by Ra Na Gopala Reddy Bagepalli
ಬಾಗೇಪಲ್ಲಿ: ಗ್ರಾಮೀಣ ಮಹೀಳೆಯರ ಆರ್ಥಿಕ ಬಲವರ್ಧನೆಗೆ ಕೇಂದ್ರ ಸರಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಂಜೀವಿನಿಯೂ ಆಸರೆಯಾಗಿದ್ದು, ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಣೆಗಾಗಿ ಸ್ವಸಹಾಯ ಗುಂಪುಗಳ ಮೂಲಕ ಸಂಘಟಿತರಾಗಿ ಈ ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬಾಗೇಪಲ್ಲಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹೇಳಿದರು.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಮಟ್ಟದ ಯಮುನಾ ಸಂಜೀವಿನಿ ಮಹಿಳಾ ಸ್ವ ಸಹಾಯ ಗುಂಪುಗಳಿಗೆ 16 ಲಕ್ಷ 50 ಸಾವಿರ ಸಾಲದ ಚೆಕ್ ವಿತರಿಸಿ ಮಾತನಾಡಿದರು.
65 ಸ್ವ ಸಹಾಯ ಮಹಿಳಾ ಗುಂಪುಗಳಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 7 ಮಹಿಳೆಯರಿಗೆ ತಲಾ 1ಲಕ್ಷ 25 ಸಾವಿರ ಹಾಗೂ 10 ಸಾಮಾನ್ಯ ಮಹಿಳೆಯರಿಗೆ ತಲಾ 75 ಸಾವಿರ ಸಾಲದ ಚೆಕ್ ವಿತರಣೆ ಮಾಡಿದ ಶಾಸಕರು, ಆರ್ಥಿಕ ಬಲವರ್ಧನೆಗೆ ಸಂಜೀವಿನಿ ಹಣವು ಸಹಾಯಕವಾಗಲಿದೆ ಎಂದರು.
ಗ್ರಾಮೀಣ ಮಹಿಳೆಯರ ಜೀವನ ಮಟ್ಟ ಸುಧಾರಣೆಗೆ ಸಂಜೀವಿನಿ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ. ಈ ಮೂಲಕ ಮಹಿಳೆಯರು ಉತ್ತಮ ರೀತಿಯಲ್ಲಿ ಯೋಜನೆಗಳ ಲಾಭ ಪಡೆದು ಮುನ್ನಡೆ ಸಾಧಿಸಬೇಕು ಎಂದು ಶಾಸಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಇಓ ಮಂಜುನಾಥ ಸ್ವಾಮಿ, ತಾಲೂಕು ಸಾಕ್ಷರತಾ ಸಂಯೋಜಕ ಶಿವಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬೂರುಗಮಡುಗು ಲಕ್ಷ್ಮೀನರಸಿಂಹಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಕೃಷ್ಣಮ್ಮ, ಉಪಾಧ್ಯಕ್ಷೆ ರಾಧಮ್ಮ ವೆಂಕಟರೆಡ್ಡಿ, ಯಮುನಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರಾಮಲಕ್ಷಮ್ಮ ಸುರೇಶ್, ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ, ಕಾರ್ಯದರ್ಶಿ ದೇವಿ, ಖಜಾಂಚಿ ಪಾರ್ವತಮ್ಮ ಇನ್ನೂ ಮುಂತಾದ ಪ್ರಮುಖರು ಪಾಲ್ಗೊಂಡಿದ್ದರು.