ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾಗಿದ್ದ ವಸ್ತುಗಳನ್ನು ಮಾಲೀಕರಿಗೆ ಕೇಂದ್ರ ವಲಯ ಪೊಲೀಸ್ ಮಹಾ ನೀರೀಕ್ಷಕ ಚಂದ್ರಶೇಖರ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಜಿಲ್ಲೆಯ ಚಿಕ್ಕಬಳ್ಳಾಪುರ ಗ್ರಾಮಾಂತರ, ಶಿಡ್ಲಘಟ್ಟ ಗ್ರಾಮಾಂತರ, ಬಟ್ಲಹಳ್ಳಿ, ಗೌರಿಬಿದನೂರು ಗ್ರಾಮಾಂತರ, ಚಿಂತಾಮಣಿ ಗ್ರಾಮಾಂತರ ಹಾಗೂ ಗೌರಿಬಿದನೂರು ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ 41,21,774 ರೂ ಮೌಲ್ಯದ ಒಡವೆಗಳು, ಲ್ಯಾಪ್‌ಟಾಪ್, ಬೋರ್ ವೆಲ್ ಬಿಟ್, ನಾಲ್ಕು ಮತ್ತು ಎರಡು ಚಕ್ರದ ವಾಹನಗಳು ಮೊಬೈಲ್ ಗಳನ್ನು ವಸ್ತುಗಳ ಮಾಲೀಕರುಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕವಾಯತು ಮೈದಾನದಲ್ಲಿ ಗುರುವಾರ ನೀಡಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಠಾಣೆಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿ ಪ್ರಕರಣ ಶೀಘ್ರವಾಗಿ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಐಜಿಪಿ ಚಂದ್ರಶೇಖರ್ ಅವರು ಪ್ರಶಂಶನಾ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಜಿಪಿ ಚಂದ್ರಶೇಖರ್ ಅವರು; “ಪೊಲೀಸರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತಿದ್ದು, ಇದರ ಜತೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಕುಟುಂಬದವರು ಎಲ್ಲಿಗಾದರೂ ಹೊರ ಸಂಚಾರ ಹೊಗಬೇಕೆಂದಾದಲ್ಲಿ ಜಿಲ್ಲೆಯಲ್ಲಿ ಕಾರ್ಯಗತವಾಗಿರುವ ಎಲ್.ಎಚ್.ಎಂ.ನ್ನು ಸದುಪಯೋಗಪಡಿಸಿಕೊಂಡಲ್ಲಿ ಕಳುವು ಪ್ರಕರಣಗಳನ್ನು ನಿಯಂತ್ರಣ ಮಾಡಬಹುದು. ಇದರ ಜಾಗೃತಿ ಆಗ್ಗಿಂದಾಗ್ಗೆ ಎಲ್ಲಾ ಠಾಣೆಗಳಲ್ಲಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್ಪಿ ಗಳಾದ ವಾಸುದೇವ್, ಲಕ್ಷ್ಮಯ್ಯ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.