ಅವಕಾಶವನ್ನು ನಿರಾಕರಿಸಿದೆ. ಮಹಿಳೆಯರಿಗೆ ಯಾವ ಕ್ಷೇತ್ರದಲ್ಲೂ ಅವಕಾಶ ಇಲ್ಲ ಎಂದು ಹೇಳಿದೆ. ಅಲ್ಲಿಗೆ ಮಾನವಹಕ್ಕುಗಳ ಮಾರಣಹೋಮ ತಪ್ಪುವುದಿಲ್ಲ ಎಂದಾಯಿತು.
1996ರಿಂದ 2001ರವರೆಗೆ ದೇಶದಲ್ಲಿ ಜಾರಿಯಲ್ಲಿದ್ದ ಶೆರಿಯತ್ ಕಾನೂನು ಜಾರಿಯಲ್ಲಿ ಇರುತ್ತದೆ ಎಂದು ತಾಲಿಬಾನ್ ಮುಖಂಡ ವಹೀದುಲ್ಲಾ ಘೋಷಣೆ ಮಾಡಿರುವುದನ್ನು ಎಲ್ಲ ದೇಶಗಳು ಕೇಳಿಸಿಕೊಂಡಿವೆ. ಈಗಾಗಲೇ ರಚನೆಯಾಗಿರುವ ಉಸ್ತುವಾರಿ ಮಂಡಳಿಯಲ್ಲಿ ಎಲ್ಲವೂ ಶೆರಿಯತ್ ಮಾದರಿಯಲ್ಲೇ ನಡೆಯುತ್ತಿದೆ ಎಂದು ಗೊತ್ತಾಗಿದೆ.
ತಾಲಿಬಾನ್ ಘೋಷಣೆ ಬೆನ್ನಲ್ಲೇ ಮಹಿಳೆಯರು ಬೀದಿಗಳಿಗೆ ಬರುತ್ತಿಲ್ಲ. ನಾಲ್ಕು ಗೋಡೆಗಳ ಮಧ್ಯೆಯೇ ಅವರು ಉಳಿಯುವಂತಾಗಿದೆ. ಕಾಬೂಲ್, ಕಂದಹಾರ್, ಜಲಲಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮಹಿಳೆಯರು ತೀವ್ರ ಕಂಗಾಲಾಗಿದ್ದು, ಯಾರು ಕೂಡ ಮನೆಯ ಹೊಸಿಲು ದಾಟಿ ಹೊರಬರುತ್ತಿಲ್ಲ.
ನಾವು ಬದಲಾಗಿದ್ದೇವೆ, ನಾವು ಮೊದಲಿನಂತೆ ಇಲ್ಲ ಎಂದು ಎರಡು ದಿನಗಳಿಂದ ಹೇಳುತ್ತಿದ್ದ ತಾಲಿಬಾನ್ ಈಗ ತನ್ನ ಚಾಳಿಯನ್ನು ಮರುಕಳಿಸುವಂತೆ ಮಾಡಿದೆ. ಇದು ದೇಶದಲ್ಲಿ ಅಂತಃಕಲಹಕ್ಕೆ ಕಾರಣವಾಗಿದ್ದು, ಜನರು ಬೀದಿಗಿಳಿದು ತಾಲಿಬಾನ್ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಜನರು ರಸ್ತೆಗಿಳಿದು ಉಗ್ರರ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಇದಿಷ್ಟೇ ಅಲ್ಲದೆ, ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನ, ಚೀನಾ, ಟರ್ಕಿ, ಇರಾನ್ ಹಾಗೂ ರಷ್ಯಾ ವಿರುದ್ಧ ಆಫ್ಘಾನ್ನರ ಆಕ್ರೋಶದ ಕಟ್ಟೆಯೊಡದಿದ್ದು, ನಮ್ಮ ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕಬೇಡಿ ಎಂದು ಒತ್ತಾಯ ಮಾಡಿದ್ದಾರೆ.
ಇದೇ ವೇಳೆ ತಾಲಿಬಾನಿಗಳು ಶೆರಿಯತ್ ಕಾನೂನು ಜಾರಿಗೆ ತರಲಾಗುವುದು ಎಂದು ಘೋಷಣೆ ಮಾಡುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಸಮುದಾಯ ಸಿಟ್ಟಾಗಿದೆ. ಯುರೋಪಿಯನ್ ಒಕ್ಕೂಟ, ಬ್ರಿಟನ್ ಸೇರಿದಂತೆ ಹಲವಾರು ದೇಶಗಳು ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿವೆ.
