ಲಖನೌ: ಬಿಜೆಪಿ ಹಿರಿಯ ನಾಯಕರಲ್ಲಿ ಒಬ್ಬರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ರಾಜಸ್ತಾನ & ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ (89) ಅವರು ಇನ್ನಿಲ್ಲ.
ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಲಖನೌ ನಲ್ಲಿರುವ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಸ್ ಜಿಪಿಜಿಐ) ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಈ ವಿಷಯವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಕಳೆದ ಜುಲೈ 4ರಂದು ಕಲ್ಯಾಣ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದೇಹ ಊದಿಕೊಂಡು ಅಸ್ವಸ್ಥರಾಗಿದ್ದ ಅವರಿಗೆ ದಿಲ್ಲಿ ಆಸ್ಪತ್ರೆಯಲ್ಲಿ ಸರ್ವ ರೀತಿಯ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗಲಿಲ್ಲ.
ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ದೇಶಾದ್ಯಂತ ರಥಯಾತ್ರೆ ನಡೆಸಿದಾಗ ಕಲ್ಯಾಣ್ ಸಿಂಗ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದರು. 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮವಾದಾಗ ಆ ರಾಜ್ಯದ ಚುಕ್ಕಾಣಿ ಹಿಡಿದಿದ್ದರು.
ಈ ಘಟನೆ ನಡೆದ ನಂತರ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದ ಅವರು ಪುನಾ 1997ರಿಂದ 1999ರವರೆಗೂ ಮುಖ್ಯಮಂತ್ರಿಯಾಗಿದ್ದರು. ಇದಾದ ಮೇಲೆ ಬಿಜೆಪಿ ಬಿಟ್ಟುಹೋಗಿದ್ದ ಅವರು 1999ರಲ್ಲಿ ರಾಷ್ಟ್ರೀಯ ಕ್ರಾಂತಿ ಪಕ್ಷವನ್ನು ಕಟ್ಟಿದ್ದರು. 2004ರ ಲೋಕಸಭೆ ಚುಣಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ವಾಪಸ್ಸಾಗಿದ್ದರು.
ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. “ಕಲ್ಯಾಣ್ ಸಿಂಗ್ ಅವರು ಸಮಾಜದ ಹಿಂದುಳಿದ ವರ್ಗದ ಕೋಟ್ಯಂತರ ಜನರ ದನಿಯಾಗಿದ್ದರು. ರೈತರ, ಯುವಜನರ ಸಬಲೀಕರಣಕ್ಕೆ ಶ್ರಮಿಸಿದ್ದರು. ಅವರ ನಿಧನದಿಂದ ಉಂಟಾಗಿರುವ ದುಃಖವನ್ನು ಹೇಳಲು ಶಬ್ದಗಳಿಲ್ಲ. ಅವರು ಮುತ್ಸದ್ದಿ, ಹಿರಿಯ ಆಡಳಿತಗಾರ, ಶ್ರೇಷ್ಠ ವ್ಯಕ್ತಿ ಆಗಿದ್ದರು” ಎಂದು ಮೋದಿ ದುಃಖ ವ್ಯಕ್ತಪಡಿಸಿದ್ದಾರೆ/
ಅಲ್ಲದೆ, ಸುದ್ದಿ ತಿಳಿದ ಕೂಡಲೇ ಗೋರಖ್ ಪುರ ಭೇಟಿಯನ್ನು ರದ್ದು ಮಾಡಿ ಲಖನೌಗೆ ವಾಪಸ್ ಬಂದರು.