ಗೌರಿಬಿದನೂರು ತಾಲೂಕಿನ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು
by M krishnappa Chikkaballapura
ಚಿಕ್ಕಬಳ್ಳಾಪುರ: ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯವನ್ನು ಹೆಚ್ಚೆಚ್ಚು ಬೆಳೆಸಲು ರಾಜ್ಯ ಅರಣ್ಯ ಹಾಗೂ ಆಹಾರ-ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ವಿ.ಕತ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿವಿಧೆಡೆ ಪ್ರವಾಸ ಕೈಗೊಂಡ ಅವರು, ಅರಣ್ಯ ಇಲಾಖೆಯಿಂದ ಕೈಗೊಂಡ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರಲ್ಲದೆ, ಈ ಭಾಗದಲ್ಲಿ ಆಗಿರುವ ಅರಣ್ಯೀಕರಣದ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಭಾಗದಲ್ಲಿ ಮಳೆ ಕಡಿಮೆ. ಅಂತರ್ಜಲದ ಮಟ್ಟವೂ ಕುಸಿದಿದೆ ಎಂದು ಕೇಳಿದ್ದೇನೆ. ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವುದು ಒಂದೆಡೆಯಾದರೆ, ಇನ್ನೊಂದು ಕಡೆ ಅರಣ್ಯದ ಪ್ರಮಾಣವನದನು ಹೆಚ್ಚು ಮಾಡಬೇಕು. ಆ ಮೂಲಕ ಮಳೆ ಬೀಳುವಂಥ ವಾತಾವರಣವನ್ನು ಸೃಷ್ಟಿ ಮಾಡಬೇಕು. ಜತೆಗೆ, ಇರುವ ಅರಣ್ಯ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ಕತ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊದಲಿಗೆ ಗೌರಿಬಿದನೂರು ಸಮೀಪದ ಹಿರೇಬಿದನೂರು ಗ್ರಾಮದಲ್ಲಿರುವ ಸರಕಾರಿ ಎನ್.ಬಿ.ಎಂ ಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವರು, ಅಲ್ಲಿ ಅರಣ್ಯ ಇಲಾಖೆಯಿಂದ ಕೈಗೊಂಡಿರುವ ಅರಣ್ಯೀಕರಣ ಹಾಗೂ ಬಿದಿರು ಸಸ್ಯೋಧ್ಯಾನವನ್ನು ಪರಿಶೀಲಿಸಿದರು. ಇದೇ ವೇಳೆ ಜಿಲ್ಲೆಯಾದ್ಯಂತ ಖಾಲಿ ಇರುವ ಅರಣ್ಯ ಭೂಮಿ ಹಾಗೂ ಇತರೆ ಸರಕಾರಿ ಜಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡ ಮರಗಳನ್ನು ಬೆಳೆಸಿ ಅರಣ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದರು.
ತದ ನಂತರ ತಾಲೂಕಿನ ಕುರೂಡಿ ಗ್ರಾಮಕ್ಕೆ ತೆರಳಿದ ಕತ್ತಿ ಅವರು, ಅಲ್ಲಿನ ಅರಣ್ಯ ಇಲಾಖೆಯ ಸಸ್ಯಾಗಾರ ಮತ್ತು ಅರಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಇದಾದ ತರುವಾಯ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ರೈತನೊರ್ವ ತಮ್ಮ ಜಮೀನಿನಲ್ಲಿ ಬೆಳೆದಿರುವ ಕರ್ಜೂರ ಬೆಳೆಯನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್, ತಹಸೀಲ್ದಾರ್ ಶ್ರೀನಿವಾಸ್, ಆಹಾರ, ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸವಿತಾ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮಳೆ ಕಡಿಮೆ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅರಣ್ಯದ ಪ್ರಮಾಣದ ಹೆಚ್ಚಳಕ್ಕೆ ಸರಕಾರದಿಂದ ಇನ್ನೂ ಹೆಚ್ಚಿನ ನೆರವು ಕೊಡಲಾಗುವುದು. ವಿವಿಧ ಯೋಜನೆಗಳ ಮೂಲಕ ಅನುದಾನ ಒದಗಿಸಿ ಸಾಮಾಜಿಕ ಅರಣ್ಯದ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು.
ಉಮೇಶ್ ಕತ್ತಿ, ಅರಣ್ಯ ಸಚಿವರು