ಅಲ್ಲದೆ, ತಾಲಿನಾನಿಗಳಿಗೆ ಮಾನ್ಯತೆ ನೀಡಲು ತುದಿಗಾಲ ಮೇಲೆ ನಿಂತಿದ್ದ ಪಾಕಿಸ್ತಾನದ ಇಮ್ರಾನ್ ಖಾನ್ ಸರಕಾರಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಚಳಿ ಬಿಡಿಸಿದ್ದಾರೆ. ಏಕಪಕ್ಷೀಯವಾಗಿ ತಾಲಿಬಾನ್ಗೆ ಮಾನ್ಯತೆ ನೀಡಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಜಾನ್ಸನ್ ಅವರು ಇಮ್ರಾನ್ಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಪಂಜ್ ಶೇರ್ ಪ್ರಾಂತ್ಯ
ಸಲೇ ನೇತೃತ್ವದಲ್ಲಿ ಬಂಡಾಯ
ಹಿಂದಿನ ಸರಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಅಮ್ರುಲ್ಲಾ ಸಲೇ ಅವರ ನೇತೃತ್ವದಲ್ಲಿ ಈಗ ತಾಲಿಬಾನ್ ವಿರುದ್ಧ ಬಂಡಾಯ ಭುಗಿಲೆದ್ದಿದೆ. ಸದ್ಯಕ್ಕೆ ಕಾಬೂಲಿನಿಂದ ಪಂಜ್ ಶೇರ್ ಪ್ರಾಂತ್ಯದಲ್ಲಿ ಮೊಕ್ಕಂ ಹೂಡಿರುವ ಸಲೇ ಅಲ್ಲಿಂದಲೇ ತಾಲಿಬಾನಿಗಳ ವಿರುದ್ಧದ ಹೋರಾಟಕ್ಕೆ ವೇದಿಕೆ ಸಜ್ಜು ಮಾಡುತ್ತಿದ್ದಾರೆ.
ಇದಲ್ಲದೆ, ಆಫ್ಘಾನ್ ಮಹಾನ್ ಹೋರಾಟಗಾರ ಅಬ್ದುಲ್ ಮಸೂದ್ ಅವರ ಪುತ್ರ, ಮತ್ತವರ ಬೆಂಬಲಿಗರು ಸೇರಿದಂತೆ ತಾಲಿಬಾನ್ ವಿರೋಧಿಗಳನ್ನು ಒಟ್ಟುಗೂಡಿಸುವಲ್ಲಿ ಸಲೇ ಯಶಸ್ವಿಯಾಗಿದ್ದಾರೆ. ಉತ್ತರ ಮೈತ್ರಿಕೂಟ (ನಾದರ್ನ್ ಅಲೆಯನ್ಸ್) ವನ್ನು ಅವರು ರಚನೆ ಮಾಡಿಕೊಂಡಿದ್ದು, ಪಂಜ್ ಶೇರ್ ಕೇಂದ್ರವಾಗಿಸಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನು, ಇಡೀ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಾಲಿಬಾನಿಗಳಿಗೆ ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಆಫ್ಘಾನಿಸ್ತಾನದಲ್ಲಿ ಒಟ್ಟು 34 ಪ್ರಾಂತ್ಯಗಳಿದ್ದು, ಈವರೆಗೆ 33 ಪ್ರಾಂತ್ಯಗಳನ್ನು ಅದು ವಶಕ್ಕೆ ಪಡೆದಿದೆ. ಆದರೆ, ಪಂಜ್ ಶೇರ್ ಪ್ರಾಂತ್ಯವನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. 1996-2001ರ ಅವಧಿಯಲ್ಲಿ ಕೂಡ ಈ ಪ್ರದೇಶವನ್ನು ಆಕ್ರಮಿಸಲು ತಾಲಿಬಾನ್ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ಸಲವೂ ಪಂಜ್ಶೇರ್ ಉಗ್ರರ ವಶಕ್ಕೆ ಸಿಗುವುದು ದುರ್ಲಭ ಎನ್ನಲಾಗಿದೆ. ಇದೇ ವೇಳೆ ತಾಲಿಬಾನಿಗಳನ್ನು ಸ್ವಲ್ಪ ದಿನ ಸತಾಯಿಸಿ ಪರೋಕ್ಷವಾಗಿ ಸಲೆಗೂ ಬೆಂಬಲ ನೀಡುವ ಡ್ರಾಮಾ ಅಮೆರಿಕ ಮಾಡಬಹುದು.
ಅಮ್ರುಲ್ಲಾ ಸಲೇ
ಆಫ್ಘಾನಿಸ್ತಾನದಲ್ಲಿ ಅಡಗಿರುವ ಅಪರೂಪದ ನೈಸರ್ಗಿಕ ಸಂಪತ್ತಿನ ಕಣ್ಣು ಹಾಖಿ ಕೂತಿರುವ ಜಗತ್ತಿನ ಅನೇಕ ದೇಶಗಳು ಆ ದೇಶ ಇನ್ನಷ್ಟು ನಾಶವಾಗಲಿ ಎಂದೇ ಬಯಸುತ್ತಿವೆ. ಹಾಗೆ ಆಲೋಚನೆ ಮಾಡಿ 20 ವರ್ಷಗಳ ಕಾಲ ಆ ದೇಶದ ಮೇಲೆ ದುಡ್ಡು, ನೆತ್ತರು ಹರಿಸಿದ್ದ ಅಮೆರಿಕ ಸುಮ್ಮನೆ ಬಿಡುತ್ತದಾ? ಆಫ್ಘಾನಿಸ್ತಾನವನ್ನು ಅಮೆರಿಕ ನಡುನೀರಿನಲ್ಲಿ ಬಿಟ್ಟು ಹೋಯಿತು ಎನ್ನುವುದಕ್ಕಿಂತ, ನಡುನೀರಿನಲ್ಲಿ ಬಿಟ್ಟು ಇನ್ನೇನು ಮುಳುತ್ತದೆ ಎನ್ನುವಾಗ ಮತ್ತೆ ಕಾಬೂಲ್‌ನಲ್ಲಿ ಕಾಣಿಸಿಕೊಳ್ಳಲಿದೆ ಅಮೆರಿಕ.
ಮುಂದೆ ನಡೆಯುವುದು ಇದೇ. ಏಕೆಂದರೆ, ಅದು ಅಮೆರಿಕದ ಜಾಯಮಾನ.